ಸರ್ವಜ್ಞವಚನಾನಿ (ತ್ರಿಪದಿನಃ) (ಅಕಾರಾದಿ ಕ್ರಮದಲ್ಲಿ)

೧೮) ಸರ್ವಜ್ಞವಚನಾನಿ (/ ತ್ರಿಪದಿನಃ)
(ಅಕಾರಾದಿ ಕ್ರಮದಲ್ಲಿ)
ಅ

ಅನ್ನವನು ಇಕ್ಕುವ ಅನ್ಯಜಾತನೆ ಕುಲಜ |
ಅನ್ನವನು ಇಕ್ಕದುಣತಿಪ್ಪ | ಕುಲಜಾತ |
-ನನ್ಯರೆಂದರಿಯೋ ಸರ್ವಜ್ಞ || ೧ ||

ಅನ್ನದಾನಂ ಪ್ರಕುರ್ವಾಣೋऽನ್ಯವಂಶಜೋऽಪಿ ವಂಶಜಃ |
ಕುಲಜೋऽಪಿ ಪರೋ ಜ್ಞೇಯೋ ಭುಂಜಾನೋऽನ್ನಂ ದದಾತಿ ನ || ೧ ||

ಅನ್ನದಾನವನ್ನು ಬೇರೆ ಜಾತಿಯವನು ಮಾಡಿದರೂ ಅವನು ಸ್ವಜಾತಿಯವನೇ. ಆದರೆ, ಯಾವ ಸ್ವಜಾತಿಯವನು ತಾನುಣ್ಣುತ್ತಾ ತನ್ನವರಿಗೇ ಉಣಬಡಿಸದಿದ್ದರೆ ಆತನು ಪರಜಾತಿಯವನೆಂದೇ ತಿಳಿಯಬೇಕು. || ೧ ||

ಅನ್ನವನು ಇಕ್ಕಿ ನೀಂ ಖಿನ್ನನಾಗಲು ಬೇಡ |
ಭಿನ್ನಭೇದಗಳು ಇಲ್ಲದಲೆ | ಶಿವ ಜಗವ |
-ನಿನ್ನು ಸಲಹುವನು ಸರ್ವಜ್ಞ || ೨ ||

ಅನ್ನಂ ದತ್ವಾ ನ ಭೂಯಾದ್ಧಿ ಖಿನ್ನೋ ದಾತಾ ಶಿವಃ ಸ್ವಯಮ್ |
ಭಿನ್ನತ್ವೇನ ವಿನಾ ಸರ್ವಾನ್ ದಾತಾರಮಪಿ ರಕ್ಷತಿ || ೨ ||

ಅನ್ನದಾನ ಮಾಡಿದ ಬಳಿಕ ‘ಅಯ್ಯೋ! ತನ್ನ ನಿಧಿ ಕರಗಿತಲ್ಲಾ’ ಎಂದು ದುಃಖಿಸಬಾರದು. ಯಾಕೆಂದರೆ, ಅನ್ನದಾನದಿಂದ ಶಿವನು ಪ್ರಸನ್ನನಾಗುತ್ತಾನೆ. ಅಲ್ಲದೆ, ಯಾವುದೇ ಭೇದಭಾವ ಮಾಡದೆ ಇಡೀ ಜಗತ್ತನ್ನು ಅವನು ದಾನಿಯನ್ನೂ ಸಹಿತವಾಗಿ ಸುರಕ್ಷಿತವಾಗಿ ನೋಡಿಕೊಳ್ಳುತ್ತಾನೆ. || ೨ ||

ಅನ್ನದಾನಕ್ಕಿಂತ ಮುನ್ನ ದಾನಗಳಿಲ್ಲ |
ಅನ್ನಕ್ಕೆ ಮಿಗಿಲು ಇನ್ನಿಲ್ಲ | ಜಗದೊಳಗೆ |
ಅನ್ನವೇ ಪ್ರಾಣ ಸರ್ವಜ್ಞ || ೩ ||

ಅನ್ನದಾನಾತ್ಪರಂ ನಾಸ್ತಿ ಹ್ಯನ್ನಮೇವ ಪರಂ ಸ್ಮೃತಮ್ |
ಅನ್ನಾತ್ಪರಂ ನ ಲೋಕೇऽಸ್ತಿ ಯತೋऽನ್ನಂ ಪ್ರಾಣ ಏವ ಹಿ || ೩ ||

ಅನ್ನದಾನವು ದಾನಗಳಲ್ಲಿ ಶ್ರೇಷ್ಠ. ಅದಕ್ಕಿಂತ ಮೇಲಾದ ದಾನವಿಲ್ಲ. ಈ ಜಗತ್ತಿನಲ್ಲಿ, ಅನ್ನಕ್ಕಿಂತ ಮಿಗಿಲಾದದ್ದು ಇನ್ನೊಂದಿಲ್ಲ. ಯಾಕೆಂದರೆ, ಅನ್ನವು ಸಕಲಜೀವರ ಪ್ರಾಣ ಕಾಯುವುದಾಗಿದೆ. ಅನ್ನವಿಲ್ಲದಿದ್ದರೆ ಜೀವಿಗಳು ಹೆಚ್ಚು ದಿನ ಬದುಕುಳಿಯಲಾರವು. ಹಾಗೆಯೇ, ಎಲ್ಲರಿಗೂ ಆಹಾರವು ಪ್ರಾಣದಂತೆ ಅಚ್ಚುಮೆಚ್ಚಿನದೂ ಆಗಿದೆ. ಅಲ್ಲವೇ? || ೩ ||

ಅರ್ಥ ಸಿಕ್ಕರೆ ಬಿಡರು ವ್ಯರ್ಥದಿಂ ಶ್ರಮಬಡರ |
-ನರ್ಥಕ್ಕೆ ಪರರ ನೂಂಕಿಪರು | ವಿಪ್ರರಿಂ |
ಸ್ವಾರ್ಥರಿನ್ನಿಲ್ಲ ಸರ್ವಜ್ಞ || ೪ ||

ಪ್ರಾಪ್ತಮರ್ಥಂ ನ ಮುಂಚೇಯುಃ ಶ್ರಮಾರ್ಥಮಪಿ ನೇಚ್ಛುಕಾಃ |
ಅನರ್ಥಾಯ ಪರಾನ್ ಯಾಂತಿ ಕಲೌ ವಿಪ್ರಾऽಪರಾರ್ಥಿನಃ || ೪ ||

ಕಲಿಯುಗದಲ್ಲಿ ಧರ್ಮದ ಶೈಥಿಲ್ಯವೆಷ್ಟೆಂದು ಸರ್ವಜ್ಞನು ಮಾರ್ಮಿಕವಾಗಿ ನುಡಿದಿದ್ದಾನೆ. ಧರ್ಮಾಚಾರವಿಚಾರಬೋಧನಾಪರರಾಗಿರಬೇಕಾದ ಬ್ರಾಹ್ಮಣಜಾತರಲ್ಲಿ ಬಹುಮಂದಿ ಈ ಕಲಿಕಾಲದಲ್ಲಿ ಹಣದ ಲೋಭಿಗಳೂ, ಶ್ರಮಪಡದವರೂ, ಇತರರನ್ನು ತೊಂದರೆಗೆ ಈಡುಮಾಡುವವರೂ  ಆಗಿದ್ದು, ಅವರಿಗಿಂತ ಸ್ವಾರ್ಥಿಗಳು (ಅ-ಪರಾರ್ಥಿಗಳು = ಪರರ ಹಿತಬಯಸುವವರು ಪರಾರ್ಥಿಗಳು; ಅದನ್ನು ಬಯಸದವರು ಅಪರಾರ್ಥಿಗಳು) ಬೇರೆ ಸಿಗಲಾರರು ಎಂದಿದ್ದಾನೆ.|| ೪ ||

ಅವಯವಗಳೆಲ್ಲರಿಗೆ ಸಮವಾಗಿ ಇರುತಿರಲು |
ಭವಿ ಭಕ್ತ ಶ್ವಪಚ ಶೂ | ದ್ರರಿವರೆಂತೆಂಬ |
ಕವನವೆತ್ತಣದೋ ಸರ್ವಜ್ಞ || ೫ ||

ಸಮಾನಾವಯವಾಃ ಸಂತಿ ಲೋಕೇಷು ನೇಹ ಭಿನ್ನತಾ |
ಭವೀಭಕ್ತೌ ಚ ಚಾಂಡಾಲಃ ಕಥಂ ಶೂದ್ರ ಇತೀರ್ಯತೇ || ೫ ||

ಜಗತ್ತಿನಲ್ಲಿ ಎಲ್ಲ ಮಾನವರಿಗೂ ೨ ಕಣ್ಣು-ಕೈಕಾಲುಗಳು ಇತ್ಯಾದಿ ಅಂಗಗಳು ಸಮಾನವಾಗಿರುವಾಗ ಭಿನ್ನತೆ ಎಲ್ಲಿಯದು? (ಭವ=ಸಂಸಾರ; ಭವೇ ಅಸ್ತಿ ಇತಿ ಭವೀ=ಸಂಸಾರದಲ್ಲಿರುವವ ಸಂಸಾರಿ) ಹೀಗಿರುವಾಗ, ಸಂಸಾರಿ, ದೈವಭಕ್ತ, ಚಾಂಡಾಲ, ಶೂದ್ರ—ಇತ್ಯಾದಿಯಾಗಿ ಹೇಗೆ ತಾನೆ ಮೇಲು-ಕೀಳಾಗಿ ಕಾಣುವರು?

ಅರಿಯದೆಸಗಿದ ಪಾಪ | ಅರಿತರದು ತನಗೊಳಿತು |
ಅರಿತರಿತು ಮಾಡಿ ಮರೆತುದು | ನಯನವನು |
ಇರಿದುಕೊಂಡಂತೆ ಸರ್ವಜ್ಞ || ೬ ||

ಪಾಪಂ ಕುರ್ವನ್ತಿ ನ ಜ್ಞಾತ್ವಾ ನೄಣಾಂ ಜಾನಂತಿ ಚೇದ್ವರಮ್ |
ಜಾನನ್ತ ಏವ ಕುರ್ವಂತಿ ಯದಿ ನೇತ್ರವಿಘಾತಕಮ್ || ೬ ||

ತಿಳಿಯದೇ ಕೆಲವರು ತಪ್ಪನ್ನೆಸಗುತ್ತಾರೆ. ತಪ್ಪನ್ನರಿತು ಪುನರಾವರ್ತಿಸದಿದ್ದರೆ ಅಂಥವರು ಉತ್ತಮರು. ಇನ್ನು, ತಿಳಿದೂ ತಿಳಿದೂ ಅದೇ ತಪ್ಪುಗಳು ಮರುಕಳಿಸಿದರೆ, ಅಂಥವರು ತಮ್ಮ ಕಣ್ಣನ್ನು ತಾವೇ ತಿವಿದುಕೊಂಡಂತೆ ಎಂದಿದ್ದಾನೆ ಸರ್ವಜ್ಞ.

ಅಂದು ಕಾಮನ ಹರನು | ಕೊಂದನೆಂಬುದು ಪುಸಿಯು |
ಇಂದುವದನೆಯರ ಕಡೆಗಣ್ಣು | ನೋಟದಿ |
ನಿಂದಿಹನು ಸ್ಮರನು ಸರ್ವಜ್ಞ || ೭ ||

ಪುರಾ ದಗ್ಧೋ ಹರೇಣೇತಿ ಕಾಮೋ ಮಿಥ್ಯಾ ವಚೋ ಯತಃ |
ಶಶಿಮುಖೀನಾಮಪಾಂಗೇಷು ಸ್ಮರಸ್ತಿಷ್ಠತಿ ಸರ್ವಥಾ || ೭ ||

ಹಿಂದೆ ಶಿವನ ತಪಗೆಡಿಸಿದಾಗ ಕ್ರುದ್ಧನಾದ ಹರನ ಕ್ರೋಧಾಗ್ನಿಯಲ್ಲಿ ಮನ್ಮಥನು ಸುಟ್ಟು ಭಸ್ಮವಾದನೆಂಬ ಮಾತು (ವೃತ್ತಾಂತ) ಸತ್ಯವಲ್ಲ. ಯಾಕೆಂದರೆ, ಚಂದ್ರಮುಖಿಯರ (ಸುಂದರೂಪಿನ ಸ್ತ್ರೀಯರ) ಓರೆನೋಟದಲ್ಲಿ ಖಂಡಿತವಾಗಿಯೂ ಮದನನೇ ಕುಳಿತಿದ್ದಾನೆ; ಇನ್ನೂ ಸತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದ ಸರ್ವಜ್ಞನು, ಸ್ತ್ರೀಸೌಂದರ್ಯ ಅದರಲ್ಲೂ ಅವರ ಕಡೆಗಣ್ಣ ನೋಟದ ಆಕರ್ಷಕ ಶಕ್ತಿಯ ಬಗ್ಗೆ ಲೋಕಾನುಭವವನ್ನು ನೇರವಾಗಿ ಸಂಕೋಚವಿಲ್ಲದೇ ಬಿಚ್ಚಿಟ್ಟಿದ್ದಾನೆ.

ಅನ್ಯಸತಿಯನು ಕಂಡು | ತನ್ನ ಹೆತ್ತವಳೆಂದು |
ಮನ್ನಿಸಿ ನಡೆದ ಪುರುಷಂಗೆ | ಇಹಪರದಿ |
ಮುನ್ನ ಭಯವಿಲ್ಲ ಸರ್ವಜ್ಞ || ೮ ||

ಮಾತೃವತ್ ಪರದಾರೇಷು ಯಃ ಪಶ್ಯತಿ ಜಿತೇಂದ್ರಿಯಃ |
ತಸ್ಯೇಹಪರಲೋಕೇಷು ನ ಕಿಂಚಿತ್ ವಿದ್ಯತೇ ಭಯಮ್ || ೮ ||

ಇತರರ ಪತ್ನಿಯರನ್ನು ಕಂಡಾಗ, ಅವರು ತನ್ನ ತಾಯಂದಿರೆಂದೇ ತಿಳಿದು ಗೌರವಿಸಿ ನಡೆಯುವ ನಡತೆಯುಳ್ಳ ಯಾವ ಪುರುಷನಿರುವನೋ, ಅವನೇ ಜಿತೇಂದ್ರಿಯನು— ಇಂದ್ರಿಯಗಳನ್ನು ಗೆದ್ದವನು. ಅಂಥವನಿಗೆ ಈ ಲೋಕ ಹಾಗೂ ಮರಣೋತ್ತರ ಲೋಕಗಳೆರಡರಲ್ಲೂ ಕಿಂಚಿತ್ತೂ (ಸ್ವಲ್ಪಮಾತ್ರವೂ) ಹೆದರಿಕೆಯಿಲ್ಲ. ಯಾಕೆಂದರೆ, ಇಂದ್ರಿಯನಿಗ್ರಹಿಯು ಲೋಕವನ್ನೇ ಗೆದ್ದಂತೆ; ತನ್ನ ಇಂದ್ರಿಯಗಳ ಗುಲಾಮನು ಲೋಕವನ್ನು ಹೇಗೆ ತಾನೇ ಗೆಲ್ಲಬಲ್ಲ? ಆಳಬಲ್ಲ?— ಇದು ಸರ್ವಜ್ಞನ ಅಭಿಪ್ರಾಯ. ಹಿಂದಿನ ಶ್ಲೋಕವು ಸ್ತ್ರೀಸೌಂದರ್ಯವನ್ನು ಹೊಗಳಿದರೆ, ಈ ವಚನವು ಅದಕ್ಕೆ ಮರುಳಾಗಬಾರದೆಂಬ ಎಚ್ಚರಿಕೆಯನ್ನು ನೀಡುತ್ತದೆ.

Comments

Popular posts from this blog

ವೃದ್ಧಚಾಣಕ್ಯನೀತಿದರ್ಪಣಸಾರಃ ೨

ವೈದ್ಯಕೀಯಸುಭಾಷಿತಸಾಹಿತ್ಯಮ್ ೧

ಸೂಕ್ತಿವೈಭವ