ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೪
ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೪
*ಅಹಿತಹಿತಗಳ ಮೂಲವಿಹುದಹಂಭಾವದಲಿ |*
*ಅಹಮೆಂಬುದೆಲ್ಲಕಂ ಬೆಲೆಯ ಕಟ್ಟುವುದು ||*
*ಬಹುವಿಧದ ರುಚಿಗಳನು ತೋರಿ ಕರೆಯಲ್ ಪ್ರಕೃತಿ |*
*ಸ್ವಹಿತ ನಿಶ್ಚಯ ನಿನದು - ಮರುಳ ಮುನಿಯ || (೬೨೮)*
_(ಮೂಲ+ಇಹುದು+ಅಹಂಭಾವದಲಿ)(ಅಹಮ್+ಎಂಬುದು+ಎಲ್ಲಕಂ)_
*ಅಹಮೆಂಬುದೆಲ್ಲಕಂ ಬೆಲೆಯ ಕಟ್ಟುವುದು ||*
*ಬಹುವಿಧದ ರುಚಿಗಳನು ತೋರಿ ಕರೆಯಲ್ ಪ್ರಕೃತಿ |*
*ಸ್ವಹಿತ ನಿಶ್ಚಯ ನಿನದು - ಮರುಳ ಮುನಿಯ || (೬೨೮)*
_(ಮೂಲ+ಇಹುದು+ಅಹಂಭಾವದಲಿ)(ಅಹಮ್+ಎಂಬುದು+ಎಲ್ಲಕಂ)_
ಇದು ಬಹಳ ಸರಳವಾದ ಮರುಳಮುನಿಯನ ಕಗ್ಗ. ಡಿವಿಜಿಯವರಿಲ್ಲಿ ತುಂಬ ಸುಲಭವಾದ ಶಬ್ದಗಳಲ್ಲಿ ನಮ್ಮ *ಅಹಂಭಾವ* ದ ಪಾತ್ರವು ಯಾವುದೇ ಸ್ವೀಕಾರ ತಿರಸ್ಕಾರಗಳ ನಿರ್ಣಯದಲ್ಲಿ ಎಷ್ಟು ಮುಖ್ಯವೆಂದು ಹೇಳಿದ್ದಾರೆ. ಅಂದರೆ, *ಅಹಂ* ಎಂಬುದು ಎರಡಲಗಿನ ಚಾಕಿನಂತೆ (double edged sword). ಅದನ್ನು ಉಪಯೋಗಿಸುವವನ ಚಾಕಚಕ್ಯತೆಯಲ್ಲೇ ಅದರ ಔಚಿತ್ಯ-ಅನೌಚಿತ್ಯಗಳು ಅಡಗಿವೆ.
ಅಹಂನ ಸದುಪಯೋಗದಿಂದ ಎಷ್ಟೋ ಪ್ರಗತಿಯನ್ನು ಸಾಧಿಸಬಹುದು. ದುರುಪಯೋಗದಿಂದ ಅಷ್ಟೇ ಪತನವನ್ನೂ ಹೊಂದಬಹುದು. ಯಾಕೆಂದರೆ, ಈ ಅಹಂಭಾವವೇ ನಮ್ಮ ಹಿತ-ಅಹಿತಗಳ ಮೂಲ. ಈ ಅಹಮ್ಮೇ ಎಲ್ಲ ವಿಷಯ-ವಸ್ತುಗಳಿಗೆ ಮೌಲ್ಯನಿರ್ಣಾಯಕ. ಯಾವುದರ ಬೆಲೆ ಎಷ್ಟು? ಯಾವುದಕ್ಕೆ ಎಷ್ಟು ಬೆಲೆಕಟ್ಟಬೇಕು? ಎಂಥವರಿಗೆ ಎಷ್ಟು ಬೆಲೆ ಕೊಡಬೇಕು? ಯಾಕೆ? ದುಷ್ಟರಿಗೆ ಹೆಚ್ಚು ಬೆಲೆ ಕೊಟ್ಟರೆ ಪತನ. ಶಿಷ್ಟರಿಗೆ ಹೆಚ್ಚು ಬೆಲೆ ಕೊಟ್ಟರೆ ಪ್ರಗತಿ.
ಸತ್ ಮೌಲ್ಯಗಳಾದ ಸತ್ಯ, ನ್ಯಾಯ, ಧರ್ಮ, ಸದಾಚಾರ, ಭಗವತ್ ಶ್ರದ್ಧೆ, ಗೋವು-ದ್ವಿಜ-ಗುರು-ಪ್ರಾಜ್ಞರ ಬಗ್ಗೆ ಸದಾ ಆದರ / ಸದಾ ಗೌರವ, ಸದ್ಗ್ರಂಥಗಳಾದ ರಾಮಾಯಣ, ಗೀತೆ, ಭಾಗವತ, ಮಹಾಭಾರತ, ವೇದೋಪನಿಷತ್ ಗಳ ಅಧ್ಯಯನಗಳಿಗೆ ಹೆಚ್ಚು ಬೆಲೆಕೊಟ್ಟರೆ ನಮ್ಮ ಉದ್ಧಾರ.
ಅಸತ್ ಮೌಲ್ಯಗಳಾದ ಅಸತ್ಯ / ಮಿಥ್ಯೆ / ಸುಳ್ಳು, ಅನ್ಯಾಯ, ಅಧರ್ಮ, ಅನಾಚಾರ / ಭ್ರಷ್ಟಾಚಾರ, ಭಗವಂತನಲ್ಲಿ ಅಶ್ರದ್ಧೆ, ಗೋವು-ದ್ವಿಜ-ಗುರು-ಪ್ರಾಜ್ಞರ ಬಗ್ಗೆ ಸದಾ ಅನಾದರ / ಅಗೌರವ, ದುರ್ಗ್ರಂಥಗಳಾದ ಅಶ್ಲೀಲ-ನಾಸ್ತಿಕ-ವೇದವಿರೋಧಿ-ದುರಾಚಾರ ಪ್ರಚೋದಕ ಸಾಹಿತ್ಯಕೃತಿಗಳ ಓದುವಿಕೆಗೆ ಹೆಚ್ಚು ಬೆಲೆ ಕೊಟ್ಟರೆ ನಮ್ಮ ಅವನತಿ *ಕಟ್ಟಿಟ್ಟ ಬುತ್ತಿ*. ನಮ್ಮ ಪ್ರಗತಿ *ಕನ್ನಡಿಯೊಳಗಿನ ಗಂಟು* ಆಗುವುದಂತೂ ನಿಶ್ಚಿತ.
*ಪ್ರಕೃತಿಯು / ಜಗವು ಒಂದು ಮಾಯಾಬಜಾರ್.* ಇಲ್ಲಿ ಬೇಕಾದ್ದು ಬೇಡದ್ದು ಎಲ್ಲವೂ ಇದೆ. ಅವುಗಳನ್ನು ಸೂಕ್ತವಾಗಿ ಆಯ್ದುಕೊಳ್ಳುವುದು ನಮ್ಮ ಜವಾಬ್ದಾರಿ. ನಮ್ಮ ಹಿತ ಯಾವುದರಿಂದ ಎಂದು ನಾವೇ ನಿಶ್ಚೈಸಿಕೊಳ್ಳಬೇಕು. *ನಮಗೆ, ನಮ್ಮಷ್ಟು ಹಿತವರು ಯಾರೂ ಇಲ್ಲ.* ಹಾಗಾಗಿ, ಸರಿಯಾಗಿ ಯೋಚಿಸಿ ಆರಿಸಬೇಕಾದವರು ನಾವೇ.
ಹಾಗಾಗಿ, ನಾವು
*ಅಸತಃ ಮಾಂ ಸದ್ಗಮಯ |*
*ತಮಸಃ ಮಾಂ ಜ್ಯೋತಿಃ ಗಮಯ |*
*ಮೃತ್ಯೋಃ ಮಾಂ ಅಮೃತಂ ಗಮಯ |*
*ಓಂ ಶಾನ್ತಿಶ್ಶಾನ್ತಿಶ್ಶಾನ್ತಿಃ ||*
_ಎಂಬ ಶ್ರುತಿಸಾರದಂತೆ, ನನ್ನನ್ನು ಅಸತ್ / ನಶ್ವರತೆಯಿಂದ ಸತ್ / ಶಾಶ್ವತತತ್ತ್ವದೆಡೆಗೆ ಕೊಂಡೊಯ್ಯೋ ಹೇ ದೇವನೆ! ಕತ್ತಲಿನಿಂದ ಬೆಳಕಿನೆಡೆಗೆ, ಅವಿದ್ಯೆಯ ತಮಸ್ಸಿನಿಂದ ವಿದ್ಯಾಜ್ಯೋತಿಯೆಡೆಗೆ, ಅಜ್ಞಾನಾಂಧಕಾರದಿಂದ ಜ್ಞಾನಪ್ರಭೆಯೆಡೆಗೆ ನನ್ನನ್ನು ಕರೆದುಕೊಂಡು ಹೋಗು ಹೇ ಭಗವಂತನೆ!! ಜನನ-ಮರಣವೆಂಬ ಚಕ್ರದಿಂದ ನನ್ನನ್ನು ಪಾರುಮಾಡಿ, ಅಮೃತತ್ತ್ವವಾದ ಮೋಕ್ಷಕ್ಕೆ ಒಯ್ಯೋ ಹೇ ಪರಮಾತ್ಮನೆ!!! ಎಂದು ಆರ್ತತೆಯಿಂದ ಆ ಸರ್ವಮೂಲಕಾರಣನನ್ನು ಮೊರೆಯಿಟ್ಟು ಪ್ರಾರ್ಥಿಸೋಣ. ನಮಗೆ ಒಳ್ಳೆಯದು-ಕೆಟ್ಟದ್ದನ್ನು ಗುರುತಿಸಿ, ಒಳ್ಳೆಯದ್ದನ್ನೇ ಸದಾ ಆಚರಿಸುಂಥ *ಸದಸದ್ವಿವೇಕ* ದ ಪ್ರೇರಣೆ-ಪ್ರಚೋದನೆಗಳನ್ನು ನೀಡೆಂದು ಆತನಲ್ಲಿ ಸದಾ ಬೇಡೋಣ._
*ಹರೇ ರಾಮ*
*ಆಕಾರವೆನೆ ರೂಪನಿಯತಿಯದು ಗಾತ್ರಮಿತಿ |*
*ರೇಖೆಯೊಳು ಮಿತಬಡಿಸುವೆಯ ಅಪರಿಮಿತವ ||*
*ಬೇಕು ಮಿತಮತಿಯ ಹಿಡಿತಕೆ ಹಿರಿಯ ಗುರುತೊಂದು |*
*ಸಾಕಾರಮಂತುಚಿತ ಮರುಳಮುನಿಯ ||*
_(ಆಕಾರವು ಎನೆ), (ರೂಪನಿಯತಿ ಅದು), (ಗಾತ್ರ ಮಿತಿ / ಗಾತ್ರಂ ಇತಿ), (ಮಿತ ಪಡಿಸುವೆಯ), (ಗುರುತು ಒಂದು), (ಸ ಆಕಾರಂ ಅಂತು ಉಚಿತ)_
ಆಕಾರವೆಂಬುದು ರೂಪದ ನಿಯಮ. ರೂಪವೆಂದರೆ ಅದಕ್ಕೊಂದು ಆಕಾರವಿರಲೇಬೇಕು. ಆಕಾರ ಇಲ್ಲವಾದರೆ ರೂಪವಿರಲು ಸಾಧ್ಯವಿಲ್ಲ. ಮೊದಲು ಆಕಾರ, ಬಳಿಕ ರೂಪ. ರೂಪ ಎಂಬಲ್ಲಿ ಸೌಂದರ್ಯ ಪ್ರಜ್ಞೆ / ಆಲಂಕಾರಿಕ ಭಾವವಿದೆ. ಆಕಾರ ಎಂಬಲ್ಲಿ ಕೇವಲ ಗಣಿತೀಯ ಆಕೃತಿಯ ಪ್ರಜ್ಞೆಯಿದೆ. ಉದಾ - ಗೋಳ, ಸ್ತಂಭ ಇತ್ಯಾದಿ. ಇಲ್ಲಿ ಸೌಂದರ್ಯಪ್ರಜ್ಞೆಯಿಲ್ಲ. ಹಾಗಾಗಿ ಮೊದಲು ಅಮೂರ್ತ, ಬಳಿಕ ಮೂರ್ತ, ಬಳಿಕ ರೂಪ.
ಹಾಗಾಗಿಯೇ ಡಿವಿಜಿಯವರಂದಿರುವುದು ರೂಪವಿರಲು ಆಕಾರವಿರುವುದು ಅವಶ್ಯ ಎಂದು, ಅದು ರೂಪದ ನಿಯತಿ / ನಿಯಮ, ರೂಪಕ್ಕಿರುವ ಮೂಲಭೂತ ಅಗತ್ಯತೆ ಎಂದು. ಹಾಗೆಯೇ ಈ ರೂಪವು ವಸ್ತುವಿನ ಗಾತ್ರಕ್ಕೆ ಒಂದು ಮಿತಿ / ಸೀಮಾರೇಖೆಯನ್ನುಂಟುಮಾಡುತ್ತದೆ. ರೂಪವಿದ್ದಾಗ, ಅದರ ಹೊರಗೆ ಆ ವಸ್ತುವಿರದು. ಅದರ ಹೊರಮೈಯೇ ವಸ್ತುವಿನ ಹೊರಸೀಮೆ. ಒಳಗೆ ಟೊಳ್ಳಾಗಿದ್ದರೆ ಒಳಮೈಯೇ ಒಳಸೀಮೆ. ಇಲ್ಲವಾದರೆ ಒಳಸೀಮೆಯಿರದು.
ಗಾತ್ರ ಎಂದರೆ ದೇಹ, ವಪು, ಕಾಯ, ಶರೀರ ಎಂಬರ್ಥಗಳೂ ಇವೆ. ಅಪರಿಮಿತವಾದ, ಪರಿಮಿತಿಯಿರದ / ಗಡಿಯಿಲ್ಲದ / ಲೆಕ್ಕಕ್ಕೆ ಸಿಗದ ಅನಂತವನ್ನು ಒಂದು ಆಕಾರದ ಸೀಮಾರೇಖೆಯೊಳಗೆ ಮಿತಿಗೊಳಿಸಿ ಹಿಡಿದಿಡಲು ಸಾಧ್ಯವೆ? ಇದು ಡಿವಿಜಿಯವರ ಪ್ರಶ್ನೆ. ದೇಹವೆಂಬ (ಗಾತ್ರಂ ಇತಿ), ಗಡಿಗೆರೆಯೊಳಗೆ (ರೇಖೆಯೊಳು), ಅನಂತಗಾತ್ರನಾದ ಪರಬೊಮ್ಮನನ್ನು ಆತನೇ ಸ್ವೇಚ್ಛೆಯಿಂದ ಮಿತಿಗೊಳಿಸಿಯೂ, ತಾನು ಎಲ್ಲ ದೇಹಗಳೊಳಗಿದ್ದು, ಸಕಲ ಚರಾಚರಗಳೊಳಗಿದ್ದು ಅ-ಮಿತನಾಗಿಯೂ ಇರುವನು.
ಜನಸಾಮಾನ್ಯರ ಮತಿ / ಬುದ್ಧಿ / ಕಲ್ಪನಾಶಕ್ತಿಯು ಬಹಳ ಮಿತವಾದುದು. ಆದ್ದರಿಂದ, ಅಂಥವರಿಗೆ ದೇವನ ಕಲ್ಪನೆ ಸಿಗಲು ಒಂದು ಮಿತಿ / ಆಕಾರ / ರೂಪದ ಅವಶ್ಯಕತೆಯಿದೆ. ಅದೂ ಸಹ ಕೇವಲ ಕಿರಿದಲ್ಲ. ಹಿರಿಯದೇ ಎನ್ನುವ ವೈಶಾಲ್ಯ ತೋರುತ್ತಾರೆ ಜ್ಞಾನದ ಪೂರ್ಣಕುಂಭ (ತುಂಬಿದ ಕೊಡ) ವಾದ ಡಿವಿಜಿಯವರು. ದೇವನು ಸಾಕಾರನೂ ಹೌದು, ನಿರಾಕಾರನೂ ಹೌದೆಂಬುದು ರಾಮಕೃಷ್ಣ ಪರಮಹಂಸ, ವಿವೇಕಾನಂದರಂಥ ಪೂರ್ಣಜ್ಞಾನಿಗಳ ಮತ. ಅದಕ್ಕೊಂದು ಉದಾಹರಣೆ - ನಾವು ಹಾಗೂ ನಮ್ಮ ಭಾವಚಿತ್ರಗಳು ಬೇರೆ ಬೇರೆಯಾದರೂ, ಭಾವಚಿತ್ರಕ್ಕೊಂದು ಗುರುತಿಲ್ಲವೆ? ಬೆಲೆಯಿಲ್ಲವೆ? ಅದನ್ನು ಯಾರಾದರೂ ಕಾಲಿನಿಂದ ತುಳಿದರೆ ನಮಗೆ ಬೇಸರವಾಗದೆ? ಅಂತೆಯೇ, ಮೂರ್ತಿಯು ಅಮೂರ್ತನಾದ ದೇವನ ಒಂದು ಚಿಹ್ನೆ, ಸಂಜ್ಞೆ, ಗುರುತು, ದ್ಯೋತಕ, ಲಿಂಗ. ಲೋಕದಲ್ಲೆಲ್ಲ ವ್ಯಾಪಿಸಿರುವವನು ತನ್ನ ಮೂರ್ತಿಯಲ್ಲಿ ಇರನೆ? ಅಲ್ಲಿ ಕಿಂಚಿದಂಶ ಅಧಿಕವಾಗಿಯೇ ಇರುವನು. ಹೇಗೆಂದರೆ, ಗಾಳಿಯು ಎಲ್ಲೆಡೆಯಲ್ಲಿದ್ದರೂ ನಾವೇಕೆ ಫ್ಯಾನಿನಡಿ ಕೂರುತ್ತೇವೆ? ಕುಳಿತುಕೊಳ್ಳುತ್ತೇವೆ? ಅಂತೆಯೇ ಇದೂ ಸಹ.
ಹಾಗಾಗಿ, ಮೂರ್ತಿ ಪೂಜೆ ಸಲ್ಲದೆಂಬುದು ಪೂರ್ಣಸತ್ಯವಲ್ಲ. ಮೂರ್ತಿಯನ್ನೇ ದೇವರೆಂದು ಭಾವಿಸುವುದಿಲ್ಲವಲ್ಲ? ಮೂರ್ತಿಗೆ ದೇವರನ್ನು ಆವಾಹಿಸಿ, ಕೊನೆಗೆ ಪುನಃ ವಿಸರ್ಜಿಸುವುದಿಲ್ಲವೆ? ಇದು, ಡಿವಿಜಿಯವರೆಂದಂತೆ ನಮ್ಮ ಅಲ್ಪಮತಿಗೆ ಸುಲಭವಾಗಿ ಪೂಜಿಸಲು ಮಾಡಿದ ವ್ಯವಸ್ಥೆ ಅಷ್ಟೆ. ಅದೇ ರೀತಿ ಓಂಕಾರವೂ ಕೂಡ, ಸ್ವಸ್ತಿಕವೂ ಸಹ. ಇವೆಲ್ಲ ಭಗವಂತನ ಚಿಹ್ನೆಗಳು. ಅವುಗಳಲ್ಲಿ ನಮ್ಮ ಪೂರ್ವಜರು ಪರಮಾತ್ಮನ ಬ್ರಹ್ಮಾಂಡವ್ಯಾಪ್ತತೆಯ ಆಕಾರವನ್ನೋ, ಅವನ ಶಕ್ತಿಸಂಚಾರದ ಗತಿಯನ್ನೋ ಅನುಕ್ರಮವಾಗಿ ಸಾಂಕೇತಿಕವಾಗಿ ಕಂಡಿರುವರು.
*ಅದಕ್ಕಾಗಿಯೇ ಗೀತೆಯಲ್ಲಿ ಕೃಷ್ಣನೂ, ನಿರಾಕಾರೋಪಾಸನೆಗಿಂತ ಸಾಕಾರೋಪಾಸನೆ ಸುಲಭವೆಂದಿರುವನು.* ಚಂಚಲವಾಗಿ ಅತ್ತಿಂದಿತ್ತ ಎಲ್ಲೆಲ್ಲೋ ಗಾಳಿಯಂತೆ ಸುತ್ತಾಡುವ ಬಲಿಷ್ಠವಾದ ಮನಸ್ಸನ್ನು ಬಿಗಿಹಿಡಿಯುವುದು ಗಾಳಿಯನ್ನು ಹಿಡಿದಿಡುವಷ್ಟೇ ದುಷ್ಕರ. *ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ದೃಢಮ್* ಎಂದು ಅರ್ಜುನನು ಹೇಳಿದಾಗ, *ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ* - ಸತತ ಅಭ್ಯಾಸ ಹಾಗೂ ವಿಷಯಭೋಗಗಳ ವೈರಾಗ್ಯಗಳಿಂದ ಮನಸ್ಸನ್ನು ಬಿಗಿಹಿಡಿಯಬಹುದೆಂದು ಕೃಷ್ಣನು ಉತ್ತರಿಸುತ್ತಾನೆ.
ಹಾಗೆ ಮನಸ್ಸನ್ನು ಕೇಂದ್ರೀಕರಿಸಲೊಂದು ಪ್ರತೀಕ / ರೂಪದ ಅಗತ್ಯವಿದೆ. ಹಾಗಾಗಿಯೇ ಆಕಾರಸಹಿತವಾಗಿರುವ ದೇವನ ಸಾಕಾರಮೂರ್ತಿಯು ಉಚಿತ / ಯೋಗ್ಯವಾದುದೇ ಆಗಿದೆ. ಅಲ್ಲವಾದರೆ, ಪ್ರಾಚೀನರು ವಿವಿಧರೂಪಗಳಲ್ಲಿ ಒಂದೇ ಶಕ್ತಿಯನ್ನು ರಾಮನಾಗಿ, ವಿಷ್ಣುವಾಗಿ, ಶಿವನಾಗಿ, ದೇವಿಯಾಗಿ ಹೇಗೆ ಪ್ರತ್ಯಕ್ಷೀಕರಿಸಲು ಸಾಧ್ಯವಾಯಿತು? ಹೇಗೆ ಅಸುರರು ವರ ಪಡೆಯಲು ಸಾಧ್ಯವಾಯಿತು? ಹಾಗಾಗಿ, ಸಾಕಾರವು ಮಿಥ್ಯೆಯಲ್ಲ. ಸರ್ವಶಕ್ತನಾದ ದೇವನಿಗೆ ಭಕ್ತನಿಗೆ ಬೇಕಾದ ರೂಪದಲ್ಲಿ ತೋರಿಕೊಳ್ಳಲು ಅಸಾಧ್ಯವಾದರೆ ಆತ ಹೇಗೆ ತಾನೇ ಸರ್ವಶಕ್ತನೆನಿಸುವನು?-- ಎಂಬ ಬನ್ನಂಜೆಯವರ ವಾದವು ಇದಕ್ಕೆ ಪುಷ್ಟಿಯನ್ನೀಯುತ್ತದೆ.
ಹಾಗಾಗಿ, ನಮ್ಮ ದಾರಿಯೇ ಸರಿ, ಪರರ ದಾರಿ ಸರಿಯಿಲ್ಲವೆಂದು ಭಾವಿಸುವುದು ಪರಿಪೂರ್ಣತೆಯ ಲಕ್ಷಣವಲ್ಲ. ಎಲ್ಲವೂ ಅನಂತದೆಡೆಗೆ ಗಮಿಸುವ ವಿವಿಧ ಪಥಗಳೇ ಆಗಿರುವುದರಿಂದ, ಎಲ್ಲರನ್ನೂ ಗೌರವಿಸಿ, ತಾನು ಗರ್ವಪಡದೆ, ಎಲ್ಲರೊಳಗೊಂದಾಗಿ, ಸಮಷ್ಟಿ-ವ್ಯಷ್ಟಿಸಾಧನೆಗಳೆರಡನ್ನೂ ಸಮತೋಲನದಲ್ಲಿ ಮಾಡುತ್ತಾ, ಕರ್ತವ್ಯ ಕರ್ಮವನ್ನು ಶ್ರದ್ಧೆಯಿಂದಲೂ, ಅನಾಸಕ್ತಿಯೋಗದಿಂದಲೂ ನಿರ್ವಹಿಸುತ್ತಾ, ಸಾರ್ಥಕ ಸಹಬಾಳನ್ನು ನಡೆಸೋಣವೆ?
*ಹರೇ ರಾಮ*
*ಆಗಲಿಹುದಾದೀತು ಆದೊಡೇಂ ಪೋದೊಡೇಂ |*
*ಈಗಳಿಹ ಕರ್ತವ್ಯವೇನೊ ನೋಡದನು ||*
*ತ್ಯಾಗದೊಳ್ ಭೋಗದೊಳ್ ಪ್ರಸ್ತುತೋದ್ಯೋಗದೊಳ್ |*
*ಜಾಗರೂಕನೊ ಯೋಗಿ - ಮರುಳ ಮುನಿಯ || (೫೯೮)*
_(ಆಗಲಿಹುದು+ಆದೀತು)(ಆದೊಡೆ+ಏಂ)(ಪೋದೊಡೆ+ಏಂ)(ಈಗಳ್+ಇಹ)(ಕರ್ತವ್ಯ+ಏನೊ)(ನೋಡು+ಅದನು)(ಪ್ರಸ್ತುತ+ಉದ್ಯೋಗದೊಳ್)_
*ಈಗಳಿಹ ಕರ್ತವ್ಯವೇನೊ ನೋಡದನು ||*
*ತ್ಯಾಗದೊಳ್ ಭೋಗದೊಳ್ ಪ್ರಸ್ತುತೋದ್ಯೋಗದೊಳ್ |*
*ಜಾಗರೂಕನೊ ಯೋಗಿ - ಮರುಳ ಮುನಿಯ || (೫೯೮)*
_(ಆಗಲಿಹುದು+ಆದೀತು)(ಆದೊಡೆ+ಏಂ)(ಪೋದೊಡೆ+ಏಂ)(ಈಗಳ್+ಇಹ)(ಕರ್ತವ್ಯ+ಏನೊ)(ನೋಡು+ಅದನು)(ಪ್ರಸ್ತುತ+ಉದ್ಯೋಗದೊಳ್)_
*_ಗತೇ ಶೋಕಂ ನ ಕುರ್ವೀತ ಭವಿಷ್ಯಂ ನೈವ ಚಿನ್ತಯೇತ್ |_*
*_ವರ್ತಮಾನೇ ವರ್ತನೀಯಮ್ ಏಷ ಧರ್ಮಸ್ಸನಾತನಃ ||_*
*_ಲಲಾಟಲಿಖಿತಾ ರೇಖಾ ಪರಿಮಾರ್ಷ್ಟುಂ ನ ಶಕ್ಯತೇ |_*
*_ಹರಿಣಾಪಿ ಹರೇಣಾಪಿ ಬ್ರಹ್ಮಣಾಪಿ ಸುರೈರಪಿ ||_*
ಎಂಬ ಸಂಸ್ಕೃತ ಸುಭಾಷಿತಗಳ ಧ್ವನಿಯೇ ಡಿವಿಜಿಯವರ ಈ ಮರುಳಮುನಿಯನ ಕಗ್ಗದ ಪೂರ್ವಾರ್ಧದಲ್ಲಿ ಅಡಗಿದೆ.
ಆಗಲಿರುವುದು ಹೇಗೂ ಆಗಿಯೇ ತೀರುವುದು. *ಹರಿಚಿತ್ತ ನಿತ್ಯ, ಹರಚಿತ್ತ ಸತ್ಯ* ಎಂಬಂತೆ ಭಗವತ್ಸಂಕಲ್ಪದಂತೆಯೇ ಜಗದ್ವ್ಯಾಪಾರಗಳು ನಡೆದೇ ನಡೆಯುವುವು. ಇದು ಕಾಲನಿಯಮ, ಯುಗಧರ್ಮ. ಇದನ್ನು (ಹಣೆಬರಹವನ್ನು) ವಿಧಿ ಬರೆದ ವಿಧಾತ (ಬ್ರಹ್ಮಾ), ಸರ್ವಪಾಲಕ ವಿಷ್ಣು, ಸರ್ವಲಯಕಾರಿ ಶಿವ, ಇಂದ್ರಾದಿ ದೇವತೆಗಳು -- ಇವರಾರಿಂದಲೂ ತಪ್ಪಿಸಲು (ಒರೆಸಲು) ಸಾಧ್ಯವಿಲ್ಲ. ತಪ್ಪಿಸಿದರೆ ಅವರೇ ಲೋಕನಿಯಮವನ್ನು ಮುರಿದಂತಾಗದೆ?
ಆಗಿಹೋದುದರಲ್ಲಿ ದುಃಖವೇಕೆ? ಹೇಗೂ ಆಗಿ ಮುಗಿದುಹೋದುದನ್ನು ಪುನಃ ಪುನಃ ಚಿಂತೆಮಾಡಿದರೆ ತಿದ್ದಲಾಗದ ಪರ್ಮನೆಂಟ್ ಮಾರ್ಕರ್ ನ ಬರಹದಂತಿರುವ ವಿಚಾರಗಳನ್ನು ಕುರಿತು ಶೋಕಿಸಿ ಫಲವಿಲ್ಲ. ಹಾಗಾಗಿ ಕಳೆದುಹೋದುದಕ್ಕೆ ಶೋಕಪಡಬಾರದು. *ಗತಾನುಗತಿಕೋ ಲೋಕಃ* -- ಲೋಕವು ಗತವನ್ನನುಸರಿಸಿ ಮುಂದೆ ಮುಂದೆ ತನ್ನ ಗತಿ / ಹೆಜ್ಜೆಯನ್ನು ನಿರಂತರ ಇಡುತ್ತಲೇ ಸದಾ ಮುಂದೆ ಸಾಗುತ್ತಿರುವುದು ಪ್ರತ್ಯಕ್ಷಗೋಚರವಷ್ಟೆ? ಮತ್ತೆ ಹಿಂದಿನ ಮಾತೇಕೆ? ಇದಕ್ಕೇ ಹೇಳಿರುವುದು *ಋಷಿಮೂಲ, ನದೀಮೂಲ, ಸ್ತ್ರೀಮೂಲ* ಹುಡುಕಬಾರದು ಎಂದು. ಎಂತಹ ಪಾತಕಿಯೂ ಕಾಲಾಂತರದಲ್ಲಿ ವಾಲ್ಮೀಕಿಯಂತೆ ಋಷಿಯಾಗಬಲ್ಲನು. ಮೂಲದಲ್ಲಿ ಎಂತಹ ಕೊಳಕಿನಿಂದ ಕೂಡಿದ್ದರೂ ಹಲವು ನೀರು ಸೇರಿ ಸದಾ ಹರಿವ ನದಿಯು ಪವಿತ್ರವೆನಿಸದೆ? *ಕೆಸರಲಿ ಪುಟ್ಟಿದ ತಾವರೆ ಬಿಸಜನಾಭನ ಪೂಜೆಗೆ ಆಗುವುದಿಲ್ಲವೆ?* ಹೀಗಿರುವಾಗ ಸ್ತ್ರೀಯ ಪೂರ್ವಕುಟುಂಬದ ಚರಿತ್ರೆಯನ್ನು ಹೆಚ್ಚು ಕೆದಕಬಾರದು. ಹಾಗಾಗಿ ಹಿಂದಿನ ದುಃಖದಲ್ಲೇ ಸದಾ ಮುಳುಗಿರಬಾರದು. *(ಗತೇ ಶೋಕಂ ನ ಕುರ್ವೀತ -- ಆದೊಡೇಂ ಪೋದೊಡೇಂ)*
ಇನ್ನು, *ಭವಿಷ್ಯಂ ನ ಏವ ಚಿಂತಯೇತ್-- ಆಗಲಿಹುದಾದೀತು*. ಮುಂದೆ ಹೀಗಾಗಬಹುದು, ಹಾಗಾಗಬಹುದು. ಏನು ಮಾಡೋಣ? ಮುಂದೆ ಎಲ್ಲ ಸರಿಯಾಗಿ ಅಂದುಕೊಂಡಂತೆ ನಡೆಯಬಹುದೆ? ಮುಂತಾಗಿ ಭವಿಷ್ಯದ ಬಗ್ಗೆ ಕೆಲವೊಮ್ಮೆ ಅಭದ್ರತೆ ಕಾಡುವುದಿದೆ. ಆದರೆ, ಭವಿಷ್ಯದ ಚಿಂತೆಯು ನಮ್ಮನ್ನು ಬೇಗನೆ ವೃದ್ಧಾಪ್ಯ,ರೋಗ, ಮರಣಗಳಿಗೆ ದೂಡುವುದು. ಸದಾ ಧನಾತ್ಮಕ ಚಿಂತನೆ ಇದ್ದರೆ, ಚಿರಯೌವನ / ದೀರ್ಘಾಯುಷ್ಯ ಸಾಧ್ಯ.
ಹಾಗಾಗಿ, *ಈಗಳಿಹ ಕರ್ತವ್ಯವೇನೊ ನೋಡು ಅದನು -- ವರ್ತಮಾನೇ ವರ್ತನೀಯಮ್ ಏಷಃ ಧರ್ಮಃ ಸನಾತನಃ* -- ವರ್ತಮಾನದಲ್ಲಿ ವ್ಯವಹರಿಸುವುದು ನಮ್ಮ ಕರ್ತವ್ಯ. ಈಗ ನಾವೇನು ಮಾಡಬೇಕಿದೆ? ನಮ್ಮ ಕರ್ತವ್ಯವೇನು? ಅದನ್ನು ಮಾಡೋಣ. ಹಿಂದಿನ ಚಿಂತೆ ಬಿಡೋಣ. ಹಿಂದೆ ಆದ ೧೦೦ ಸೋಲುಗಳು ಇಂದಿನ ಗೆಲುವಿಗೆ ಮೆಟ್ಟಿಲುಗಳಾಗಬಾರದೇಕೆ? ಈಗ ಮಾಡಬೇಕಾದ್ದನ್ನು ಶ್ರದ್ಧೆಯಿಂದ ಮಾಡಿದರೆ, ಗೆಲುವಿನ ಸಾಧ್ಯತೆ ಹೆಚ್ಚು. ಅದೇ ಮುಂದೆ ನಮ್ಮ ಗತಾನುಭವದ ಸವಿಯಾಗುವುದು. ಒಂದುವೇಳೆ ಗೆಲ್ಲದಿದ್ದರೂ ಪರಿಶ್ರಮದ ತೃಪ್ತಿಯಿರುವುದಲ್ಲ? *ಯತ್ನೇ ಕೃತೇ ಯದಿ ನ ಸಿದ್ಧ್ಯತಿ ಕೋऽತ್ರ ದೋಷಃ?* ಯತ್ನಮಾಡಿಯೂ ಸಿದ್ಧಿಸದಿದ್ದರೆ ಇಲ್ಲಿ ನಮ್ಮ ತಪ್ಪೇನೂ ಇಲ್ಲವಲ್ಲ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿಯಾದರೂ ನಮಗೆ ಉಳಿದುಕೊಳ್ಳುವುದಲ್ಲ? *ಕರ್ಮಣಿ ಏವ ಅಧಿಕಾರಃ ತೇ ಮಾ ಫಲೇಷು ಕದಾಚನ* -- ಇದು ಭಗವಂತನದೇ ನಲ್ನುಡಿ ಅಲ್ಲವೆ?
ಹಾಗಿದ್ದರೆ ನಮ್ಮ ವರ್ತಮಾನವನ್ನು ಹೇಗೆ ಆಚರಿಸಬೇಕು ಎನ್ನುತ್ತಾರೆ ಡಿವಿಜಿಯವರು. *ತ್ಯಾಗದೊಳ್ ಭೋಗದೊಳ್ ಪ್ರಸ್ತುತ ಉದ್ಯೋಗದೊಳ್ ಜಾಗರೂಕನೊ ಯೋಗಿ* -- ನಾವು ದಾನ ಮಾಡುವಾಗ ಸತ್ಪಾತ್ರರಿಗೆ ಸಕಾಲದಲ್ಲಿ ಸರಿಯಾದ ಸ್ಥಳದಲ್ಲಿ *ಶ್ರದ್ಧಯಾ ದೇಯಮ್ | ಅಶ್ರದ್ಧಯಾ ನ ದೇಯಮ್ | ಹ್ರಿಯಾ ದೇಯಮ್ …..* ಎಂಬ ತೈತ್ತಿರೀಯ ಉಪನಿಷತ್ತಿನ ಮಂತ್ರದಂತೆ ಶ್ರದ್ಧೆಯಿಂದ, ಇಷ್ಟನ್ನೇ ಕೊಡುತ್ತಿರುವೆನೆಂಬ ನಾಚಿಕೆಯಿಂದ ಕೊಡಬೇಕಂತೆ. ಹಾಗೆಯೇ, ಸಂನ್ಯಾಸಿಗಳೂ ತಮ್ಮ ತ್ಯಾಗಜೀವನದಲ್ಲಿ ಬಹುಜಾಗರೂಕರಾಗಿರಬೇಕು. ಹಾಗೆಯೇ, ಎಲ್ಲರೂ ವಿಷಯವಸ್ತುಗಳನ್ನು ಭೋಗಿಸುವಾಗ ಧರ್ಮಾನುಸಾರಿಯಾಗಿಯೇ ಅನುಭವಿಸಬೇಕು. ಪ್ರಸ್ತುತ ಮಾಡುವ ಕರ್ತವ್ಯ, ಉದ್ಯೋಗಗಳಲ್ಲೂ ಸದಾ ಜಾಗೃತರಾಗಿರಬೇಕು, ಜಾಗರೂಕತೆಯಿಂದಿರಬೇಕು. ಇದೇ ಸಾಕ್ಷೀಭಾವ. ಇದೇ ಯೋಗ. ಹೀಗಿದ್ದರೇ ಯೋಗಿಯೆನಿಸುವನು.
*ಹರೇ ರಾಮ*
*ಆಗಸದ ಲೋಲಗಳ ಖಗಕುಲೋಡ್ಡೀನಗಳ |*
*ಸಾಗರೋರ್ಮಿಗಳ ತರುಶಿರದ ಜಲಕಣದಾ ||*
*ಬಾಗು ಗುಂಡುಗಳ ಚಂದವ ಕಣ್ಗೆ ಕಲಿಸುತಿಹ |*
*ಮಾಗುರುವು ಸೃಷ್ಟಿಯಲೆ - ಮರುಳ ಮುನಿಯ || (೩೭೫)*
_(ಕುಲ+ಉಡ್ಡೀನಗಳ)(ಸಾಗರ+ಊರ್ಮಿಗಳ)(ಕಲಿಸುತ+ಇಹ)_
*ಸಾಗರೋರ್ಮಿಗಳ ತರುಶಿರದ ಜಲಕಣದಾ ||*
*ಬಾಗು ಗುಂಡುಗಳ ಚಂದವ ಕಣ್ಗೆ ಕಲಿಸುತಿಹ |*
*ಮಾಗುರುವು ಸೃಷ್ಟಿಯಲೆ - ಮರುಳ ಮುನಿಯ || (೩೭೫)*
_(ಕುಲ+ಉಡ್ಡೀನಗಳ)(ಸಾಗರ+ಊರ್ಮಿಗಳ)(ಕಲಿಸುತ+ಇಹ)_
ಇಲ್ಲಿ ಡಿವಿಜಿಯವರು ಸಾಂಖ್ಯವನ್ನೂ, ಅವಧೂತತತ್ತ್ವವನ್ನೂ ಸರಳವಾಗಿ ಹೇಳಿದ್ದಾರೆ. *ಸುಲಿದ ಬಾಳೆಯ ಹಣ್ಣಿನಂದದಿ* ಅತ್ಯಂತ ಗಹನವಾದ ರಹಸ್ಯವಿಚಾರಗಳನ್ನು ನಮ್ಮ ಮುಂದೆ ಚಮಚದಲ್ಲಿ ಶಿಶುವಿಗುಣಿಸಿದಂತೆ ಅಥವಾ ಅದಕ್ಕಿಂತಲೂ ಸರಳವಾಗಿ ಎಳೆ ಹಸುಗೂಸಿಗೆ ತಾಯಿ ತನ್ನ ಎದೆಹಾಲ ಕುಡಿಸುವ ಪರಿಯಲ್ಲಿ ಡಿವಿಜಿಯೆಂಬ ಮಾತೃಹೃದಯ ನಮ್ಮಂಥ ಶಿಶುಹೃದಯಿಗಳಿಗೆ, ಶಿಶುತುಲ್ಯರಿಗೆ ಬಲುಕಠಿಣ ತತ್ತ್ವಾನುಸಂಧಾನದ ಬಲು ಸರಲಮಾರ್ಗವನ್ನಿಲ್ಲಿ ತಮ್ಮ ಅನುಭವದ ಬುತ್ತಿಯಿಂದ ಬಿಚ್ಚಿಟ್ಟಿರುವರು.
ಷಡ್ದರ್ಶನಗಳಲ್ಲಿ ಸಾಂಖ್ಯವೂ ಒಂದು; ಮಹಾವಿಷ್ಣುವಿನ ಕಪಿಲಾವತಾರ / ಕಪಿಲಮುನಿಯಿಂದ ತಾಯಿ ದೇವಹೂತಿಗೆ ಬೋಧಿಸಲ್ಪಟ್ಟ, ಹಾಗೂ ಇತರರಿಗೂ ಉಪದಿಷ್ಟವಾದ ಬಹುಪ್ರಾಚೀನತಮವಾದ ಕಾಪಿಲದರ್ಶನವಿದು. *“ ಸಂ ಇತಿ ಸಮೀಚೀನಮ್ ಉತ್ತಮಂ ವಾ, ಖ್ಯಾ ನಾಮ ಜ್ಞಾನಮ್ ಇತ್ಯನೇನ ಸಮೀಚೀನಂ ಜ್ಞಾನಮೇವ ಸಂಖ್ಯಾ | ಸಂಖ್ಯಾಸಂಬದ್ಧಂ ಸಮೀಚೀನಜ್ಞಾನಸಂಬದ್ಧಂ, ಪ್ರಕೃತಿ-ಪುರುಷವಿವೇಕಸಂಬದ್ಧಂ ವಾ ಏವ ಸಾಂಖ್ಯಮ್”*-- ಸಂ ಎಂದರೆ ಸಮೀಚೀನವಾದ, ಉತ್ತಮವಾದ; ಖ್ಯಾ ಎಂದರೆ ಜ್ಞಾನ. ಸಂಖ್ಯಾ ಎಂದರೆ ಸರಿಯಾದ ಜ್ಞಾನ. ಸಾಂಖ್ಯವೆಂದರೆ ಸಮೀಚೀನ ಜ್ಞಾನಕ್ಕೆ ಸಂಬಂಧಿಸಿದ್ದು. ಪ್ರಕೃತಿ-ಪುರುಷ ತತ್ತ್ವಗಳ ವಿವೇಕವೇ ಸಮೀಚೀನ ಜ್ಞಾನ / ಸಾಂಖ್ಯಶಾಸ್ತ್ರ / ಸಾಂಖ್ಯದರ್ಶನ. ಅದಿಲ್ಲದಿದ್ದರೆ, ಅವಿವೇಕ / ಸಂಸಾರ. ತತ್ತ್ವವಿಚಾರದಿಂದ ಅವಿವೇಕವನ್ನು ಬದಿಗೊತ್ತಿ ಪ್ರಕೃತಿ-ಪುರುಷರ ವಿವೇಕವನ್ನು ಪಡೆಯುವುದೇ ಕೈವಲ್ಯ / ಮೋಕ್ಷ ಎನ್ನಲಾಗಿದೆ.
ಇನ್ನು, ಸಾಂಖ್ಯವೆಂದರೆ ಪ್ರಧಾನ (ಮೂಲಪ್ರಕೃತಿ / ಅವ್ಯಕ್ತ), ಮಹತ್ (ಬುದ್ಧಿ)ತತ್ತ್ವ, ಅಹಂಕಾರ (ಅಭಿಮಾನ), ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಶ್ರೋತ್ರ, ತ್ವಕ್ (ತ್ವಚೆ), ಚಕ್ಷುಸ್, ಜಿಹ್ವಾ, ಘ್ರಾಣ, ವಾಕ್, ಪಾದ, ಪಾಣಿ, ಪಾಯು (ಗುದ), ಉಪಸ್ಥ (ಗುಹ್ಯ / ಲಿಂಗ), ಮನಸ್, ಪೃಥ್ವೀ, ಜಲ, ತೇಜಸ್, ವಾಯು, ಆಕಾಶಗಳೆಂಬ ೨೪ ತತ್ತ್ವಗಳು ಮತ್ತು ಪುರುಷ (/ ಈಶ್ವರ)ತತ್ತ್ವಗಳನ್ನು ಪರಿ-ಗಣನೆ ಮಾಡುವುದರಿಂದ(ಲೆಕ್ಕ ಹಿಡಿಯುವುದರಿಂದ), ಅರ್ಥಾತ್ ಸಂಖ್ಯಾಸಂಬಂಧಿಯಾದ್ದರಿಂದ ಸಾಂಖ್ಯವೆಂದೂ ಹೇಳುವರು. (ಮಹಾಭಾರತ)
*ಸಂಖ್ಯಾಂ ಪ್ರಕುರ್ವತೇ ಚೈವ ಪ್ರಕೃತಿಂ ಚ ಪ್ರಚಕ್ಷತೇ |*
*ತತ್ತ್ವಾನಿ ಚ ಚತುರ್ವಿಂಶತ್ ತೇನ ಸಾಂಖ್ಯಾಃ ಪ್ರಕೀರ್ತಿತಾಃ ||* _(ಮಹಾಭಾರತ)_
*ದೋಷಾಣಾಂ ಚ ಗುಣಾನಾಂ ಚ ಪ್ರಮಾಣಂ ಪ್ರವಿಭಾಗತಃ |*
*ಕಂಚಿದರ್ಥಮ್ ಅಭಿಪ್ರೇತ್ಯ ಸಾ ಸಾಂಖ್ಯೇತ್ಯುಪಧಾರ್ಯತಾಮ್ ||*
ಗುಣದೋಷಗಳನ್ನೂ ಪ್ರಮಾಣಗಳನ್ನೂ ವಿಭಾಗಿಸಿ, ಗೌಪ್ಯವಾಗಿರುವ ವಿಶ್ವದ ರಹಸ್ಯವನ್ನು ತಿಳಿಸುವ ದರ್ಶನವನ್ನು ಸಾಂಖ್ಯವೆಂದು ತಿಳಿಯಬೇಕು.
ಶುದ್ಧವಾದ ಆತ್ಮತತ್ತ್ವವನ್ನು / ಆತ್ಮವಿಜ್ಞಾನವನ್ನು ತಿಳಿಸುವ ಶಾಸ್ತ್ರವನ್ನು ಸಾಂಖ್ಯವೆಂದು ತಿಳಿಯಬೇಕೆಂದು ಶಂಕರಾಚಾರ್ಯರು ತಮ್ಮ ವಿಷ್ಣುಸಹಸ್ರನಾಮ ಭಾಷ್ಯದಲ್ಲಿ *”ಶುದ್ಧಾತ್ಮತತ್ತ್ವವಿಜ್ಞಾನಂ ಸಾಂಖ್ಯಮಿತ್ಯಭಿಧೀಯತೇ”* ಎಂದು ಪ್ರತಿಪಾದಿಸಿರುವರು.
ಅಂತೂ ಸಾಂಖ್ಯವೆಂದರೆ ಆಧ್ಯಾತ್ಮಿಕತತ್ತ್ವಗಳ ವಿಜ್ಞಾನವೆಂದು ತಿಳಿಯಬಹುದು.
ಹೀಗೆ, ಇಲ್ಲಿ ಡಿವಿಜಿಯವರು ಪ್ರಕೃತಿತತ್ತ್ವ / ಸೃಷ್ಟಿಯೇ ನಮ್ಮೆಲ್ಲ ಜ್ಞಾನಕ್ಕೆ ಮೂಲವೆಂದಿರುವರು. ಸಾಂಖ್ಯದಲ್ಲೂ ಪ್ರಕೃತಿಯೇ ಮೊದಲ ತತ್ತ್ವ. ಅವ್ಯಕ್ತವೂ, ಪ್ರಧಾನವೂ ಆದ ಮೂಲಪ್ರಕೃತಿಯು ವ್ಯಕ್ತವಾದ ಸೃಷ್ಟಿಯಾಯಿತು. ಹೀಗಾಗಿ, ಅದೇ ಸಕಲವೂ, ಪರಿಪೂರ್ಣಗುರುವೂ ಆಗಿದೆ. ಪ್ರಕೃತಿಯಲ್ಲಿನ ವೈಚಿತ್ರ್ಯಗಳನ್ನು ನೋಡನೋಡುತ್ತಾ ಸಕಲ ಜೀವಿಗಳೂ ಬದುಕಿನ ಪಾಠವನ್ನು ಕಲಿಯುತ್ತವೆ.
*_ಹೀಗೆ ಆಗಸದ ಲೋಲಗಳ / ಗೋಲಗಳ / ಗ್ರಹನಕ್ಷತ್ರಾದಿ ಕಾಯಗಳ ಮನೋಹರತೆ, (ಖೇ ಗಚ್ಛತೀತಿ ಖಗಃ - ಆಕಾಶದಲ್ಲಿ ಗಮಿಸಬಲ್ಲದ್ದು ಪಕ್ಷಿ) ಖಗಸಂಕುಲದ ಉಡ್ಡೀನ / ಹಾರಾಟದ ಸೌಂದರ್ಯ, ಸಾಗರದ ಅಲೆಗಳ, ಗಿಡಮರಗಳ ಚಿಗುರಿನಲ್ಲಿನ ತುಂತುರು ಹನಿಗಳ ಸೊಬಗು, ಅವುಗಳ ತೊನೆದಾಟ, ಮುತ್ತಿನಂತೆ ತೋರುವ ಅವುಗಳ ಸೌಂದರ್ಯ -- ಇತ್ಯಾದಿಗಳನ್ನನುಭವಿಸಲು ಕಲಿಸಿದ ಮಹಾಗುರುವೇ ಪ್ರಕೃತಿ. ಅದು ತಾನೇ ತನ್ನನ್ನು ನಮ್ಮ ಮುಂದೆ ತೆರೆದುಕೊಳ್ಳುತ್ತದೆ / ಅನಾವರಣಗೊಳ್ಳುತ್ತದೆ._*
*ಅವಧೂತ ಪರಂಪರೆಯೂ* ಪ್ರಕೃತಿಯಲ್ಲಿನ ೨೪ ತತ್ತ್ವಗಳನ್ನೇ ತನ್ನ ಶಿಕ್ಷಾಗುರುಗಳಾಗಿ ಕಂಡಿದೆ. ಕೆಳಗೆ ಅವುಗಳ ಹೆಸರು ಹಾಗೂ ಅವುಗಳಿಂದ ಕಲಿಯುವ ಆದರ್ಶಗುಣಗಳನ್ನು ಕೊಟ್ಟಿದೆ.
೧) ಭೂಮಿ -- ಕ್ಷಮೆ
೨) ಜಲ -- ಸ್ನಿಗ್ಧ / ಸ್ನೇಹಗುಣ (ಪರಿಶುದ್ಧತೆ)
೩) ಅಗ್ನಿ -- ತೇಜಸ್ಸು (ಕೆಟ್ಟದ್ದನ್ನು ದಹಿಸುವಿಕೆ)
೪) ವಾಯು -- ತೃಪ್ತಿ, ಅನಾಸಕ್ತಿ
೫) ಆಕಾಶ -- ಅಖಂಡತ್ವ
೬) ಸೂರ್ಯ -- ಪ್ರತಾಪ
೭) ಚಂದ್ರ -- ಕ್ಷೀಣವೃದ್ಧಿಗಳಾದರೂ ಮನಃಪ್ರಸನ್ನತೆ, ಸಮಚಿತ್ತತೆ
೮) ಸಮುದ್ರ -- ಮಹಾಗಂಭೀರತ್ವ ಹಾಗೂ ಸದಾ ಕ್ರಿಯಾಶೀಲತೆ
೯) ಮತ್ಸ್ಯ -- ಧ್ಯಾನನಿಷ್ಠೆ ಹಾಗೂ ಜಿಹ್ವಾಚಾಪಲ್ಯದಿಂದ ಬಂಧನ (ಗಾಳ)ದ ಸಾಧ್ಯತೆ
೧೦) ಕಪೋತ (ಪಾರಿವಾಳ)-- ಪರೋಪಕಾರ, ತ್ಯಾಗ
೧೧) ಪತಂಗ -- ದರ್ಶನ ವಿಶುದ್ಧಿ ಇಲ್ಲವಾದರೆ ಬೆಂಕಿಗೆ / ವಿನಾಶಕ್ಕೆ ಬೀಳಬಹುದು
೧೨) ಹರಿಣ (ಜಿಂಕೆ) -- ತಲ್ಲೀನತೆ (ಆದರೆ, ಗುಣಗಾನಗಳಿಗೆ ವಶನಾಗಬಾರದು)
೧೩) ಕುರವ (ಕ್ರೌಂಚ) -- ಪರಿಗ್ರಹ / ಸಂಗ್ರಹದಿಂದ ಸುಖಾಸ್ವಾದಿಸಬಾರದು
೧೪) ಅಜಗರ (ಹೆಬ್ಬಾವು) -- ಯದೃಚ್ಛಾಲಾಭದಿಂದ ತೃಪ್ತಿ
೧೫) ಮಾತಂಗ (ಆನೆ) -- ನಿಸ್ಸಂಗತ್ವ, ದೃಷ್ಟಿಸಂಪರ್ಕ ಬೆಳೆಸುವುದು
೧೬) ಮಧುಕರ (ಜೇನುಹುಳು) -- ಶೇಖರಿಸುವುದು ಹಾಗೂ ಅದರ ಸದುಪಯೋಗ
೧೭) ನಾಗ -- ಏಕಾಂತಸುಖದಲ್ಲಿ / ಆತ್ಮಾನಂದದಲ್ಲಿ ಶಾಂತಿಹೊಂದುವುದು.
೧೮) ಭೃಂಗ (ದುಂಬಿ)-- ತದೇಕಧ್ಯಾನ (ಸಾರವನ್ನು ಪರಿಗ್ರಹಿಸುವುದು)
೧೯) ಜೇಡರಹುಳ -- ಸ್ವಾವಲಂಬನೆಯಿಂದ ಜೀವಿಸುವುದು
೨೦) ಲೋಹಕಾರ (ಶರಕೃತ್) -- ಕರ್ತವ್ಯನಿಷ್ಠೆಯಿಂದ ಪರಿಶ್ರಮಪಡುವುದು
೨೧) ಭ್ರಮರಕೀಟ -- ತದೇಕಧ್ಯಾನದಿಂದ ಸದ್ರೂಪ / ತದ್ರೂಪ ಪಡೆಯುವುದು
೨೨) ಬಾಲಕ -- ಸದಾ ಮಕ್ಕಳಂತೆ ಮುಗ್ಧತೆಯಿಂದ ಕೂಡಿ, ಆತ್ಮಾನಂದದಿಂದಿರುವುದು
೨೩) ಕುಮಾರಿ (ಕನ್ಯೆ)-- ಮನೆಯಲ್ಲಿ ಗೌರವಬುದ್ಧಿಯಿಂದ ವರ್ತಿಸುವುದು
೨೪) ಪಿಂಗಲಾ (ವೇಶ್ಯೆ)-- ನಿರ್ವಿಷಯತ್ವಯುತವಾಗಿ ವಿರಕ್ತ ಪ್ರವೃತ್ತಿಯಲ್ಲಿರುವುದು, ಅನಾಸಕ್ತಿಯಿಂದ ಜೀವನೋಪಾಯ ಕರ್ತವ್ಯಭಾವಮಾತ್ರದಿಂದ ಕರ್ಮನಿರ್ವಹಣೆ.
ಇಷ್ಟಲ್ಲದೆ, ಇರುವೆಯಿಂದ ಶಿಸ್ತು, ನಾಯಿಯಿಂದ ಕೃತಜ್ಞತೆ, ಬಳ್ಳಿಗಳಿಂದ ವಿನಯಶೀಲತೆ …..ಹೀಗೆ ಪ್ರಕೃತಿಯ ಎಲ್ಲದರಿಂದಲೂ ಅನೇಕವನ್ನು ಕಲಿಯಬಹುದು, ಹಾಗೆ ಕಾಣುವ ಕಣ್ಣು, ವಿವೇಕ ಇದ್ದರೆ.
*ಇದೇ ಪ್ರಕೃತಿಯ *(ಮಾ-ಗುರುವು ಸೃಷ್ಟಿಯಲೆ)*, ಮಾತೃತ್ವದ ಹಾಗೂ ಮಹಾಗುರುತ್ವದ ವಿಶ್ವರೂಪ / ವಿರಾಡ್ರೂಪ.*
*ಹರೇ ರಾಮ*
*ಆಟಕೆಂದಳ್ತಿಯಿಂ ಮರಳಿನಲಿ ಮನೆಕಟ್ಟಿ |*
*ಊಟ ಪಾಟಗಳೆಂದು ನಲಿದಣುಗನೇಕೋ ||*
*ನಾಟಕವು ಸಾಕೆಂದು ಮನೆಯನೊದೆದೊಡೆವುದಕೆ |*
*ಸಾಟಿಯೋ ಶಿವನೃತ್ಯ - ಮರುಳ ಮುನಿಯ || (೩೫೬)*
_(ಆಟಕೆ+ಎಂದು+ಅಳ್ತಿಯಿಂ)(ಪಾಟಗಳ್+ಎಂದು)(ನಲಿದ+ಅಣುಗನ್+ಏಕೋ)(ಸಾಕು+ಎಂದು)(ಮನೆಯನ್+ಒದೆದು+ಒಡೆವುದಕೆ)_
*ಊಟ ಪಾಟಗಳೆಂದು ನಲಿದಣುಗನೇಕೋ ||*
*ನಾಟಕವು ಸಾಕೆಂದು ಮನೆಯನೊದೆದೊಡೆವುದಕೆ |*
*ಸಾಟಿಯೋ ಶಿವನೃತ್ಯ - ಮರುಳ ಮುನಿಯ || (೩೫೬)*
_(ಆಟಕೆ+ಎಂದು+ಅಳ್ತಿಯಿಂ)(ಪಾಟಗಳ್+ಎಂದು)(ನಲಿದ+ಅಣುಗನ್+ಏಕೋ)(ಸಾಕು+ಎಂದು)(ಮನೆಯನ್+ಒದೆದು+ಒಡೆವುದಕೆ)_
ಆಟವಾಡಲೆಂದು ಪ್ರೀತಿಯಿಂದ (ಅಳ್ತಿಯಿಂ) ಮರಳರಾಶಿಯಲ್ಲಿ ಮನೆಯನ್ನು ನಿರ್ಮಿಸಿ, ಅದರಲ್ಲೇ ಊಟ-ತಿಂಡಿ-ಅಡುಗೆ, ಪಾಠ-ಆಟಗಳನ್ನು ನಿಜವೆಂಬಂತೆ ಆಡುವನು ಸಣ್ಣಪ್ರಾಯದ ಮಗ / ಬಾಲಕ (ಅಣುಗ). ಕೊನೆಗೆ ಆಡಿ ಬೇಸರವಾದಾಗಲೋ / ಆಯಾಸವಾದಾಗಲೋ ಎಂಬಂತೆ, ಅದೇ ಮರಳಮನೆಯನ್ನು ತನ್ನದೇ ಕಾಲಿನಿಂದ ತುಳಿದು ಒಡೆದುಹಾಕುವ ಈ ಪರಿಯು ಪರಶಿವನ ತಾಂಡವನೃತ್ಯಕ್ಕೆ ಸಂವಾದಿಯಾದುದೆಂಬುದು ಡಿವಿಜಿಯವರು ಕಂಡುಕೊಂಡ ಅನುಭವಾಮೃತ ದರ್ಶನ.
ಅಂದರೆ, ಜೀವನದ ಪ್ರತಿಯೊಂದು ಘಟ್ಟವೂ ಸೃಷ್ಟಿ-ಸ್ಥಿತಿ-ಲಯಗಳೆಂಬ ಮೂರೇ ಮೂರು ಪ್ರಕ್ರಿಯೆಗಳನ್ನು ಒಳಗೊಂಡಿದೆ. ಅಡಿಗೆ ಮಾಡುವುದು ಸೃಷ್ಟಿಯಾದರೆ, ಉಣ್ಣುವುದು ಸ್ಥಿತಿ; ಕೊನೆಗೆ ಪಾತ್ರೆಖಾಲಿಮಾಡುವುದು ಹಾಗೂ ಪಾತ್ರೆಗಳನ್ನು ಶುಚಿಗೊಳಿಸುವುದೇ ಲಯ. ಕೃಷಿಭೂಮಿಯಲ್ಲಿ ಚೆನ್ನಾಗಿ ಭೂಮಿಯನ್ನು ಉಳುಮೆಮಾಡಿ ಹದಗೊಳಿಸುವುದು ಲಯವಾದರೆ, ನೀರು ಹಾಯಿಸಿ ಬಿತ್ತುವುದು ಸೃಷ್ಟಿ; ಬಿತ್ತಿದ ಬೆಳೆಯನ್ನು ಕೊಯ್ದು ಉಪಭೋಗಿಸುವುದು ಸ್ಥಿತಿ; ಕೊನೆಗೆಲ್ಲ ಮುಗಿದು ಭೂಮಿ ಖಾಲಿಯಾಗುವುದೆಂಬ ಲಯವು ಮುಂದಿನ ಸೃಷ್ಟಿಗೆ ಪೂರಕ.
ಹೀಗೆ ಜೀವನದ ಪ್ರತಿಯೊಂದು ಹಂತವೂ ಈ ಮೂರರ ಸಂವಾದಿಯೇ ಆಗಿದೆ. ಜನನವು ಸೃಷ್ಟಿ, ಜೀವನವು ಸ್ಥಿತಿ, ಮರಣವು ಲಯ. ಹೀಗೆ ಈ ಮೂರರ ನಿರ್ವಹಣೆಗಾಗಿ ಒಬ್ಬನೇ ದೇವನು / ಒಂದೇ ಶಕ್ತಿಯು ಬ್ರಹ್ಮಾ-ವಿಷ್ಣು-ಮಹೇಶ್ವರರಾಗಿ ರೂಪು ತಾಳುವನು / ತಾಳುತ್ತದೆ.
*ಸರಸ ಜನನ ವಿರಸ ಮರಣ ಸಮರಸವೇ ಜೀವನ* ಎಂಬಂತೆ, ಸ-ರಸ / ರಸಿಕತೆಯ ಸಹಿತವಾಗಿರುವಿಕೆಯೇ ಸೃಷ್ಟಿ. ಸುಖ-ದುಃಖಗಳನ್ನು ಸಮರಸವಾಗಿಸಿ ಸಮಚಿತ್ತದಿಂದ ಸ್ವೀಕರಿಸಿ ಬಾಳುವುದೇ ಸುಗಮವಾದ ಸ್ಥಿತಿ. ವಿ-ರಸ / ರಸವಿಹೀನವಾಗುವುದು / ಒಣಗುವುದೇ ಪ್ರಕೃತಿಯ ಲಯದ ಪ್ರತೀಕ.
ಜಗನ್ಮಾತೆಯ ಬರಿಯ ಲಾಸ್ಯ / ನಗುವೊಂದು ಮೂಲಸೃಷ್ಟಿಗೆ, ( / ತ್ರಿಮೂರ್ತಿಗಳಿಗೆ) ಕಾರಣವಾದರೆ, ಪರಶಿವನ ರುದ್ರತಾಂಡವವು ಸರ್ವಲಯಕ್ಕೆ ಕಾರಣವಾಗುವುದು. ಹೀಗೆ ತ್ರಿಮೂರ್ತಿಗಳ ತತ್ತ್ವಗಳಿಗೂ ಬದುಕಿನ ತತ್ತ್ವಗಳಿಗೂ ಬಹುಸಾಮ್ಯತೆಯಿದೆ.
*_ಅಸ್ತಿ, ಜಾಯತೇ, ವರ್ಧತೇ, ಉಪಕ್ಷೀಯತೇ, ವಿಪರಿಣಮತೇ, ವಿನಶ್ಯತಿ_* ಎಂಬ ವಿಶ್ವದ ಸೃಷ್ಟಿಪೂರ್ವದ ಬ್ರಹ್ಮದಲ್ಲಿನ ಅಸ್ತಿತ್ವ, ಸೃಷ್ಟಿ, ವಿಸ್ತಾರ / ಸ್ಥಿತಿ / ವೃದ್ಧಿ, ಕ್ಷಯಿಸುವಿಕೆ, ಪಂಚಭೂತಗಳಲ್ಲಿ ಹಾಗೂ ಕೊನೆಗೆ ಮಹತ್ ತತ್ತ್ವದಲ್ಲಿ ಲಯವಾಗುವಿಕೆ, ಕೊನೆಗೆ ಆತ್ಯಂತಿಕ ಪ್ರಳಯ-- ಎಂಬೀ ವಿಕಾರಗಳು ಪರಬೊಮ್ಮನ ಲೀಲಾವಿನೋದವೇ ಆಗಿರುವುದೆಂಬ ಅಂತರಾರ್ಥ ಡಿವಿಜಿಯವರ ಈ ಕಗ್ಗದ ತಾತ್ಪರ್ಯವಾಗಿದೆ.
*ಹರೇ ರಾಮ*
*ಅಹಿಮುಖಸಹಸ್ರದೊಳಗೊಂದುಸಿರ್ವನು ಶೇಷ |*
*ಬಹುಜೀವದೊಳಗೊಂದೆ ಪರಮಾತ್ಮಸತ್ತ್ವ |*
*ಸಿಹಿಯೇನೊ ಕಹಿಯೇನೊ ಮುಖ ಸವಿವುದಸುವಲ್ಲ |*
*ವಿಹರಿಸುವ ರೀತಿಯಿದು ಮರುಳ ಮುನಿಯ ||*
_(ಸಹಸ್ರದೊಳಗೆ ಒಂದು ಉಸಿರ್ವನು) (ಬಹುಜೀವದ ಒಳಗೆ ಒಂದೆ) (ಮುಖ ಸವಿವುದು ಅಸುವಲ್ಲ)_
ಶ್ರೀಮನ್ನಾದಿನಾರಾಯಣನು (ಆತ್ಮನು) ಕ್ಷೀರಸಾಗರದಲ್ಲಿ (ಮನಃಸಮುದ್ರದಲ್ಲಿ / ಹೃದಯಸಮುದ್ರದಲ್ಲಿ / cerebro-spinal fluidನಲ್ಲಿ),ಆದಿಶೇಷನನ್ನೇ (ಸರ್ಪಾಕಾರದ ಕುಂಡಲಿನಿಯನ್ನೇ) ಶಯನವನ್ನಾಗಿಸಿ, ಅದರ ಮೇಲೆ ಪವಡಿಸಿರುವನಷ್ಟೆ?
ಈ ಅನಂತಹೆಡೆಗಳುಳ್ಳ / ಸಾವಿರಾರು ಮುಖಗಳುಳ್ಳ ಶೇಷನೂ ಉಸಿರಾಡುವ ಗಾಳಿಯೊಂದೇ / ಒಮ್ಮೆಲೇ ಒಟ್ಟಿಗೇ ಉಸಿರನ್ನು ತೆಗೆದುಕೊಳ್ಳುವನೆಂದು ಡಿವಿಜಿಯವರು ಪರಮಾತ್ಮನ ಪರತತ್ತ್ವದ ಇರವಿಗೆ ದೃಷ್ಟಾಂತವಾಗಿ ಹೇಳುತ್ತಾರೆ. ಇದರಂತೆಯೇ, ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳಲ್ಲೂ, ಅನಂತವಾದ, ಅಸಂಖ್ಯವಾದ ಸಕಲ ಜೀವಿಗಳ ದೇಹಗಳಲ್ಲೂ ಇರುವ ಪರಮಾತ್ಮನೆಂಬ ಸತ್ತ್ವ / ಸತ್ತೆ / ಅಸ್ತಿತ್ವ / ಸಾರವು ಒಂದೇ ಆಗಿರುವುದು. ಅರ್ಥಾತ್, ಸಕಲ ಜೀವರುಗಳ ಅಂತರ್ಯಾಮಿಯಾದ ಅಂತರಾತ್ಮನ ಸ್ವರೂಪವು ಒಂದೇ ಆಗಿರುವುದು ಮಾತ್ರವಲ್ಲ; ಒಂದೇ ಆತ್ಮತತ್ತ್ವವು *(ಅತ ಸಾತತ್ಯಗಮನೇ )* ಸತತವಾಗಿ ಎಡೆಬಿಡದೆ *ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ* ಎಂದು ಕವಿ ಗೋಪಾಲಕೃಷ್ಣ ಅಡಿಗರೆಂದಂತೆ, ವಿಶ್ವದೆಲ್ಲೆಡೆ ಸಂಚರಿಸುತ್ತಿರುವಂತೆಯೂ, ಸ್ಥಿರವಾಗಿ ವ್ಯಾಪಿಸಿರುವಂತೆಯೂ ಕಂಡುಬರುವುದು. ಅದೇ ಜಗದ ಮೂಲಶಕ್ತಿಸೆಲೆ.
ಇನ್ನು, ಜೀವನದ ಸುಖ-ದುಃಖಗಳೆಂಬ ಸಿಹಿ-ಕಹಿಗಳನ್ನೂ, ಸಿಹಿ-ಕಹಿ-ಕಾರ-ಒಗರು-ಹುಳಿ-ಉಪ್ಪುಗಳೆಂಬ ರಸನಾಗ್ರಾಹಿಯಾದ ಷಡ್ರಸಗಳನ್ನೂ -- ಇವೆಲ್ಲವನ್ನೂ ಅನುಭವಿಸುವುದು ಆ ಅಂತರಾತ್ಮ ಸತ್ತ್ವವಲ್ಲ, ಕೇವಲ ಭೌತಿಕದೇಹದ ಆಯಾಯ ಇಂದ್ರಿಯಗಳು ಹಾಗೂ ಮನಸ್ಸು ಮಾತ್ರ. ಆತ್ಮಕ್ಕೆ ಕರ್ಮಲೇಪವಿಲ್ಲ. ಮನಸ್ಸಂಕಲ್ಪ-ವಿಕಲ್ಪಗಳಿಂದಲೇ ಉಂಟಾದ ಕರ್ಮಫಲಗಳು ಸಂಸ್ಕಾರರೂಪದಲ್ಲಿ ಜನ್ಮಜನ್ಮಾಂತರಗಳಿಂದಲೂ ಚಿತ್ತದಲ್ಲಿ ಸಂಗ್ರಹವಾಗಿದ್ದು, ನಮ್ಮ ಆ ಸಂಸ್ಕಾರಗಳಿಗೆ ಸಂವಾದಿಯಾದ ನಾನಾ ಜನ್ಮಗಳನ್ನೂ, ಸುಖ-ದುಃಖಾದಿ ಇಹಫಲಗಳನ್ನೂ, ಮರಣಾನಂತರದ ವಿವಿಧ ಅವಧಿಗಳ ನಾನಾ ಪರಲೋಕಾನುಭವಗಳನ್ನೂ ಉಂಟುಮಾಡಿ, ನಮ್ಮನ್ನು ಜೀವನವೆಂಬ ನಿತ್ಯ ಸಂಸರಿಸುವ / ತಿರುಗುವ / ಗತಿಶೀಲವಾದ ಸಂಸಾರಚಕ್ರದಲ್ಲಿ ನಮ್ಮನ್ನು ಸುತ್ತಿಸುತ್ತವೆ.
ಹೀಗೆ, ಜೀವರ ಅಂತರಾತ್ಮವು ಕೇವಲ ಸೃಷ್ಟಿಯಲ್ಲಿ ವಿಹಾರ ಮಾಡುವ ಪರಿಯೇ ಇದಾಗಿದ್ದು, ಅದಕ್ಕಾವ ನಂಟೂ ಜಗದೊಂದಿಗಿಲ್ಲ, ಅದು ಕೇವಲ ಸಚ್ಚಿದಾನಂದಸ್ವರೂಪಿಯಾದದ್ದೂ, ಸರ್ವರೊಳಗೂ ಇದ್ದು ವಿಹರಿಸುವಂಥದ್ದೂ, ದೇಹ-ಮನಸ್ಸುಗಳಿಗೆ ವಿವಿಧ ಅನುಭವಗಳನ್ನುಂಟುಮಾಡುವಂಥದ್ದೂ ಆಗಿರುವುದು.
ಹಾಗಾಗಿ, ನಮ್ಮ ಪಂಚಭೂತಾತ್ಮಕವಾದ ಶರೀರವು ನಿತ್ಯವೂ ಶೀರ್ಯಮಾಣವಾಗಿದ್ದು (ಕ್ಷಯಿಸುವಂಥದ್ದು), ನಶ್ವರವಾದುದು. ಕೇವಲ ಇದರೊಳಗಿರುವ ಕೇವಲಸ್ವರೂಪಿಯಾದ ಆತ್ಮ ಮಾತ್ರ ಶಾಶ್ವತ. ಅದೇ ವಿವಿಧ ಜನ್ಮಗಳನ್ನೆತ್ತಿ ಬರುವಂಥದ್ದೇ ಹೊರತು ಈ ದೇಹ ಮತ್ತೆ ಬರದು. ಹಾಗಾಗಿ ನಾನು ಎಂದರೆ ಏನು? ದೇಹವೇ? ಆತ್ಮವೆ? ದೇಹವು ನಾನಾದರೆ, ನಾನು ನಶ್ವರ. ಇದು ಚಾರ್ವಾಕ / ನಾಸ್ತಿಕವಾದ. ಆತ್ಮ ನಾನಾದರೆ ನಾನು ಶಾಶ್ವತ. ಇದು ಆಸ್ತಿಕವಾದ. ನಮ್ಮ ವೇದೋಪನಿಷತ್ತುಗಳೆಲ್ಲವೂ ಪೂರ್ವ ಋಷಿಮುನಿಗಳ ದರ್ಶನರೂಪವಾಗಿ ಹೇಳಿರುವುದು *ನಾನು ದೇಹವಲ್ಲ, ನಾನು ಆತ್ಮ* ಎಂದೇ. ಯಾಕೆಂದರೆ, *ಇದು ನನ್ನ ದೇಹವೇ ಹೊರತು ನಾನೇ ದೇಹವಲ್ಲ.* ಅಲ್ಲವೆ? ಹಾಗಾದರೆ ಇಲ್ಲಿ *ನನ್ನ* ಎಂದರೆ ದೇಹವಲ್ಲದ ಇನ್ನಾವುದೋ ಇದೆಯೆಂದಾಯಿತು. ದೇಹವಲ್ಲದೆ ದೇಹದೊಳಗಿರುವುದು *ದೇಹೀ* ಎನಿಸಿದ ಆತ್ಮವೇ ಹೊರತು ಬೇರೇನಿಲ್ಲ. *ದೇಹೇ ಅಸ್ಮಿನ್ ವರ್ತತೇ ಇತಿ ದೇಹೀ.*
ಇದೇ ಆತ್ಮಜ್ಞಾನ. ಇದೇ ಬ್ರಹ್ಮವಿದ್ಯೆ. ಇದೇ ಪರತತ್ತ್ವವಿಚಾರ. ಇದನ್ನು ಸದಾ ಪರಿಭಾವಿಸುತ್ತಾ ಬದುಕಿ ಅಮೃತರಾಗೋಣ, ಅಮರರಾಗೋಣ, ಜೀವನ್ಮುಕ್ತರಾಗೋಣ, ಸಕಲ ಸುಖ-ದುಃಖಗಳ ಭಾವವನ್ನು ಕಳೆದುಕೊಂಡು, ಸಮಚಿತ್ತತೆಯಿಂದ ಭಾವಾತೀತರಾಗೋಣ.
*ಹರೇ ರಾಮ*
*ಆದಿಕವಿಗಳ ವಿಶ್ವಸತ್ಯದೃಷ್ಟಿಯಿನೊಗೆದ*
*ವೇದ-ನದಿ ಮೂರು ಕವಲಾಯ್ತು ಟೀಕೆಗಳಿಂ |*
*ರೋದಿಸುವ ವೈರಾಗ್ಯ, ಬೋಧೆಯಗಲಿದ ಕರ್ಮ-*
*-ವಾದದೊಣರಗಳೆಯವು ಮರುಳಮುನಿಯ ||*
_(ಸತ್ಯ ದೃಷ್ಟಿಯಿನ್ ಒಗೆದ) (ಬೋಧೆಯ ಅಗಲಿದ) (ವಾದದ ಒಣರಗಳೆ ಅವು)_
ಸೃಷ್ಟಿಯ ಆರಂಭದ ಸಪ್ತರ್ಷಿಗಳೇ ಮುಂತಾದ ಋಷಿಪರಂಪರೆ, ದಾರ್ಶನಿಕಪರಂಪರೆ, ಕವಿಪರಂಪರೆಗಳು ತಮ್ಮ ತಪೋಧ್ಯಾನಸಮಾಧಿಗಳಲ್ಲಿ ದರ್ಶನರೂಪವಾಗಿ ಕಂಡ ವಿಶ್ವದ ಆತ್ಯಂತಿಕ / ಪಾರಮಾರ್ಥಿಕ ದೃಷ್ಟಿಯಿಂದ ಒಡಮೂಡಿದ ಪರಮಸತ್ಯವೆಂಬ ವೇದನಿಧಿಯ ಗಂಗಾಸರಿದ್ರೂಪೀ ಪ್ರವಾಹವು, ಪ್ರಧಾನವಾಗಿ ಆಚಾರ್ಯತ್ರಯರೆನಿಸಿದ ಶಂಕರ-ರಾಮಾನುಜ-ಮಧ್ವರಿಂದ ಉಪದಿಷ್ಟವಾದ ಅದ್ವೈತ-ವಿಶಿಷ್ಟಾದ್ವೈತ-ದ್ವೈತವೇದಾಂತದರ್ಶನಗಳೆಂಬಂತೆ ಕ್ರಮವಾಗಿ ಮೂರು ಕವಲುಗಳಾಗಿ ಹರಿದು, ವಿವಿಧ ಅಭಿರುಚಿಯ, ಅಧಿಕಾರಭೇದದ ಜನರನ್ನೆಲ್ಲ ತೋಯಿಸಿತು, ತೃಪ್ತಿಪಡಿಸಿತು.
ಇನ್ನು ವೈರಾಗ್ಯವೆಂದರೇನು ಎಂದು ಚಿಂತಿಸಿದಾಗ, ರಾಗ ವಿರಹಿತವಾಗಿರುವುದೇ ವೈರಾಗ್ಯ, ವಿ-ರಕ್ತಿಯೆಂದು ತಿಳಿಯುತ್ತದೆ. ಈ ರೀತಿಯ ವೈರಾಗ್ಯವು ಹಲವು ಸಂದರ್ಭಗಳಲ್ಲಿ ನಮಗೆಲ್ಲರಿಗೂ ತಾತ್ಕಾಲಿಕವಾಗಿ ಬಂದಿರಬಹುದು. ಉದಾ -- ಇಷ್ಟರು ಸತ್ತಾಗ ಬದುಕಿಷ್ಟೇ ಎಂಬ *ಸ್ಮಶಾನವೈರಾಗ್ಯ* ವು, ಸ್ಮಶಾನದಿಂದ ಮನೆಗೆ ಮರಳಿದಾಗ ಇರುವುದಿಲ್ಲ. ಇಷ್ಟಪಟ್ಟು ನಡೆಸಿದ ಮೈಥುನದ ಬಳಿಕ ಇದಿಷ್ಟೆ, ಬೇಡವಾಗಿತ್ತಿದು ಎಂಬ ಭಾವದ *ಮೈಥುನವೈರಾಗ್ಯ* ವೂ ಕೂಡ, ಮತ್ತೊಂದು ಅಂಥದೇ ಅವಕಾಶ ಬಂದಾಗ ಮರೆಯಾಗಿ, ಪುನರಾಸಕ್ತಿ ರಾಗಗಳು ಒಡಮೂಡುವುವು. ಇನ್ನು, *ನರಿಯು ತನಗೆಟುಕದ ದ್ರಾಕ್ಷಿಯು ಹುಳಿ* ಎಂದಂತೆ, ನಮ್ಮಲ್ಲಿಲ್ಲದುದರ, ನಮಗೆಟುಕದ ವಿಷಯ ವಸ್ತುಗಳ ಅಭಾವ (ಕೊರತೆ) ಯಿಂದಾಗಿ, ಅವುಗಳ ಬಗ್ಗೆ ಬರುವ *ಅಭಾವವೈರಾಗ್ಯ* ವು, ಆಯಾ ವಿಷಯ ವಸ್ತುಗಳು ದೊರೆತಾಗ ತನ್ನಿಂತಾನೇ ಮಾಯವಾಗಿ ಅವುಗಳನ್ನು ಬಯಸಿ, ಅನುಭವಿಸುವೆವು. ಇನ್ನು, ಜೀವನದಲ್ಲಿ ಬಂದ ಕಷ್ಟ-ನಷ್ಟ, ದುಃಖ-ದುಮ್ಮಾನ, ನೋವು-ಹತಾಶೆ, ಆಶಾಭಂಗಗಳಿಂದ ಬಂದ ತಾತ್ಕಾಲಿಕ ಜಿಗುಪ್ಸೆಯು, ಡಿವಿಜಿಯವರೆಂದಂತೆ *ರೋದಿಸುವ ವೈರಾಗ್ಯ* ದ ರೂಪವನ್ನು ತಾಳಿ, ಸುಖಬಂದಾಗ ಪುನಃ ರಾಗ, ಆಸಕ್ತಿಗಳನ್ನು ಚಿಗುರೊಡೆವಂತೆ ಮಾಡುವುವು. ಹಾಗಾಗಿ ಇಂತಹ ತಾತ್ಕಾಲಿಕ ವಿರಕ್ತಿಗಳೆಲ್ಲ ಕೇವಲ ಒಣಪಾಂಡಿತ್ಯ, ಅನುಷ್ಠಾನರಹಿತ ವೇದಾಂತ, *ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ* ಎಂಬಂತಹ ಕೇವಲ ಮಾತಿನ ಮೆರುಗಲ್ಲದೆ, ಕೃತಿಯ ಹುರುಳು, ಅನುಭಾವಗಳಿಲ್ಲದವು.
ಅಂತೆಯೇ, ಜ್ಞಾನವಿಲ್ಲದ ಬರಿಯ ಕರ್ಮವು ನಮಗೆ ಕಗ್ಗಂಟಾಗುವುದು. ಹಾಗಾಗಿ, ಕಠಿಣ ಕರ್ಮಠರೆನಿಸಿದ ಮಂಡನಮಿಶ್ರರಂಥವರ *ಕರ್ಮವೇ ಮೋಕ್ಷಕ್ಕೆ ಸಾಧನ* ಎಂಬ ವಾದವು ಬರಿಯ ನಿರಾಧಾರ, ಸಾಧ್ಯವಲ್ಲದ, ಸಾಧಿತವಲ್ಲದ ಒಣವಾದ-ತರ್ಕಗಳೇ ಆಗಿರುವುದು.
ಹಾಗಾಗಿ, ವಾಲ್ಮೀಕಿಗಳ ಮೇರು ವೇದಾಂತಕೃತಿಯಾದ *ಯೋಗವಾಸಿಷ್ಠ* ದ ಮತದಂತೆ,
*ಕರ್ಮ, ಜ್ಞಾನಗಳೆರಡು ಜೀವನದ ಹಾದಿಗಳು*
*ಅವೆರಡರ ಸಮನ್ವಯದಿಂದ ಬಾಳ ನೀ ನಡೆಸು.*-- ಎಂಬಂತೆ
*ಬೋಧೆಯಗಲದ ಕರ್ಮ*, *ಕರ್ಮವಗಲದ ಬೋಧೆ*-- ಇದು ಮಾನವ ಬದುಕಿಗೆ ಅನುಷ್ಠೇಯವಾದ, ಇಹಪರ ಸದ್ಗತಿಗೆ ಕಾರಣವಾಗಬಹುದಾದ ಮಧ್ಯಮಮಾರ್ಗ. ಇದರಂತೆ ನಾವು ಪರಮಾತ್ಮ ಸಮರ್ಪಣ ಭಾವದಿಂದ, ಆತನ ಕೈಯ ಉಪಕರಣದಂತೆ ಕರ್ತವ್ಯ ನಿರ್ವಹಿಸುತ್ತಾ, ಸದಾ ಭಗವತ್ಸ್ಮರಣೆಯೊಂದಿಗೆ, ಆತ್ಮಭಾವದಿಂದ ಬದುಕಿ, ದೇಹಭಾವವ ತೊರೆದು, ಇರುವ ಅಲ್ಪಾವಧಿಯಲ್ಲಿ, ಪರಿಪೂರ್ಣತೆಯತ್ತ ದಾಪುಗಾಲಿಡೋಣವೆ?
*ಹರೇ ರಾಮ*
*ಆತುರಿಸದಿರು ಮುಕ್ತಿಗಾತುರಿಸದಿರು ತತ್ತ್ವ- |*
*ಕಾತುರಿಸಬೇಡಾತ್ಮ ಪರಿಪಾಕಕೆಂದುಂ ||*
*ಆತುರಾನ್ನದೊಳರ್ಧಪಕ್ವಾತಿಪಕ್ವಗಳು |*
*ಯಾತನೆಗೆ ಮೂಲವಲೆ - ಮರುಳ ಮುನಿಯ || (೭೪೬)*
_(ಆತುರಿಸದೆ ಇರು)(ಮುಕ್ತಿಗೆ ಆತುರಿಸದೆ ಇರು)(ತತ್ತ್ವಕೆ ಆತುರಿಸಬೇಡ ಆತ್ಮ)(ಪರಿಪಾಕಕೆ ಎಂದುಂ)(ಆತುರ ಅನ್ನದ ಒಳ್ ಅರ್ಧಪಕ್ವ ಅತಿಪಕ್ವಗಳು)(ಮೂಲವು ಅಲೆ)_
*ಕಾತುರಿಸಬೇಡಾತ್ಮ ಪರಿಪಾಕಕೆಂದುಂ ||*
*ಆತುರಾನ್ನದೊಳರ್ಧಪಕ್ವಾತಿಪಕ್ವಗಳು |*
*ಯಾತನೆಗೆ ಮೂಲವಲೆ - ಮರುಳ ಮುನಿಯ || (೭೪೬)*
_(ಆತುರಿಸದೆ ಇರು)(ಮುಕ್ತಿಗೆ ಆತುರಿಸದೆ ಇರು)(ತತ್ತ್ವಕೆ ಆತುರಿಸಬೇಡ ಆತ್ಮ)(ಪರಿಪಾಕಕೆ ಎಂದುಂ)(ಆತುರ ಅನ್ನದ ಒಳ್ ಅರ್ಧಪಕ್ವ ಅತಿಪಕ್ವಗಳು)(ಮೂಲವು ಅಲೆ)_
*ಅವಸರವೇ ಅಪಘಾತಕ್ಕೆ ಕಾರಣ* , *ನಿಧಾನವೇ ಪ್ರಧಾನ* -- ಎಂಬಂತೆ, ಯಾವ ವಿಷಯಕ್ಕೂ ಆತುರಪಡಬಾರದು. ಆತುರವು ಅಚಾತುರ್ಯದ ಮೂಲ. ಅವಘಡಕ್ಕೆ ಕಾರಣ. ಗಡಿಬಿಡಿಯಿಂದ ಕೆಲಸ ಕೆಡುವುದು. ಇವತ್ತೊಂದು ದಿನ ಬೇಗ ಕೆಲಸ ಮುಗಿಸುವೆನೆಂದು ಹೊರಟರೆ, ಆ ದಿನ ಉಳಿದ ದಿನಕ್ಕಿಂತಲೂ ತಡವಾಗಬಹುದು. ಯಾಕೆಂದರೆ, ಕೆಲಸದಲ್ಲಾಗುವ ಎಡವಟ್ಟುಗಳಿಂದಾಗಿ, ಗಡಿಬಿಡಿಯಿಂದಾಗಿ, ಕೆಲವು ಸಲ ಮಾಡಿದ್ದನ್ನೇ ಮತ್ತೆ ಮಾಡಬೇಕಾಗುವುದು.
ಇದು ಸಾಮಾನ್ಯ ವಿಷಯದ ಮಾತಾಯಿತು. ಸಾಮಾನ್ಯ ಲೌಕಿಕ ವಿಷಯಗಳಿಗೇ ಆತುರ ಸಲ್ಲದಿರುವಾಗ, ಅಸಾಮಾನ್ಯವಾದ ಪಾರಮಾರ್ಥಿಕತೆಯ ಸಾಧನೆಗೆ ಆತುರವು ಉಚಿತವಾಗಬಲ್ಲದೆ? ಅಧ್ಯಾತ್ಮದ ಮಾರ್ಗವು ಮೇಲೆ ಕಟ್ಟಿಕೊಂಡಿರುವ (ನೆಲದ ಮೇಲಿರುವ ಅಲ್ಲ) ಹಗ್ಗದ ಮೇಲೆ ನಡೆದಂತೆ, ಎರಡಲಗಿನ ಕತ್ತಿಯನ್ನು ಬಳಸಿದಂತೆ. ಎಷ್ಟು ಜತನವಾಗಿದ್ದರೂ ಕಡಿಮೆಯೇ. ಹಾಗಿರುವಾಗ, ಅಂಥ ಮುಕ್ತಿಸಾಧನೆಯ, ತತ್ತ್ವಶೋಧನೆಯ ವಿಚಾರ ಬಂದಾಗ ಅವಸರ ಎಂದಿಗೂ ಯೋಗ್ಯವಲ್ಲ. ಅದು ನಮ್ಮನ್ನು ದಾರಿತಪ್ಪಿಸಬಲ್ಲದು, ಅವಾಂತರ ಸೃಷ್ಟಿಸಬಲ್ಲದು, ಹಾನಿ ಮಾಡಬಲ್ಲದು, ಪತನಕ್ಕೆ ಕೆಡಹಬಲ್ಲದು.
ಹಾಗಾಗಿಯೇ ಡಿವಿಜಿಯವರಂದದ್ದು ಮುಕ್ತಿಗಾಗಿ, ತತ್ತ್ವಕ್ಕಾಗಿ, ಅದು ಈಗಿಂದೀಗಲೇ ಸಿಗಬೇಕು, ರಾತ್ರಿಬೆಳಗಾಗುವಾಗ ಸಾಧ್ಯವಾಗಬೇಕೆಂದು ಆತುರಪಡಬಾರದು ಎಂದು. ಜೀವನದಲ್ಲಿ *೨ ವಿಧದ ಮುಕ್ತಿಯಿದೆ -- ಸದ್ಯೋಮುಕ್ತಿ ಹಾಗೂ ಕ್ರಮಮುಕ್ತಿ. ಸದ್ಯೋಮುಕ್ತಿಯೆಂದರೆ ಈ ಕ್ಷಣದಲ್ಲೇ ಮುಕ್ತನಾಗಿರುವಿಕೆ. ಇದು ವ್ಯಾಸಪುತ್ರರಾದ ಶುಕಮುನಿಯಂಥ ಕೇವಲ ಕೆಲವೇ ಕೆಲವು ಜೀವನ್ಮುಕ್ತರ, ಅವತಾರಪುರುಷರ ಬದುಕಿನಲ್ಲಿ ಸಂಭವಿಸುವಂಥದ್ದು. ಜನಸಾಮಾನ್ಯರಿಗಾದರೋ, ಬದುಕಿನ ಸಕಲ ಅನುಭವಗಳು ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸಗಳೆಂಬ ಚತುರಾಶ್ರಮಗಳ ಮೂಲಕ ಮುಪ್ಪುರಿಗೊಂಡು, ಬಳಿಕ ಕ್ರಮಾನುಗತವಾಗಿ ಕಾಲಕ್ರಮೇಣ ಉಂಟಾಗುವ ಮುಕ್ತಿಯೇ ಪತನಗೆಡದ ಕ್ರಮಮುಕ್ತಿಯು. ಯಾವುದೇ ಸಾಧನೆಯಾದರೂ ಬಹುಬೇಗ ಸುಲಭದಲ್ಲಿ ಸಿದ್ಧಿಸಿದರೆ ಬಹುಬೇಗ ಪತನ ಖಚಿತ. ಇದು ಲೋಕನಿಯಮ. ಇದು ಶ್ರೀಮಂತಿಕೆ ಬರುವುದೋ, ಅಧಿಕಾರ ಬರುವುದೋ ಮುಂತಾದ ಎಲ್ಲ ವಿಚಾರಗಳಿಗೂ ಅನ್ವಯಿಸುವುದು. *ಕೈ ಕೆಸರಾದರೆ ಬಾಯಿ ಮೊಸರು, ಇಲ್ಲವಾದರೆ, ಬಾಯಿಗೆ ಕೆಸರು.* ಮೊಸರಾಗಲೂ ಹಾಲಿಗೆ ಹೆಪ್ಪು ಹಾಕಿ ಒಂದು ಸಮಯದ ಅವಧಿ, ಅವಕಾಶ ಬೇಕಲ್ಲ? ಇಲ್ಲದಿದ್ದರೆ ಅದಕ್ಕೆ ರುಚಿಯಿದೆಯೇ?
ಹೀಗಾಗಿ, ಆತ್ಮದ ಪರಿಪಾಕ / ಪರಿಪಕ್ವತೆಗಾಗಿ ಕಾಯಬೇಕು, ಮಾಗಬೇಕು. ವಿನತೆಯು ತನ್ನ ತತ್ತಿಯನ್ನು ಅವಧಿಪೂರ್ವದಲ್ಲೇ ಒಡೆದು ಕಾಲಿಲ್ಲದ ಅರುಣ ಹುಟ್ಟಿದಂತೆ, ಗಾಂಧಾರಿಯು ತನ್ನ ಹೊಟ್ಟೆ ಕಿವುಚಿ ಮಾಂಸದ ಮುದ್ದೆಯನ್ನೇ ಹೆತ್ತಾಗ, ವ್ಯಾಸರದನ್ನು ೧೦೧ ಘೃತಭಾಂಡಗಳಲ್ಲಿ ವಿಭಾಗಿಸಿ ಬೆಳೆಸಿದಂತೆ, ಆಗಬಾರದಲ್ಲವೆ? ಮಾಗಿದ ಹಣ್ಣು ತಾನಾಗಿಯೇ ತೊಟ್ಟು ಕಳಚಿ ಕೆಳಬೀಳುವುದು. ಅದಕ್ಕೆ ಅವಧಿಪೂರ್ವ ಬಲಾತ್ಕಾರವು ಪರಿಪೂರ್ಣ ಪಕ್ವತೆಯನ್ನು ಕೊಡದು.
ಅಕ್ಕಿ ಬೇಯಲು, ಬೆಂದು ಅನ್ನವಾಗಲೂ ಆತುರಪಟ್ಟರೆ, ಅರೆಬೆಂದ ಅನ್ನವುಣ್ಣಬೇಕಾದೀತು. *ಗಡಿಬಿಡಿಯಲ್ಲಿ ನಿಂತು ಉಂಡರೆ, ಕುಡಿದರೆ, ಅಜೀರ್ಣವು ಕಟ್ಟಿಟ್ಟ ಬುತ್ತಿ. ಈಗಿನ ಕಾಲದ ದೊಡ್ಡರೋಗವಿದು.* ನೆಲದಲ್ಲಿ ಕುಳಿತು ಸಾವಧಾನಚಿತ್ತದಿಂದ ಹೆಚ್ಚು ಮಾತು-ಗಲಾಟೆ ಆಡದೆ, ಬಾಳೆ ಎಲೆಯಲ್ಲಿ ಊಟ ಮಾಡುವುದು ಹಾಗೂ ಪ್ಲಾಸ್ಟಿಕ್ / ಪೇಪರ್ ರಹಿತ ಸ್ಟೀಲ್ ಲೋಟದಲ್ಲಿ ಕಾಫಿ ಕುಡಿಯುವುದೇ ಉತ್ತಮ ಆರೋಗ್ಯದ ಅಡಿಪಾಯ.* ಯಾವುದೇ ಕಾರ್ಯಕ್ರಮಗಳಲ್ಲಿ ಆದಷ್ಟು ಇಂಥ ಲೋಟಗಳನ್ನು ಬಿಟ್ಟು, ಪಾಯಸ, ಮಜ್ಜಿಗೆಗಳನ್ನು ತಟ್ಟೆಗೇ ಹಾಕಿಕೊಂಡರೆ ಉತ್ತಮ. ಇನ್ನು, ನಿತ್ಯೋಪಯೋಗದಲ್ಲಿ ಕುಡಿವ ನೀರನ್ನು ಅನಿವಾರ್ಯವಾದ ಪ್ರಯಾಣಾದಿ ಸಂದರ್ಭ ಹೊರತುಪಡಿಸಿ, ಉಳಿದೆಡೆ, ಮನೆ-ಕಛೇರಿ-ಕೃಷಿಭೂಮಿ ಮುಂತಾದೆಡೆಗಳಲ್ಲಿ ಸ್ಟೀಲ್ ಜಗ್ / ಪಾತ್ರೆ-ಲೋಟಗಳಲ್ಲೇ ನೀರನ್ನು ಕುಡಿದು ಕ್ಯಾನ್ಸರ್ ನಂಥ ಭಯಾನಕರೋಗದಿಂದ ದೂರವಿರೋಣ. ಕ್ಯಾನ್ಸರ್ ಮುಂತಾದ ರೋಗಕಾರಕ ಮಾತ್ಸರ್ಯ ಮುಂತಾದ ದುರ್ಗುಣಗಳನ್ನು, ಮಾನಸಿಕ ಒತ್ತಡಗಳನ್ನು ಕನಿಷ್ಠ ಅರ್ಧಗಂಟೆಯ ನಿತ್ಯಯೋಗಾಭ್ಯಾಸದಿಂದ ದೂರಮಾಡೋಣ.
ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಿಸುವುದೇ ಗ್ಯಾಸ್ಟ್ರಿಕ್. ಇದಿಲ್ಲದ ಮನುಷ್ಯರಿಲ್ಲ. ಹೆಚ್ಚೇಕೆ? ಸಾಕುಪ್ರಾಣಿಗಳಿಗೂ ನಾವು ಹಾಕುವ ಆಹಾರದ ವಯೋಮಾನ, ಗುಣಮಟ್ಟ, ಹಾಗೂ ಪ್ರಮಾಣಗಳ ಏರುಪೇರಿನಿಂದ ಅಜೀರ್ಣವುಂಟಾಗುತ್ತದೆಯಲ್ಲವೆ? ಸರಿಯಾಗಿ ಜೀರ್ಣವಾಗದೆ ಯಾವುದೂ ಮೈಮನಗಳಿಗೆ ಸೇರಿಕೊಳ್ಳದು, ಅಂತರ್ಗತವಾಗದು. ಅದಾಗದೇ, ಯಾವ ಫಲವೂ ಇಲ್ಲ. ಬದಲಾಗಿ, ಹಾನಿಯೇ ಹೆಚ್ಚು. ಯಾತನೆ, ಸಾವು-ನೋವಿಗೆ ಕಾರಣವಾಗುವುದು.
ಹಾಗಾಗಿ, ನಾವು ಜೀವನವನ್ನು ಧರ್ಮಬದ್ಧವಾಗಿ ಅನುಭವಿಸಿ, ಬಳಿಕ ಇದು ಸಾಕೆಂಬ ನಿಜವೈರಾಗ್ಯ / ಸಹಜ ವೈರಾಗ್ಯ ಮೂಡಿದಾಗ ಮುಕ್ತಿಗೇರೋಣ.
ಇನ್ನೊಂದು ಮಾತು. ಮುಕ್ತಿಯು ನಾವು ಸಾಧಿಸಬೇಕಾದ್ದಲ್ಲ. ಅದು ಆತ್ಮರೂಪಿಗಳಾದ ನಮ್ಮ ಸಹಜಸ್ವಭಾವವೇ ಆಗಿರುವುದು. ಹೇಗೆ ಗರ್ಭಾಶಯವು ಜರಾಯುವಿನಿಂದಲೂ, ಕನ್ನಡಿಯು ಕೊಳೆಯಿಂದಲೂ ಆವೃತವಾಗಿರುವುದೋ ಅಂತೆಯೇ ನಮ್ಮ ಆತ್ಮಜ್ಞಾನವು ವಿಷಯ ಹಾಗೂ ಪೂರ್ವಸಂಸ್ಕಾರಗಳೆಂಬ ಕೊಳೆಯಿಂದ ಆವರಿಸಲ್ಪಟ್ಟು, ಆತ್ಮಸ್ವರೂಪದ ಜ್ಞಾನಜ್ಯೋತಿಯು ನಮಗೆ ಕಾಣಿಸುತ್ತಿಲ್ಲ. *ಇದು ಭಗವಂತನ ಗೀತಾವಾಕ್ಯ - “ಯಥೋಲ್ಬೇನಾವೃತೋ ಗರ್ಭಃ, ಯಥಾದರ್ಶೋ ಮಲೇನ ಚ |...* ಹಾಗಾಗಿ ನಮ್ಮ ನಿತ್ಯಸ್ವರೂಪವೇ ಆಗಿರುವ ಮುಕ್ತಿಯನ್ನು ನಾವೆಲ್ಲಿಂದಲೋ ತರಬೇಕಿಲ್ಲ. ಆದರೆ, ಅಜ್ಞಾನಾವರಣವನ್ನು ಗುರುವೆಂಬ ಜ್ಞಾನಾಂಜನಶಲಾಕೆಯ ಸಹಾಯದಿಂದ ಸರಿಸಿ, ಒಳಗಣ್ಣಿನಿಂದ ನೋಡಿ, ತಿಳಿಯಬೇಕಾಗಿರುವುದಷ್ಟೆ. ಇರುವುದನ್ನೇ ತಿಳಿಯಬೇಕಿರುವುದೇ ಮುಕ್ತಿಯೇ ಹೊರತು ಬೇರೇನಲ್ಲ. ಅದಕ್ಕಾಗಿಯೇ ಶಂಕರರಂದದ್ದು - *“ಜ್ಞಾನಾದೇವ ಹಿ ಕೈವಲ್ಯಮ್* ಎಂದು. ಅದರ ಅರಿವೇ ಮುಕ್ತಿ.
*ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ |*
*ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ ||*
ಇದು ಶ್ರೀಕೃಷ್ಣನ ಉಪದೇಶ. ಜ್ಞಾನದಷ್ಟು ಪವಿತ್ರ ಯಾವುದೂ ಇಲ್ಲ. ಅದು ಸ್ವಯಂ ತಾನಾಗಿ ಕಾಲಕ್ರಮದಲ್ಲಿ ಸಿದ್ಧಿಸುವುದು. ಆತುರ ಸಲ್ಲ.
ಹಾಗಾಗಿ, ನಾವು ಭಗವಂತನನ್ನು *ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಮ್ | ದೇಹಿ ಮೇ ಕೃಪಯಾ* ಎಂದು ಪ್ರಾರ್ಥಿಸೋಣವೆ?
ಮೃತ್ಯುಂಜಯ ಮಂತ್ರದಂತೆ, *ತ್ರ್ಯಂಬಂಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ | ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾऽಮೃತಾತ್ ||*-- ಲೌಕಿಕ ಅಭಿವೃದ್ಧಿಗಾಗಿ ಮುಕ್ಕಣ್ಣಹರನನ್ನು ಪ್ರಾರ್ಥಿಸುವೆವು. ಹಣ್ಣಾದ ಸೌತೆಕಾಯಿಯು ತೊಟ್ಟನ್ನು ತಾನೇ ತಾನಾಗಿ ಯಾವ ವೇದನೆಯೂ ಇಲ್ಲದೆ ಕಳಚಿಕೊಳ್ಳುವಂತೆ (ಉರ್ವಾರುಕಮ್ ಇವ) ಸಂಸಾರಬಂಧನದ ಭಾವದಿಂದ ಬಿಡುಗಡೆಗೊಳಿಸಿ (ಮುಕ್ಷೀಯ) ನಮ್ಮನ್ನು ಉನ್ನತಭಾವಕ್ಕೆತ್ತಿ ಉದ್ಧರಿಸು ಹೇ ದೇವ!!! ಎಂದೂ ಅಮೃತತ್ತ್ವದಿಂದ / ಆತ್ಮಭಾವದಿಂದ ನಮ್ಮ ಚಿತ್ತವನ್ನು ಕದಲಿಸದಂತೆ ಕಾಯೋ ಪರಮೇಶ್ವರನೇ!!!
*ಹರೇ ರಾಮ*
*ಆದ್ಯಂತರಹಿತವಾ ಪೌರುಷ ಪ್ರಗತಿಕಥೆ |
*ಸಾಧ್ಯವಹುದೆಲ್ಲೊಳಿತ್ತೆನುವ ಸಾಸವದು ||*
*ಸದ್ಯಕಾಗದ ಸಿದ್ಧಿ ನಾಳೆಗಾದೀತೆನುವ |*
*ಉದ್ಯಮೋತ್ಸಾಹವದು - ಮರುಳ ಮುನಿಯ || (೫೪೭)*
_(ಆದಿ+ಅಂತರಹಿತ+ಆ)(ಸಾಧ್ಯ+ಅಹುದು+ಎಲ್ಲ+ಒಳಿತ್ತು+ಎನುವ)(ನಾಳೆಗೆ+ಆದೀತು+ಎನುವ)(ಉದ್ಯಮ+ಉತ್ಸಾಹ+ಅದು)_
*ಸಾಧ್ಯವಹುದೆಲ್ಲೊಳಿತ್ತೆನುವ ಸಾಸವದು ||*
*ಸದ್ಯಕಾಗದ ಸಿದ್ಧಿ ನಾಳೆಗಾದೀತೆನುವ |*
*ಉದ್ಯಮೋತ್ಸಾಹವದು - ಮರುಳ ಮುನಿಯ || (೫೪೭)*
_(ಆದಿ+ಅಂತರಹಿತ+ಆ)(ಸಾಧ್ಯ+ಅಹುದು+ಎಲ್ಲ+ಒಳಿತ್ತು+ಎನುವ)(ನಾಳೆಗೆ+ಆದೀತು+ಎನುವ)(ಉದ್ಯಮ+ಉತ್ಸಾಹ+ಅದು)_
_ಮಾನವನ ಪುರುಷಪ್ರಯತ್ನದ ಫಲಮಹಿಮೆಗೆ ಕೊನೆಮೊದಲಿಲ್ಲ. ಮಾನವನ ಇತಿಹಾಸವೇ ಅಂತಹ ಯಶೋಗಾಥೆ. ಸರ್ವರ ಉದ್ಧಾರವು ಸಾಧಿಸಬಹುದಾದುದೆಂಬ ಭಾವ-ಪ್ರವರ್ತನೆಗಳು ನಿಜಸಾಹಸವೇ ಹೌದು. ರಾತ್ರಿ ಬೆಳಗಾಗುವುದರೊಳಗೆ ಜಗವು ಒಮ್ಮಿಂದೊಮ್ಮೆಗೆ ಪರಿವರ್ತನೀಯವಲ್ಲವಾದರೂ, ಸದ್ಯೋಭವಿಷ್ಯದಲ್ಲಿ ಆ ದಿಶೆಯಲ್ಲಿ ಕಿಂಚಿತ್ತಾದರೂ ಫಲಕೈಗೂಡುವುದೆಂಬ ನಮ್ಮ ತೊಡಗುವಿಕೆ, ಉತ್ಸಾಹ, ಹುಮ್ಮಸ್ಸು, ಆಶಾವಾದಗಳಿವೆಯಲ್ಲ? ಅವು ನಿಜವಾಗಿಯೂ ಪ್ರಶಂಸನೀಯ._
*ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ |*
*ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶನ್ತಿ ಮುಖೇ ಮೃಗಾಃ ||*
ಎಂಬ ಸುಭಾಷಿತದಂತೆ, ಕೇವಲ ಮನಸ್ಸಂಕಲ್ಪಮಾತ್ರದಿಂದ ಯಾವ ಕೆಲಸವೂ ಕೈಗೂಡದು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಮಾತ್ರ ಫಲಕೊಡುವುದು. ಇದು ಹೇಗೆಂದರೆ, ಸಿಂಹವು ಮೃಗರಾಜ, ಮಹಾಬಲಶಾಲಿಯಾದರೂ ಕೂಡ, ಅದು ಮಲಗಿ ನಿದ್ದೆಮಾಡುತ್ತಿರುವಲ್ಲಿಗೇ ಬಂದು ಯಾವ ಪ್ರಾಣಿಯೂ ಅದರ ಬಾಯಿಗೆ ಬೀಳುವುದಿಲ್ಲವಲ್ಲ? ಅದೂ ಸಹ ಮೃಗಬೇಟೆಯಾಡಿದರೆ ಮಾತ್ರ ಅದರ ಹೊಟ್ಟೆಗೆ ಹಿಟ್ಟು. ಇಲ್ಲವಾದರೆ ಉಪವಾಸವೇ ಗತಿ.
*ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ |*
*ನಾಸ್ತ್ಯುದ್ಯಮಸಮೋ ಬಂಧುಃ ಕುರ್ವಾಣೋ ನಾವಸೀದತಿ ||*
ಎಂಬ ಇನ್ನೊಂದು ನಲ್ನುಡಿಯಂತೆ, ಆಲಸ್ಯವೇ ನಮ್ಮೊಳಗಿನ ದೊಡ್ಡ ಶತ್ರು. ಕಾಯಕಕ್ಕೆ ಸಮನಾದ ಬಂಧುಮಿತ್ರರಿಲ್ಲ. ಬಸವೇಶ್ವರರೆಂದಂತೆ *ಶುದ್ಧಕಾಯಕವೇ ಕೈಲಾಸ.* ಹಾಗೆ ಸದಾ ಕರ್ಮನಿರತನಾದವನು ಎಂದಿಗೂ ಅವಸಾನ ಹೊಂದನು.
*ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಂ ಸಮಾಃ |*
*ಏವಂ ತ್ವಯಿ ನಾನ್ಯಥೇತೋऽಸ್ತಿ ನ ಕರ್ಮ ಲಿಪ್ಯತೇ ನರೇ ||*
ಎಂಬ ಈಶೋಪನಿಷತ್ತು (ಈಶಾವಾಸ್ಯೋಪನಿಷತ್ / ಯಾಜ್ಞಿಕೀಯೋಪನಿಷತ್) ಹೇಳುವ ೨ನೇ ಶ್ಲೋಕ ಮಂತ್ರದಂತೆ, ಮಾನವನು ಕರ್ತವ್ಯಕರ್ಮಗಳನ್ನಾಚರಿಸುತ್ತಲೇ ನೂರಾರು ವರ್ಷ / ದೀರ್ಘಕಾಲ ಜೀವಿಸಲಿಚ್ಛಿಸಬೇಕು. ಹೀಗೆ, ಕರ್ಮಯೋಗಿಯಾಗುವುದನ್ನು ಬಿಟ್ಟು ಜೀವನಕ್ಕೆ ಬೇರೆ ಅಡ್ಡದಾರಿ ಇಲ್ಲ. ಇದರಿಂದ ಆತ್ಮಸ್ವರೂಪನಾದ ಆತನಿಗೆ ಕರ್ಮಗಳೂ ಅಂಟವು.
ಮನುಷ್ಯನು ಸದಾ ಆಶಾವಾದಿಯಾಗಿರಬೇಕು. ನಿರಾಶೆಯು ಜೀವನೋತ್ಸಾಹವನ್ನು ಕುಂದಿಸಿ, ವೃದ್ಧಾಪ್ಯವನ್ನು ಬೇಗನೆ ತಂದೊಡ್ಡುವುದು. ಆರೋಗ್ಯವನ್ನೂ ಕೆಡಿಸುವುದು. *ಚಿತೆಯಿಂದ ನಿರ್ಜೀವದಹನವಾದರೆ ಚಿಂತೆಯು ಸಜೀವದಹನಕ್ಕೆ ಸಮ.* ಹಲವರು ಹೇಳುವುದಿದೆ— “ಅವನು ಲೋಕೋದ್ಧಾರ ಮಾಡ್ತಾನಂತೆ!! ಅವನ ಮನೆಯ ಕಾವಲಿಯೇ ತೂತು. ಇನ್ನು ಪರರ ಉದ್ಧಾರ ಆತನಿಂದ ಹೇಗೆ ತಾನೇ ಸಾಧ್ಯ?”, ಅಥವಾ, “ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ” ಎಂದು ಬಸವೇಶ್ವರರೆಂದುದನ್ನು ಅಪಾರ್ಥ ಮಾಡಿ, “ನಾನು ಉದ್ಧಾರಾದ್ರೆ ಸಾಕಪ್ಪ...ಯಾರು ಸತ್ರೆ ನಂಗೇನು? ಅವರಿಗೆ ಎಷ್ಟು ಬಾರಿ ಹೇಳಿದ್ರೂ ಅರ್ಥವೇ ಆಗಲ್ಲ” ಇತ್ಯಾದಿಯಾಗಿ ಋಣಾತ್ಮಕವಾಗಿ ಹೇಳುವುದಿದೆ.
ಆದರೆ, ಮಾನವ ನಿರಾಶಾವಾದಿಯಾಗದೇ, ಜೀವನೋತ್ಸಾಹದಿಂದಿದ್ದರೆ ಲಕ್ಷ್ಮಿಯೂ ಆತನಿಗೊಲಿವಳು.
*ಉತ್ಸಾಹಸಂಪನ್ನಮದೀರ್ಘಸೂತ್ರಂ ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್ |*
*ಶೂರಂ ಕೃತಜ್ಞಂ ದೃಢಸೌಹೃದಂ ಚ ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ ||*
ಸದಾ ಉತ್ಸಾಹವೆಂಬ ಸಂಪತ್ತುಳ್ಳವನನ್ನು, ಯಾವುದೇ ಕೆಲಸವನ್ನು ಮುಂದೆ ಹಾಕದೆ ಮಾಡಿ ಮುಗಿಸುವವನನ್ನು (ಅ-ದೀರ್ಘ-ಸೂತ್ರಮ್), ಕಾರ್ಯದ ವಿಧಿವಿಧಾನಗಳನ್ನರಿತು ಮಾಡುವವನನ್ನು, ಚಟಗಳಿಗೆ ದಾಸನಾಗದವನನ್ನು, ಶೌರ್ಯದಿಂದ ಎದೆಗುಂದದೆ ಮುನ್ನಡೆಯುವವನನ್ನು, ಮಾಡಿದ ಉಪಕಾರದ ಸ್ಮೃತಿಯಿರುವವನನ್ನು, ದೃಢವಾದ ಸುಹೃದಯತೆ ಹಾಗೂ ಎಂದೂ ಕೈಬಿಡದ ಉತ್ತಮ ನಿಜಮಿತ್ರರಿರುವವನನ್ನು ಮಹಾಲಕ್ಷ್ಮಿಯು ವಿದ್ಯಾರೋಗ್ಯಬುದ್ಧಿಶಾಂತಿಧನಕನಕಾದಿ ಸಕಲಸಂಪದ್ರೂಪಳಾಗಿ ತಾನಾಗಿಯೇ ಬಂದುಸೇರುವಳು.
*ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ ಮಾರ್ಗಾರಬ್ಧಾಃ ಸರ್ವಯತ್ನಾಃ ಫಲಂತಿ |*
ಉತ್ಸಾಹಸಂಪನ್ನವ್ಯಕ್ತಿಗಳಿಗೆ ಅಸಾಧ್ಯವಾದುದಾವುದೂ ಇಲ್ಲ. ಆ ಪಥದಲ್ಲಿ ತೊಡಗಿದರೆ, ಸರ್ವಯತ್ನಗಳೂ ಫಲಿಸುವುವು— ಎಂಬ ಸೂಕ್ತಿಯು ಎಷ್ಟು ಧನಾತ್ಮಕವೂ, ಉತ್ಸಾಹಪೂರಕವೂ, ಪ್ರೇರಣಾದಾಯಿಯೂ ಆಗಿರುವುದಲ್ಲವೆ?!
*ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀಃ* ಎಂಬಂತೆ ಸದಾ ಉದ್ಯೋಗಿಯಾದ ಧೀರಮನುಷ್ಯನನ್ನು ಲಕ್ಷಿಯು ತಾನಾಗಿ ಹೊಂದುವಳು. ಹಾಗಿರುವಾಗ, ನಾವೇಕೆ ಲೋಕ ಸರಿಯಿಲ್ಲ, ತಿದ್ದಲಾಗದು, ಕಲಿಗಾಲದ ಮಹಿಮೆ— ಇತ್ಯಾದಿಯಾಗಿ ಚಿಂತಿಸಬೇಕು? *ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು* ಎಂಬ ಕವಿವಾಣಿಯಂತೆ ಸದಾ ಆಶಾವಾದಿಯಾಗಿ, ಧನಾತ್ಮಕವಾಗಿ ತೊಡಗಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿಯೆಂಬುದಕ್ಕೆ ವಿವೇಕಾನಂದರು, ಆಚಾರ್ಯರುಗಳು, ಬಸವಣ್ಣ ಮುಂತಾದ ಇತಿಹಾಸದ ಮಹಾತ್ಮರ ಜೀವನವೇ ಸಾಕ್ಷಿಯಲ್ಲವೆ? ಆ ನಿಟ್ಟಿನಲ್ಲಿ ಚಿಂತಿಸಿ, ಅವರಿತ್ತ ಪಥದ ಪಯಣಿಗರಾಗೋಣವೆ?
*ಯದ್ಭಾವಂ ತದ್ಭವತಿ*
*ಹರೇ ರಾಮ*
*ಆರನುಂ ಬಿಡದ ಧರ್ಮಂ ಜಗದ್ರಥಸೇವೆ |*
*ಧೀರನೆಳೆವಂ ಬ್ರಹ್ಮಲೀಲೆಯೆಂದದನು ||*
*ತೇರು ನಿಜ ಭೋಗ್ಯ ಸಂಸಾರವೆಂಬ ಭ್ರಮೆಗೆ |*
*ಮಾರುವೋದಂ ಮೂಢ - ಮರುಳ ಮುನಿಯ || (೪೭೪)*
_(ಜಗತ್ ರಥಸೇವೆ) (ಧೀರನ್ ಎಳೆವಂ) (ಬ್ರಹ್ಮಲೀಲೆ ಎಂದು ಅದನು) (ಸಂಸಾರವು ಎಂಬ) (ಮಾರು ಓದಂ)_
ಈ ಜಗತ್ತೆಂಬ ತೇರಿನ ಉತ್ಸವವೆಂಬ ಸೇವೆಯು ಯಾರನ್ನೂ ಬಿಡದ ಲೋಕಧರ್ಮವೇ ಆಗಿಹುದು. ಈಶಾವಾಸ್ಯೋಪನಿಷನ್ಮಂತ್ರದ ಭಾವದಂತೆ,
_*“ಕುರ್ವನ್ ಏವ ಇಹ ಕರ್ಮಾಣಿ ಜಿಜೀವಿಷೇತ್ ಶತಂ ಸಮಾಃ |*_
_*ಏವಂ ತ್ವಯಿ ನ ಅನ್ಯಥಾ ಇತಃ ಅಸ್ತಿ ನ ಕರ್ಮ ಲಿಪ್ಯತೇ ನರೇ ||”*_
ಇಹ— ಇಲ್ಲಿ, ಈ ಲೋಕದಲ್ಲಿ,
ಕರ್ಮಾಣಿ— ಕರ್ತವ್ಯ ಕರ್ಮಗಳನ್ನು,
ಕುರ್ವನ್ ಏವ— ಮಾಡುತ್ತಲೇ,
ಶತಂ ಸಮಾಃ— ನೂರು ವರ್ಷ,
ಜಿಜೀವಿಷೇತ್— ಜೀವಿಸಲು ಇಚ್ಛಿಸಬೇಕು.
ಇತಃ— ಇದಕ್ಕಿಂತ,
ಅನ್ಯಥಾ— ಬೇರೆಯಾದದ್ದು,
ನ (ಅನ್ಯಮಾರ್ಗಃ) ಅಸ್ತಿ— (ಬದುಕುವ ದಾರಿ) ಇಲ್ಲ.
ಏವಂ— ಹೀಗೆ, ಈ ರೀತಿಯಾಗಿ,
ನರೇ ತ್ವಯಿ (ಸತಿ)— ನರನಾದ ನೀನು (ಇದ್ದರೆ / ಬಾಳಿದರೆ),
(ತೇ) ಕರ್ಮ ನ ಲಿಪ್ಯತೇ— (ನಿನಗೆ) ಕರ್ಮವು ಅಂಟುವುದಿಲ್ಲ (ನಿನ್ನಲ್ಲಿ ಕರ್ಮಲೇಪವಿರದು).
ಹೀಗೆ ಯಾವನು ತಿಳಿದು, ಇದೆಲ್ಲವೂ ಆ ಜಗನ್ನಾಟಕಸೂತ್ರಧಾರಿಯ ಲೀಲೆಯೆಂದರಿತು ಧೈರ್ಯದಿಂದ ಬದುಕಿ ಬಾಳುವನೋ, ಆತನು ನಿಜವಾಗಿಯೂ ಧೀರನು. ಧೀರತೆಯೂ ಜ್ಞಾನಿಗಿರಬೇಕಾದ ಒಂದು ಗುಣಲಕ್ಷಣ. ಅದಕ್ಕೇ ಕೃಷ್ಣ ಗೀತೆಯಲ್ಲಿ,
*_ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ_*
*_ನ ಏತತ್ ತ್ವಯಿ ಉಪಪದ್ಯತೇ |_*
*_ಕ್ಷುದ್ರಂ ಹೃದಯದೌರ್ಬಲ್ಯಂ_*
*_ತ್ಯಕ್ತ್ವಾ ಉತ್ತಿಷ್ಠ ಪರಂತಪ ||_*
_“ಎಲೈ ಪೃಥಾಸುತನಾದ ಪಾರ್ಥನೆ / ಅರ್ಜುನನೇ (ಕುಂತೀಪುತ್ರನಾದ ಕೌಂತೇಯನೆ)! ಕ್ಲೈಬ್ಯ / ಹೇಡಿತನವನ್ನು ಹೊಂದದಿರು. ಇದು ನಿನಗೆ ಸರಿಹೊಂದದು. ಅಯ್ಯಾ ಶತ್ರುಗಳಿಗೆ ಸಿಂಹಸ್ವಪ್ನನೆನಿಸಿದ ಪರಂತಪನೆ! (ಪರ— ಶತ್ರು, ತಪ— ಪರಿತಾಪ / ದುಃಖ), ಅತ್ಯಂತ ಕ್ಷುಲ್ಲಕವಾಗಿರುವ ಮನೋದೌರ್ಬಲ್ಯವನ್ನು ಬಿಟ್ಚು (ತನ್ನ ಮನವನ್ನೇ ಗೆಲ್ಲಲಾಗದಿದ್ದರೆ, ಯುದ್ಧವನ್ನು ಗೆಲ್ಲುವುದೆಂತೆಂಬ ಧ್ವನಿ), ಕುಸಿದು ಕುಳಿತ ನೀನು ಯುದ್ಧಕ್ಕಾಗಿ ಎದ್ದುನಿಲ್ಲು, ಸನ್ನದ್ಧನಾಗು.”_ — ಎಂದಿರುವನು.
ಹಾಗಾಗಿ, ಅಂತಹ ಧೀರನು ಮಾತ್ರ ಜಗದ್ರಥವನ್ನು ಪರಬ್ರಹ್ಮನ ಲೀಲೆಯೆಂಬ ಭಾವದಿಂದ ಸದಾ ಮುಂದಕ್ಕೆ ಎಳೆಯಬಲ್ಲನು. ಆತನೇ ಜ್ಞಾನಿಯು, ಪಂಡಿತನು.
ಇನ್ನು, ಈ ಬದುಕೇ ಸತ್ಯ, ಜಗದ್ರಥವೇ ನಿತ್ಯ, ಸಂಸಾರದ ಉಪಭೋಗಗಳೇ ನಿಜಪರಮಾರ್ಥವೆಂದು ಮುಂತಾಗಿ ಬಗೆದು ಯಾವನು ಭ್ರಮೆಗೊಳಗಾಗಿ, ಮಾಯಾವಿಲಾಸಕ್ಕೆ ಮಾರುಹೋಗಿ ಬದುಕನ್ನು ಕೇವಲ ಸವೆಸುವನೋ, ಆತನು ಬರಿಯ ಮೂಢ, ಅಜ್ಞಾನಿ, ಪಾಮರ.
*_ಅಜ್ಞೇಭ್ಯೋ ಗ್ರಂಥಿನಃ ಶ್ರೇಷ್ಠಾಃ_* ಎಂಬೊಂದು ಮಾತಿದೆ. ಅದರಂತೆ, ಪೂರ್ಣ ಅಜ್ಞಾನಿಗಿಂತ, ಪುಸ್ತಕ ನೋಡಿಯಾದರೂ ವಿವರಿಸಬಲ್ಲವರು ಮೇಲು. ಅವರಿಗಿಂತ, ಮಸ್ತಕದಿಂದಲೇ ಹೇಳುವವರು ಮೇಲು. ಇವರಿಗಿಂತಲೂ, ಹೇಳುವುದನ್ನು ಅನುಷ್ಠಾನದಲ್ಲಿ ತಂದು ಹೇಳುವವರು ಎಲ್ಲರಿಗಿಂತ ಮಿಗಿಲಾಗಿ, *ಆಚಾರ್ಯ* ಎನಿಸುವರು. *ಸ್ವಯಮ್ ಆಚರತೇ ಯಸ್ಮಾತ್ ತಸ್ಮಾತ್ ಆಚಾರ್ಯ ಉಚ್ಯತೇ*, *ಯಃ ಕ್ರಿಯಾವಾನ್ ಸ ಪಂಡಿತಃ* .
ಹಾಗಾಗಿಯೇ, ಡಿವಿಜಿಯವರಂದದ್ದು ಜಗದ್ರಥವನ್ನು / ಕರ್ತವ್ಯಕರ್ಮವನ್ನು ಪರಬೊಮ್ಮನ ಲೀಲೆಯೆಂದರಿತು ಎಳೆಯುವವರು ಧೀರರೇ ಹೊರತು, ಕೇವಲ ಹಾಗೆ ಹೇಳುವವರಲ್ಲ. ಮಾಡಿ ತೋರಿಸುವವರೇ ಧೀರರು. ಅವರೇ ನಿಜವಾದ ಪಂಡಿತರು. ಹಾಗಾಗಿಯೇ ಡಿವಿಜಿಯವರು ಭಗವದ್ಗೀತೆಯನ್ನು ಮೋಕ್ಷಶಾಸ್ತ್ರಕ್ಕಿಂತಲೂ *ಜೀವನಧರ್ಮಯೋಗ* ವೆಂದು ಕರೆಯುವುದೇ ಹೆಚ್ಚು ಸೂಕ್ತವೆಂದಿರುವರು. ನಾವು ಹುಟ್ಟಿರುವುದು ಕೇವಲ ಭಗವಂತನನ್ನು ಸೇರಿ ಮೋಕ್ಷ ಹೊಂದಲು ಮಾತ್ರವಾದರೆ, ನಾವು ಯಾಕೆ ಹುಟ್ಟಬೇಕಿತ್ತು? ಅಲ್ಲೇ, ಅವನಲ್ಲೇ ಇರಬಹುದಿತ್ತಲ್ಲ? ಹಾಗಾದರೆ, ಆತ ನಮ್ಮನ್ನಿಲ್ಲಿಗೆ ಕಳುಹಿಸಿದ್ದಕ್ಕೊಂದು ಯಾವುದೋ ಬೇರೆ ಉದ್ದೇಶವೂ ಇರಬೇಕಲ್ಲವೆ? ಅದೇ ಸಾರ್ಥಕವಾಗಿ ಬಾಳಿ ಬದುಕುವಿಕೆ.
_*ನಗುತ ನಗಿಸುತ ಬಿಗುವ ಬಿಡಿಸುತ ಜಗದಗಲ ಸಂಚರಿಸುತ |*_
_*ಭವವ ಕಳೆಯುವ ಕಲೆಯ ಕಲಿಸುತ ಭವದಿ ಮೀಯುತ ಸಾಗುತ ||*_
_*ನವ ನವತೆಯಲಿ ದಿನವು ನಡೆಯುತ ಹಳೆಯ ಸಾಧನೆ ನೆನೆಯುತ |*_
_*ಎಲೆ ನರನೆ ನೀ ಬದುಕ ನಡೆಸೈ ಜಗದಗಲ ಬೆಳಕಾಗುತ ||*_
(— ಡಾ || ಕೃಷ್ಣಮೂರ್ತಿ ದಂಬೆ)
*ಹರೇ ರಾಮ*
Comments
Post a Comment