ಮಂಕುತಿಮ್ಮಸ್ಯ ವಚನಾನಿ ೧

ಮಂಕುತಿಮ್ಮಸ್ಯ ವಚನಾನಿ ೧

(ಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಂಸ್ಕೃತಾನುವಾದ, ಕನ್ನಡ ವಿವರಣೆ ಸಹಿತ)
ಶ್ರೀವಿಷ್ಣು ವಿಸ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ |
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ || ೧ ||

ಶ್ರೀವಿಷ್ಣುಂ ವಿಶ್ವಮೂಲಾದಿರ್ಮಾಯಾಲೋಲ ಇತಿ ಪ್ರಜಾಃ |
ಪರಬ್ರಹ್ಮ ಚ ಸರ್ವೇಶೋ ದೇವೋऽದೃಶ್ಯಸ್ತಥಾಪಿ ತಮ್ || ೧ ||
ಭಕ್ತ್ಯಾ ಚ ಪರಯಾ ಪ್ರೇಮ್ಣಾ ಶ್ರದ್ಧಯಾ ಚ ಸ್ತುವಂತ್ಯಹೋ |
ವಿಚಿತ್ರಮಯಮಾದೌ ತ್ವಂ ನಮಸ್ವ ಮಂಕುತಿಮ್ಮ ಭೋಃ || ೨ ||

ಲೋಕದ ಜನರು ಶ್ರೀರಮಣನಾದ ವಿಷ್ಣುವನ್ನು ಪರಬ್ರಹ್ಮ, ಎಲ್ಲರ ಒಡೆಯ, ದೇವರು, ವಿಶ್ವದ ಆದಿಕಾರಣ, ಮಾಯಾನಿಪುಣ— ಇತ್ಯಾದಿಯಾಗಿ, ಆತನು ತಮ್ಮ ಕಣ್ಣಿಗೆ ಕಾಣಿಸದಿದ್ದರೂ ಅವನನ್ನು ಅತ್ಯಂತ ಭಕ್ತಿ, ಆದರ, ಶ್ರದ್ಧೆಗಳಿಂದ ಸ್ತುತಿಸುತ್ತಾರೆ. ಆಹಾ! ಇದೆಂತಹ ವಿಚಿತ್ರ ಶಕ್ತಿ!!! ಇಂತಹ ಭಗವಚ್ಛಕ್ತಿಯನ್ನು ಮೊದಲಿಗೆ ಎಲೈ ಮಂಕುತಿಮ್ಮನೇ! ನೀನು ನಮಿಸು— ಎಂದಿದ್ದಾರೆ ದಾರ್ಶನಿಕಶ್ರೇಷ್ಠರಾದ ಡಿವಿಜಿಯವರು.

ಜೀವ-ಜಡರೂಪ ಪ್ರಪಂಚವನದಾವುದೋ |
ಆವರಿಸಿಕೊಂಡುಮೊಳನೆರೆದುಮಿಹುದಂತೆ ||
ಭಾವಕೊಳಪಡದಂತೆ ಅಳತೆಗಳವಡದಂತೆ |
ಆ ವಿಶೇಷಕೆ ನಮಿಸೊ - ಮಂಕುತಿಮ್ಮ || ೨ ||

ಚೇತನಾಚೇತನಂ ವಿಶ್ವಂ ಸಮಾವೃತ್ಯ ಪ್ರವಿಶ್ಯ ಚ |
ಊಹ್ಯತೇ ಕಿಂಚಿದಸ್ತೀತಿ ಸರ್ವಭೂತಾಂತರಾತ್ಮನಿ || ೩ ||
ಭಾವಾತೀತಂ ತಥಾಮೇಯಮವ್ಯಕ್ತಂ ಸದಸದಾತ್ಮಕಮ್ |
ತದ್ವಿಶೇಷಂ ತಥಾऽಕ್ಷಯ್ಯಂ ನಮಸ್ವ ಮಂಕುತಿಮ್ಮ ಭೋಃ || ೪ ||

ಸಜೀವ ಹಾಗೂ ನಿರ್ಜೀವಗಳನ್ನೊಳಗೊಂಡ ಪಂಚಭೂತಾತ್ಮಕವಾದ ಈ ಸಮಗ್ರ ಪ್ರಪಂಚವನ್ನು, ಅದಾವುದೋ ಒಂದು ಶಕ್ತಿಯು ಸಂಪೂರ್ಣವಾಗಿ ಸುತ್ತುವರೆದು, (ಆವರಿಸಿಕೊಂಡುಂ, ಒಳ-ನೆರೆದುಂ) ಅದರೊಳಗೆ ತಾನೂ ಸೇರಿಕೊಂಡು ಸಕಲ ಚರಾಚರಗಳ ಅಂತರಾತ್ಮದಲ್ಲಿ ಇರುವುದೆಂಬಂತೆ ಊಹಿಸಲ್ಪಡುವುದು. ಅದು ಸಕಲ ಇರುವಿಕೆ / ಸತ್ತೆ / ಸೃಷ್ಟಿಯನ್ನು ಮೀರಿರುವ ಶಕ್ತಿ (ಭಾವಃ— ಭವತಿ ಇತಿ ಭಾವಃ; ಇರುವುದು ಎಂಬುದರಿಂದ ಭಾವ ಎಂಬ ಶಬ್ದ. ಇರುವುದೆಲ್ಲದನ್ನೂ ಮೀರಿದ್ದು ಭಾವಾತೀತ). ಅಂತೆಯೇ ಅದು ಅಮೇಯ (ಮೇಯ— ಅಳತೆಗೆ ಸಿಗುವಂಥ)— ನಮ್ಮ ಅಂದಾಜಿಗೆ ನಿಲುಕದ್ದು. ಅಂತಹ ಅವ್ಯಕ್ತ (ಅದೃಶ್ಯ / ಇಂದ್ರಿಯಗೋಚರವಲ್ಲದ) ಸತ್-ಅಸತ್ತುಗಳಿಂದ ಕೂಡಿದ ನಾಶವಿಲ್ಲದ ವಿಶೇಷತೆಗೆ ಎಲೆ ಮಂಕುತಿಮ್ಮನೇ! ನೀನು ಶರಣಾಗಬೇಕು— ಎಂದಿದ್ದಾರೆ ಡಿವಿಜಿಯವರು.

ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ |
ಮಹಿಮೆಯಿಂ ಜಗವಾಗಿ ಜೀವವೇಷದಲಿ ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ |
ಗಹನ ತತ್ತ್ವಕೆ ಶರಣೊ - ಮಂಕುತಿಮ್ಮ || ೩ ||

ಅಸ್ತಿ ನಾಸ್ತೀತಿ ವಾ ಜ್ಞಾನಂ ನ ದತ್ವಾ ಯದ್ವಿಶಿಷ್ಯತೇ |
ಮಹಿಮ್ನಾ ಸ್ವೇನ ವಿಶ್ವತ್ವೇ ಜೀವತ್ವೇ ಚಾಪಿ ತಿಷ್ಠತಿ || ೫ ||
ವಿಸೃಜ್ಯೈಕತ್ವಮಾಪ್ನೋತಿ ಬಹುತ್ವಂ ವಿಹರತಿ ಸ್ವಯಮ್ |
ಯದೀದಂ ಗಹನಂ ಸತ್ಯಂ ಶ್ರಯಸ್ವ ಮಂಕುತಿಮ್ಮ ಭೋಃ || ೬ ||

ಭಗವಂತನೆಂಬೊಂದು ವಸ್ತುವು ಇದೆಯೋ ಇಲ್ಲವೋ ಎಂಬುದನ್ನು ಪ್ರತ್ಯಕ್ಷ ಅನುಭವಿಸಿದವರು ಬಲು ವಿರಳವಾಗಿದ್ದರೂ, ಆ ತತ್ತ್ವವು ತನ್ನ ಮಹಿಮೆಯಿಂದ ಈ ಇಡಿಯ ಜಗವಾಗಿ, ಅದರಲ್ಲಿನ ಜೀವವಾಗಿ ವೇಷವನಾಂತು, ತನ್ನ ಏಕಾಂತದ ನೀರಸತೆಯನ್ನು ಬಿಟ್ಟು ಬಹುತ್ವವನ್ನಾಶ್ರಯಿಸಿ ಸರಸನಾಗಿ ವಿಹರಿಸುವುದೊಳ್ಳಿತೆಂದು ವೇದಗಳೆಂದಂತೆ ಸಂಕಲ್ಪಿಸಿದುದು ನಿಜವಾದರೆ— ಅರ್ಥಾತ್, ಅದನ್ನು ನೀನು ನಂಬುವೆಯಾದರೆ— ಆ ಬಲು ರಹಸ್ಯವಾದ ತತ್ತ್ವಕ್ಕೆ ಶರಣಾಗು, ಅದನ್ನು ಆಶ್ರಯಿಸು ಎಲೆ ಮಂಕುತಿಮ್ಮನೇ!— ಎಂಬುದು ಡಿವಿಜಿ ವಾಣಿ.

ಏನು ಜೀವನದರ್ಥ? ಏನು ಪ್ರಪಂಚಾರ್ಥ? |
ಏನು ಜೀವಪ್ರಪಂಚಗಳ ಸಂಬಂಧ? ||
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? |
ಜ್ಞಾನಪ್ರಮಾಣವೇಂ? - ಮಂಕುತಿಮ್ಮ || ೪ ||

ಕಿಮರ್ಥಂ ಜೀವನಸ್ಯಾಸ್ತಿ ಪ್ರಪಂಚಸ್ಯ ಚ ಕಿಂ ತಥಾ |
ಕಿಮರ್ಥಂ ಜೀವನಂ ಚಾಸ್ತಿ ಕಿಮರ್ಥಂ ಚ ಜಗತ್ತಥಾ || ೭ ||
ಸಂಬಂಧಶ್ಚ ಜಗಜ್ಜೀವದ್ವಯೋರಪಿ ತು ಕೋऽಸ್ತಿ ಭೋಃ |
ಅವ್ಯಕ್ತಮಸ್ತಿ ಕಿಂ ಕಿಂಚಿದತ್ರ ಲೋಕೇ ವದಸ್ವ ಮಾಮ್ || ೮ ||
ಅಸ್ತಿ ಚೇತ್ಕಿಂಚಿದವ್ಯಕ್ತಂ ವಿಸರ್ಗಸ್ಥಿತಿಸರ್ಗಕೃತ್ |
ತತ್ಕಿಂ ತಸ್ಯ ಪ್ರಮಾಣಂ ಕಿಂ ಜ್ಞಾನಂ ವಾ ಮಂಕುತಿಮ್ಮ ಭೋಃ || ೯ ||

ಏನು ಜೀವನದರ್ಥ? (ಜೀವನದ ಅರ್ಥ ಏನು?)
ಕಿಮರ್ಥಂ ಜೀವನಸ್ಯಾಸ್ತಿ (ಜೀವನಸ್ಯ ಅರ್ಥಂ ಕಿಮ್ ಅಸ್ತಿ?)

ಈ ಜೀವನಕ್ಕೆ, ಮನುಷ್ಯರ ಬದುಕಿಗೆ, ನರರ ಜೀವಿತಕ್ಕೆ ಏನಾದರೂ ಅರ್ಥವಿದೆಯೇ? ಇದ್ದರೆ ಏನದು? ಬದುಕೆಂಬ ಜೀವ-ಭಾವಗೀತೆಗೆ ವ್ಯಾಖ್ಯಾನವೇನು? ವಿವರಣೆಯೇನು? ಯಾಕಾಗಿ ಈ ಹುಟ್ಟು-ಸಾವು ಹಾಗೂ ನಡುವಿನ ಮೂರು ದಿನದ ಬಾಳು? ಯಾವ ಸಾಧನೆಗೆ? ಯಾವ ಪುರುಷಾರ್ಥಕ್ಕೆ? ಈ ಬದುಕಿನ ಉದ್ದೇಶವೇನು? ಅಂತಿಮ ಗುರಿಯೇನು? ಸಾಗಬೇಕಾದ ಹಾದಿ ಯಾವುದು? ಏಕೆ ಸಾಗಬೇಕು?

ಏನು ಪ್ರಪಂಚಾರ್ಥ? (ಪ್ರಪಂಚದ ಅರ್ಥ ಏನು?)
ತಥಾ ಪ್ರಪಂಚಸ್ಯ ಚ ಕಿಂ? (ಹಾಗೆಯೇ, ಪ್ರಪಂಚದ ಅರ್ಥವೇನು?)

ಈ ಪ್ರಪಂಚದ ಅರ್ಥವೇನು? ಅದಕ್ಕೇನಾದರೂ ಅರ್ಥವಿದೆಯೇ? ಪ್ರಪಂಚವೆಂಬ, ಸಂಸಾರವೆಂಬ ಬೃಹತ್ ನೌಕೆಗೆ ಆದಿ ಯಾವುದು? ಅಂತ್ಯ ಯಾವುದು? ಮಧ್ಯ ಎಲ್ಲಿದೆ? ಅದು ಎಲ್ಲಿ, ಹೇಗೆ, ಯಾಕಾಗಿ ಎಲ್ಲಿಗೆ, ಯಾವಾಗಿನಿಂದ, ಎಲ್ಲಿಯವರೆಗೆ ಸಾಗುತ್ತಿದೆ? ಸಂಸಾರಸಾಗರದ ದಡ ಎಲ್ಲಿದೆ?

ಚ, ಜೀವನಂ ಕಿಮರ್ಥಮ್ ಅಸ್ತಿ?
(ಮತ್ತು, ಜೀವನವು ಏತಕ್ಕಾಗಿ ಇದೆ? )
ಜೀವನವು ಯಾತಕ್ಕಾಗಿ ಇದೆ? ಯಾವ ಸಾಧನೆಗಾಗಿ ಇದೆ? ಅಥವಾ ಕೇವಲ ಭಗವಂತನ ಆಟಕ್ಕಾಗಿಯೇ? ಇದೊಂದು ಕೇವಲ ನಾಟಕವೇ? ಅಲ್ಲ, ನಿಜವೇ?

ತಥಾ ಚ, ಜಗತ್ ಕಿಮರ್ಥಮ್?
(ಹಾಗೆಯೇ, ಜಗತ್ತು ಯಾಕಾಗಿ?)

ಅಂತೆಯೇ, ಈ ಪ್ರಪಂಚವೂ ಯಾಕಾಗಿ ಸೃಷ್ಟಿಯಾಗಿದೆ? ಇದೆ? ಇದರ ಗುರಿಯಾದರೂ ಏನು? ಇದರ ಪರಮಾರ್ಥವೇನು? ಇದು ಕೇವಲ ಬದುಕುವುದಕ್ಕಾಗಿ ಇದೆಯೇ? ಅಥವಾ ಇನ್ನೇನಾದರೂ ಶ್ರೇಷ್ಠವಾದ ಉದ್ದೇಶವಿದೆಯೇ?

ಏನು ಜೀವಪ್ರಪಂಚಗಳ ಸಂಬಂಧ?
(ಜೀವ-ಪ್ರಪಂಚಗಳ ಸಂಬಂಧ ಏನು?)
ಸಂಬಂಧಶ್ಚ ಜಗತ್-ಜೀವ-ದ್ವಯೋಃ ಅಪಿ ತು ಕಃ ಅಸ್ತಿ ಭೋಃ?
(ಚ, ಭೋಃ! ಜಗತ್-ಜೀವ-ದ್ವಯೋಃ ಅಪಿ ತು ಕಃ ಸಂಬಂಧಃ ಅಸ್ತಿ?)
(ಹಾಗೂ, ಎಲೈ ಮಂಕುತಿಮ್ಮನೇ! ಜಗತ್ತು-ಜೀವ ಇವೆರಡರ ನಡುವೆಯಾದರೋ ಯಾವ ಸಂಬಂಧವಿದೆ?)

ವಿಶಾಲವಾದ ಪ್ರಪಂಚದಲ್ಲಿ, ನಮ್ಮ ಅಳತೆಗೇ / ಕಲ್ಪನೆಗೇ ನಿಲುಕದ ಸಮಗ್ರ ವಿಶ್ವ / ಬ್ರಹ್ಮಾಂಡದಲ್ಲಿ ನಾವೊಂದು ಸಿಂಧುವಿನಲ್ಲಿರುವ ಕೇವಲ ಒಂದು ಬಿಂದುವಿನಂತೆ; ಸಾಗರದ ಒಂದು ನೀರ ಹನಿಯಷ್ಟೆ ನಾವು. ಹಾಗಾದರೆ, ಈ ಜಗತ್ತಿಗೂ ನಮಗೂ ಏನಾದರೂ ಸಂಬಂಧವಿದೆಯೇ? ಇದ್ದರೆ, ಅದು ಹಿಂದೆ ಹೇಗಿತ್ತು? ಈಗ ಹೇಗಿದೆ? ಮುಂದೆ ಹೇಗಿರಬೇಕು? ಹೇಗಿದ್ದರೆ ನಮಗೂ ಜಗತ್ತಿಗೂ ಚೆನ್ನ? ಜೀವನು ಜಗತ್ತಿಗೆ ಪೂರಕವಾಗಿದ್ದಾನೆಯೇ? ಮಾರಕವಾಗಿದ್ದಾನೆಯೇ? ಪೂರಕವಾಗಿದ್ದರೆ ಜಗವೂ ಜೀವನಿಗೆ ಬೇಕಾದಂತೆ ಇರಬಹುದು. ಮಾರಕವಾದರೆ, ಜಗವೂ ಆತನಿಗೆ ಮಾರಕವಾಗಬಲ್ಲದು. ಇದು ಖಂಡಿತ.

ಕಾಣದಿಲ್ಲಿರ್ಪುದೇನಾನುಮುಂಟೆ?
(ಕಾಣದೆ ಇಲ್ಲಿ ಇರ್ಪುದು ಏನಾನುಮ್ ಉಂಟೆ?— ಇಲ್ಲಿ ಕಾಣದೆ ಇರುವುದು ಏನಾದರೂ ಇದೆಯೆ?)
ಅವ್ಯಕ್ತಮಸ್ತಿ ಕಿಂ ಕಿಂಚಿದತ್ರ ಲೋಕೇ ವದಸ್ವ ಮಾಮ್ ||
(ಅತ್ರ ಲೋಕೇ— ಈ ಲೋಕದಲ್ಲಿ; ಅವ್ಯಕ್ತಮ್— ವ್ಯಕ್ತವಾಗದಿರುವುದು, ಕಾಣದಿರುವುದು; ಕಿಂಚಿತ್— ಏನಾದರೂ; ಅಸ್ತಿ ಕಿಮ್?— ಇದೆಯೇನು?; ಮಾಮ್ ವದಸ್ವ— ಈ ಬಗ್ಗೆ ನನಗೆ ಹೇಳು.)

ನಮ್ಮ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ಚರ್ಮಗಳಿಗೆ ಗೋಚರವಾಗದ, ಅನುಭವವೇದ್ಯವಲ್ಲದ, ಗ್ರಾಹ್ಯವಲ್ಲದ ಅ-ವ್ಯಕ್ತವಾದದ್ದು ಏನಾದರೂ ಇದೆಯೇ ಈ ಜಗದಲ್ಲಿ?

ಇಡೀ ಜಗತ್ತಿನಲ್ಲಿ ಇಂದ್ರಿಯಗೋಚರವಾದ ಎಲ್ಲವನ್ನೂ ಕೂಡ, ಒಂದನ್ನೂ ಬಿಡದೆ ಅನುಭವಿಸಲೇ ನಮಗೆ ಸಾಧ್ಯವಿಲ್ಲ. ನಮ್ಮ ಬದುಕಿನ ಮಿತಿ ಅಷ್ಟೇ. ಅಂಥದ್ದರಲ್ಲಿ, ಕಣ್ಣಿಗೆ ಕಾಣದ, ಕಿವಿಗೆ ಕೇಳದ, ಮೂಗಿನ ಘ್ರಾಣಶಕ್ತಿಗೆ ಸಿಗದ, ನಾಲಿಗೆಯ ರಸಗ್ರಹಣಶಕ್ತಿಗೆ ನಿಲುಕದ, ಚರ್ಮಕ್ಕೆ ಸ್ಪರ್ಶಸಂವೇದನೆಯನ್ನೂ ಕೊಡದ ಯಾವುದಾದರೂ ಇದೆಯೋ ಎಂಬುದನ್ನು ಜನಸಾಮಾನ್ಯರು ಅರಿಯುವುದೆಂತು? ಅಂಥದ್ದೇನಾದರೂ ಇದೆಯೇ ಎಂಬ ಚಿಂತನಾಪ್ರೇರಕವಾದ ಮೂಲಭೂತ ಪ್ರಶ್ನೆ ದಾರ್ಶನಿಕ ಡಿವಿಜಿಯವರದ್ದು!

ಅದೇನು? (ಅಂಥದ್ದಿದ್ದರೆ ಅದು ಯಾವುದು?)
ಅಸ್ತಿ ಚೇತ್ಕಿಂಚಿದವ್ಯಕ್ತಂ ವಿಸರ್ಗಸ್ಥಿತಿಸರ್ಗಕೃತ್ |
ತತ್ ಕಿಮ್?
(ವಿಸರ್ಗ-ಸ್ಥಿತಿ-ಸರ್ಗ-ಕೃತ್ ಕಿಂಚಿದ್ ಅವ್ಯಕ್ತಮ್ ಅಸ್ತಿ ಚೇತ್, ತತ್ ಕಿಮ್?— ಜಗದ ಲಯ-ಪಾಲನೆ-ಸೃಷ್ಟಿಗೈವ ಯಾವುದಾದರೂ ಅವ್ಯಕ್ತವಾದದ್ದು ಇದ್ದರೆ, ಅದು ಯಾವುದು / ಏನು?)

ಹಾಗೊಂದು ವೇಳೆ, ಇಂದ್ರಿಯಾತೀತವಾದದ್ದು ಏನಾದರೂ ಇರುವುದೆಂದಾದರೆ, ಅದು ಏನಿರಬಹುದು? ಹೇಗಿರಬಹುದು? ಯಾಕಿರಬಹುದು? ಎಲ್ಲಿರಬಹುದು? ಅದರ ಆದಿ, ಮಧ್ಯ, ಅಂತ್ಯ ಇದೆಯೇ? ಇದ್ದರೆ ಅವು ಯಾವುವು? ಯಾವಾಗ? ಅದರ ರೂಪ-ಸ್ವರೂಪ-ಗುಣ-ವೈಭವ-ಐಶ್ವರ್ಯಗಳೇನು? ಅದಕ್ಕೆ ಅಂಗೋಪಾಂಗಗಳಿವೆಯೇ? ಇದ್ದರೆ, ಅವು ಯಾವುವು? ಇತ್ಯಾದಿಯಾಗಿ ಗಾಢ ಚಿಂತನೆಗೆ ಒರೆಹಚ್ಚುತ್ತಾರೆ ಕಗ್ಗದಾರ್ಶನಿಕ ಪೂಜ್ಯ ಡಿ.ವಿ.ಗುಂಡಪ್ಪನವರು.

ಜ್ಞಾನಪ್ರಮಾಣವೇಂ - ಮಂಕುತಿಮ್ಮ ||
(ಅಂಥದ್ದಿದ್ದರೆ ಅದಕ್ಕೆ ಅದರ ಬಗೆಗಿನ ತಿಳುವಳಿಕೆಯೇ ಪ್ರಮಾಣವೇ ಎಲೈ ಮಂಕುತಿಮ್ಮನೇ! ಯೋಚಿಸು)
ತಸ್ಯ ಪ್ರಮಾಣಂ ಕಿಂ ಜ್ಞಾನಂ ವಾ ಮಂಕುತಿಮ್ಮ ಭೋಃ ||
(ಅದರ ಪ್ರಮಾಣವೇನು? ಜ್ಞಾನವೇ? ಅಯ್ಯಾ ಮಂಕುತಿಮ್ಮನೇ! ಹೇಳು.)

ನಮ್ಮ ಪಂಚಜ್ಞಾನೇಂದ್ರಿಯಗಳಿಗೆ ನಿಲುಕದ್ದೇನಾದರೂ ಇರುವುದಾದರೆ, ಅದಕ್ಕೆ ಆಧಾರ (proof) ಸಾಕ್ಷಿಯೇನು? ಕೇವಲ ಅದರ ಬಗ್ಗೆ ಇರುವ ತಿಳುವಳಿಕೆ ಮಾತ್ರವೇ (theoretical knowledge / assumptions /ಪ್ರಮೇಯಗಳು / ತರ್ಕ-ಸಿದ್ಧಾಂತಗಳು? )ಅಥವಾ ಅದು ಜೀವಿಯ ಜೀವನಾನುಭವದಲ್ಲಿ ಕಾಲಕ್ರಮೇಣ ಅನುಭವಕ್ಕೆ ಬರುವಂಥದೇ (ಪ್ರಾಯೋಗಿಕ ತಿಳುವಳಿಕೆ / practical knowledge / experience based / experimental) ? ಎಂಬುದು ಡಿವಿಜಿಯವರು ನಮಗಿತ್ತ ಪ್ರಶ್ನೆ. ಇವೆಲ್ಲ ನಮ್ಮ ಬಾಳಿನ ಹಿಂದಿರುವ ಗುಟ್ಟಿನ ಬಗ್ಗೆ ಚಿಂತಿಸಲು ನಮ್ಮನ್ನು ಗಾಢವಾಗಿ ಪ್ರೇರೇಪಿಸುತ್ತವೆಯಲ್ಲವೇ?

ಈ ಬಾಳಿನ ನಶ್ವರತೆ, ಅದರಲ್ಲಿ ಇದ್ದಷ್ಟು ಕಾಲ “ಎಲ್ಲರೊಳಗೊಂದಾಗಿ ಬಾಳು” ಎಂಬ ನೀತಿಯನ್ನು ಬೋಧಿಸುತ್ತಿದೆ ಈ ಕಗ್ಗ.


Comments

Popular posts from this blog

ವೃದ್ಧಚಾಣಕ್ಯನೀತಿದರ್ಪಣಸಾರಃ ೨

ವೈದ್ಯಕೀಯಸುಭಾಷಿತಸಾಹಿತ್ಯಮ್ ೧

ಸೂಕ್ತಿವೈಭವ