ಮಹಾಸುಭಾಷಿತಸಂಗ್ರಹ ೧

ಮಹಾಸುಭಾಷಿತಸಂಗ್ರಹ ೧
(ಅಕಾರಾದಿ ಅನುಕ್ರಮದಲ್ಲಿ)

ಅ


ಅಂಶವಸ್ತವ ನಿಶಾಕರ ನೂನಂ
ಕಲ್ಪಿತಾಸ್ತರುಣಕೇತಕಖಣ್ಡೈಃ |
ಯೇನ ಪಾಣ್ಡುರತರದ್ಯುತಯೋ ನಃ
ಕಣ್ಟಕೈರಿವ ತುದನ್ತಿ ಶರೀರಮ್ || ೧ ||
(ಶ್ರೀಕಂಠಚರಿತಮ್, ವಲ್ಲಭದೇವನ ಸುಭಾಷಿತಾವಲೀ)
(ರಥೋದ್ಧತಾವೃತ್ತಮ್)

ಎಲೈ ನಿಶಾಕರನೆ! ಚಂದಿರನೆ!! ರಾತ್ರಿಯುಂಟುಮಾಡುವವನೆ (ನಿಶಾ-ಕರ— ನಿಶಾಂ ಕರೋತಿ ಇತಿ)!!! ನಿನ್ನ ಕಿರಣಗಳು (ಅಂಶುಗಳು) ನಿಜವಾಗಿಯೂ ಕೇದಗೆಯ ದೃಢವಾದ (ತರುಣ) ಎಲೆಗಳಂತೆ ಭಾಸವಾಗುತ್ತಿವೆ. ಯಾಕೆಂದರೆ, ಯಾವ ಈ ಬೆಳದಿಂಗಳ (ಪಾಂಡುರತರ— ಬೆಳ್ಳಗಿನಂತಹ)ಕಿರಣಗಳು ನಮ್ಮ ಶರೀರವನ್ನು ಮುಳ್ಳು / ಕಂಟಕ ಗಳಿಂದ ಚುಚ್ಚಿದಂತಹ ಅನುಭವವಾಗುತ್ತಿದೆ, ಅಸಹನೀಯ (ವಿರಹ?)ವೇದನೆಯನ್ನುಂಟುಮಾಡುತ್ತಿವೆ.


ಅಂಶುಕಂ ಹೃತವತಾ ತನುಬಾಹು-
ಸ್ವಸ್ತಿಕಾ-ಪಿಹಿತ-ಮುಗ್ಧಕುಚಾಗ್ರಾ |
ಭಿನ್ನಶಙ್ಖವಲಯಂ ಪರಿಣೇತ್ರಾ
ಪರ್ಯರಮ್ಭಿ ರಭಸಾದಚಿರೋಢಾ || ೨ ||
(ಮಾಘನ ಶಿಶುಪಾಲವಧಮ್ ೧೦|೪೩, ಸುಭಾಷಿತರತ್ನಭಾಂಡಾಗಾರಮ್ ೩೧೬|೩, ಸುಭಾಷಿತಸುಧಾರತ್ನಭಾಂಡಾಗಾರಮ್ ೧೭೩|೮)


(ಅಂಶುಕಂ) ನವವಧುವಿನ ಸೀರೆಯ ಸೆರಗು / ಉತ್ತರೀಯ / ಮೇಲುಹೊದಿಕೆಯು, ಯಾವಾಗ, (ಪರಿಣೇತ್ರಾ)ಆಕೆಯನ್ನು ಪರಿಣಯವಾದ / ವಿವಾಹವಾದ ಪತಿಯಿಂದ, (ಹೃತವತಾ)ಸೆಳೆಯಲ್ಪಟ್ಟಿತೋ ಆಗ ಆಕೆಯು, (ಮುಗ್ಧಕುಚಾಗ್ರಾ) ತನ್ನ ನಗ್ನವಾದ ಆಕರ್ಷಕ ಕುಚಾಗ್ರ (ಮೊಲೆತೊಟ್ಟು) ಗಳನ್ನು, (ತನುಬಾಹುಸ್ವಸ್ತಿಕಾಪಿಹಿತ)ತನ್ನ ನಳಿನಕೋಮಲ ತೋಳುಗಳಿಂದ ಸ್ವಸ್ತಿಕಾಕಾರದಲ್ಲಿ (ಎಡಗೈಯಿಂದ ಬಲಕುಚ ಹಾಗೂ ಬಲಗೈನಿಂದ ಎಡಕುಚವನ್ನು) ಮುಚ್ಚಿದಳು ಹಾಗೂ ಆಕೆಯು ಪತಿಯಿಂದ ರಭಸವಾಗಿ (ಬಲವಾಗಿ) (ಪರ್ಯರಂಭಿ)ಅಪ್ಪಿಕೊಳ್ಳಲ್ಪಟ್ಟಾಗ, (ರಭಸಾತ್)ಆ ಭಾವೋದ್ರೇಕದ ರಭಸಕ್ಕೆ (ಅಚಿರ-ಓಢಾ)ಆ ನವವಧುವಿನ, (ಭಿನ್ನಶಂಖವಲಯಮ್) ಕುತ್ತಿಗೆಯ ಕಡಗಗಳು / ಆಭರಣಗಳು ಛಟ್ಟನೆ ಮುರಿದು ತುಂಡಾಗಿಹೋದವು.


ಅಂಶುಕಮಿವ ಶೀತಭಯಾತ್
ಸಂಸ್ತ್ಯಾನತ್ವಚ್ಛಲೇನ ಹಿಮಧವಲಮ್ |
ಅಮ್ಭೋಭಿರಪಿ ಗೃಹೀತಂ
ಪಶ್ಯತ ಶಿಶಿರಸ್ಯ ಮಾಹಾತ್ಮ್ಯಮ್ || ೩ ||
(ಶಾರ್ಙ್ಗಧರಪದ್ಧತಿಃ ೩೯೩೫, ವಲ್ಲಭದೇವನ ಸುಭಾಷಿತಾವಲೀ ೧೮೫೧, ಸುಭಾಷಿತರತ್ನಭಾಣ್ಡಾಗಾರಮ್ ೩೪೭|೪, ಸುಭಾಷಿತಸುಧಾರತ್ನಭಾಣ್ಡಾಗಾರಮ್ ೨೨೫|೫)
(ಆರ್ಯಾಜಾತಿಃ)

ಚಳಿಗಾಲದ / ಶಿಶಿರ ಋತುವಿನ ಮಾಹಾತ್ಮ್ಯವನ್ನು ನೋಡಿರಿ!! ಚಳಿಯ ಭಯದಿಂದಲೋ ಎಂಬಂತೆ, ಜಲರಾಶಿಯೂ ಸಹ ಬಿಳಿಮೇಲ್ಹೊದಿಕೆಯನ್ನು ಹೊದ್ದಂತೆ ಹಿಮದ ದಪ್ಪವಾದ ಪದರವನ್ನು ಧರಿಸಿಕೊಂಡಿದೆ!! ಎಂತಹ ವಿಚಿತ್ರ!!!

ಅಂಶುಕೇನ ಜಘನಂ ತಿರೋದಧೇ
ಕಞ್ಚುಕೇನ ಚ ಕುಚೌ ಮೃಗೀದೃಶಾಮ್ |
ಪೀಯಮಾನಮನಿಶಂ ಪ್ರಿಯೇಕ್ಷಣೈಃ
ಕ್ಷಾಮತಾಮಿವ ಜಗಾಮ ಮಧ್ಯಮಮ್ || ೪ ||
(ಭಗದತ್ತ ಜಲ್ಹಣನ ಸೂಕ್ತಿಮುಕ್ತಾವಲೀ ೧೮೫|೫೮)
(ರಥೋದ್ಧತಾವೃತ್ತಮ್)

ಜಿಂಕೆಯ ಕಣ್ಣುಗಳಂತಹ ಕಣ್ಣುಗಳುಳ್ಳ ಸ್ತ್ರೀಯರ ಕೆಳಪೃಷ್ಠಭಾಗವು ಕಿರುವಸ್ತ್ರದಿಂದಲೂ, ಕುಚಗಳು ಕಂಚುಕ / ಕುಪ್ಪಸ / ರವಿಕೆಯಿಂದಲೂ ಮುಚ್ಚಲ್ಪಟ್ಟಿರುವುದು (ಇದರಿಂದಾಗಿ ಅವುಗಳು ದೃಷ್ಟಿಗೆ ತಾಕದೆ ದಷ್ಟಪುಷ್ಟವಾಗಿ ಬೆಳೆದಿರುವುವು). ಆದರೆ, ಸ್ತ್ರೀಯರ ಕಟಿಪ್ರದೇಶ / ಮಧ್ಯಭಾಗ / ನಡು / ಸೊಂಟದ ಭಾಗವು ಬಟ್ಟೆಯಿಂದ ಮುಚ್ಚಲ್ಪಡದಿರುವುದರಿಂದ ಸದಾ ಪ್ರಿಯತಮರ / ನೋಟಕರ ದೃಷ್ಟಿಗೆ ಸಿಲುಕಿ ನಿರಂತರ ಆಸ್ವಾದಿಸಲ್ಪಟ್ಟು, ಕ್ಷಾಮ / ಬರಗಾಲದಲ್ಲಿ ಆಹಾರವಿಲ್ಲದೆ ದೇಹವು ಸಣಕಲಾದಂತೆ, ಕಟಿಯೂ ಬಹು ಸಪುರ / ತೆಳ್ಳಗೆ ಆಗಿರುವುದು.



Comments

Popular posts from this blog

ವೃದ್ಧಚಾಣಕ್ಯನೀತಿದರ್ಪಣಸಾರಃ ೨

ವೈದ್ಯಕೀಯಸುಭಾಷಿತಸಾಹಿತ್ಯಮ್ ೧

ಸೂಕ್ತಿವೈಭವ