ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೩

ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೩


ಅಲುಗಾಡುವೆಲೆ ಮೇಲೆ ನೆಲೆ ನೆಲಸಿ ಬೇರ್ ಕೆಳಗೆ |
ಚೆಲುವರ್ಧ ಬಲವರ್ಧ ಸೇರಿ ಮರವೊಂದು ||
ತಿಳಿವುದೀ ಪ್ರಕೃತಿ ಸಂಯೋಜನೆಯ ಸೂತ್ರವನು |
ಸುಳುವಹುದು ಬಾಳ ಹೊರೆ - ಮರುಳ ಮುನಿಯ || (೨೯೫)

(ಅಲುಗಾಡುವ+ಎಲೆ)(ಚೆಲುವು+ಅರ್ಧ)(ಬಲವು+ಅರ್ಧ)(ತಿಳಿವುದು+ಈ)(ಸುಳುವು+ಅಹುದು)

ಮರದ ಮೇಲ್ಭಾಗವು ನಮ್ಮ ಕಣ್ಣಿಗೆ ತೋರುವ ಸುಂದರವಾದ, ಗಾಳಿಗೆ ಅಲುಗಾಡುತ್ತಿರುವ ಎಲೆಗಳಿಂದ ಕೂಡಿದೆ. ಮರದ ಕೆಳಭಾಗವು ನಮಗೆ ಕಾಣಿಸದ ಬೇರಾಗಿದ್ದು, ಅದು ಅಲುಗಾಡದೇ ಸ್ಥಿರವಾಗಿದ್ದು, ಮರಕ್ಕೆ ಆಧಾರವಾಗಿರುವುದು. ಹೀಗೆ, ಮರದಲ್ಲಿ ಹೊರಮುಖಕ್ಕೆ ಕಾಣುವ ಸೌಂದರ್ಯ ಹಾಗೂ ಕಾಣಿಸದ ಆಧಾರಶಕ್ತಿ— ಇವೆರಡಿದೆ. ಹೀಗೆಯೇ, ಪ್ರಕೃತಿಯೂ ಸಹ ಹೊರಮುಖದಲ್ಲಿ ಕೇವಲ ಸುಂದರವಾಗಿ ನಮಗೆ ತೋರುತ್ತದೆ. ಆದರೆ, ಅದರ ಹಿಂದಿನ ಅವ್ಯಕ್ತ ಆಧಾರಶಕ್ತಿಯು, ಅದರ ಅಸ್ತಿತ್ವಕ್ಕೆ ಕಾರಣವಾದದ್ದು ನಮಗೆ ಕಾಣಿಸುವುದಿಲ್ಲ. ಅದೇ ಪರಬ್ರಹ್ಮ ಅಥವಾ ದೇವರು ಅಥವಾ ಆದಿಶಕ್ತಿ. ಹೇಗೆ ಬೇರಿಲ್ಲದೆ ಮರವು ಬದುಕುಳಿಯಲಾರದೋ ಹಾಗೆಯೇ ದೇವನಿಲ್ಲದೆ ಪ್ರಕೃತಿಯ ಅಸ್ತಿತ್ವವಿಲ್ಲ. ಹೇಗೆ ಗಿಡವು ಬೇರಿನ ಮೂಲಕವೇ ನೀರು, ಆಹಾರವನ್ನುಂಡು ಬೆಳೆದು ಹೆಮ್ಮರವಾಗುವುದೋ, ಅಂತೆಯೇ ಸೃಷ್ಟಿಯೂ ಸಹ ಪರಮಾತ್ಮನ ದಯೆಯೆಂಬ ಆಹಾರ, ನೀರು, ಗಾಳಿಗಳಿಂದಲೇ ವರ್ಧಿಸುವುದು.

*ತೇನ ವಿನಾ ತೃಣಮಪಿ ನ ಚಲತಿ* ಅವನ ಹೊರತು ಒಂದು ಹುಲ್ಲುಕಡ್ಡಿಯೂ ಅಲುಗಾಡದು.  ಅವನಿಂದಲೇ ಇದೆಲ್ಲವೂ ಚೈತನ್ಯಮಯವಾಗಿ ಚಟುವಟಿಕೆಗಳಿಂದ ಕೂಡಿದೆ. ಅವನಿಲ್ಲದಿರೆ ಎಲ್ಲವೂ ಜಡ. ಅವನು ಸೃಷ್ಟಿಸದಿದ್ದರೆ ಪ್ರಕೃತಿಯ ಅಸ್ತಿತ್ವವೇ ಇರದು.

ಇದನ್ನೇ ಗೀತೆಯಲ್ಲಿ ಇನ್ನೊಂದು ರೀತಿಯಲ್ಲಿ ಹೀಗಂದಿರುವನು ಭಗವಂತನಾದ ಶ್ರೀಕೃಷ್ಣ—
*ಊರ್ಧ್ವಮೂಲಮ್ ಅಧಶ್ಶಾಖಮ್ ಅಶ್ವತ್ಥಂ ಪ್ರಾಹುಃ ಅವ್ಯಯಮ್ |*
*ಛಂದಾಂಸಿ ಯಸ್ಯ ಪರ್ಣಾನಿ ಯಃ ತಂ ವೇದ ಸ ವೇದವಿತ್ ||*

ವಿಶ್ವವೆಂಬ ಅಶ್ವತ್ಥವೃಕ್ಷದ ( *”ಶ್ವಃ ನ ಸ್ಥಿತಃ ಇತಿ ಅಶ್ವತ್ಥಃ— ನಾಳೆಯಿಲ್ಲದಂಥ ನಶ್ವರವಾದದ್ದು ವಿಶ್ವವೆಂಬ ಅ-ಶ್ವ-ತ್ಥ ಮರ”*) ಅವ್ಯಯವಾದ ಪರಮಾತ್ಮನೆಂಬ ಬೇರು ಉನ್ನತ ಸ್ತರದಲ್ಲಿರುವುದು. ಆ ಬೇರು ಅವಿನಾಶಿಯೆನ್ನುವರು. ಅದು ಮರದ ಬೇರಿನಂತೆಯೇ ಅವ್ಯಕ್ತವಾದುದು. ಆ ವೃಕ್ಷದ ಗೆಲ್ಲುಗಳು ಮಾತ್ರ ವ್ಯಕ್ತವಾದ ಈ ಜಗತ್ತು. ಅದರ ಎಲೆಗಳೇ ವೇದಗಳು / ಜ್ಞಾನರಾಶಿ. ಇದನ್ನು ಯಾವನು ತಿಳಿಯುವನೋ ಆತನು ನಿಜವಾದ ಜ್ಞಾನಿಯು.

ಹೀಗೆಯೇ, ಪ್ರಕೃತಿ, ಅದರ ನಿಯಾಮಕ, ಅವೆರಡರ ನಡುವಿನ ಸಂಬಂಧ ಹಾಗೂ ಅದರ ರಹಸ್ಯಸೂತ್ರವನ್ನು ತಿಳಿದರೆ ಜೀವನವು ಬಹು ಸರಳವಾಗುವುದು. ಆತನ ಬದುಕಿನಲ್ಲಿ ಗೋಜಲುಗಳಿರುವುದಿಲ್ಲ. ಆತನಿಗೆ ಬದುಕು ಭಾರವೆನಿಸದು. ಎಲ್ಲವನ್ನೂ ಮಾಡಿಸುವವನು ಪರಮಾತ್ಮನೆಂದರಿತು, *ಪಾಲಿಗೆ ಬಂದದ್ದು ಪಂಚಾಮೃತ* ವೆಂದರಿತು ತನ್ನ ಪಾಲಿನ ಕರ್ಮವನ್ನು ಕರ್ತವ್ಯವೆಂಬ ದೃಷ್ಟಿಯಿಂದ ಮಾಡಿ, ಪೂರ್ವನಿರೀಕ್ಷೆಯಿಲ್ಲದೆ ದೊರೆತ ಫಲವನ್ನು *ಯದೃಚ್ಛಾಲಾಭಸಂತುಷ್ಟನಾಗಿ* ಸ್ವೀಕರಿಸಿ, ಸದಾ ನೆಮ್ಮದಿಯಿಂದಿರಬಲ್ಲನು.

*“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು*
*ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ |*
*ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ*
*ಜಸವು ಜನಜೀವನಕೆ ಮಂಕುತಿಮ್ಮ ||*
ಎಂಬ ಡಿವಿಜಿಯವರ ಮಂಕುತಿಮ್ಮನ ಕಗ್ಗ ವಚನದಂತೆ ಹಳತನ್ನೂ ಹೊಸತನ್ನೂ ಸಮರಸವಾಗಿ ಬೆರೆಸಿ ಬಾಳನ್ನು ಸಾರ್ಥಕಪಡಿಸೋಣ.

_*ಪುರಾಣಮಿತ್ಯೇವ ನ ಸಾಧು ಸರ್ವಂ*_
_*ನ ಚಾಪಿ ಕಾವ್ಯಂ ನವಮಿತ್ಯವದ್ಯಮ್ |*_
*_ಸನ್ತಃ ಪರೀಕ್ಷ್ಯಾನ್ಯತರದ್ಭಜನ್ತೇ_*
*_ಮೂಢಃ ಪರಪ್ರತ್ಯಯನೇಯಬುದ್ಧಿಃ ||_*

ಎಂಬ ಸುಭಾಷಿತದಂತೆ, ಹಳೆಯದೆಲ್ಲವೂ ಸರಿಯೆಂದಲ್ಲ. ಹೊಸತೆಂಬುದೆಲ್ಲ ನಿಂದ್ಯವೂ ಅಲ್ಲ. ಸಜ್ಜನರು, ಪ್ರಾಜ್ಞರು ಇವುಗಳನ್ನು ಸರಿಯಾಗಿ ಪರೀಕ್ಷಿಸಿ ವಿವೇಚನೆಯಿಂದ ಸರಿ ತಪ್ಪುಗಳನ್ನು ತಿಳಿದು ಸರಿಯಾದ್ದನ್ನು ಮಾತ್ರ ಆಚರಿಸುವರು. ಇತಿಹಾಸದ ತಪ್ಪುಗಳನ್ನು ಆಚರಿಸರು. ಆಧುನಿಕತೆಯ ಒಪ್ಪುಗಳನ್ನು ಆಚರಿಸದಿರರು. ಆದರೆ, ಅಜ್ಞಾನಿಗಳು ಕುರಿಗಳಂತೆ ಇತರರು ಮಾಡುವುದನ್ನು ನೋಡಿ, ಸರಿತಪ್ಪುಗಳ ಪ್ರಜ್ಞೆಯಿಲ್ಲದೆ ಅಂಧರಂತೆ ಅನುಕರಣೆ ಮಾಡುವರು.

ಹಾಗಾಗಿ ನಾವು ಚಿಕಿತ್ಸಕಬುದ್ಧಿಯುಳ್ಳವರಾಗಿ ಪ್ರಾಜ್ಞರೆನಿಸೋಣ, ಸಜ್ಜನರಾಗೋಣ.

ಅಲುಗದದಿರದ ಗಿರಿಯ ಮುಖ ಧೀರ ಗಂಭೀರ |
ಕುಲುಕಿ ಬಳುಕುವ ಬಳ್ಳಿ ಸರಸದೊಯ್ಯಾರ ||
ಬಲ ಘನತೆ ಸೇವ್ಯವೋ ಚೆಲುವೊಲವು ಸೇವ್ಯವೋ ? |
ಬೆಲೆಯಾವುದಾತ್ಮಕೆಲೊ - ಮರುಳ ಮುನಿಯ || (೧೬೩)

(ಅಲುಗದೆ+ಅದಿರದ)(ಸರಸದ+ಒಯ್ಯಾರ)(ಚೆಲುವು+ಒಲವು)(ಬೆಲೆ+ಯಾವುದ್+ಆತ್ಮಕೆ+ಎಲೊ)

ಸೃಷ್ಟಿಯಲ್ಲಿ ಮುಖ್ಯವಾಗಿ ೨ ವಿಧ -- ಚರ - ಅಚರ, ಸ್ಥಿರ - ಅಸ್ಥಿರ, ಆತ್ಮ - ಅನಾತ್ಮ ಎಂಬುದಾಗಿ.

*ಶಿವಃ ಶಕ್ತ್ಯಾಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ*
*ನ ಚೇದೇವಂ ದೇವಃ ನ ಖಲು ಕುಶಲಃ ಸ್ಪಂದಿತುಮಪಿ |*
*ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಪಿ*
*ಪ್ರಣನ್ತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ||*
ಇದು ಆದಿಶಂಕರ ಭಗವತ್ಪಾದಾಚಾರ್ಯರ _*"ಸೌಂದರ್ಯಲಹರೀ*_ ಎಂಬ _ಶಿಖರಿಣೀ ವೃತ್ತ_ ನಿಬದ್ಧವಾದ ದೇವೀಸ್ತುತಿವಿಶೇಷದ ಮೊದಲ ಶ್ಲೋಕ. ಇದರರ್ಥ -
_ಹೇ ಜಗಜ್ಜನನಿ! ಪರಶಿವನು ಸೃಷ್ಟಿಶಕ್ತಿಯೊಂದಿಗೆ ಕೂಡಿದ್ದರೆ ಮಾತ್ರ ಸೃಷ್ಟಿ ಮಾಡಲು ಸಮರ್ಥನಾಗುತ್ತಾನೆ. ಹೀಗಲ್ಲದಿದ್ದರೆ, ಅವನಲ್ಲಿ ಸ್ಪಂದನೆಯೇ ಇರದು; ಅವನಿಗೆ ಚಲಿಸಲೇ ಸಾಧ್ಯವಾಗದು; ಶಕ್ತಿಯಿಲ್ಲದಿದ್ದರೆ ಶಿವನು ಕೇವಲ ಜಡನು. ಹಾಗಾಗಿ, ಹರಿ-ಹರ-ಬ್ರಹ್ಮಾದಿಗಳಿಂದ ಪೂಜಾರ್ಹಳಾದ ನಿನ್ನನ್ನು ನಮಸ್ಕರಿಸುವುದಕ್ಕಾಗಲಿ, ಸ್ತುತಿಸುವುದಕ್ಕಾಗಲಿ, ಪುಣ್ಯ ಮಾಡದವನು ಹೇಗೆ ತಾನೇ ಸಮರ್ಥನಾದಾನು?_

ಪರಿಸ್ಥಿತಿ ಪರಶಿವನದ್ದೇ ಹೀಗಿರುವಾಗ ನಮ್ಮ ನಿಮ್ಮ ಪಾಡೇನು? ಹೀಗೆ, ಸೃಷ್ಟಿಯಲ್ಲಿರುವುದು ಎರಡೇ ತತ್ತ್ವಗಳು - ಜೀವ ಹಾಗೂ ಜಡ. ಗಿರಿ-ಪರ್ವತಗಳು, ಶಿಲೆ-ಕಲ್ಲುಗಳು ಒಂದೇ ಕಡೆ ಅಚಲವಾಗಿ, ಅಲುಗಾಡದೆ, ಅದಿರದೆ, ನಿಂತಿರುವ ಪದಾರ್ಥಗಳು. ಅವುಗಳ ನಿಲುವೇ ಧೀರ, ಗಂಭೀರ. ಅಲ್ಲಿ ಧೈರ್ಯ, ಗಾಂಭೀರ್ಯಗಳು ಎದ್ದುಕಾಣುವ ಗುಣಭಾವಗಳು.

ಇನ್ನು, ಸದಾ ಮರವನ್ನಾಶ್ರಯಿಸುವ, ತೆಳ್ಳನೆಯ ತಳುಕು-ಬಳುಕಿನ ಲತೆಗಳು, ಬಳ್ಳಿಗಳು ದಿನೇ ದಿನೇ ವೇಗವಾಗಿ, ವಕ್ರಗತಿಯಲ್ಲಿ ಕುಲುಕುತ್ತಾ, ಅಲ್ಲಾಡುತ್ತಾ ಬೆಳೆಯುತ್ತಿರುತ್ತವೆ. ಒನಪು - ಒಯ್ಯಾರ, ಬೆಡಗು - ಬಿನ್ನಾಣ, ಮಾಧುರ್ಯ-ಸೌಂದರ್ಯ-ಲಾಲಿತ್ಯಗಳೇ ಲತೆಯ ಸೊಬಗು, ಗುಣಸ್ವಭಾವ.

ಹೀಗೆ, ಜಗತ್ತಿನಲ್ಲಿ ಬಹುವಾದ ಅಂತಸ್ತು, (status), ಘನತೆ, ದೊಡ್ಡಸ್ತಿಕೆ, ಹಿರಿತನ, ಶ್ರೀಮಂತಿಕೆ, ದೊಡ್ಡ ಹುದ್ದೆ -- ಇತ್ಯಾದಿಗಳಿಗೆ ಬೆಲೆಯೆ? ಅಥವಾ ಚೆಲುವು-ಒಲವು, ಸರಳತೆ, ವಿನಯ -- ಇತ್ಯಾದಿಗಳಿಗೆ ಹೆಚ್ಚು ಬೆಲೆ ಕೊಡಬೇಕೆ? ನಾವು ಇವುಗಳಲ್ಲಿ ಯಾವುದಕ್ಕೆ ಬೆಲೆ ಕೊಡಬೇಕೆಂದು ಪ್ರಶ್ನಿಸುತ್ತಾ ಡಿವಿಜಿಯವರು ನಮ್ಮನ್ನು ಚಿಂತನೆಗೆ ಒರೆಹಚ್ಚುತ್ತಾರೆ.

ಅಂದರೆ, ಒಂದು ಅವ್ಯಕ್ತ, ಮತ್ತೊಂದು ವ್ಯಕ್ತ. ಒಂದು ಆತ್ಮ, ಮತ್ತೊಂದು ದೇಹ. ಒಂದು ಪರಮಾತ್ಮ, ಇನ್ನೊಂದು ಸೃಷ್ಟಿ / ಪ್ರಕೃತಿ. ಗೀತಾಚಾರ್ಯನೆಂದಂತೆ, *ಒಂದು ಕ್ಷೇತ್ರಜ್ಞ, ಇನ್ನೊಂದು ಕ್ಷೇತ್ರ.* ಇವೆರಡರಲ್ಲಿ, ಹಿಂದಿನದಿಲ್ಲದಿದ್ದರೆ, ಮುಂದಿನದಿಲ್ಲ. ಹಾಗೆಯೇ, ಮುಂದಿನದಿಲ್ಲದಿದ್ದರೆ, ಹಿಂದಿನದಕ್ಕೆ ಬೆಲೆ ಕೊಡಲು ಯಾರೂ ಇಲ್ಲ. ಹಾಗಾಗಿ, ಇವೆರಡೂ ಸಮಾನ ಬೆಲೆಬಾಳುವವುಗಳು. ಸೃಷ್ಟಿಯಿರದಿರೆ ಸೃಷ್ಟಿಕರ್ತನ ನೆನೆವರಾರು? ಆತನನ್ನು ಗುರುತಿಸಲು ಯಾರಿಹರು ಶೂನ್ಯದಿ / ಅನಂತದಿ? ಅನಂತವು ಸಾಂತವಾಗೆ, ಅಮೂರ್ತವೂ ಮೂರ್ತಿವಡೆಯೆ ಅವ್ಯಕ್ತಕ್ಕೊಂದು ಬೆಲೆ-ನೆಲೆ. ಹೀಗೆ, ಪರಸ್ಪರ ಅನ್ಯೋನ್ಯತೆ, ಅವಿನಾಭಾವಗಳಿಂದ, ಪಾರಮಾರ್ಥಿಕವಾಗಿ ಅಭೇದವೆನಿಸಿದ ಶಿವ-ಜೀವರು, ಲೌಕಿಕವಾಗಿ / ವ್ಯಾವಹಾರಿಕವಾಗಿ ಬೇರು-ಕಾಂಡಾದಿಗಳಂತೆ ಮೂಲ-ವಿಸ್ತಾರಗಳಾಗಿ ವಿಶ್ವವನ್ನು ಪರಿಪೂರ್ಣಗೊಳಿಸುವರು.
ಇವೆರಡು ಪುರುಷ-ಸ್ತ್ರೀಯರ ಹೋಲಿಕೆಯೂ ಹೌದು. ಪುರುಷನು ಬಹುವಾಗಿ ನಿರ್ಭಾವುಕನಾದರೆ, ಸ್ತ್ರೀಯು ಹೆಚ್ಚಾಗಿ ಭಾವಜೀವಿ. ಪುರುಷನ ಪ್ರೇರಕಶಕ್ತಿ ಸ್ತ್ರೀ. ಧೀಪ್ರಚೋದಕ ಗಾಯತ್ರೀ. ದೇಹದಲ್ಲಿ ಆತ್ಮಚೈತನ್ಯವು ಶಕ್ತಿಯಾದರೆ, ಪಾಂಚಭೌತಿಕ ಹೊರಮೈಯು / ಶರೀರವು ಪುರುಷನಂತೆ ಆತ್ಮಶಕ್ತಿಯನ್ನು ಧರಿಸಿ, ತನ್ನೊಳಗೆ ಕಾಪಿಡುತ್ತದೆ. ಸತಿಯನ್ನು ಪತಿಯು ಜತನದಿಂದ ನೋಡಿಕೊಳ್ಳುವಂತೆಯೇ ಇದೂ ಕೂಡ ಒಂದು ಪ್ರಕೃತಿರಹಸ್ಯ. ಇವೆರಡಿರದಿರೆ ನಾವಿಲ್ಲ!!

ಹಾಗಾಗಿ, _*ಕೇವಲ ಹೊರಚೆಲುವಿಗೆ ಮಾತ್ರ ಬೆಲೆಯಲ್ಲ. ಅಂತರಂಗಸೌಂದರ್ಯವಿರದಡೆ ನೆಲೆಯಿಲ್ಲ.*_

🙏🏻🙏🏻🙏🏻 *ಹರೇ ರಾಮ* 🙏🏻🙏🏻🙏🏻💐😊

*ಅಲೆಯಿರದ ಕಡಲುಂಟೆ ಅಲೆಯದೇಂ ಚಲಚಲನ |*
*ಚಲನೆಯೇಂ ಪ್ರಕೃತಿಕೃತಸಲಿಲಸ್ವಭಾವ ||*
*ಅಲೆದಲೆದು ಕಡೆಗೆ ತಾಂ ಜಲಧಿಯಲಿ ವಿಲಯಿಪುದು |*
*ಅಲೆಗೆ ಜಲಧಿಯೆ ಮುಕ್ತಿ - ಮರುಳ ಮುನಿಯ || (೨೨೭)*

_(ಕಡಲ್+ಉಂಟೆ)(ಅಲೆ+ಅದೇಂ)(ಅಲೆದು+ಅಲೆದು)_

ಅಲೆಗಳಿರದ, ತೆರೆಗಳಿರದ ಸಮುದ್ರವಿಹುದೆ? ಸೃಷ್ಟಿಯಿರದ ಪರಬೊಮ್ಮನಿರುವನೆ? ಅಲೆಗಳ ಚಲನೆಯು ಅಲೆಯ ಸ್ವಂತದ್ದೆ? ಸೃಷ್ಟಿಯ ಜೀವಚೈತನ್ಯ ಸ್ವಯಂ ಸೃಷ್ಟಿನಿರ್ಮಿತವೆ?

ಹಾಗಾದರೆ ಈ ಚಲಿಸುವ ಗುಣ ಅಲೆಗಳಿಗೆ ಪ್ರಕೃತಿದತ್ತವಾದ ನೀರಿನ ಸ್ವಭಾವಜನ್ಯವಾಗಿ ಬಂದುದಲ್ಲವೆ? ಅಂತೆಯೇ, ಸೃಷ್ಟಿಗೂ ಸಹ ಜೀವಕಳೆಯು ಪರಮಾತ್ಮನ ಅಂತರ್ಯಾಮೀರೂಪದ ಪ್ರವೇಶದಿಂದ  ಬಂದಿರುವುದು.

ಹೇಗೆ ಸಾಗರದಲೆಗಳು ನಿರಂತರವಾಗಿ ಅಲೆದು, ತಮ್ಮ ಅವಧಿ ಮುಗಿದಾಗ ಸಾಗರದಲ್ಲೇ ವಿಲೀನವಾಗಿ ಇಲ್ಲದಂತೆ ತೋರುವುದೋ ಹಾಗೆಯೇ, ಜೀವನೂ ತನ್ನ ಭಗವದ್ದತ್ತವಾದ ಜನುಮಗಳು ಮುಗಿದ ಬಳಿಕ ಆ ಪರಮಾತ್ಮನನ್ನೇ ಸೇರುವನು.

ಹೇಗೆ ಅಲೆಗಳಿಗೆ ಸಾಗರಜಲದಿ ವಿಲಯವೇ ಮುಕ್ತಿಯೋ ಹಾಗೆಯೇ ಸಕಲ ಜೀವರಿಗೂ ಪ್ರಲಯವೇ ಮುಕ್ತಿಯು. ಕೆಲವೇ ಕೆಲವು ಮಹಾತ್ಮರಿಗೆ ಕೆಲವೇ ಜನ್ಮದಲ್ಲಿ ಸಾಧನೆಯಿಂದ ಮುಕ್ತಿಯಾದರೆ, ಉಳಿದ ಹಲವು ಜನಸಾಮಾನ್ಯರಿಗೆ ಜಗತ್ತಿನ ಪ್ರಲಯದ ಬಳಿಕವೇ ಜನನ-ಮರಣ ಚಕ್ರದಿಂದ ಬಿಡುಗಡೆ. ಅದುವರೆಗೆ ಅವರು ಹುಟ್ಟುತ್ತಲೂ, ಸಾಯುತ್ತಲೂ ಇರಬೇಕಾಗುವುದು. ಇದು ಪ್ರಕೃತಿನಿಯಮ.

*ಜಾತಸ್ಯ ಹಿ ಧ್ರುವೋ ಮೃತ್ಯುಃ*
*ಧ್ರುವಂ ಜನ್ಮ ಮೃತಸ್ಯ ಚ |*
*ತಸ್ಮಾದಪರಿಹಾರ್ಯೇऽರ್ಥೇ*
*ನ ತ್ವಂ ಶೋಚಿತುಮರ್ಹಸಿ ||*

ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ -

_ಹುಟ್ಟಿದವನಿಗೆ ಸಾವು ನಿಶ್ಚಿತ. ಸತ್ತವನಿಗೆ ಮರುಹುಟ್ಟು ಖಂಡಿತ. ಹಾಗಾಗಿ, ಪರಿಹಾರವಿರದ ಈ ಸಮಸ್ಯೆಗೆ ನೀನು ಶೋಕಿಸುವುದು ತರವಲ್ಲ / ಯೋಗ್ಯವಲ್ಲ / ಉಚಿತವಲ್ಲ._

ಹಾಗಾಗಿ, ಸಾಧನೆಯಿಂದ ಮಹಾತ್ಮರಾಗಲು ಯತ್ನಿಸೋಣ. *ಪ್ರಯತ್ನೇನ ವಿನಾ ಸಿದ್ಧಿಃ ನಾಸ್ತಿ* ಪ್ರಯತ್ನವಿಲ್ಲದೆ ಫಲವಿಲ್ಲ. *ಸಾಧಿಸಿದರೆ ಸಬಲ ನುಂಗಬಹುದು* ಸಬಲವೆಂದರೆ ೨ ಬದಿ ಹರಿತ ಅಲಗಿರುವ ಆಯುಧ. ಅದನ್ನೂ ನುಂಗಬಹುದು. ಅರ್ಥಾತ್, ದೃಢ ಸಂಕಲ್ಪ, ಇಚ್ಛಾಶಕ್ತಿಯಿದ್ದರೆ ಸಾಧಿಸಲಸಾಧ್ಯವಾದುದು ಯಾವುದೂ ಇಲ್ಲ.

ಹಾಗಾಗಿ ಆ ನಿಟ್ಟಿನಲ್ಲಿ ಸತ್ಯ, ಅಹಿಂಸೆ, ವಿನಯಾದಿ ಜೀವನಮೌಲ್ಯಗಳನ್ನು ಆಚರಿಸಿ ಯತ್ನಶೀಲರಾಗೋಣ. ಆಗದೆ?

🙏🏻🙏🏻🙏🏻 *ಹರೇ ರಾಮ* 🙏🏻🙏🏻🙏🏻💐💐💐😊😊😊

ಅವನಿವನ ನೀನವನ ನಾನಿವನ ನೀನೆನ್ನ |
ಸವರಿ ಮೈಮರೆಸುತಿರೆ ತಿವಿದುರುಬಿಸುತಿರೆ ||
ಅವಗುಂಠಿತನದೊರ‍್ವನೀಕ್ಷಿಸುತೆ ನಗುತಿಹನು |
ಶಿವಲೀಲೆ ನಮ್ಮ ಬಾಳ್ - ಮರುಳ ಮುನಿಯ || (೯೯)

(ಅವನ್+ಇವನ)(ನೀನ್+ಅವನ)(ನಾನ್+ಇವನ)(ನೀನ್+ಎನ್ನ)(ಮೈಮರೆಸುತ+ಇರೆ)
(ತಿವಿದು+ಉರುಬಿಸುತ+ಇರೆ)(ಅವಗುಂಠಿತನ್+ಅದು+ಒರ‍್ವನ್+ಈಕ್ಷಿಸುತೆ)

ಒಬ್ಬ ಮತ್ತೊಬ್ಬನನ್ನು ಯಾವರೀತಿ ನಯವಾಗಿ ಮಾತನಾಡಿಸಿ, ನುಣ್ಣಗೆ ಬೋಳಿಸುತ್ತಾನೋ, ನಯವಂಚಕತನ ಮಾಡುತ್ತಾನೋ, ಅಥವಾ ಬೆನ್ನ ಹಿಂದಿನಿಂದ ಚೂರಿಹಾಕುತ್ತಾನೋ, ಮೈಮರೆಯುವಂತೆ ಮಾಡಿ ದರೋಡೆ / ಕಳವುಗೈಯುತ್ತಾನೋ, ಮಾತಿನಲ್ಲಿ ಮೈಮರೆಸಿ ವ್ಯವಹಾರದಲ್ಲಿ ದಾರಿತಪ್ಪಿಸುವನೋ / ವಂಚನೆಗೈವನೋ, ಇದನ್ನೆಲ್ಲ ಯಾರಿಗೂ ತಿಳಿಯದಂತೆ ಮಾಡಿರುವೆನೆಂದು ಅಂಥವನು ತಿಳಿಯುತ್ತಾನೆ. ಆದರೆ, ಜಗತ್ತಿನ ಒಡೆಯನು ಇಲ್ಲಿನ ಕಣಕಣದೊಳಗೂ ಅವಿತಿದ್ದು ಸರ್ವಸಾಕ್ಷಿಯಾಗಿ ಎಲ್ಲವನ್ನೂ ವೀಕ್ಷಿಸುತ್ತಿರುವನು ಎಂಬುದು ನಯವಂಚಕರ ಅತಿಬುದ್ಧಿವಂತಿಕೆಗೆ ಗೋಚರವಾಗದಿರುವುದು ಅಚ್ಚರಿಯಾದರೂ ಸತ್ಯ.

ಅವಗುಂಠನ ಎಂದರೆ ಮುಖ ಕಾಣಿಸದಂತೆ ಮರೆಮಾಚುವ ಘೋಷಾವಸ್ತ್ರ / ಮುಖಮುಚ್ಚುವ ಬಟ್ಟೆ. ಇಲ್ಲಿ ಅವಗುಂಠಿತನೆಂದರೆ, ನಮಗೆ ವ್ಯಕ್ತವಾಗಿ ಗೋಚರಿಸದ (ಗೋ - ಇಂದ್ರಿಯ; ಅವುಗಳಿಗೆ ನಿಲುಕದ) ಸರ್ವಾಂತರ್ಯಾಮೀ, ಸರ್ವಸಾಕ್ಷಿಯಾದ ಪರಮಾತ್ಮ. ಆತನು ಎಲ್ಲ ಜೀವರ ಆಟಗಳನ್ನು ಸದಾ ನೋಡುತ್ತಿರುವನು, ಗಮನಿಸುತ್ತಾ ಅವರ ಪುಣ್ಯ-ಪಾಪಗಳನ್ನು ಚಿತ್ರಗುಪ್ತನ ರೂಪದಿಂದ ವಿಚಿತ್ರವೋ ಎಂಬಂತೆ ಗುಪ್ತವಾಗಿ ತನ್ನ ಸಿಸಿ ಕ್ಯಾಮೆರಾದಿಂದಲೋ ಎಂಬಂತೆ ಚಿತ್ರಿಸುತ್ತಿರುವನು. ಮರಣಾನಂತರ, ಈ ಲೆಕ್ಕಾಚಾರಕ್ಕೆ ತಕ್ಕ ಫಲ ಕೊಡುವನು, ಪುನರ್ಜನ್ಮ ನೀಡುವನು / ಮೋಕ್ಷಕ್ಕೊಯ್ಯುವನು.

ವಿಶ್ವನಿಯಾಮಕನಿಗೆ ಜಗವು ಆತನ ಕರದಲ್ಲಿರುವ ಒಂದು ಆಟದ ಚೆಂಡು. ಅದರ ಆಟವನ್ನು ನೋಡುತ್ತಾ ತಾನು ನಯವಂಚಕರ ಕಾರ್ಯಗಳನ್ನು ನೋಡಿ ನಗುತ್ತಾನೆ. ಇದೆಲ್ಲ, ಆತನ ಲೀಲಾಮಾತ್ರವೇ ಆಗಿರುವುದಲ್ಲದೆ, ಬೇರೇನಲ್ಲ.

ನಮ್ಮ ಬಾಳು ದೇವನಾಡಿಸುವ ನಾಟಕ. ಜಗವೇ ನಾಟಕರಂಗಭೂಮಿ. ನಾವೇ ಪಾತ್ರಧಾರಿಗಳು. ಅವನೇ ಸೂತ್ರಧಾರ / ನಿರ್ದೇಶಕ. ಎಲ್ಲರೊಳಗಿದ್ದು, ಸೂತ್ರದ ಗೊಂಬೆಗಳನ್ನಾಡಿಸಿದಂತೆ, ಕೇವಲ ಪಾಂಚಭೌತಿಕವಾದ ನಮ್ಮ ಶರೀರಗಳನ್ನು ಆತ್ಮಚೈತನ್ಯದ ಮೂಲಕ ಆಡಿಸುತ್ತಾ ಸೃಷ್ಟಿಯೆಂಬ ನಾಟಕವನ್ನು ನಿತ್ಯವೂ ಆಡಿಸುತ್ತಿರುವ ಪರಮಾತ್ಮನ ಲೀಲೆಯನರಿತವರಾರು? *ಹೇಳದೆ ಸುಖವ ಕೊಡುವ, ಹೇಳದೆ ದುಃಖವ ಕೊಡುವ ಆ ಪರಶಿವ, ಪರಬೊಮ್ಮ, ಪರಮಾತ್ಮ, ನಾರಾಯಣ, ಆದಿಶಕ್ತಿ.* ಇದೇ ನಮ್ಮ ಬಾಳು ಹೊರತು ಬೇರೇನಲ್ಲ. ಹಾಗಾಗಿ ನಶ್ವರವಾದ ವ್ಯಾವಹಾರಿಕ / ಲೌಕಿಕ ಬದುಕನ್ನು ಕೇವಲ ರಂಗದ ತನ್ನ ಪಾತ್ರದ ಕರ್ತವ್ಯವೆಂದು ತಿಳಿದು ಆಚರಿಸಿ, ಪಾರಮಾರ್ಥಿಕ ನಿತ್ಯಸತ್ಯವನ್ನು ಮನದಲ್ಲೇ ಅನವರತವೂ ಸ್ಮರಿಸುತ್ತಾ, ಅದು ನಮ್ಮನ್ನೆಲ್ಲ ನಮ್ಮೊಳಗಿದ್ದೇ ವೀಕ್ಷಿಸುತ್ತಿಹುದೆಂದು ತಿಳಿದು, *ಕನಕದಾಸರು ಯಾರಿಗೂ ಕಾಣದಂತೆ ಬಾಳೆಹಣ್ಣು ತಿನ್ನಲು ಸಾಧ್ಯವಾಗಿಲ್ಲ. ಪರಮಾತ್ಮನೊಬ್ಬ ಎಲ್ಲವನ್ನೂ ನೋಡುತ್ತಿರುವನೆಂದು ತಮ್ಮ ಗುರು ವ್ಯಾಸರಾಯರಿಗೆಂದಂತೆ* ಅದೇ ಭಾವವನ್ನು ಬೆಳೆಸಿಕೊಳ್ಳಲು ಸದಾ ಪ್ರಯತ್ನಿಸೋಣ. ನಮ್ಮ ಪ್ರತಿಯೊಂದು ಯೋಚನೆ, ಮಾತು ಮತ್ತು ಕೆಲಸಗಳು ಅತ್ಯಂತ ಜಾಗೃತವಾಗಿ ನಿರ್ವಂಚನೆಯಿಂದ ಮಾಡಲ್ಪಟ್ಟರೆ, ಅದನ್ನು ನೋಡಿದ ಆತನೂ ಮೆಚ್ಚುವನು. ಆತ ಮೆಚ್ಚಿದರೆ, ಆತನಿಂದಲೇ ವ್ಯಾಪ್ತವಾದ ಜಗವೂ ತಲೆದೂಗುವುದು. ಆ ದಾರಿಯಲ್ಲಿ ಸಾಗೋಣ. ಅಲ್ಲವೆ? ಎಂಬುದು ಡಿವಿಜಿಯವರ ಅಭಿಪ್ರಾಯ.

*_ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ_*

🙏🏻🙏🏻🙏🏻 *ಹರೇ ರಾಮ* 🙏🏻🙏🏻🙏🏻💐💐💐😊😊😊

*ಅವ್ಯಕ್ತ ಸತ್ತು ತಾಂ ವ್ಯಕ್ತವಹೆನೆನೆ ಚಿತ್ತು |*
*ಅವ್ಯಾಜದಿಂ ಚಿತ್ತು ಲೀಲಿಸೆ ಜಗತ್ತು ||*
*ಸುವ್ಯಕ್ತ ಸಚ್ಚಿದಾನಂದಮೆ ಸಕಲ ಜಗತ್ತು |*
*ಸೇವ್ಯವದು ಸರ್ವರ್ಗೆ - ಮರುಳ ಮುನಿಯ || (೩೨)*

_(ವ್ಯಕ್ತ+ಅಹೆನ್+ನೆ)(ಸೇವ್ಯವು+ಅದು)_


*"ಚಿತ್ ಸಂಜ್ಞಾನೇ ಚೈತನ್ಯೇ ಸಂಚೇತನೇ ಸ್ಮೃತ್ಯಾಮ್ ವಾ"* ಎಂಬುದರಿಂದ ಚಿತ್ ಎಂದರೆ ಶ್ರೇಷ್ಠವಾದ / ಸಮ್ಯಕ್ ಜ್ಞಾನ / ಸರಿಯಾದ ತಿಳುವಳಿಕೆ, ಚೈತನ್ಯ / ಶಕ್ತಿ, ಸಚೇತನಗೊಳಿಸುವಿಕೆ, ಸ್ಮೃತಿ / ಸ್ಮರಣೆ / ನೆನಪು, ಪೂರ್ವಕರ್ಮಸಂಸ್ಕಾರಾದಿಗಳ ಸಂಗ್ರಹಸ್ಥಾನ -- ಇತ್ಯಾದಿ ಅರ್ಥಗಳಿವೆ.

ಅವ್ಯಕ್ತವಾದ, ಅನಂತವಾದ ನಿರಾಕಾರವಾದ, ನಿರ್ಗುಣವಾದ, ನಿರ್ಲಿಂಗವಾದ, ಅಮೂರ್ತವಾದ, ಕಣ್ಣು ಕಿವಿ ಮುಂತಾದ ಇಂದ್ರಿಯವೇದ್ಯವಲ್ಲದ ಸತ್ ಚಿತ್ ಆನಂದ ಸ್ವರೂಪವು / ಪರಬ್ರಹ್ಮವು / ಭಗವಂತನು / ಪರಮಾತ್ಮನು ವ್ಯಕ್ತವಾದಾಗ / ಸಾಂತವಾದಾಗ / ಸಾಕಾರವಾದಾಗ / ಸಗುಣ ತ್ರಿಗುಣಮಯವಾದಾಗ / ಲಿಂಗ--ರೂಪಾದಿಗಳಿಂದ ಕೂಡಿದಾಗ ಮೂರ್ತಿವೆತ್ತಾಗ, ಆತನು ನಮಗೆ ಗೋಚರಿಸುತ್ತಾನೆ. ಸೃಷ್ಟಿಗೆ ಮುಂಚೆ ಏನೂ ಗೋಚರಿಸದಿದ್ದರೂ, ಏನೋ ಒಂದು ಇತ್ತು. ಶೂನ್ಯದಿಂದ ಸೃಷ್ಟಿಯಾಗದು. ಹಾಗಾಗಿ ಅದಕ್ಕೆ *ಸತ್*, ಸತ್ತೆ, ಸತ್ತು ಎನ್ನುವರು. *ಅಸ್ತಿ ಇತಿ ಸತ್* ಇದೆ ಎಂಬುದರಿಂದಾಗಿ ಪರಬ್ರಹ್ಮಕ್ಕೆ ಸತ್ ಎನ್ನಲಾಗಿದೆ. ಇನ್ನು ಚೈತನ್ಯ-ಜ್ಞಾನರೂಪವಾದ ಶಕ್ತಿಗೆ *ಚಿತ್* ಎನ್ನಲಾಗಿದೆ. ಜಗತ್ತಿಗೆಲ್ಲ ಚೈತನ್ಯನೀಡುವಂಥದ್ದು, ಜಡವನ್ನು ಸಚೇತನಗೊಳಿಸುವಂಥದ್ದು ಎಂದರ್ಥ. ಹೀಗೆ ಬ್ರಹ್ಮವು ಸತ್ ಚಿತ್ ಆನಂದ ಸ್ವರೂಪಿಯಾಗಿ *ಸಚ್ಚಿದಾನಂದ* ವೆನಿಸಿರುವುದು.

ಇಂಥ ಪರಬ್ರಹ್ಮವು ಯಾವುದೇ ವ್ಯಾಜ / ನೆಪ / ಪ್ರಯೋಜನ / ಕಾರಣವಿಲ್ಲದೆ, ಸಹಜವಾಗಿ ತನ್ನ ಲೀಲೆಯನ್ನು ತೋರಿ, ತನ್ನ ಮಾಯಾಶಕ್ತಿಯನ್ನಾಶ್ರಯಿಸಿ ಜಗವನ್ನು ಸೃಷ್ಟಿ ಮಾಡಿತು. *ಏಕೋಹಂ ಬಹುಸ್ಯಾಂ ಪ್ರಜಾಯೇಯೇತಿ*. ಒಬ್ಬನೇ ಇರುವ ಬ್ರಹ್ಮವು ಬಹುವಾಗುವೆನೆಂದು ಯೋಚಿಸಿತು.

*ಮಮ ಯೋನಿರ್ಮಹದ್ಬ್ರಹ್ಮ*
*ತಸ್ಮಿನ್ ಗರ್ಭೇ ದದಾಮ್ಯಹಮ್ |*

ಎಂದು ಗೀತಾಚಾರ್ಯ ಶ್ರೀಕೃಷ್ಣಪರಮಾತ್ಮನು ಹೇಳಿದಂತೆ ಆತನ ಪ್ರಕೃತಿ / ಮಾಯೆಯು ಮಹತ್ ಎನಿಸಿ, ಈ ಮಹತ್ತತ್ತ್ವದಿಂದ ಆಕಾಶಾದಿ ಪಂಚಮಹಾಭೂತಗಳುಂಟಾದವು. ಉಪನಿಷತ್ ಹೀಗೆ ಹೇಳಿದೆ. *ಆಕಾಶಾದ್ ವಾಯುಃ, ವಾಯೋರಗ್ನಿಃ, ಅಗ್ನೇರಾಪಃ, ಆಪಃ ಪೃಥಿವೀ, ಪೃಥಿವ್ಯಾ ಓಷಧಯಃ, ಓಷಧೀಭ್ಯೋऽನ್ನಮ್ |*

ಆಕಾಶ > ವಾಯು > ಅಗ್ನಿ > ಜಲ > ಪೃಥ್ವಿ > ಓಷಧಿ-ವನಸ್ಪತಿ ಮುಂತಾದ ಸಸ್ಯಗಳು > ಆಹಾರಧಾನ್ಯ, ಹಣ್ಣು-ಕಾಯಿಗಳು, ಗೆಡ್ಡೆ-ಗೆಣಸುಗಳು ಮುಂತಾದ ಆಹಾರಪದಾರ್ಥಗಳು > ಜೀವಿಸೃಷ್ಟಿ, ಪೋಷಣೆ, ವರ್ಧನೆ....ಇದು ಸೃಷ್ಟಿಕ್ರಮ.

ಹೀಗೆ, ಸುಂದರವಾಗಿ, ಚೆನ್ನಾಗಿ, ಸೂಕ್ತವಾಗಿ ವ್ಯಕ್ತವಾದ ಆ ಸಚ್ಚಿದಾನಂದಘನನೇ ಈ ವಿಶ್ವ. ಹಾಗಾಗಿ ಸಕಲ ಜಗವೇ ಭಗವನ್ಮಯ. ಆತನ ಕಣಕಣಗಳೇ ಜಗದ ಕಣಕಣವನ್ನು ತುಂಬಿವೆ.  ಹಾಗಾಗಿ ಇಡೀ ಜಗತ್ತೇ ಎಲ್ಲರಿಗೂ ಪೂಜ್ಯವಾದದ್ದು. *ಜನಸೇವೆಯೇ ಜನಾರ್ದನನ ಸೇವೆ*. ಕೇವಲ ಮನುಕುಲ ಮಾತ್ರವಲ್ಲ. ಜಗದ ಸಕಲ ಪ್ರಾಣಿ, ಸಸ್ಯ, ಗಿರಿ, ತೊರೆ, ವನ, ಪ್ರಕೃತಿ, ಅಣು-ರೇಣು, ತೃಣ-ಕಾಷ್ಠ -- ಇವೆಲ್ಲವೂ ಆತನೆ. ಹಾಗಾಗಿ, ಇವೆಲ್ಲದರ ಸಂರಕ್ಷಣೆ, ಹಿತ ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ, *ಇವ ನಮ್ಮವ, ಅವ ಪರಕೀಯ* ಎಂಬ ಭಾವ ಬಿಡೋಣ. ವಿಶ್ವಮಾನವರಾಗೋಣ.

*ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ |*
*ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ||*

_ಇವ ನಮ್ಮವ, ಅವ ಪರಕೀಯ ಎಂಬ ಭಾವ ಸಂಕುಚಿತ ಬುದ್ಧಿಯದ್ದು. ಉದಾರಚರಿತೆಯ ಮಹಾತ್ಮರಿಗಾದರೋ *ಸ್ವದೇಶೋ ಭುವನತ್ರಯಮ್* ಮೂರು ಲೋಕಗಳೇ ಮನೆ. ಈ ವಸುಧೆ / ಭೂಮಿಯೇ ಮಹಾತ್ಮರ / ಉದಾರಿಗಳ / ವಿಶಾಲಹೃದಯಿಗಳ ಕುಟುಂಬ.

ಅದಕ್ಕೇ ಋಗ್ವೇದವು ಎಂದೋ ಹೇಳಿದೆ - *ಆನೋ ಭದ್ರಾಃ ಕ್ರತವೋ ಯನ್ತು ವಿಶ್ವತಃ|* _ವಿಶ್ವದೆಲ್ಲೆಡೆಯಿಂದ ಸದ್ವಿಚಾರಗಳು ನಮ್ಮತ್ತ ಹರಿದು ಬರಲಿ._ ಈ ವಿಶಾಲ ಔದಾರ್ಯ, ಗುಣಗ್ರಾಹಿತ್ವ ನಮ್ಮ ಋಷಿಪರಂಪರೆಯೇ ಹೌದು. ಅದನ್ನುಳಿಸಿ ಬೆಳೆಸೋಣ. ಆಗದೆ?

*_ಸರ್ವೇ ಜನಾಃ ಸುಖಿನೋ ಭವನ್ತು | ಲೋಕಾಃ ಸಮಸ್ತಾಃ ಸುಖಿನೋ ಭವನ್ತು ||*

🙏🏻🙏🏻🙏🏻  *ಹರೇ ರಾಮ* 🙏🏻🙏🏻🙏🏻💐😊



*ಅಸಮತೆಗಮೆಡೆಯುಂಟು ಸೃಷ್ಟಿನಿರ್ವಾಹದಲಿ |*
*ವಸುಧೆಯೊಳಗುಂಟೇನು ಚಾಪೆ ಚಪ್ಪಟೆಯು ||*
*ಕುಸುಮ ಫಲ ಪರ್ಣಂಗಳೊಂದರಂತೊಂದಿಹುವೆ? |*
*ಪಶು-ಪಕ್ಷಿಗಳದೇನು? - ಮರುಳ ಮುನಿಯ || (೫೮೦)*

_(ವಸುಧೆ+ಒಳಗೆ+ಉಂಟೇನು)(ಪರ್ಣಂಗಳ್+ಒಂದರಂತೆ+ಒಂದು+ಇಹುವೆ)(ಪಕ್ಷಿಗಳು+ಅದು+ಏನು)_

ಜಗತ್ತಿನಲ್ಲಿ ವೈವಿಧ್ಯಕ್ಕೆ, ಅಸಮಾನತೆಗೆ ಅವಕಾಶವಿದೆ. *ವಿವಿಧತೆಯಲ್ಲಿ ಏಕತೆ* ಎಂಬುದು ನಮ್ಮ ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಅನ್ವಯಿಸುವುದು. ವೈವಿಧ್ಯವು ವಿಶ್ವದ ಸಹಜ ಸ್ವಭಾವ; ನೈಸರ್ಗಿಕ ನಿಯಮ.

ಇದು ಬ್ರಹ್ಮಾಂಡ-ಪಿಂಡಾಂಡಗಳೆರಡಕ್ಕೂ ಅನ್ವಯಿಸುವುದು. ಇಲ್ಲಿ ಮುಖ್ಯವಾಗಿ ಬ್ರಹ್ಮಾಂಡದ ಅಸಮಾನತೆಯನ್ನು ಡಿವಿಜಿಯವರು ಹೇಳಿದಂತೆ ಕಂಡರೂ, ಅದರೊಳಗೆ ಪಿಂಡಾಂಡದೊಳಗಿನ ವೈವಿಧ್ಯವೂ ಅಂತರ್ಗತವಾಗುತ್ತದೆ.

ಈ ಭೂಮಿಯೇನು ಸಮತಲದ ನೆಲದಲ್ಲಿ ಹಾಸಿದ ಚಾಪೆಯಂತೆ ಚಪ್ಪಟೆಯಾಗಿಲ್ಲ. ಅಲ್ಲವೆ? ಭೂಮಿಯು ಬೆಟ್ಟ-ತಗ್ಗು, ಕಾಡು-ಬೆಂಗಾಡು(ಮರುಭೂಮಿ), ಮಳೆ-ಬಿಸಿಲು, ಚಳಿ-ಸೆಖೆ, ಸುಂದರ-ಕೊಳಕು, ಸ್ವಚ್ಛ-ಮಲಿನ ಇತ್ಯಾದಿ ವೈರುಧ್ಯಗಳಿಂದ ಕೂಡಿದೆ. ಇಲ್ಲಿ ದಾಸರೆಂದಂತೆ ೮೪ ಲಕ್ಷ ವಿಧದ ಬೇರೆ ಬೇರೆ ಜೀವಜಾತಿಗಳಿವೆ.  ಎಲ್ಲವೂ ಪರಸ್ಪರ ಗಣಿತದ 2=2 ಎಂಬಂತೆ ಸರಿಸಮವಲ್ಲ. ಆದರೆ, ಹೇಗೆ ಗಣಿತದ ಪರಿಪೂರ್ಣತೆಗೆ 0 ಯಿಂದ ಹಿಡಿದು 1,2,3...ಮುಂತಾದ ಧನಾತ್ಮಕ ಹಾಗೂ -1,-2,-3...ಮುಂತಾದ ಋಣಾತ್ಮಕ, ಭಿನ್ನರಾಶಿ, ದಶಮಾಂಶ, ವರ್ಗಮೂಲ ಮುಂತಾದ ಅನಂತದವರೆಗಿನ ಅಂಕೆ-ಸಂಖ್ಯೆಗಳು ಅಗತ್ಯವೋ, ಹಾಗೆಯೇ ಸೃಷ್ಟಿಯ ಹಾಗೂ ನಮ್ಮ ಬದುಕಿನ ಪರಿಪೂರ್ಣತೆಗೆ ಧನಾತ್ಮಕ ಸಜ್ಜನರು, ಗೆಲುವುಗಳು, ಋಣಾತ್ಮಕ ದುರ್ಜನರು, ಸೋಲುಗಳು, ಭಿನ್ನರಾಶಿಗಳಂಥ ಭಿನ್ನ ಭಿನ್ನ ತೆರನಾದ ವೃತ್ತಿ-ಪ್ರವೃತ್ತಿ, ಮನೋಧರ್ಮಗಳಿರುವ ಮಂದಿ, ದಶಮಾಂಶಗಳಂಥ ಅಪರೂಪಕ್ಕೆ ಬೇಕಾಗುವ ಮಂದಿ, ಪೂರ್ಣಾಂಕಗಳಂಥ ಸದಾ ಬೇಕಾದವರು...ಇತ್ಯಾದಿ ಇವರೆಲ್ಲರೂ ಬೇಕಾಗುತ್ತಾರೆ. ವೃದ್ಧರು, ಯುವಕರು, ರೋಗಿಗಳು, ನಿರೋಗಿಗಳು, ಬಾಲಕರು, ಶಿಶುಗಳು, ಪುರುಷರು, ಸ್ತ್ರೀಯರು, ಹಿಂದುಗಳು, ಮುಸ್ಲಿಮರು, ಕ್ರೈಸ್ತರು ಮುಂತಾದ ಸಕಲ ವಿಧದ ಮನುಜರೂ, ಗ್ರಾಮ್ಯ-ವನ್ಯ ಪ್ರಾಣಿ-ಪಕ್ಷಿಗಳು, ಕ್ರಿಮಿ-ಕೀಟಗಳು, ಸೂಕ್ಷ್ಮಜೀವಿಗಳಾದ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ / ಫಂಗಸ್, ಏಕಕೋಶಜೀವಿ...ಹೀಗೆ ಎಲ್ಲ ವಿಧದವೂ ಸೇರಿ ಈ ವಿಶ್ವದ ಸೃಷ್ಟಿಸರಪಣಿ, ಆಹಾರಸರಪಣಿ, ಜಲಚಕ್ರ ಮುಂತಾದ ಸಕಲವೂ ಸಮತೋಲನದಲ್ಲಿರುವುವು.

ಹೇಗೆ ನಮ್ಮ ಆಹಾರದಲ್ಲಿ ವಿವಿಧ ರೀತಿಯ ಸತ್ತ್ವಗಳೂ ಸೇರಿ ಸಮತೋಲನ ಆಹಾರವೆನಿಸುವುದೋ, ಹೇಗೆ ಮನುಷ್ಯದೇಹದಲ್ಲಿ ವಿವಿಧ ರೀತಿಯ ಜೀನ್ಸ್ / ವಂಶವಾಹಿಗಳು, ಕ್ರೋಮೋಸೋಮ್ಸ್ / ವರ್ಣತಂತುಗಳು, ಜೀವಕೋಶಗಳು, ಅಂಗಾಂಶಗಳು, ಅಂಗೋಪಾಂಗಗಳು, ಅಂಗವ್ಯೂಹಗಳು ಹಾಗೂ ಇವುಗಳ ಸೂಕ್ತ ಸಂಯೋಜನೆಯಿದೆಯೋ, ಹಾಗೆಯೇ ಜಗತ್ತಿನಲ್ಲಿರುವ ವಿವಿಧ ಮಾನವರೂ, ಇತರ ಜೀವಿಗಳೂ, ಪ್ರಕೃತಿಯೂ ಪರಸ್ಪರ ಪೂರಕವಾಗಿ ಬದುಕಿದರೆ ಅವುಗಳ ಉಳಿವು; ಸೃಷ್ಟಿಯ ಉಳಿವು. ಪರಸ್ಪರ ಮಾರಕವಾದರೆ ಅವುಗಳಿಗೂ, ಸೃಷ್ಟಿಗೂ ಮಾರಕ; ಪ್ರಲಯಕಾರಕ.

ಹೀಗೆ, ವಿವಿಧ ಜಾತಿಯ ಫಲಪುಷ್ಪಗಳು, ಎಲೆಗಳು, ಪಶು-ಪಕ್ಷಿಗಳಿರುವ ಲೋಕವು ಎಂದಿಗೂ ಪರಸ್ಪರ ಸಮಾನವಾಗದು. ಹಾಗಿರುವಾಗ ಮನುಷ್ಯರು ಹೇಗೆ ತಾನೇ ಒಬ್ಬರಿಗೊಬ್ಬರು ಸರಿಸಮರೆನಿಸುವರು? ಹಾಗೆಂದು ಯಾರೂ ಕೂಡ ಮೇಲಲ್ಲ, ಕೀಳಲ್ಲ. ಎಲ್ಲವೂ, ಎಲ್ಲರೂ ಸೃಷ್ಟಿನಿರ್ವಾಹದ ಸುಗಮತೆಗೆ ಅವಶ್ಯರೇ ಆಗಿರುವುದರಿಂದ, ಯಾರೂ ಕೂಡ ಕೀಳರಿಮೆ, ಮೇಲರಿಮೆ ಪಡದೆ, ಸಮಾನತೆಗೆ ಹೋರಾಡದೇ, ಇರುವ ತಮ್ಮತನದ ವೈಶಿಷ್ಟ್ಯದ, ಅನನ್ಯತೆಯನ್ನು ಸದುಪಯೋಗಪಡಿಸಿ, ಅದರಿಂದ ಆನಂದ, ನೆಮ್ಮದಿಗಳನ್ನು ಹೊಂದಿ, ಪರರಿಗೆ ಪೀಡಕರಾಗದೇ, ವಿಶ್ವದ ಶಾಂತಿಯ ನಿರ್ಮಾಣಕ್ಕೆ ನಾವೆಲ್ಲರೂ ಅಳಿಲಸೇವೆ ಗೈದು, ಅದರಲ್ಲಿ ಭಾಗಿಗಳಾಗುವ ಪಾತ್ರತೆಯನ್ನು, ಯೋಗ್ಯತೆಯನ್ನು ಪಡೆಯೋಣವೆ?

_*ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು*_
_*ಅಸಮಂಜಸದಿ ಸಮನ್ವಯಸೂತ್ರ ನಯವ |*_
*_ವೆಸನಮಯ ಸಂಸಾರದಲಿ ವಿನೋದವ ಕಾಣ್ಬ_*
*_ರಸಿಕತೆಯೆ ಯೋಗವೆಲೊ ಮಂಕುತಿಮ್ಮ ||_*

_ಹೀಗಾಗಿ, ವಿಶ್ವದಲ್ಲಿ ನಿತ್ಯಸತ್ಯವಾಗಿರುವ ಅಸಮತೆಯನ್ನು ಒಪ್ಪಿಕೊಂಡು, ಅದರಲ್ಲೂ ಮೇಲುಕೀಳೆಣಿಸದೆ, ವೈಷಮ್ಯದಲ್ಲಿಯೂ ಮಿತ್ರತ್ವದ ಮಂತ್ರವನ್ನು ಜಪಿಸುತ್ತಾ, ನಮ್ಮ ಮನಸ್ಸಿಗೆ ಸಮಂಜಸವಾಗಿ ಕಾಣದಿದ್ದರೂ ಕೋಪ-ತಾಪಗಳನ್ನು ಬಿಟ್ಟು ನಯ-ವಿನಯ-ಅನುನಯಗಳಿಂದ ಪರಸ್ಪರ ಹೊಂದಾಣಿಕೆಯಿಂದ ಅರ್ಥಮಾಡಿಕೊಂಡು ಒಂದು ಸಮನ್ವಯಸೂತ್ರವನ್ನು ಹಾಕಿಕೊಂಡು, ಸದಾ ದುಃಖದಿಂದ ಕೂಡಿರುವ ಸಂಸಾರದಲ್ಲಿ ವಿನೋದವನ್ನು ಕಾಣುವ ರಸಿಕತೆ / ರಸಜ್ಞತೆಯು ಒಂದು ಯೋಗವೇ ಆಗಿದೆ. ಅಂಥವನೇ ನಿಜಯೋಗಿಯು. ಇದಕ್ಕಿಂತ ದೊಡ್ಡ ಯೋಗವಾಗಲೀ, ಯೋಗಿಯಾಗಲೀ ಜಗದಲ್ಲಿ ಕಾಣಸಿಗನು. ಎಲ್ಲ ಬಿಟ್ಟು ಕಾಡಲ್ಲಿ ಕುಳಿತರೆ ಯೋಗವೆನಿಸದು. *ಇಲ್ಲಿದ್ದು ಜಯಿಸುವುದೇ ನಿತ್ಯಯೋಗ.*

🙏🏻🙏🏻🙏🏻 *ಹರೇ ರಾಮ* 🙏🏻🙏🏻🙏🏻😊💐

*ಅಷ್ಟವಕ್ರಂಗೆ ಕೃಷ್ಣಂಗಿರ‍್ದವೊಲೆ ದೇಹ |*
*ಸೊಟ್ಟುತನ ಬಿಟ್ಟೆಲ್ಲ ಸಾಮ್ಯವಿರ‍್ವರಿಗಂ ||*
*ದೃಷ್ಟಿಸಿದರೇಂ ಗೋಪಿಯರ್ ಮುನಿಯ ಲೋಕದಲಿ |*
*ವ್ಯಷ್ಟಿಗುಣದಿನೆ ಗಣನೆ - ಮರುಳ ಮುನಿಯ || (೪೫೮)*

(ಕೃಷ್ಣಂಗೆ+ಇರ‍್ದ+ವೊಲೆ)(ಬಿಟ್ಟು+ಎಲ್ಲ)(ಸಾಮ್ಯ+ಇರ‍್ವರಿಗಂ)

ಭಗವಾನ್ ಶ್ರೀಕೃಷ್ಣನು _*ಅವರವರ ಭಾವಕ್ಕೆ ಅವರವರ ತೆರನಾಗಿ*_ ಇದ್ದ. ಯಾರು ಯಾವಾಗ ಹೇಗೆ ಯಾವರೂಪದಲ್ಲಿ, ಯಾವ ಭಾವದಿಂದ ಆತನನ್ನು ನೆನಪಿಸುತ್ತಿದ್ದರೋ ಅದರಂತೆಯೇ ಆತ ಅವರಿಗೆ ಗೋಚರಿಸುತ್ತಿದ್ದ. ದ್ರೌಪದಿಗೆ ಅಣ್ಣನಂತೆ ಮಾನರಕ್ಷಣೆ ಮಾಡಿದ. ಕುಂತಿಗೆ ಅಳಿಯನಾಗಿ ಭಾವಂದಿರಾದ ಕೌಂತೇಯರನ್ನು ರಕ್ಷಿಸಿದ. ವಸುದೇವ-ದೇವಕಿಯರ ಸುತನಾಗಿ, ಅವರ ಪುತ್ರವಾತ್ಸಲ್ಯ ಹಾಗೂ ಪೂರ್ವಜನ್ಮಗಳ ಪುಣ್ಯಬಲದಿಂದ ಅವರಿಗೆ ತನ್ನ ನಿಜರೂಪ ತೋರ್ದು ಅವರನ್ನು ಬಂಧಮುಕ್ತರನ್ನಾಗಿಸಿದ ಮಹಾಮಹಿಮ. ಶತ್ರುವಾಗಿ ಕಂಡ ಕಂಸನಿಗೆ ತಾನೂ ಶತ್ರುವಾಗಿ ಕನಸು-ಮನಸಲ್ಲೂ ಕಾಣಿಸಿ, ಕೊನೆಗೆ ಕಂಸಾರಿಯು ಕಂಸಮರ್ದನನೆನಿಸಿದ. ಇನ್ನು ಪತಿಭಾವದಿಂದ ಬಯಸಿದ ರುಕ್ಮಿಣಿ, ಸತ್ಯಭಾಮೆ, ಜಾಂಬವತಿ, ಮಿತ್ರವಿಂದೆ ಮುಂತಾದ ಅಷ್ಟಮಹಿಷಿಯರಿಗೆ ಏಕಕಾಲದಲ್ಲಿ ಅವರವರ ಪರ್ಯಂಕಗಳಲ್ಲಿ ಗೋಚರಿಸಿ ಅವರನ್ನು ತೃಪ್ತಿಪಡಿಸಿದ. ಪ್ರೇಮಭಾವದ ರಾಧೆ ಮುಂತಾದ ವ್ರಜಗೋಪಿಯರಿಗೆ ಪ್ರೇಮಿಯೆನಿಸಿ ಬೃಂದಾವನಸಂಚಾರಿಯೆನಿಸಿದ; ಯಮುನಾತೀರವಿಹಾರಿಯೆನಿಸಿದ. ನರಕಾಸುರನ / ಭೌಮಾಸುರನ ವಶದಲ್ಲಿದ್ದ ೧೬,೦೦೦ ಸ್ತ್ರೀಯರ ಆರ್ತಸ್ಮರಣೆಗೆ ಓಗೊಟ್ಟು, ಅವರನ್ನು ಬಂಧಮುಕ್ತರನ್ನಾಗಿಸಿದ. ಹೀಗೆ, ಕೃಷ್ಣನ ಲೀಲೆ, ಮಹಿಮೆಗಳು ಬಣ್ಣಿಸಲಸದಳ; ಮಾತಿಗೆ ನಿಲುಕದು.

*ಯತೋ ವಾಚೋ ನಿವರ್ತನ್ತೇ ಅಪ್ರಾಪ್ಯ ಮನಸಾ ಸಹ* ಎಂಬುದು ವೇದವಚನ. ಮನಸ್ಸು ಮಾತುಗಳೂ ಯಾವನಲ್ಲಿಗೆ ತಲುಪದೇ ಮರಳಿ ಹಿಂದಿರುಗುವುವೋ ಅಂಥದ್ದು ಪರತತ್ತ್ವವೆಂಬುದು.

ಅಂತೆಯೇ ಹುಟ್ಟುವ ಮೊದಲೇ, ತಾಯಗರ್ಭದಲ್ಲಿದ್ದಾಗಲೇ ತಂದೆಯ ಮಂತ್ರೋಚ್ಚಾರದ ತಪ್ಪನ್ನು ಹೇಳಿದ ಕಾರಣಕ್ಕೆ ತಂದೆಯಿಂದಲೇ ಶಾಪಕ್ಕೆ ಗುರಿಯಾಗಿ ಅಂಕುಡೊಂಕಿನ, ಸೊಟ್ಟಗಿನ ದೇಹವುಳ್ಳವನಾಗಿ ಜನಿಸಿ ಅಷ್ಟಾವಕ್ರನೆನಿಸಿದ ಮಹಾತ್ಮನೊಬ್ಬ ನಿಜವಾಗಿ ಬ್ರಹ್ಮಜ್ಞಾನಿಯೂ, ಜೀವನ್ಮುಕ್ತನೂ, ಅಪರೋಕ್ಷಜ್ಞಾನಿಯೂ ಹೌದು. ಆದರೆ, ಆತ ಕೇವಲ ಬ್ರಹ್ಮಸತ್ಯವನ್ನು ಮಾತ್ರ ಪ್ರತಿಪಾದಿಸಿದ ಜ್ಞಾನಿಯಾಗಿದ್ದು, ಕೃಷ್ಣನಂತೆ ಯಾರಿಗೆ ಹೇಗೆ ಬೇಕು ಹಾಗಿರಲಿಲ್ಲ.

_*ಲೋಕೋ ಭಿನ್ನರುಚಿಃ*_ ಎಂಬಂತೆ ಒಬ್ಬೊಬ್ಬರಿಗೆ ಒಂದೊಂದು ಭಾವವಿರುತ್ತದೆ. ಆದ್ದರಿಂದಲೇ ಸೃಷ್ಟಿಯೂ ವೈವಿಧ್ಯಮಯವಾಗಿರುವುದು. ಇದು *ಸೂಪರ್ ಬಜಾರ್* ನಂತೆ, ಬಹು ಆಯ್ಕೆಗಳಿರುವಂಥದ್ದು. ಅಂಥದೇ ನಮಗೆಲ್ಲರಿಗೂ  ಇಷ್ಟ. ಅಲ್ಲವೆ?

ಅದಕ್ಕೇ ಇರಬೇಕು ಜನರು ಕೃಷ್ಣನನ್ನು ಪ್ರೀತಿಸಿದಷ್ಟು ಅಷ್ಟಾವಕ್ರನನ್ನು ಬಯಸಲಿಲ್ಲ. ಕೃಷ್ಣನ ವ್ಯಾಪ್ತಿಯು ಅನಂತವಾಗಿ ಸರ್ವಜನಾಪೇಕ್ಷಣೀಯನಾಗಿದ್ದ ಕೃಷ್ಣ. ಇಂದಿಗೂ ಹೌದು. ಆದರೆ, ಅಷ್ಟಾವಕ್ರನಂತೆ ತತ್ತ್ವಜ್ಞಾನಿಗಳು ಇಂದಿಗೂ ಬಹುಮಂದಿಗೆ ಇಷ್ಟವಾಗರು; ಕೇವಲ ಆ ಭಾವದಲ್ಲಿರುವವರಿಗೆ ಮಾತ್ರ ಅಷ್ಟಾವಕ್ರಗೀತೆಯೆಂಬ ಅಧ್ಯಾತ್ಮಸಾರವು ಹಿಡಿಸುವುದು. ಸಕಲ ಜನಾದರಣೀಯರು ಕೃಷ್ಣನಂಥ ಬಹುಮುಖವ್ಯಕ್ತಿತ್ವವುಳ್ಳವರೇ ಆಗುವರು. ಅವರ ನಾನಾ ಅಭಿರುಚಿಗಳು ನಾನಾ ಭಾವಗಳ ಮಂದಿಗೆ ಇಷ್ಟವಾಗಿ ಅವರು ಬಹುಜನರಿಗೆ ಬೇಕಾದವರಾಗುವರು.

ಹಾಗಾಗಿಯೇ ಡಿವಿಜಿಯವರಂದದ್ದು...ಸಮಷ್ಟಿಗುಣದ ಬ್ರಹ್ಮಭಾವಕ್ಕಿಂತ ವ್ಯಷ್ಟಿಗುಣದ ಜೀವಭಾವ ಜನಸಾಮಾನ್ಯರಿಗೆ ತೀರ ಸಮೀಪವಾದುದು ಎಂದು. ಇದನ್ನೇ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ— _*ಎಲ್ಲರೊಳಗೊಂದಾಗು ಮಂಕುತಿಮ್ಮ*_ ಎಂದ ಡಿವಿಜಿಯವರು, ನಮ್ಮ ಬಾವಿಯೊಳಗೇ ಇರದೆ, ಲೋಕವೆಂಬ ನಾನಾ ಅಭಿರುಚಿಯ ಮಂದಿಯ ಭಾವಸಾಗರವನ್ನರಿತು, *ದೇಶ ನೋಡು ಕೋಶ ಓದು* ಎಂಬಂತೆ ನಾನಾ ವಿಧದ ಜನರೊಂದಿಗೆ ಬೆರೆತು ಸಹಬಾಳ್ವೆಯ ಪಾಠವನ್ನು ಓದಿ, ಅನುಭವಿಸಿ ವಿಶಾಲಮನಸ್ಕರಾಗೋಣ. ಅಲ್ಲವೆ?

*ಹರೇ ರಾಮ*

*ಅಸಮತೆಗಮೆಡೆಯುಂಟು ಸೃಷ್ಟಿನಿರ್ವಾಹದಲಿ |*
*ವಸುಧೆಯಲಿ ನೋಡು ಗಿರಿ ಝರಿಯರಣ್ಯಂ ||*
*ಕುಸುಮಫಲಪರ್ಣಂಗಳೊಂದರಂತೊಂದಿಹುವೆ |*
*ಬಿಸಿಚಳಿಯ ಋತುಗಳೇಂ ಮರುಳಮುನಿಯ ||*

_(ಅಸಮತೆಗಂ + ಎಡೆಯುಂಟು) (ಝರಿ + ಅರಣ್ಯಂ) (ಪರ್ಣಂಗಳು + ಒಂದರಂತೆ + ಒಂದು + ಇಹುವೆ)_

ವಿಶ್ವವು ನಾನಾತ್ಮಕತೆಯುಳ್ಳದ್ದು. ಏಕಾತ್ಮಕತೆಯಿಂದ ಹುಟ್ಟಿದ್ದು. ಪುನಃ ಏಕಾತ್ಮಕತೆ ಬಂದಾಗ ಸೃಷ್ಟಿಯು ಲಯವಾಗುವುದು. ಓಂಕಾರವೆಂಬ ಪ್ರ-ನವ ನಾದವಾಗುವುದು. ನಾದವು ಬಿಂದುವಿನಲ್ಲಿ, ಬಿಂದುವು ಸಿಂಧುವಿನ ಅನಂತತೆಯಲ್ಲಿ ಲಯವಾಗುವುದು. ಇದೇ ಆತ್ಯಂತಿಕ ಪ್ರಲಯ.

ಹೀಗಾಗಿ, ವಿವಿಧತೆಯು ಸೃಷ್ಟಿಯ ಅಸ್ತಿತ್ವ, ಸುಸ್ಥಿತಿ, ಸುಗಮತೆಗಳಿಗೆ ಅನಿವಾರ್ಯವೆಂದಿರುವರು ಡಿವಿಜಿವರು. ವೈವಿಧ್ಯಕ್ಕೆ ಸಾಕಷ್ಟು ಎಡೆ / ಅವಕಾಶ ಸೃಷ್ಟಿಯಲ್ಲಿದೆ. ಇದಕ್ಕೆ ಸಾಕ್ಷಿ / ಆಧಾರವಾಗಿ *ವಿವಿಧರೂಪದ ವಸು / ಸಂಪತ್ತನ್ನು ತನ್ನ ಒಳಹೊರಗಿನಲ್ಲಿ ಧರಿಸಿ ವಸುಧಾ / ವಸುಂಧರಾ / ವಸುಧೆಯೆನಿಸಿದ ಈ ಭೂಮಿಯ ಹೊರಮೈಯಲ್ಲೇ ಸಾಕಷ್ಟು ವೈವಿಧ್ಯವಿದೆ. ಒಂದೆಡೆ ತೊರೆ-ಝರಿ-ಮರ-ಗಿಡ-ಬಳ್ಳಿ-ಖಗ-ಮಿಗಗಳಿಂದ ಕೂಡಿದ ಕಾನನ-ಬೆಟ್ಟ-ಗುಡ್ಡಗಳಿದ್ದರೆ, ಮತ್ತೊಂದೆಡೆ ನೀರಿಲ್ಲದೆ, ಹಸಿರಿಲ್ಲದೆ, ಒಣಗಿದ ಮರಳರಾಶಿಯ ಮರುಭೂಮಿಯಿದೆ. ಅಲ್ಲಿ ನೀರಿನ ದೃಶ್ಯ ಕೇವಲ ಮರೀಚಿಕೆ. ಇನ್ನೊಂದೆಡೆ ದಿಗಂತದವರೆಗೂ ಚಾಚಿದ ಅಗಾಧ ಜಲರಾಶಿಯ ಹೆದ್ದೆರೆಗಳಿಂದ ಕೂಡಿದ ಲವಣಸಮುದ್ರ. ಮಗದೊಂದೆಡೆ ವಿಶಾಲ ಭೂಮಿಯ ಸಮತಟ್ಟಿನಲ್ಲಿ ವಿಸ್ತಾರವಾಗಿ ಹರಿಯುವ ದೊಡ್ಡ ಸಣ್ಣ ನದಿಗಳು, ಸ್ಥಿರವಾದ ಬಾವಿ-ಕೆರೆ-ಸರೋವರಗಳು ಸಿಹಿನೀರಿನಿಂದ ಕೂಡಿವೆ.

ಹೀಗೆ ಪ್ರಕೃತಿಯು ಬಹು ವಿಭಿನ್ನವಾಗಿ ಕಾಲ-ದೇಶಗಳಲ್ಲಿ ಮೈದೋರುವುದು. ವಸಂತದಲ್ಲಿ ಚಿಗುರಿ, ಗ್ರೀಷ್ಮದಲ್ಲಿ ಒಣಗುವುದು. ಮಳೆ-ಚಳಿ-ಸೆಖೆಗಳಿಂದ ವಿಭಿನ್ನ ಕಾಲಗಳಲ್ಲಿ ವಿಭಿನ್ನವಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಕಂಡುಬರುವುದು. ಅಷ್ಟೇಕೆ? ಹಗಲಿರುಳುಗಳ ಅವಧಿಯೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬದಲಾಗುವುದು.

ಇನ್ನು ದಾಸರೆಂದಂತೆ, *_೮೪ ಲಕ್ಷ ವಿವಿಧ ರೀತಿಯ ಜನ್ಮಗಳನ್ನು ದಾಟಿ ಬಂದ ಈ ಶರೀರ_* ಬಹುಶಃ ಸೃಷ್ಟಿನಿಯಮದಂತೆ ಹಂತಹಂತವಾಗಿ ಸೂಕ್ಷ್ಮಜೀವಿಯಿಂದ ಸ್ಥೂಲದೇಹದವರೆಗೆ, ಕ್ರಿಮಿ-ಕೀಟ-ಪಕ್ಷಿ-ಪಶು-ಗೋವುಗಳನ್ನು ದಾಟಿ, ಶೂದ್ರ-ವೈಶ್ಯ-ಕ್ಷತ್ರಿಯ-ಬ್ರಾಹ್ಮಣ ವರ್ಣಗಳಾಗಿ ವಿಕಸನ ಹೊಂದಿದ್ದರೂ, ಇವೆಲ್ಲವೂ ಸೃಷ್ಟಿಯ ಅವಿಭಾಜ್ಯ, ಅನಿವಾರ್ಯ ಅಂಗಗಳೇ ಆಗಿವೆ. ಇವುಗಳಲ್ಲಿ ಪ್ರತಿಯೊಂದು ಜಾತಿಯ ಜೀವಿಯಲ್ಲೂ ಒಂದು ಮತ್ತೊಂದಕ್ಕಿಂತ ಭಿನ್ನ. ಒಂದು ನಾಯಿ ಮತ್ತೊಂದು ನಾಯಿಗಿಂತ, ಒಂದು ಗೋವು ಮತ್ತೊಂದಕ್ಕಿಂತ ಭಿನ್ನ. ಮನುಜನೂ ಒಬ್ಬನಂತೆ ಒಬ್ಬನಿಲ್ಲ. ಅಲ್ಲವೆ?

*ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ* ಎಂದಿರುವನು ಗೀತಾಚಾರ್ಯ ಕೃಷ್ಣ. *ಅಸ್ಮಿನ್ ಕುಲೇ ಜಾತಃ ಇತಿ ಜಾತಿಃ* ಈ ಕುಲದಲ್ಲಿ ಹುಟ್ಟಿದವನು / ಜಾತನು ಎಂಬುದರಿಂದ ಜಾತಿ. ನಂತರ, ಅವರವರ ಗುಣ-ಸ್ವಭಾವ, ಮಾಡುವ ಕರ್ಮಗಳನ್ನನುಸರಿಸಿ, ೪ ವರ್ಣಗಳು ನನ್ನಿಂದ ಸೃಜಿಸಲ್ಪಟ್ಟವೆಂದಿರುವನು ಭಗವಂತ. ಯಜನ-ಯಾಜನ (ಯಜ್ಞ ಮಾಡುವುದು, ಮಾಡಿಸುವುದು), ಅಧ್ಯಯನ-ಅಧ್ಯಾಪನ, ದಾನ-ಪ್ರತಿಗ್ರಹ (ದಾನ ಕೊಡುವುದು, ತೆಗೆದುಕೊಳ್ಳುವುದು)-- ಈ ಷಟ್(6) ಕರ್ಮಗಳಲ್ಲಿ ತೊಡಗಿದ, ಸಾತ್ತ್ವಿಕ / ಸಾಧು ಸ್ವಭಾವದ, ಲೋಕದ ಸರ್ವರ ಹಿತವನ್ನು ಬಯಸಿ ನಿತ್ಯ ಗಾಯತ್ರೀ ಜಪ, ಸಂಧ್ಯಾವಂದನೆ ಮುಂತಾದ ಅನುಷ್ಠಾನನಿರತರಾದವರನ್ನು, ಹಾಗೂ *ಬ್ರಹ್ಮಜ್ಞಾನೇನ ಬ್ರಾಹ್ಮಣಃ* ಎಂಬಂತೆ ಬ್ರಹ್ಮಜ್ಞಾನವುಳ್ಳವರನ್ನು *ಬ್ರಾಹ್ಮಣ* ರೆನ್ನುವರು.

ಅಂತೆಯೇ, *ಕ್ಷತಾತ್ ತ್ರಾಯತೇ ಇತಿ ಕ್ಷತ್ರಿಯಃ* ಎಂಬಂತೆ ಯಾರಿಗೂ ಗಾಯವಾಗದಂತೆ ರಕ್ಷಿಸುವ ಸಾಮರ್ಥ್ಯವಿರುವವರು, ಅದನ್ನು ಮಾಡುವವರು, ರಜೋಗುಣಾಧಿಕ್ಯರು *ಕ್ಷತ್ರಿಯರು.*

*ಕೃಷಿಗೌರಕ್ಷವಾಣಿಜ್ಯಂ ವೈಶ್ಯಕರ್ಮಸ್ವಭಾವಜಮ್* -- ಕೃಷಿ, ಪಶುಪಾಲನೆ, ವ್ಯಾಪಾರನಿರತ ಸಂಪತ್ ಸಂಗ್ರಹಬುದ್ಧಿಯ, ಸಮಾಜವನ್ನು ಈ ಮೂಲಕ ಪಾಲಿಸುವವರು *ವೈಶ್ಯರು.*

*ಸೇವೆಯೇ ಪರಮ ಕರ್ತವ್ಯ* ವೆಂದು ತಿಳಿದು ನಡೆವ, ಜಗತ್ತಿನ ಆಧಾರಸ್ತಂಭಗಳಾದ ವಿವಿಧ ಕಠಿಣ ಕೆಲಸಗಳನ್ನು ತಮ್ಮ ದೇಹಬಲದಿಂದ ನಿರ್ವಹಿಸುವವರು *ಶೂದ್ರರು.*

*ಇದು ಕೇವಲ ಗುಣಕರ್ಮಗಳ ಆಧಾರದಲ್ಲೇ ಹೊರತು, ಜನ್ಮದಿಂದ ಅಲ್ಲ.*

ಹೀಗೆ ವೈವಿಧ್ಯತೆಯಿಂದ ಕೂಡಿದ ಮನುಕುಲವೂ ಜಗತ್ತನ್ನು ಮತ್ತಷ್ಟು ವಿಭಿನ್ನವಾಗಿ ಮಾಡಿದೆ. *ವಿಭಿನ್ನತೆಯೇ ಜಗದ ಸೊಬಗು. ಅದನ್ನರಿತು ಭೇದತೋರದೆ ಒಗ್ಗಟ್ಟಿನಿಂದ ಲೋಕಹಿತಗೈವುದೇ ನಮ್ಮ ಧ್ಯೇಯವಾಗಲಿ.*

_*ಗುರುತತ್ತ್ವಕ್ಕೆ ಅಂತರಂಗ ಬಹಿರಂಗಗಳಲ್ಲಿ ಶರಣಾಗಿ, “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬಂತೆ, ಗುರುಪ್ರೇರಣೆಯಂತೆ ಸನ್ಮಾರ್ಗದಲ್ಲಿ ಮುನ್ನಡೆದು, ಮೇಲುಕೀಳು ಭಾವ ತೊರೆದು, ಯಾವ ಕೆಲಸವೂ ಕೀಳಲ್ಲ, ಮೇಲಲ್ಲವೆಂದರಿತು, ಪರಸ್ಪರರನ್ನು ಗೌರವಿಸಿ, ಎಲ್ಲರ ಅನಿವಾರ್ಯ ಸಹಬಾಳ್ವೆಯ ಅಗತ್ಯವನ್ನು ಮನಗಂಡು, ನಮ್ಮ ಪಾಲಿನ ಕೆಲಸವನ್ನು “ಕಾಯಕವೇ ಕೈಲಾಸ” ವೆಂಬಂತೆ ನಿಷ್ಠೆಯಿಂದ ನಡೆಸಿ, ಲೋಕಸಾಮರಸ್ಯದೊಂದಿಗೆ ಭಗವಂತನೊಂದಿಗೂ ಸಮರಸತೆಯನ್ನು ಹೊಂದಿದಾಗ ಸರ್ವರಿಗೂ ಮೋಕ್ಷ ತಪ್ಪಿದ್ದಲ್ಲ.*

*ಹರೇ ರಾಮ*

*ಅಹಮನಹಮುಗಳ್ ಜೀವರಥಕೆರಡು ಕೀಲುಗಳು |*
*ಬಹುವೇಗಮಹಮಿಂದೆ ವೇಗಮಿತಿಗನಹಂ ||*
*ವಿಹಿತಮಿದ್ದೊಡಹಂತೆ ನಿರಹಂತೆಯಾಜ್ಞೆಯಲಿ |*
*ಸುಹಿತ ರಥಸಂಚಾರ - ಮರುಳ ಮುನಿಯ || (೨೪೦)*

(ಅಹಮ್+ಅನಹಮುಗಳ್)(ಜೀವರಥಕೆ+ಎರಡು)(ಬಹುವೇಗಮ್+ಅಹಂ+ಇಂದೆ)(ವೇಗಮಿತಿಗೆ+ಅನಹಂ)
(ವಿಹಿತಂ+ಇದ್ದೊಡೆ+ಅಹಂತೆ)(ನಿಃ+ಅಹಂತೆ+ಆಜ್ಞೆಯಲಿ)

ಜೀವನಿಗೆ ತಾನು, ತನ್ನದೆಂಬ ವ್ಯಷ್ಟಿ ಭಾವವೇ *ಅಹಂ* ಎನಿಸಿದೆ. ನಾವು, ನಮ್ಮದೆಂಬ ಸಮಷ್ಟಿಭಾವವೇ *ನಿರಹಂಭಾವ.* ಇವೆರಡೂ ಜೀವವೆಂಬ ರಥದ ೨ ಕೀಲುಗಳು / ನಿಯಂತ್ರಕಗಳು / ಚಕ್ರಗಳು ಇದ್ದಂತೆ. ಅಹಂಭಾವವು *ವೇಗವರ್ಧಕ / accelerator* ಆದರೆ, ನಿರಹಂಭಾವವು *ವೇಗನಿರೋಧಕ / break.* ಹೀಗಾಗಿ, ಅಹಂ ಜಾಸ್ತಿಯಾದಾಗ ಬದುಕಿಗೆ ಇಚ್ಛಾಜ್ಞಾನಕ್ರಿಯಾಶಕ್ತಿಗಳು ಹೆಚ್ಚಾಗಿ, ತಾನೇ ತಾನಾಗಿ ವ್ಯಕ್ತಿಯು ಪುರುಷಪ್ರಯತ್ನದ ಬಲದಿಂದ ಬೇಗನೆ / ವೇಗವಾಗಿ ಅಭಿವೃದ್ಧಿ ಹೊಂದುತ್ತಾನೆ. ಆದರೆ, ಈ ವ್ಯಕ್ತಿಗತ ಪ್ರಗತಿಯು ಸಮಷ್ಟಿಗೆ ಪೂರಕವಾಗಿದ್ದರೆ ಬದುಕು ಹಸನಾಗುವುದು. ಅಂತಿಮವಾಗಿ ಸುಖ, ನೆಮ್ಮದಿಗಳುಂಟಾಗುವುವು. ಅದಲ್ಲದೆ, ಕೇವಲ ವ್ಯಷ್ಟಿ ಪ್ರಗತಿಮಾತ್ರವಾಗಿ, ಸಮಷ್ಟಿಗೆ ಅದು ಮಾರಕವಾಗುವಂತಿದ್ದರೆ ಆ ವ್ಯಕ್ತಿಗೂ ಅಂತಿಮವಾಗಿ ದುಃಖ, ಅಶಾಂತಿ, ಪತನಗಳುಂಟಾಗುವುದು.

ಹಾಗಾಗಿ, ಪರರಿಗೆ ತೊಂದರೆಯಾಗದ ವೈಯಕ್ತಿಕ ಪ್ರಗತಿಯು ಅಹಂ ಕೀಲಿಯನ್ನು ಹದವಾಗಿ ನಿರಹಂ ಕೀಲಿಯಿಂದ ನಿಯಂತ್ರಿಸಿದ ಬದುಕಾಗುತ್ತದೆ. ನಾವು ಎಷ್ಟೇ ವೇಗವಾಗಿ ವಾಹನದಲ್ಲಿ ರಸ್ತೆಯ ಮೇಲೆ ಚಲಿಸುವಾಗಲೂ, ನಮಗೆ ಹೇಗೆ ವಾಹನದ ಮೇಲೆ ನಿಯಂತ್ರಣವಿರಬೇಕಾಗುತ್ತದೆಯೋ, ಇಲ್ಲದಿದ್ದರೆ ಅಪಘಾತಕ್ಕೆ ಹೇಗೆ ಕಾರಣವಾಗುತ್ತದೋ, ಅಂತೆಯೇ ಬದುಕೆಂಬ ರಥಕ್ಕೂ ಇದೇರೀತಿಯ ನಿರಹಂತೆಯ ಅಂಕುಶದ ಅಗತ್ಯವಿದೆಯೆಂದು ಡಿವಿಜಿಯವರು ಬಹುಚೆನ್ನಾಗಿ *ರೂಪಕಾಲಂಕಾರ* ದಲ್ಲಿ ಕಾವ್ಯಮಯವಾಗಿ ಚಿತ್ರಿಸಿದ್ದಾರೆ. *ಉಪಮಾನೋಪಮೇಯಯೋಃ ಅಭೇದಃ ರೂಪಕಮ್* -- ಉಪಮಾನ ಉಪಮೇಯಗಳ ನಡುವೆ ಭೇದವಿಲ್ಲದಂತೆ ಹೇಳಿದರೆ ಅದು ರೂಪಕಾಲಂಕಾರ. ಇಲ್ಲಿ ಜೀವ ಉಪಮೇಯ. ರಥ ಉಪಮಾನ. ಜೀವವೇ ಒಂದು ರಥವೆನ್ನಲಾಗಿದೆ. ಜೀವವು ರಥದಂತೆ ಎಂದಿದ್ದರೆ *ಉಪಮಾಲಂಕಾರ* ವಾಗುತ್ತಿತ್ತು. ಇಲ್ಲಿ ಹಾಗೆ ಕೇವಲ ಹೋಲಿಕೆ ಮಾಡದೆ, ಅದೇ ಇದೆಂದು ಹೇಳಲಾಗಿದೆಯಾದ್ದರಿಂದ ರೂಪಕಾಲಂಕಾರ.

ಹಾಗೆಯೇ ಅಹಂ ನಿರಹಂಗಳೇ ಜೀವರಥದ ಕೀಲಿಗಳು. ಇದೂ ರೂಪಕವೇ. ರೂಪಕವೆಂದರೆ ನಾಟಕ. ನಾಟಕೀಯವಾಗಿ ಒಂದರ ರೂಪವೇ ಇನ್ನೊಂದೆನ್ನುವುದು ರೂಪಕ. ಜೀವದ ರೂಪವೇ ರಥ. ಅಹಂ ನಿರಹಂಗಳ ರೂಪವೇ ಜೀವರಥದ ಕೀಲಿಗಳು. ಹೀಗೆ ರೂಪಕ ಪ್ರಯೋಗವಿದೆ.

ಅಂತಿಮವಾಗಿ ಡಿವಿಜಿಯವರು ಹೇಳಬಯಸಿದ್ದು ಕಠೋಪನಿಷತ್ತು, ಗೀತೆಗಳ ಸಾರವನ್ನೇ.

*_ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ಚ |_*
*_ ಬುದ್ಧಿಂ ಚ ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ ||_*
_*ಇಂದ್ರಿಯಾಣಿ ಹಯಾನ್ಯಾಹುಃ ||*_

_ಇಂದ್ರಿಯಗಳು ಶರೀರವೆಂಬ ರಥದ ಕುದುರೆಗಳು. ನಮ್ಮನ್ನು ಬೇಕೆಂಬಲ್ಲಿಗೊಯ್ಯುತ್ತವೆ. ಬುದ್ಧಿಯು ಇಂದ್ರಿಯಗಳೆಂಬ ಕುದುರೆಗಳ ನಿಯಂತ್ರಕನಾದ ಸಾರಥಿ. ಮನಸ್ಸೇ ಬುದ್ಧಿಯೆಂದಂತೆ ಕುದುರೆ ನಿಯಂತ್ರಿಸುವ ಹಗ್ಗ. ಆತ್ಮನೇ ಶರೀರವೆಂಬ ರಥದಲ್ಲಿರುವ ರಥಿಕ._

ಹಾಗಾಗಿ ನಾವು ಅಹಂತೆಯಿಂದ ಕೂಡಿದ ಇಂದ್ರಿಯಾಶ್ವಗಳಿಂದ ಒಯ್ಯಲ್ಪಡುವ ಶರೀರವೆಂಬ ರಥವನ್ನಾರೋಹಿಸಿ ಬದುಕೆಂಬ ಯಾತ್ರೆಯನ್ನು ಮಾಡುವಾಗ, ಬಹು ಜತನದಿಂದ ಸಾಗಬೇಕು. ಅಹಂ ಪೂರ್ಣವಾಗಿ ನಿರಹಂನಿಂದ ತಡೆಯಲ್ಪಟ್ಟರೆ ಜೀವನವೆಂಬ ರಥವು ಮುಂದೆ ಸಾಗದು. ವೇಗವರ್ಧಕವನ್ನು ಕಿಂಚಿತ್ತೂ ಬಳಸದ ಕೇವಲ ವೇಗನಿಯಂತ್ರಕವನ್ನೊತ್ತಿದರೆ ಬದುಕೆಂಬ ರಥದ ನಿತ್ಯಯಾತ್ರೆಯು ಮರಣವೆಂಬ ಅಂತಿಮ ನಿಲ್ದಾಣದಲ್ಲಿ ನಿಲ್ಲುವುದು. ಹಾಗಾಗಿ, ಅಹಂ ಕುದುರೆಗಳ ವೇಗವನ್ನು ನಿರಹಂ ಬುದ್ಧಿಯೆಂಬ ಜೀನಿನಿಂದ ಹದವಾಗಿ ನಿಯಂತ್ರಿಸಿ, ಸುಗಮವಾಗಿ ಬದುಕಿನ ಯಾತ್ರೆಯನ್ನು ಪೂರ್ಣಗೊಳಿಸೋಣ. ಸಮಷ್ಟಿಗೆ ಪೂರಕವಾಗಿ ವೈಯಕ್ತಿಕ ಪ್ರಗತಿಯನ್ನು ಸಾಧಿಸೋಣ.

*ಹರೇ ರಾಮ*

*_ಅಹಿತನಾರ್ ನಿನಗಿಹದಿ ಪರದೊಳೆಲ್ಲಾದೊಡಂ |_*
_*ಇಹನವಂ ನಿನ್ನೊಳಿಲ್ಲಿಯೆ ಮನದ ಗವಿಯೊಳ್ ||*_
*_ಅಹಮೆಂಬ ರಾಕ್ಷಸಂ ಬಹುರೂಪಿ ಬಹುಮಾಯಿ |_*
*_ದಹಿಸು ನೀಂ ಮೊದಲವನ - ಮರುಳ ಮುನಿಯ || (೨೮೦)_*

_(ಅಹಿತನ್+ಆರ್)(ನಿನಗೆ+ಇಹದಿ)(ಪರದೊಳ್+ಎಲ್ಲಾದೊಡಂ)(ಇಹನ್+ಅವಂ)(ನಿನ್ನೊಳ್+ಇಲ್ಲಿಯೆ)(ಅಹಂ+ಎಂಬ)(ಮೊದಲ್+ಅವನ)_

ಒಬ್ಬ ವ್ಯಕ್ತಿಗೆ ನಿಜವಾದ ಶತ್ರು ಯಾರು? ಈ ಲೋಕದಲ್ಲಿ ನಿಜಶತ್ರು ಯಾರು? ಪರಲೋಕದಲ್ಲಿ ನಿಜವೈರಿ ಯಾರು?

ಹಿತವನ್ನು ಮಾಡದವನು ಅಹಿತಕಾರಿಯು. ಆತನೇ ಶತ್ರುವು. ಹಾಗಾದರೆ, ನಮಗೆ ಅಹಿತಕಾರಿ ಯಾರು? ನಮ್ಮೊಳಗೆಯೇ ಇರುವ ನಮ್ಮ ಮನಸ್ಸೆಂಬ ಗುಹೆಯಲ್ಲಿ ವಾಸವಾಗಿರುವ *ಅಹಂ* ಎಂಬ ಹೆಸರಿನ ರಾಕ್ಷಸನು ನಾನಾರೂಪಗಳನ್ನು ತಾಳಬಲ್ಲಂಥ ಬಹುರೂಪಿಯು. ಹೀಗೆ ಬಹು ಮಾಯಾಶಕ್ತಿಯಿಂದ ಕೂಡಿದ ಈ ರಾಕ್ಷಸನು ಮಾಯಾವಿಯು. ತನ್ನ ಸ್ವಾರ್ಥಕ್ಕಾಗಿ ಯಾವ ವೇಷವನ್ನೂ ಧರಿಸಬಲ್ಲ. *ಉದರನಿಮಿತ್ತಂ ಬಹುಕೃತವೇಷಮ್* ಎಂಬಂತೆ ಹೊಟ್ಟೆಹೊರೆದುಕೊಳ್ಳಲು ಮನುಷ್ಯರು ನಾನಾವೇಷಗಳನ್ನು, ನಾನಾ ಮುಖವಾಡಗಳನ್ನು ತೊಡುತ್ತಾರೆ. ತಮ್ಮ ಕಾರ್ಯಸಾಧನೆಗಾಗಿ ನಾನಾ ಯುಕ್ತಿಗಳನ್ನು ಬಳಸುತ್ತಾರೆ.

ಇವೆಲ್ಲವೂ *ಅಹಂ* ನ ಪ್ರಭಾವ. ಅಹಂ ಹೆಚ್ಚಾದರೆ ಅದೇ ನಮಗೆ ದೊಡ್ಡಶತ್ರು. ಅದಕ್ಕಿಂತ ದೊಡ್ಡ ಶತ್ರು ಇಹಪರಗಳಲ್ಲಿ ಬೇರಾವುದೂ ಇರದು. ಹಾಗಾಗಿ, ಮೊದಲು ಅಹಂ ಎಂಬ ರಾಕ್ಷಸನನ್ನು  ಮಟ್ಟಹಾಕಿದರೆ, ಹೊತ್ತಿಸಿದರೆ, ಆಗ ಮಾತ್ರ ನಮ್ಮ ಉದ್ಧಾರ ಸಾಧ್ಯ. *ನಾನೆಂಬುದನು ತೊರೆದು ನಾವೆಂಬುದನು ತಿಳಿದು, ನಾವೆಂಬುದನು ತೊರೆದು ನೀನೇ (ದೇವನೇ) ಸರ್ವಕ್ಕೂ ಕಾರಣನು ಎಂಬುದನ್ನು ಅರಿಯಬೇಕು.*

ಇದೇ ಆತ್ಮೋದ್ಧಾರದ ದಿವ್ಯಪಥ. *ನಾನು ಎಂಬ ಭಾವ ಹೋದರೆ ಮೋಕ್ಷ ಸನಿಹದಲ್ಲೇ ಸಿದ್ಧವಾಗುವುದು.*

ಕೃಷ್ಣನು ಗೀತೆಯಲ್ಲೂ ಇದನ್ನೇ ಹೇಳಿರುವನು.

_*ಆತ್ಮೈವ ಹಿ ಆತ್ಮನಃ ಬಂಧುಃ | ಆತ್ಮ ಏವ ರಿಪುಃ ಆತ್ಮನಃ ||*_

_ತನಗೆ ತಾನೇ ಬಂಧುವು. ತನಗೆ ತಾನೇ ಶತ್ರುವೂ ಹೌದು. ನಮ್ಮ ಇಂದ್ರಿಯ-ಮನಸ್ಸುಗಳು ಬುದ್ಧಿಯ ಹಿಡಿತದಲ್ಲಿದ್ದು, ಆತ್ಮ-ಅನಾತ್ಮ, ಸತ್-ಅಸತ್, ಸತ್ಯ-ಮಿಥ್ಯೆ, ಸರಿ-ತಪ್ಪು ಮುಂತಾದವುಗಳ ಬಗ್ಗೆ ವಿವೇಕ *(ಸದಸದ್ವಿವೇಕ)* ಯುತವಾಗಿ ವರ್ತಿಸಿದರೆ ನಮಗೆ ನಾವೇ ಮಿತ್ರರಾಗುತ್ತೇವೆ. ಆದರೆ, ಈ *ಶಮ (ಮನೋನಿಗ್ರಹ), ಹಾಗೂ ದಮ (ಇಂದ್ರಿಯನಿಗ್ರಹ)* ಗಳಿಲ್ಲವಾದರೆ, ಮನಸ್ಸಿನ ಮೂರ್ಖತನವು ಬುದ್ಧಿಯ ಹಿಡಿತದಲ್ಲಿಲ್ಲದೆ, ನಮಗೆ ನಾವೇ ಶತ್ರುಗಳಾಗಿ, ನಮ್ಮ ಸಮಾಧಿಯನ್ನು ನಾವೇ ತೋಡಿದಂತಾಗುವುದು.

ಅದಕ್ಕಾಗಿಯೇ, ಡಿವಿಜಿಯವರಂದದ್ದು, *ಅಹಂ* ಎಂಬುದೇ ನಮ್ಮ ನಿಜವಾದ ಶತ್ರು. ಅದನ್ನು ನಾಶಪಡಿಸಿದರೆ, ನಾವು ನಾಶವಾಗದ ಅಮರತ್ವ / ಮೋಕ್ಷವನ್ನು ಪಡೆಯುವೆವು. ಹಾಗಾಗಿ, ನಾವು *ದೇಶ ನೋಡು ಕೋಶ ಓದು* ಎಂಬಂತೆ ನಮ್ಮ ಸದ್ಗ್ರಂಥ ಸ್ವಾಧ್ಯಾಯ ಹಾಗೂ ಪರ್ಯಟನೆಗಳಿಂದ ಜಗದ ಮರ್ಮವನರಿತು, ಸೃಷ್ಟಿಯ ಅಗಾಧತೆ, ಅನಂತತೆಗಳನ್ನು ತಿಳಿದು, ನಮ್ಮ ಅಲ್ಪತೆ, ಕ್ಷಣಿಕತೆಗಳನ್ನರಿತು, ಅಹಂಮುಕ್ತರಾಗಿ ಸಾರ್ಥಕ ಬದುಕನ್ನು ಬಾಳೋಣ. ಭವಬಂಧನವನ್ನು ಕಳೆಯೋಣ. ಸುಖದುಃಖಗಳಿಂದ ಪಾರಾಗಿ, ಅವುಗಳಿಂದ ಅತೀತರಾಗಿ, ದೈವತ್ವಕ್ಕೇರೋಣ. ದಾಸರೆಂದಂತೆ *ಏರಿರೋ ವೈಕುಂಠಕೆ*....ಎಂಬ ದಾರಿಯನ್ನು ಹಿಡಿಯೋಣ.

🙏🏻🙏🏻🙏🏻 *ಹರೇ ರಾಮ* 🙏🏻🙏🏻🙏🏻💐💐😊😊

Comments

Popular posts from this blog

ವೃದ್ಧಚಾಣಕ್ಯನೀತಿದರ್ಪಣಸಾರಃ ೨

ವೈದ್ಯಕೀಯಸುಭಾಷಿತಸಾಹಿತ್ಯಮ್ ೧

ಸೂಕ್ತಿವೈಭವ