ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೫
ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೫
*ಆರು ತಾನರಿತನಿನ್ನೊರ್ವನೇಳ್ಗೆಯ ಬಗೆಯ? |*
*ಆರು ತನ್ನೇಳ್ಗೆಯನು ತಾನರಿತ ಕುಶಲಂ? ||*
*ಹೇರದಿರು ನಿನ್ನ ಕಣ್ಗಾಜನಿನ್ನೊರ್ವಂಗೆ |*
*ದಾರಿಯವನದವಂಗೆ - ಮರುಳ ಮುನಿಯ || (೬೮೮)*
_(ತಾನ್+ಅರಿತನ್+ಇನ್ನೊರ್ವನ+ಏಳ್ಗೆಯ)(ತನ್ನ+ಏಳ್ಗೆಯನು)(ತಾನ್+ಅರಿತ)(ಕಣ್+ಗಾಜನು+ಇನ್ನೊರ್ವಂಗೆ)(ದಾರಿ+ಅವನದು+ಅವಂಗೆ)_
*ಆರು ತನ್ನೇಳ್ಗೆಯನು ತಾನರಿತ ಕುಶಲಂ? ||*
*ಹೇರದಿರು ನಿನ್ನ ಕಣ್ಗಾಜನಿನ್ನೊರ್ವಂಗೆ |*
*ದಾರಿಯವನದವಂಗೆ - ಮರುಳ ಮುನಿಯ || (೬೮೮)*
_(ತಾನ್+ಅರಿತನ್+ಇನ್ನೊರ್ವನ+ಏಳ್ಗೆಯ)(ತನ್ನ+ಏಳ್ಗೆಯನು)(ತಾನ್+ಅರಿತ)(ಕಣ್+ಗಾಜನು+ಇನ್ನೊರ್ವಂಗೆ)(ದಾರಿ+ಅವನದು+ಅವಂಗೆ)_
ಇಲ್ಲಿ ಡಿವಿಜಿಯವರು ಹೇಳುತ್ತಾರೆ— ತನ್ನ ಪ್ರಗತಿಗೆ ತನ್ನಷ್ಟು ಹಿತರು ಯಾರೂ ಇಲ್ಲ. ಯಾಕೆಂದರೆ, ಒಬ್ಬನ ಪರಿಸ್ಥಿತಿ, ಆಸಕ್ತಿ, ಸ್ವಭಾವಾದಿಗಳ ನಿಜವಾದ ತಿಳಿವು ಮತ್ತೊಬ್ಬನಿಗೆ ಇರದು. ಹಾಗಾಗಿ, ಅವನ ಉದ್ಧಾರದ ವಿಧಾನ ಯಾವುದೆಂದು ಅವನೇ ನಿರ್ಧರಿಸಿಕೊಳ್ಳಬೇಕು. ಇತರರ ನಿರ್ಧಾರ ಪೂರ್ಣ ಸರಿಹೊಂದದು. ಅದಕ್ಕೇ ಹೇಳಿರುವರು— *೧೦ ಮಂದಿಯ ಸಲಹೆ ಕೇಳಬೇಕು. ೧೦ರಲ್ಲಿ ಒಂದು ಅಥವಾ ನಮ್ಮದೇ ಆದ ೧೧ನೆಯ ಅಂತಿಮ ನಿರ್ಣಯ ನಾವೇ ಮಾಡಿಕೊಳ್ಳಬೇಕು* ಎಂದು.
ಇನ್ನೊಂದು ಸೂಕ್ತಿಯಂತೆ, *ಇನ್ನೊಬ್ಬರು ಹೇಳಿದ್ದನ್ನು / ಮಾಡಿದ್ದನ್ನು ಸಂಪೂರ್ಣವಾಗಿ ಅದೇ ರೀತಿ ಮಾಡುವುದು ಅನು-ಕರಣೆ. ಅದನ್ನು ಅರ್ಥೈಸಿ, ನಮ್ಮದೇ ಶೈಲಿಯಲ್ಲಿ, ಕೆಲವನ್ನು ಸೇರಿಸಿಕೊಂಡು, ಕೆಲವನ್ನು ಬಿಟ್ಟು, ಮಾಡುವುದು ಅನು-ಸರಣೆ. ಅನುಕರಣೆ ಎಂದೂ ಮಾಡಬಾರದು. ಅನುಸರಣೆ (ಅನುಸರಿಸಿ, ಅದರಂತೆ ಮಾಡುವುದು) ಮಾಡಬಹುದು.*
ಅಷ್ಟು ಮಾತ್ರವಲ್ಲ. ತನ್ನ ಏಳಿಗೆ / ಅಭಿವೃದ್ಧಿಯ ದಾರಿಯನ್ನು ತಾನೇ ಸರಿಯಾಗಿ ತಿಳಿದಿರುವ ಕೌಶಲ್ಯ ಯಾರಿಗಿದೆ? ಹೀಗಿರುವಾಗ, ಇನ್ನೊಬ್ಬರಿಗೆ ದಾರಿತೋರಲು ಅಂಥವನು ಹೇಗೆ ತಾನೇ ಸಫಲನಾದಾನು? ತನ್ನ ಇಂದ್ರಿಯ-ಮನಸ್ಸುಗಳನ್ನೇ ಗೆಲ್ಲಲಾಗದವನು ಜಗತ್ತನ್ನು ಹೇಗೆ ತಾನೇ ಗೆಲ್ಲಬಲ್ಲ?
*ಲೋಕೋ ಭಿನ್ನರುಚಿಃ*— ಎಂಬಂತೆ, ಒಬ್ಬೊಬ್ಬರದು ಒಂದೊಂದು ದಾರಿ, ಅಭಿರುಚಿ. ಒಬ್ಬನ ದಾರಿ ಇನ್ನೊಬ್ಬನಿಗೆ ಸರಿಹೊಂದದು. ಒಬ್ಬನ ಕನ್ನಡಕ (ಕಣ್ ಗಾಜು) ಇನ್ನೊಬ್ಬನಿಗೆ ಸರಿಯಾಗದು.
ಅವನವನ ದಾರಿ ಅವನವನಿಗೇ ಸರಿ. ಅದನ್ನು ಇನ್ನೊಬ್ಬನಿಗೆ ಹೇರಲಾಗದು. ನನ್ನದೇ ಸರಿದಾರಿ, ನಿನ್ನದಲ್ಲವೆಂದು ಹೇಳುವುದು ತಪ್ಪು. ಪ್ರತಿಯೊಂದು ದಾರಿಯೂ ಬೇರೆ ಬೇರೆಯಾದರೂ, ತಲುಪುವ ಗುರಿಯೊಂದೇ...ಹಾಗಾಗಿ ನಾವು ನಮ್ಮ ಅಭಿಪ್ರಾಯವನ್ನು ಇನ್ನೊಬ್ಬರಿಗೆ ಬಲವಂತವಾಗಿ ಒಪ್ಪಿಸಬಾರದು.
ಅದನ್ನೇ ಗೀತಾಚಾರ್ಯನಾದ ಶ್ರೀಕೃಷ್ಣನೂ ಹೀಗೆ ಹೇಳಿರುವನು—
*_ಯೇ ಯಥಾ ಮಾಂ ಪ್ರಪದ್ಯಂತೇ ತಾನ್, ತಥೈವ ಭಜಾಮ್ಯಮ್ |_*
_*ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ||*_
_ಯಾರು ನನ್ನನ್ನು ಯಾವರೀತಿ ಸೇವಿಸುವರೋ / ಯಾವರೂಪದಲ್ಲಿ ಮನಸ್ಸಿಡುವರೋ, ಅವರವರಿಗೆ ಅದೇ ರೀತಿಯಲ್ಲಿ ನಾನು ಪ್ರತಿಫಲವೀಯುವೆನು *(ಹೂವ ತರುವರ ಮನೆಗೆ ಹುಲ್ಲ ತರುವ— ಎಂದು ದಾಸರೆಂದಂತೆ)* / ಅವರು ಬಯಸಿದ ರೂಪದಲ್ಲಿ ತೋರುವೆನು. ಯಾಕೆಂದರೆ, ಮನುಷ್ಯರೆಲ್ಲ ವಿಭಿನ್ನವಾಗಿ ನನ್ನನ್ನು ಕಂಡರೂ, ಕೊನೆಗೆ ನನ್ನನ್ನು ಸೇರುವ ದಾರಿಯಲ್ಲೇ ಗಮಿಸಿ, ನನ್ನನ್ನೇ ಸೇರುವರು. (ಜನರೆಲ್ಲ ನನ್ನನ್ನೇ ಮಾದರಿಯಾಗಿ ಕಂಡು, ನನ್ನ ಅವತಾರಕಾಲದ ಬದುಕಿನ ದಾರಿಯನ್ನೇ ಅನುಸರಿಸುವರು.)_
ಹಾಗೆಯೇ,
*_ಯೇ-ಅಪಿ-ಅನ್ಯದೇವತಾ-ಭಕ್ತಾಃ, ಯಜನ್ತೇ ಶ್ರದ್ಧಯಾನ್ವಿತಾಃ |_*
*_ತೇ-ಅಪಿ ಮಾಮ್-ಏವ ಕೌಂತೇಯ ಯಜಂತಿ-ಅವಿಧಿಪೂರ್ವಕಮ್ ||_*
_ಯಾರು ಇತರ ದೇವತಾಸ್ವರೂಪಗಳ ಭಕ್ತರಾಗಿ, ಶ್ರದ್ಧೆಯಿಂದ ಆ ರೂಪವೇ ಪರದೈವವೆಂದು ಉಪಾಸಿಸುವರೋ, ಅಂಥವರೂ ಸಹ ತಮಗರಿವಿಲ್ಲದಂತೆ ಆಯಾ ದೇವತೆಗಳೊಳಗಿರುವ ನನ್ನನ್ನೇ ನನ್ನ ಪೂಜಾವಿಧಿಪೂರ್ವಕವಲ್ಲವಾದರೂ, ಕೊನೆಗೆ ಉಪಾಸಿಸಿದಂತೆಯೇ ಪರೋಕ್ಷವಾಗಿ ಆಗುವುದು._
ಇದು ಹೇಗೆಂದರೆ,
*_ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ |_*
*_ಸರ್ವದೇವನಮಸ್ಕಾರಃ ಕೇಶವಂ ಪ್ರತಿಗಚ್ಛತಿ ||_*
_ಮಳೆನೀರು ಹೇಗೆ ಬೇರೆ ಬೇರೆ ಕಡೆಗಳಲ್ಲಿ ಬಿದ್ದರೂ ಕೊನೆಗೆ ಸಾಗರವನ್ನೇ ಸೇರುವುದೋ ಅಂತೆಯೇ, ಯಾವ ದೇವರನ್ನು ನಮಿಸಿದರೂ ಅದೆಲ್ಲವೂ ಕೊನೆಗೆ *(ಕೇ— ಜಲೇ, ನೀರಿನಲ್ಲಿ; ಶವ— ಶವದಂತೆ ಮಲಗಿರುವವನು, ಕ್ಷೀರಾಬ್ಧಿಶಯನ ನಾರಾಯಣ)* ಆ ಪರಮಪುರುಷನಾದ ಶ್ರೀಹರಿಯನ್ನೇ ತಲುಪುವುದು._
ಅಂತೆಯೇ ಗೀತಾಚಾರ್ಯನು ಹೇಳುತ್ತಾನೆ—
*_ನ ಬುದ್ಧಿಭೇದಂ ಜನಯೇತ್, ಅಜ್ಞಾನಾಂ ಕರ್ಮಸಂಗಿನಾಮ್ |_*
*_ಜೋಷಯೇತ್ ಸರ್ವಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ ||_*
_ಆತ್ಮಜ್ಞಾನಿಯಾದವನು ಅಜ್ಞಾನಿಗಳ / ಆತ್ಮಜ್ಞಾನವಾಗದವರ ಬುದ್ಧಿಯನ್ನು ಕೆಡಿಸಿ, ಕರ್ಮವು ಬಂಧನಕಾರಕವೆಂದು ಕರ್ಮನಿರತರಿಗೆ ಬೋಧಿಸಿ ಅವರ ತಲೆಕೆಡಿಸಬಾರದು. ಯಾಕೆಂದರೆ, ವಿವಿಧ ರೀತಿಯ ಕರ್ಮಗಳು ಸೃಷ್ಟಿಯ ಸುಗಮತೆಗೆ ಅವಶ್ಯ. ಹಾಗಾಗಿ, ವಿದ್ವಾಂಸನಾದವನು, ಯಾರು ಯಾವುದಕ್ಕೆ ಅರ್ಹರೋ, ಆಯಾಯ ಕರ್ಮಾದಿಗಳನ್ನು ಅವರವರೇ ಉತ್ತಮವಾಗಿ ನಿರ್ವಹಿಸಿ, ಅದರಲ್ಲಿ ಪರಿಣತಿಯನ್ನು ಹೊಂದಲು ಪ್ರೇರಿಸಬೇಕೇ ಹೊರತು, ಅದು ಸರಿಯಿಲ್ಲ, ನನ್ನದೇ ಸರಿ, ಕುಳಿತು ವೇದಾಂತ ಓದು, ಪ್ರವಚನ ಮಾಡು, ಕೇಳು, ಧ್ಯಾನಮಾಡು ಎಂದು ಅವರಿಂದಾಗದುದನ್ನು ಹೇಳಿದರೆ, ಕಡೆಗೆ ಅಂತಹವರಿಗೆ ಅತ್ತ ಕರ್ಮಯೋಗವೂ ಇಲ್ಲದೆ, ಇತ್ತ ಜ್ಞಾನ-ಭಕ್ತಿಯೋಗಗಳೂ ಇಲ್ಲದೆ ನಿರ್ಗತಿಕರೂ, ದಾರಿತಪ್ಪಿದವರೂ, ಗೊಂದಲಗೊಂಡವರೂ ಆಗಿ, ಅವರಿಗೆ ಲಾಭಕ್ಕಿಂತ ಹಾನಿಯೇ ಸಂಭವಿಸುವುದು._
ಹಾಗಾಗಿ, *ಅವರವರ ದಾರಿ ಅವರವರಿಗೆ. ಅವರವರ ದಾರಿಯಲ್ಲೇ ಗುರಿಮುಟ್ಟಲು ಹೇಗೆ ಪರಿಶ್ರಮಪಟ್ಟರೆ, ಬೇಗ ಗುರಿತಲುಪಬಹುದೆಂಬ *ಯೋಗಃ ಕರ್ಮಸು ಕೌಶಲಮ್* ಎಂಬ ಮಾತಿನಂತೆ, ಕರ್ಮದಲ್ಲಿನ ಕುಶಲತೆ, ಫಲಾಪೇಕ್ಷೆಯಿಲ್ಲದಿರುವಿಕೆ, ಪ್ರಾಮಾಣಿಕತೆ, ಅನಾಸಕ್ತಿಯೋಗ ಮುಂತಾದವನ್ನು ಬೋಧಿಸಬೇಕು ಎಂಬುದೀ ಕಗ್ಗದ ಒಟ್ಟು ತಾತ್ಪರ್ಯ.*
*ಹರೇ ರಾಮ*
*ಆವ ಬಚ್ಚಲ ನೀರದಾವ ಹೊಳೆಯನೊ ಸೇರಿ |*
*ಆವ ನದಿಯೊಳು ಪರಿದು ಕಡಲ ಪಾಲಕ್ಕುಂ ||*
*ಜೀವಿಗಳ ಗತಿಯಂತು ದಾರಿ ಗೊತ್ತಿರುವರಾರ್ |*
*ಆವುದೆನಲದೆ ದಾರಿ - ಮರುಳ ಮುನಿಯ || (೧೯೪)*
_(ನೀರ್+ಅದು+ಆವ)(ಪಾಲ್+ಅಕ್ಕುಂ)(ಗತಿ+ಅಂತು)(ಗೊತ್ತು+ಇರುವರು+ಆರ್)(ಆವುದು+ಎನಲ್+ಅದೆ)_
*ಆವ ನದಿಯೊಳು ಪರಿದು ಕಡಲ ಪಾಲಕ್ಕುಂ ||*
*ಜೀವಿಗಳ ಗತಿಯಂತು ದಾರಿ ಗೊತ್ತಿರುವರಾರ್ |*
*ಆವುದೆನಲದೆ ದಾರಿ - ಮರುಳ ಮುನಿಯ || (೧೯೪)*
_(ನೀರ್+ಅದು+ಆವ)(ಪಾಲ್+ಅಕ್ಕುಂ)(ಗತಿ+ಅಂತು)(ಗೊತ್ತು+ಇರುವರು+ಆರ್)(ಆವುದು+ಎನಲ್+ಅದೆ)_
*_ಅನುವಾದ—_*
_ಯಾವ ಸ್ನಾನದ ಕೊಠಡಿಯ ಮಲಿನಜಲವು ಯಾವ ಹೊಳೆಯನ್ನು ಸೇರಿ, ಮುಂದೆ ಯಾವ ನದಿಯಲ್ಲಿ ಹರಿದು, ಕೊನೆಗೆ ಸಾಗರವನ್ನು ಸೇರುತ್ತದೆ / ಸಮುದ್ರಪಾಲಾಗುವುದು— ಎಂಬುದನ್ನು ಯಾರಾದರೂ ಶೋಧಿಸುತ್ತಾರೆಯೇ? ಜೀವಿಗಳ ಮುಂದಣ ಗತಿಯು / ಭವಿತವ್ಯವೂ ಹಾಗೆಯೇ..ಅದು ಯಾವ ದಾರಿಯಲ್ಲಿ ಸಾಗಬಹುದೆಂದರಿತವರಾರು? ಒಂದೊಂದು ಜೀವಿಯ ಭವಿಷ್ಯತ್ತೂ ಸಹ ವಿಧಿಯ ವಿಲಾಸದಂತೆ ವಿಧಿಯು ಯಾವ ದಾರಿಯಲ್ಲಿ ಕಳುಹಿಸುವನೋ ಅದೇ ದಾರಿಯಲ್ಲಿ ಜೀವಿಯು ಸಾಗಲೇಬೇಕಾಗುತ್ತದೆ. ಇದು ದೈವಸಂಕಲ್ಪ, ಪ್ರಕೃತಿನಿಯಮ ಹಾಗೂ ಗ್ರಹ-ಚಾರಗಳ ಮೂಲಕ ಕಾಲಕಾಲಕ್ಕೆ ಫಲಿಸುವ ಆಯಾ ಜೀವಿಯ ಪೂರ್ವಾರ್ಜಿತ ಕರ್ಮಫಲ / ವಿಧಿ. ಇದು ಡಿವಿಜಿಯವರ ಈ ಕಗ್ಗದ ನೇರ, ಸಂಕ್ಷಿಪ್ತ ಅನುವಾದ._
*_ವಿವರಣೆ—_*
*ನದೀಮೂಲ ಹುಡುಕಬಾರದು, ಹೋಟೇಲ್ನ ಅಡಿಗೆಕೋಣೆ ನೋಡಬಾರದು*, ಅಲ್ಲವೆ? ಅವೆರಡೂ ಎಷ್ಟೇ ಕೊಳಕಾಗಿದ್ದರೂ, ಪ್ರಾಕೃತಿಕ / ಕೃತಕ ಸಂಸ್ಕರಣದಿಂದ ಕ್ರಮವಾಗಿ ಪವಿತ್ರ / ಸುವಾಸನಾಯುಕ್ತ, ಸ್ವಾದಿಷ್ಟ ಎನಿಸವೆ? *ಹರಿಯುವ ನೀರು ಸದಾ ಸಹಜ ಪರಿಶುದ್ಧ, ಕಟ್ಟಿಡದೆ ದಾನಾದಿಗಳಿಂದ ಪವಿತ್ರಿತವಾದ ಧನ-ಕನಕಾದಿಗಳೂ, “ಲೌಕಿಕವಾಗಿ ಸರ್ವಶೌಚಗಳಲ್ಲಿ ಶ್ರೇಷ್ಠವೆನಿಸಿದ್ದು ಅರ್ಥಶೌಚ (ಚಾಣಕ್ಯ— “ಅರ್ಥಶೌಚಂ ಪರಂ ಸ್ಮೃತಮ್”)” ಎಂಬಂತೆ ಶ್ರೇಷ್ಠವಾದದ್ದು.*
ಹೇಗೆ ಯಾವ ಬಚ್ಚಲುಮನೆಯ ತ್ಯಾಜ್ಯಜಲವು ಯಾವ ದಾರಿಯಲ್ಲಿ ಸಾಗಿ, ಯಾವ ಹಳ್ಳ, ನದಿಗಳ ಮೂಲಕ ಕಡಲನ್ನು ಸೇರುವುದೆಂದು ತಿಳಿದವರು ಇಲ್ಲವೋ ಅಥವಾ ಅದನ್ನು ಹುಡುಕುವವರಿಲ್ಲವೋ, ಹಾಗೆಯೇ ಮನುಷ್ಯನ ಭವಿಷ್ಯ ಎತ್ತ ಸಾಗುವುದೆಂದು ಹೇಳಬಲ್ಲವರಿಲ್ಲ. ಸಾಗಿದ್ದೇ ದಾರಿ, ಸೇರಿದ್ದೇ ಗುರಿ. ಇದರ ಗತಿಯೂ ಬಚ್ಚಲ ನೀರಿನಂತೆಯೇ ಆಗಿರುವುದು.
*ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ* ಎಂದು ಡಿವಿಜಿಯವರಂದಂತೆ ಭವಿಷ್ಯ ಹೇಳುವ ಜ್ಯೋತಿಷಿಗಳು ಅದನ್ನು ಬದಲಿಸಬಲ್ಲರೆ? ನಮ್ಮ ಪೂರ್ವಕರ್ಮಫಲಗಳೇ ವಿಧಿಯ ರೂಪದಲ್ಲಿ ವರ್ತಮಾನದಲ್ಲೂ, ಭವಿಷ್ಯದಲ್ಲೂ ಬರುತ್ತಿರುವಾಗ, ಅವನ್ನು ತಡೆಯಲು ಸಾಧ್ಯವೆ? ಹೌದು..ಒಂದು ಮಟ್ಟಿನವರೆಗೆ ಅದನ್ನು ಜ್ಯೋತಿರ್ವಿಜ್ಞಾನದ ಬಳಕೆಯಿಂದ ಮೊದಲೇ ತಿಳಿದು, ತಕ್ಕ ಶಾಂತಿಕರ್ಮ-ಪ್ರಾಯಶ್ಚಿತ್ತಾದಿ ಕರ್ಮಗಳನ್ನು ಸಕಾಲದಲ್ಲಿ ಮಾಡಿಸುವುದರಿಂದ ಬರಬಹುದಾದ ದೊಡ್ಡ ವಿಪತ್ತುಗಳು ಸಣ್ಣದಾಗಬಲ್ಲವು. ಪುರುಷಪ್ರಯತ್ನಗಳಲ್ಲೊಂದಾದ ಭಗವನ್ನಾಮ ಸ್ಮರಣೆಯೂ ನಮ್ಮ ಕರ್ಮಗಳನ್ನು ಸವೆಸಬಲ್ಲದು, ಶುಭಫಲಗಳನ್ನೀಯಬಲ್ಲದು. ಯಾಕೆಂದರೆ, ಅದಕ್ಕಿಂತ ದೊಡ್ಡ ಉದ್ಧಾರದ ದಾರಿ ಬೇರಿಲ್ಲ.
ಅಂತೂ, ಸಾಮಾನ್ಯವಾಗಿ ಲೋಕರೂಢಿಯಲ್ಲಿ, ಜನರು ಅವರವರ ಅಭಿರುಚಿಯ ದಾರಿಯಲ್ಲಿ ಮುಂದೆ ಸಾಗುತ್ತಾರೆ. ಆದರೆ, ಅದು ಯಾವಾಗಲೂ ಹಾಗೇ ನಡೆಯಬೇಕೆಂದೇನೂ ಇಲ್ಲ. *ದೇವರ ಆಟ ಬಲ್ಲವರಾರು? ...ಹೇಳದೆ ಸುಖವ ತರುವ ಹೇಳದೆ ದುಃಖವ ತರುವ* ಅಲ್ಲವೆ? ನಮ್ಮಿಷ್ಟ ಸಿಗದಿದ್ದರೆ, ಅನ್-ಇಷ್ಟ ಪ್ರಾಪ್ತಿಯಾದರೆ ಅದು ದೈವಲೀಲೆ, ಕರ್ಮಫಲವೆಂದು ತಿಳಿಯಬೇಕು.
*_ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ |_*
_(ಭಗವದ್ಗೀತೆ)_
*ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ, ಸಕಲ ದ್ವಂದ್ವಗಳನ್ನೂ ಮೀರುವುದೇ ಸ್ಥಿತಪ್ರಜ್ಞತೆ.* ಹುಟ್ಟಿದ ಪ್ರತಿಯೊಬ್ಬನಿಗೂ ಸುಖ-ದುಃಖಗಳೆರಡೂ ಬರುವುದು ಖಂಡಿತ. ಆದರೆ, ಅವುಗಳನ್ನು ಸಮನಾಗಿ ಸ್ವೀಕರಿಸುವ ಪಕ್ವತೆ ಬರಬೇಕಾದ್ದು ಮುಖ್ಯ..ಇದೇ ನಿಜವಾದ ಮೋಕ್ಷವಲ್ಲದೆ, ಬೇರೇನಲ್ಲ..
*_ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ |_*
*_ಶುಭಾಶುಭಪರಿತ್ಯಾಗೀ ಭಕ್ತಿಮಾನ್ ಯಃ ಸ ಮೇ ಪ್ರಿಯಃ ||_*
_(ಭಗವದ್ಗೀತೆ)_
_ಯಾವ ನನ್ನ ಭಕ್ತನು ಎಂಥದ್ದೇ ಸಂದರ್ಭ ಬಂದರೂ, ಯಾವುದೇ ಪರಿಸ್ಥಿತಿಯಲ್ಲೂ, ಹರ್ಷ-ದ್ವೇಷ-ಶೋಕ-ಅಪೇಕ್ಷೆ-ಶುಭ-ಅಶುಭಗಳೆಂಬ ದ್ವಂದ್ವಗಳನ್ನು ದಾಟಿರುವನೋ, ಅವುಗಳನ್ನು ಒಂದೇ ಸಮನಾಗಿ ಭಾವಿಸಿ ಅವುಗಳಿಂದ ವಿಚಲಿತಮನಸ್ಸನ್ನು ಹೊಂದದ ಸ್ಥಿರಬುದ್ಧಿಯುಳ್ಳ ಅಂಥವನು ನನಗತಿಪ್ರಿಯನಾಗಿರುವನು ಎಂದಿರುವನು ಶ್ರೀಕೃಷ್ಣ ಪರಮಾತ್ಮನು._
*_ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ |_*
*_ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ ||_*
_(ಗೀತೋಪದೇಶ)_
_ಮಿತ್ರ-ಶತ್ರುಗಳನ್ನು ಸಮನಾಗಿ ಕಂಡು, ಮಾನ-ಅಪಮಾನಗಳೆರಡರಲ್ಲೂ ಭೇದವೆಣಿಸದೆ, ಶೀತ-ಉಷ್ಣಗಳೆಂಬ ದ್ವಂದ್ವಾತೀತನಾಗಿ, ಸುಖ-ದುಃಖಗಳಲ್ಲಿ ಸಮಚಿತ್ತನಾಗಿ, ಸಂಸಾರಿಯಾಗಿದ್ದರೂ ಎಲ್ಲ ರೀತಿಯ ಸಂಗ / ಬಂಧನಗಳಿಂದ ಮಾನಸಿಕವಾಗಿ ಮುಕ್ತನಾಗಿ (ನೀರಲ್ಲೇ ಇರುವ ಕಮಲದೆಲೆಗೆ ನೀರು ಹೇಗೋ ಹಾಗೆ),_
*_ತುಲ್ಯನಿಂದಾ-ಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನ ಚಿತ್ |_*
*_ಅನಿಕೇತಃ ಸ್ಥಿರಮತಿಃ, ಭಕ್ತಿಮಾನ್ ಮೇ ಪ್ರಿಯೋ ನರಃ ||_*
_(ಕೃಷ್ಣನ ನಲ್ನುಡಿ)_
_ಹೊಗಳಿಕೆ(ಸ್ತುತಿ)-ತೆಗಳಿಕೆ(ನಿಂದಾ)ಗಳಲ್ಲಿ ಸಮಭಾವವುಳ್ಳ (ತುಲ್ಯ), ಪ್ರಶಂಸೆಗೆ ಉಬ್ಬದೆ, ಹೀಗಳೆತಕ್ಕೆ ಕುಗ್ಗದೆ ಇರುವ, ಉಪಯೋಗವಿಲ್ಲದ ಕಾಡುಹರಟೆಯನ್ನು ಮಾಡದೆ, ವ್ಯರ್ಥ ಮಾತುಕತೆಗಳಲ್ಲಿ ತೊಡಗಿ ಕಾಲಹರಣಮಾಡದೆ ಇರುವ, ತನ್ನ ಪಾಲಿಗೆ ಬಂದದ್ದನ್ನು ಪಂಚಾಮೃತವೆಂಬ ಭಾವದಿಂದ ಸಂತೋಷದಿಂದ ಸ್ವೀಕರಿಸಿ ಅಲ್ಪತೃಪ್ತನಾಗಿರುವ, “ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್” ಎಂಬಂತೆ ನಮ್ಮವರು ಪರಕೀಯರೆಂಬ ಸಂಕುಚಿತತೆಯನ್ನು ತೊರೆದು ಉದಾರಬುದ್ಧಿಯಿಂದ ಜಗವೇ (ವಸು / ಸಂಪತ್ತನ್ನು ಧರಿಸಿರುವವಳು ವಸುಧಾ / ಭೂಮಾತೆ) ತನ್ನ ಮನೆ / ನಿಕೇತವೆಂಬ ಭಾವವುಳ್ಳವನಾಗಿ, ತನ್ನ ವ್ಯಾವಹಾರಿಕ ಜಗತ್ತಿನ ಮನೆಯ ಮಿತಿಯಿಂದ ಹೊರಬಂದು, ಕವಿಋಷಿ ಕುವೆಂಪುರವರ ಮಾತಿನಂತೆ “ಓ ನನ್ನ ಚೇತನ! ಆಗು ನೀ ಅನಿಕೇತನ” ಎಂಬಂತೆ ವಿಶಾಲಹೃದಯಿಯಾಗಿರುವ ಹಾಗೂ ದಮ (ಇಂದ್ರಿಯನಿಗ್ರಹ)-ಶಮ (ಮನಃ ಪ್ರಶಮನ)ಗಳನ್ನು ಮೈಗೂಡಿಸಿಕೊಂಡ ದೃಢವಾದ ಬುದ್ಧಿಯುಳ್ಳವನಾದ (ಸ್ಥಿರಮತಿಃ)— ಇವೆಲ್ಲವುಗಳೊಂದಿಗೆ ಸದಾ ಭಗವದ್ಭಕ್ತಿಭಾವವು ನಿರಾಡಂಬರವಾಗಿ ಜಾಗೃತಗೊಂಡಿರುವವನಾದ ನಿಜಭಕ್ತನು ನನಗೆ ಪ್ರಿಯತಮನೂ, ಅತ್ಯಂತ ಅಚ್ಚುಮೆಚ್ಚಿನವನೂ ಆಗಿರುವನು. ನಾನು ಯಾವಾಗಲೂ ಅವನ ಜೊತೆಗಿರುವೆನು— ಎಂದಿರುವನು ಮಹಾವಿಷ್ಣುವಿನ ಪೂರ್ಣಾವತಾರಿಯಾದ ಜಗದ್ಗುರುವಾದ, ಸಕಲಯೋಗ-ಯೋಗಿಗಳ ಈಶ್ವರನಾಗಿ ಯೋಗೇಶ್ವರ-ಯೋಗೀಶ್ವರನೆನಿಸಿದ ಭಕ್ತಪ್ರೇಮವಶ್ಯನಾದ ಶ್ರೀಕೃಷ್ಣ._
*ಹರೇ ರಾಮ*
*ಆವಾವ ಜನ್ಮಂಗಳಜ್ಜಮುತ್ತಜ್ಜದಿರೊ*
*ಆವಿರ್ಭವಿಪರಿಂದು ಮಗ ಮೊಮ್ಮೊಗರೆನಿಸಿ ||*
*ಆವಗಂ ಸಾವಿರೂಟೆಯೆ ನೀರ್ಗಳಿಂ ನಮ್ಮ |*
*ಜೀವನದಿ ಬೆಳೆಯುವುದೊ - ಮರುಳ ಮುನಿಯ || (೫೧)*
_(ಜನ್ಮಂಗಳ+ಅಜ್ಜ)(ಆವಿರ್ಭವಿಪರ್+ಇಂದು)(ಸಾವಿರ+ಊಟೆಯೆ)_
*ಆವಿರ್ಭವಿಪರಿಂದು ಮಗ ಮೊಮ್ಮೊಗರೆನಿಸಿ ||*
*ಆವಗಂ ಸಾವಿರೂಟೆಯೆ ನೀರ್ಗಳಿಂ ನಮ್ಮ |*
*ಜೀವನದಿ ಬೆಳೆಯುವುದೊ - ಮರುಳ ಮುನಿಯ || (೫೧)*
_(ಜನ್ಮಂಗಳ+ಅಜ್ಜ)(ಆವಿರ್ಭವಿಪರ್+ಇಂದು)(ಸಾವಿರ+ಊಟೆಯೆ)_
*_ಅನುವಾದ—_*
_ಯಾವ ಯಾವ ಹಿಂದಿನ ಕಾಲದಲ್ಲಿ ಜನಿಸಿದ ಅಜ್ಜ-ಮುತ್ತಜ್ಜಂದಿರಿದ್ದರೋ, ಅವರೇ ಇಂದು-ಮುಂದಣ ಕಾಲದಲ್ಲಿ ಮಗ-ಮೊಮ್ಮಗರಾಗಿ ಹುಟ್ಟಿರುವರು, ಹುಟ್ಟಲಿರುವರು. ಸದಾಕಾಲವೂ ಅತಿಶಯವಾಗಿ (ಆವಗಂ), ನಮ್ಮ ಜೀವವೆಂಬ ನದಿಯು ಹಲವಾರು / ಸಾವಿರಾರು ನೀರಿನ ಕಿರು-ಹಿರಿಯ ಒಸರುಗಳಿಂದ, ಚಿಲುಮೆಗಳಿಂದ, ಹಲವು ಯೋನಿಗಳನಾಂತು ಅನಾದಿಕಾಲದಿಂದಲೂ ಪ್ರತಿಯೊಂದು ಜನ್ಮದಿಂದಲೂ ಮುಂದಿನದಕ್ಕೆ ಬೆಳೆಯುತ್ತಾ, ಕೆಲವೊಮ್ಮೆ ಬೇಸಿಗೆಯ ನದಿಯಂತೆ ಕ್ಷೀಣಿಸುತ್ತಾ, ಮುಂದೆ ಮುಂದೆ ಸಾಗುವುದು._
*_ವಿವರಣೆ—_*
ಹಲವರು ಹೇಳುವುದಿದೆ— *“ನನ್ನ ಅಜ್ಜಿಪುಣ್ಯದಿಂದ ನಾನೀಗ ಹೀಗಿರುವೆ”, “ ನನ್ನ ಅಜ್ಜನ ಪುಣ್ಯದಿಂದ ನಮಗೆ ಇಷ್ಟು ಒಳ್ಳೆಯ ಸ್ಥಿತಿ ಬಂತು”* ಇತ್ಯಾದಿ. ಕರ್ಮಸಿದ್ಧಾಂತದ ಪ್ರಕಾರ, ಪುಣ್ಯ-ಪಾಪಗಳು ಅದನ್ನು ಮಾಡಿದವನನ್ನೇ ಜನ್ಮಜನ್ಮಾಂತರಗಳಲ್ಲೂ ಬೆಂಬತ್ತಿ ಬರುತ್ತವೆಯೇ ಹೊರತು, ಬೇರೆಯವರ ಪುಣ್ಯ-ಪಾಪಗಳು ನಮಗೆ ಬರಲು ಸಾಧ್ಯವಿಲ್ಲ. ಇದಕ್ಕೊಂದು ಸುಭಾಷಿತ ಮನುಸ್ಮೃತಿಯಲ್ಲಿ ಹೀಗಿದೆ—
*_ಯಥಾ ಧೇನುಸಹಸ್ರೇಷು ವತ್ಸೋ ವಿಂದತಿ ಮಾತರಮ್ |_*
*_ಏವಂ ಪೂರ್ವಕೃತಂ ಕರ್ಮ ಕರ್ತಾರಮ್ ಅನುಗಚ್ಛತಿ ||_*
_ಹೇಗೆ ಸಾವಿರಾರು ಗೋವುಗಳ ನಡುವೆ ಕರುವೊಂದು ತನ್ನ ತಾಯಿಯನ್ನೇ ಹೋಗಿ ಸೇರಿಕೊಳ್ಳುವುದೋ ಹಾಗೆಯೇ, ಹಿಂದೆ ಮಾಡಿದ ಕರ್ಮಗಳ ಫಲಗಳು ಕರ್ತೃವನ್ನೇ ಅನುಸರಿಸಿ ಗಮಿಸುವುವು._
ಹಾಗಾದರೆ, ಹಿರಿಯರ ಪುಣ್ಯವೆಂಬುದು ತಪ್ಪೆ? ಅಲ್ಲ. ಹೇಗೆಂದರೆ, ಹಿಂದೆ ಮುತ್ತಜ್ಜನೋ, ಹಿರಿಯಜ್ಜನೋ ಆಗಿದ್ದ ಜೀವಾತ್ಮವೇ ಇಂದೋ, ಮುಂದೆಯೋ ಮಗನಾಗಿಯೋ, ಮೊಮ್ಮಗ / ಮರಿಮಗನಾಗಿಯೋ ಜನಿಸುವುದು / ಶರೀರ ಪಡೆಯುವುದು. ಹಾಗಾಗಿ, ನಮ್ಮ ಪೂರ್ವಜರೆಂದರೆ ಬೇರಾರಲ್ಲ, ನಾವೇ ಆಗಿದ್ದೆವು. ಹಿಂದೆ ಹುಟ್ಟಿದ್ದಾಗ ನಾವೇ ಮಾಡಿದ್ದನ್ನು ಇಂದು ನಾವೇ ಅನುಭವಿಸುವೆವು. ಹಾಗಾಗಿ, ಹಿಂದಿನವರ ಪುಣ್ಯವೆಂದರೆ, ನಮ್ಮ ಪೂರ್ವಜನ್ಮದ ಪುಣ್ಯವೇ ಆಗಿರುವುದು. ಹೀಗಿರುವುದರಿಂದ, ಬೇರೆಯ ಜೀವಾತ್ಮದ ಪುಣ್ಯವನ್ನಲ್ಲ ನಾವನುಭವಿಸುವುದು; ನಮ್ಮದೇ ಪೂರ್ವಜನ್ಮಗಳ ಕರ್ಮಫಲವನ್ನು.
ಹೀಗೆ ಸದಾಕಾಲವೂ ಮುಂದುವರೆದುಕೊಂಡು ಗತಿಶೀಲವಾದದ್ದು ಈ ಕಾಲಚಕ್ರ, ಜೀವನಚಕ್ರ, ಸಂಸಾರಚಕ್ರ / ಹುಟ್ಟು-ಸಾವುಗಳ ವರ್ತುಲ.
*_ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ ಶಯನಮ್ |_*
*_ಇಹ ಸಂಸಾರೇ ಖಲು (/ಬಹು) ದುಸ್ತಾರೇ ಕೃಪಯಾ ಪಾರೇ ಪಾಹಿ ಮುರಾರೇ ||_*
ಎಂದಿರುವರು ಆದಿಶಂಕರಾಚಾರ್ಯ ಭಗವತ್ಪಾದರು.
*_ಮತ್ತೆ ಹುಟ್ಟು ಮತ್ತೆ ಸಾವು ಮತ್ತೆ ತಾಯ ಉದರವು _*
*_ಎತ್ತಲಿಂದ ಎತ್ತಕಡೆಗೊ ಜೀವನವಿದು ತಿಳಿಯೆವು |_*
*_ನಟ್ಟ ನಡುವಿನಲ್ಲಿ ಬಾಳ ಭಾರಿ ಕಡಲ ಮಧ್ಯದಿ_*
*_ಕಟ್ಟಿಕೊಂಡ ಬಂಧನದಿಂ ಬಿಡಿಸೊ ಹರಿಯೆ ಬೇಗದಿ ||_*
(ಡಾ || ದಂಬೆ ಕೃಷ್ಣಮೂರ್ತಿ ಶಾಸ್ತ್ರೀ)
*_ನ ತು ಏವ ಅಹಂ ಜಾತು ನ ಆಸಂ ನ ತ್ವಂ ನ ಇಮೇ ಜನ-ಅಧಿಪಾಃ |_*
*_ನ ಚ ಏವ ನ ಭವಿಷ್ಯಾಮಃ, ಸರ್ವೇ ವಯಮ್ ಅತಃ ಪರಮ್ ||_*
_ಎಂಬ ಶ್ರೀಕೃಷ್ಣನ ಗೀತಾಮೃತವಾಣಿಯಂತೆ, ಹಿಂದೆ ನಾನಿರಲಿಲ್ಲ, ನೀನಿರಲಿಲ್ಲ, ಈ ರಾಜರುಗಳಿರಲಿಲ್ಲ— ಎಂಬುದು ನಿಜವಲ್ಲ. ಅಂತೆಯೇ, ನಾವೆಲ್ಲರೂ ಮುಂದೆ ಇಲ್ಲವೆಂದಾಗುವುದೂ ಇಲ್ಲ._
*_ದೇಹಿನಃ, ಅಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ತಥಾ |_*
*_ತಥಾ ದೇಹಾಂತರಪ್ರಾಪ್ತಿಃ ಧೀರಃ, ತತ್ರ ನ ಮುಹ್ಯತಿ ||_*
_ಆತ್ಮದ (ದೇಹಿನಃ), ಈ ದೇಹದಲ್ಲಿ (ಅಸ್ಮಿನ್ ದೇಹೇ), ಹೇಗೆ (ಯಥಾ), ಬಾಲ್ಯ, ಯೌವನ, ವೃದ್ಧಾಪ್ಯಾದಿ ಸ್ಥಿತಿ-ಪರಿವರ್ತನೆಗಳಾಗುತ್ತವೆಯೋ (ಕೌಮಾರಂ ಯೌವನಂ), ಹಾಗೆಯೇ (ತಥಾ), ಹಳೆದೇಹವು ಅಸಮರ್ಥವಾದಾಗ ಆತ್ಮಕ್ಕೆ ನವದೇಹದ ಪ್ರಾಪ್ತಿಯು ಮರುಜನ್ಮದ ಮೂಲಕ ಆಗುವುದು (ದೇಹಾಂತರಪ್ರಾಪ್ತಿಃ). ಧೀರನಾದ ಜ್ಞಾನಿಯು, ಈ ರಹಸ್ಯವರಿತವನು, ಈ ವಿಷಯದಲ್ಲಿ ದೇಹಾದಿಮೋಹಗಳಿಂದ ಬದ್ಧನಾಗನು, ದುಃಖಿಸನು— ಎಂಬುದು ಸಾಕ್ಷಾತ್ ಶ್ರೀಕೃಷ್ಣನ ಭಗವದಮೃತಧಾರೆಯಾದ ಗೀತೋಪದೇಶದ ಉಕ್ತಿಯೇ ಆಗಿದೆ. ಹಾಗಾಗಿಯೇ ಡಿವಿಜಿಯವರಂದದ್ದು ಹಿರಿಯರೇ ಕಿರಿಯರಾಗಿ ಮರುಹುಟ್ಟು ಪಡೆವರೆಂಬುದಾಗಿ._
ದಾಸರೆಂದಿರುವರು ಪ್ರತಿಯೊಂದು ಜೀವನಿಗೂ ಲೋಕದಲ್ಲಿರುವ ೮೪ ಲಕ್ಷಗಳಷ್ಟು ವಿವಿಧ ಬಗೆಯ ಜನ್ಮಗಳಿವೆಯೆಂದು. ಜೀವಿಯ ಜೀವಿತವನ್ನು ನದಿಯ ಹರಿವಿಗೆ ಡಿವಿಜಿಯವರು ಹೋಲಿಸಿರುವರು. ಜೀವಿಯು ಸೂಕ್ಷ್ಮದಿಂದ ಸ್ಥೂಲಕ್ಕೆ, ನಿರಿಂದ್ರಿಯತ್ವದಿಂದ, ಏಕೇಂದ್ರಿಯತ್ವ, ೨ ಇಂದ್ರಿಯಗಳಿರುವಿಕೆ, ೩ ಇಂದ್ರಿಯದ ಜನ್ಮ, ೪-೫…. ಹೀಗೆ ಕೊನೆಗೆ ಅತೀಂದ್ರಿಯತ್ವದೆಡೆಗೆ ಜನ್ಮ-ಜನ್ಮಗಳಲ್ಲೂ ಕ್ರಮಕ್ರಮವಾಗಿ ವಿಕಾಸ ಹೊಂದುವುದು. ಆದರೆ, ಕೆಲವೊಮ್ಮೆ ವಿಕಾಸದ ಹಾದಿಯಲ್ಲಿ ಎಡವಿ, ಹಿಂದೆ ಹೋಗುವುದೂ ಇದೆ. ಅವುಗಳಲ್ಲಿ ಕೆಲವು ಜೀವರು ಮಾತ್ರ, ಪರಮಾತ್ಮನ ಕೃಪಾವಿಶೇಷದ ಬಲದಿಂದ, ಬೇಗನೆ ಕೆಲವೇ ಜನ್ಮಗಳಲ್ಲಿ, ಅತೀಂದ್ರಿಯತ್ವ / ಇಂದ್ರಿಯಾತೀತತೆ / ತುರೀಯಸ್ಥಿತಿ / ಯೋಗಸಮಾಧಿ / ಜೀವನ್ಮುಕ್ತಿ / ಭಗವತ್-ತಾದಾತ್ಮ್ಯ ಅಥವಾ ಅಭಿನ್ನತೆಯನ್ನು, ತಾವು ಪಡೆದ ವಿಶೇಷವಾದ ಆತ್ಮಜ್ಞಾನ / ಪರಮಾತ್ಮನ ಪ್ರಪತ್ತಿ / ಶರಣಾಗತಿ / ಭಕ್ತಿಗಳಿಂದ / ಸರ್ವಹಿತಭಾವದಿಂದ ಪಡೆಯುವರು.
ಇದು ಹೇಗೆಂದರೆ, ಹಿಂದು-ಹಿಂದಿನ ಜನ್ಮಗಳು ನದಿಯ ಮೂಲವಾದ ಒಸರು / ಒರತೆ, ಚಿಲುಮೆ, ತೊರೆ, ಕಿರುಹಳ್ಳತೋಡುಗಳಾದರೆ, ಮುಂದು-ಮುಂದಣ ಜನ್ಮಗಳು ಸಾಮಾನ್ಯವಾಗಿ ದೊಡ್ಡತೋಡು, ಹೊಳೆ, ನದಿ, ಮಹಾನದಿಗಳಾಗಿ, ಕೊನೆಗೆ ಪರಮಾತ್ಮನೆಂಬ ಮಹಾಸಾಗರವನ್ನು ಸೇರುವುದು ಈ ಜೀವನದಿ. ಹೀಗೆ, ಈ ಜೀವನದಿಯು ಜನ್ಮ-ಜನ್ಮಾಂತರಗಳ ಕರ್ಮಗಳ ಸೇರುವಿಕೆಯಿಂದ ವಿಸ್ತಾರವಾಗಿ ಬೃಹದಾಕಾರ ತಾಳಿ, ಕೊನೆಗೆ ಆ ಕರ್ಮಗಳೆಲ್ಲ ಲಯವಾದಾಗ, ಪಾಪಪುಣ್ಯಾತೀತರಾದಾಗ, ಪರಮಾತ್ಮನೆಂಬ ಮಹಾಸಾಗರದಲ್ಲಿ ವಿಲೀನವಾಗುವುದು. ಅಥವಾ, ಪರಮಾತ್ಮನೆಂಬ ಸಾಗರದ ಅನಂತತೆಯನ್ನು (ಅನ್-ಅಂತ— ಕೊನೆಯಿಲ್ಲದ, ಶಾಶ್ವತ) ಸೇರಿದ ಸಾಂತತೆಯ ಭಾವದ ಜೀವನದಿಯು, ಅದ್ವೈತಮುಕ್ತಿಪಡೆದು ತನ್ನ ಪ್ರತ್ಯೇಕ ಜೀವಾತ್ಮನೆಂಬ ಸಾಂತ (ಸ-ಅಂತ— ಅಂತ ಸಹಿತ, ಅಂತ್ಯವಿರುವ, ನಶ್ವರ) ಅಸ್ತಿತ್ವವನ್ನು ಕಳೆದುಕೊಂಡು, ಪರಮಾತ್ಮನೇ ತಾನಾಗುವುದು. ಆ *ಜೀವ-ದೇವ-ಅದ್ವೈತ ಭಾವ* ದ ಹುಟ್ಟೇ, ಜೀವನದಿಯ ಕೊನೆ; ಅದಕ್ಕೆ ದೇವಸಾಗರತ್ವದ ಪ್ರಾಪ್ತಿ.
_ಹೀಗಿರುವ ಜೀವನದಿಯ ಜೀವಸ್ಥಿತಿಯಿಂದ ದೇವಸ್ಥಿತಿಗೇರುವ ಪ್ರಕ್ರಿಯೆಯ ನಡುವೆ, ಸಾಧ್ಯ-ಸಿದ್ಧ-ಋಷಿ ಮುಂತಾದ ಮುಂದುಮುಂದಿನ ಪುರೋಗಾಮಿ ಜನ್ಮಗಳೆಂಬ ಹಲವಾರು ವಿವಿಧ ಸಾಧನಾಮೆಟ್ಟಿಲುಗಳಿವೆ. ಜೀವನದಿಯು ಬೆಳೆಬೆಳೆದು ಅವನ್ನೆಲ್ಲ ದಾಟಿ, ಕೊನೆಗೆ ಪರಮಾತ್ಮನೆಂಬ ಸಾಗರದೊಂದಿಗೆ ಜೀವವೆಂಬ ತೆರೆ / ಅಲೆ / ತರಂಗವು ಲೀನವಾಗಿ, ಆ ಮೂಲಸಾಗರವೇ ತಾನಾಗುವುದು._
*ಅಲೆಯನ್ನು ಬಿಟ್ಟು ಸಮುದ್ರವಿಲ್ಲ, ಸಮುದ್ರವನ್ನು ಬಿಟ್ಟ ಅಲೆಯಿಲ್ಲ. ಜೀವ ಅಲೆಯಾದರೆ ದೇವ ಸಮುದ್ರ.* ಆದ್ದರಿಂದ, ಅವು ಪರಸ್ಪರ ಬೇರೆ ಬೇರೆ ಆಕಾರದಿಂದ ತೋರಿದರೂ, ಒಂದೇ ಬ್ರಹ್ಮತತ್ತ್ವದ ೨ ರೂಪಗಳು, ಮಣ್ಣು (ಮೂಲ) ಹಾಗೂ ಮಣ್ಣಿನ ಮಡಕೆ (ಜೀವ)ಯಂತೆ. ವಿದ್ಯುತ್ ಶಕ್ತಿಯು ಫ್ಯಾನಿನಲ್ಲಿ ಚಲನಶಕ್ತಿಯಾಗಿ, ಇಸ್ತ್ರಿಪೆಟ್ಟಿಗೆಯಲ್ಲಿ ಶಾಖವಾಗಿ, ಬಲ್ಬಿನಲ್ಲಿ ಬೆಳಕಾಗಿ ಶಕ್ತಿಯ ವಿವಿಧ ರೂಪಾಂತರಗಳಂತೆ ಬ್ರಹ್ಮವು ನಾನಾ ಜೀವಭಾವಾಂತರಗಳನ್ನು ಹೊಂದುವುದು. *(ಏಕಂ ಸತ್, ವಿಪ್ರಾಃ, ಬಹುಧಾ ವದಂತಿ— ಒಂದೇ ಸತ್ತೆಯನ್ನು / ಅಸ್ತಿತ್ವವನ್ನು ಜ್ಞಾನಿಗಳು / ವೇದವಿದರು ಹರಿ, ಹರ, ಬ್ರಹ್ಮಾ, ಇಂದ್ರ, ಅಗ್ನಿ, ಯಮ, ನಿರುತಿ, ವರುಣ, ವಾಯು, ಕುಬೇರ, ಈಶಾನ— ಮುಂತಾಗಿ ಬಹು ವಿಧವಾಗಿ, ನಾನಾ ನಾಮರೂಪಗಳಿಂದ ಸಂಬೋಧಿಸುವರು.)*
ಹೀಗಾಗಿ ಇದು ಕೇವಲ ಜೀವಿಯ ಪ್ರಜ್ಞೆಯ / ಅರಿವಿನ ಒಂದು ಸ್ಥಿತಿ, ಭಾವದ ಪರಿಪಕ್ವತೆ, ಇಂದ್ರಿಯಗಳ ಹಾಗೂ ಚಿತ್ತದ ಲಯ / ತಲ್ಲೀನತೆ (ತತ್ ಲೀನತೆ),ಸಾಂತತೆಯ ಭಾವವು ಅನಂತತೆಗೆ ಏರುವಿಕೆ, ಆತ್ಮದ ಪರಮಾತ್ಮಾನುಸಂಧಾನ. ಇದೇ, ಅಜ್ಜ-ಮುತ್ತಜ್ಜರು ಮಗ-ಮೊಮ್ಮಗರಾಗುವಿಕೆಯ ಸಂಸಾರಚಕ್ರದ ಪುನರಾವೃತ್ತಿಯ ತಿರುಳು. ಒಂದೇ ಸತ್ತೆಯು ಬಹುವಾಗಿ, ನಾನಾ ಜೀವರಾಗಿ, ಮತ್ತೆ ಮತ್ತೆ ಸ್ವಕರ್ಮಗಳ ಆಧಾರದಲ್ಲಿ ಮರುಜನ್ಮ ಪಡೆದು ವಿಕಾಸವಾಗುವುದೇ ಪ್ರಕೃತಿರಹಸ್ಯ / ಪರಮಾತ್ಮನ ನಿಯತಿಯೆಂಬುದನ್ನು ಯಾರು ನಿಜವಾಗಿ ಅರ್ಥೈಸುವನೋ ಆತನು ಬ್ರಹ್ಮವೇ ಆಗುವನು.
*ಯ ಏವಂ ವೇದ | ಸ ವಿಷ್ಣುರೇವ ಭವತಿ ಸ ವಿಷ್ಣುರೇವ ಭವತಿ ||* ಎಂಬ ನಾರಾಯಣ ಅಥರ್ವಶೀರ್ಷ ಉಪನಿಷತ್ತಿನ ಮಂತ್ರದಲ್ಲಿ (“ಮನನಾತ್ ತ್ರಾಯತೇ ಇತಿ ಮಂತ್ರಃ— ಯಾವುದರ ಸತತ ಮನನದಿಂದ, ಅದು ನಮ್ಮನ್ನು ಸಂಸಾರಭಯದಿಂದ ರಕ್ಷಿಸುವುದೋ, ಅಂತಹದ್ದೇ ಮಂತ್ರವೆನಿಸಿದೆ), ಯಾವನು ಈ ರಹಸ್ಯವನ್ನರಿಯುವನೋ, ಅನುಭವಿಸುವನೋ, ಆತನು ಆ ವಿಷ್ಣು / ಮೂಲ ಪರಬ್ರಹ್ಮ / ಪರಶಿವನೇ ತಾನಾಗುವನು ಎಂಬುದನ್ನು, ಇದಕೆ ಸಂಶಯವಿಲ್ಲ ಎಂಬುದನ್ನು ದೃಢೀಕರಿಸಲು ಮತ್ತೆ ಮತ್ತೆ ಒತ್ತಿಹೇಳಲಾಗಿದೆ.
*ಹರೇ ರಾಮ*
*ಆವುದರೊಳಿರ್ಪೊಳಿತ ಬೆಳಸೆ ದೇವತ್ವವೊ ಅ- |*
*ದಾವುದನು ಕುರುಡು ಕೈ ಕೆಡಪೆ ಕೃಪಣತೆಯೋ ||*
*ಆವುದೀ ಸೃಷ್ಟಿವೃಕ್ಷದ ಫುಲ್ಲಸುಮವೊ ಆ |*
*ಜೀವನಕೆ ನಮೊ ಎನ್ನೊ - ಮರುಳ ಮುನಿಯ || (೬೯೮)*
_(ಆವುದರೊಳ್+ಇರ್ಪ+ಒಳಿತ)(ಅದು+ಆವುದನು)(ಆವುದು+ಈ)_
*ದಾವುದನು ಕುರುಡು ಕೈ ಕೆಡಪೆ ಕೃಪಣತೆಯೋ ||*
*ಆವುದೀ ಸೃಷ್ಟಿವೃಕ್ಷದ ಫುಲ್ಲಸುಮವೊ ಆ |*
*ಜೀವನಕೆ ನಮೊ ಎನ್ನೊ - ಮರುಳ ಮುನಿಯ || (೬೯೮)*
_(ಆವುದರೊಳ್+ಇರ್ಪ+ಒಳಿತ)(ಅದು+ಆವುದನು)(ಆವುದು+ಈ)_
*_ಸಾರಾಂಶ— _*
_ಯಾವ ನಮ್ಮ ಜೀವನದಲ್ಲಿ ಇರಬಹುದಾದ ಒಳ್ಳೆಯತನವೆಂಬ ಮುಖವಿದೆಯೋ, ಅದನ್ನು ಹೆಚ್ಚು ಹೆಚ್ಚು ಬೆಳೆಸಿದರೆ, ಕೆಟ್ಟತನವು ಇಲ್ಲವಾಗಿ ಕೊನೆಗೆ ಪಶುತ್ವದಿಂದ ಮಾನವನು ದೇವತ್ವಕ್ಕೇರುವನು. ಯಾವ ದುರ್ಗುಣಗಳಿವೆಯೋ, ಅವುಗಳನ್ನು ಅಜ್ಞಾನವೆಂಬ ಕುರುಡಿನಿಂದ ಮತ್ತಷ್ಟು ಪೋಷಿಸಿದರೆ ಮಾನವನು ಪಶುತ್ವಕ್ಕಿಳಿಯುವನು. ಈ ಸಮಸ್ತ ಸೃಷ್ಟಿಯೆಂಬ ವಿಶಾಲವೃಕ್ಷದಲ್ಲಿ ಯಾವ ಮಾನವ ಸೃಷ್ಟಿಯಿದೆಯೋ, ಅದು ವೃಕ್ಷದ ಶ್ರೇಷ್ಠಭಾಗವೆನಿಸಿದ, ಫಲವಂತಿಕೆಯ ದ್ಯೋತಕವಾದ ಅರಳಿದ ಹೂವಿನಂತೆ ಎಂಬುದು ಜಗತ್ತಿನ ಸೃಷ್ಟಿಕರ್ತ ಬ್ರಹ್ಮನ ಅಭಿಪ್ರಾಯವೂ, ಕಗ್ಗಸೃಷ್ಟಿಕರ್ತ ಡಿವಿಜಿಯವರ ಮತವೂ ಆಗಿರುವುದು. ಹಾಗಾಗಿಯೇ, ಅಂತಹ ವಿಕಸಿತ ಸುಮದಂಥ, ತಾರತಮ್ಯವಿಲ್ಲದೆ ಬಳಿಬಂದ ಎಲ್ಲರಿಗೂ ತನ್ನ ಕಂಪನ್ನು ಬೀರಿ ಆನಂದಕೊಡುವ ಶ್ರೇಷ್ಠವಾದ ಬಾಳಿಗೆ ನಮನಗಳೆಂದಿರುವರು ಡಿವಿಜಿಯೆಂಬ ಸಮಕಾಲೀನ ಮಹಾದಾರ್ಶನಿಕ ಋಷಿವರ್ಯರು._
*_ವಿವರಣೆ— _*
ಸೃಷ್ಟಿಯಲ್ಲಿ ಧರ್ಮಾಧರ್ಮಗಳೂ, ಸುರಾಸುರರೂ, ಹಗಲುರಾತ್ರಿಗಳೂ, ಬೆಳಕುಕತ್ತಲೆಗಳೂ ಒಟ್ಟಿಗೇ ಜನಿಸಿದವು. ಇವೆರಡೂ ಸೃಷ್ಟಿಯೆಂಬ ಒಂದೇ ನಾಣ್ಯದ ೨ ಮುಖಗಳಂತೆ, ಸೃಷ್ಟಿಯೆಂಬ ರಥದ ೨ ಗಾಲಿಗಳಂತೆ. ತ್ರಿಮೂರ್ತಿಗಳ ಸೃಷ್ಟಿಯಾದಾಗ, ಮಧುಕೈಟಭರೂ ಜನಿಸಿದರು. ಹೀಗೆ, ಇದು ಸನಾತನವಾದ ಸೃಷ್ಟಿಯ ನಿಯಮವೇ ಆಗಿರುವುದು. ಇವೆರಡು ದ್ವಂದ್ವಗಳ ನಡುವಿನ ಕಲಹವೇ ಪರಮಾತ್ಮನ ಸೃಷ್ಟಿನಾಟಕದ ಕಥಾವಸ್ತು. ಆದರೆ, ಈ ನಾಟಕದಲ್ಲಿ *ಸತ್ಯಕ್ಕೆ ಜಯವಿದೆ* ಎಂಬಂತೆ, ಧರ್ಮಕ್ಕೇ ಅಂತಿಮ ವಿಜಯ. ಜಗವೇ ರಣರಂಗ. ನಾವೆಲ್ಲ ವಿವಿಧ ಪಾತ್ರಧಾರಿಗಳು. ಆತನೇ ಈ ನಾಟಕದ ನಿರ್ದೇಶಕನೂ, ರಚಯಿತನೂ, ಸೂತ್ರಧಾರನೂ, ಪ್ರಸಾಧನ, ಸ್ಟೇಜ್ ಸೆಟ್ ಅಪ್ , ಸ್ಪಾನ್ಸರ್….ಎಲ್ಲ ಆತನೇ…
ಆದರೆ, ಮನುಷ್ಯನಿಗೆ ಮಾತ್ರ ವಿವೇಚನಾಶಕ್ತಿಯನ್ನು ನೀಡಿರುವ ಭಗವಂತ, ಮಾನವಯೋನಿಯನ್ನು ಕರ್ಮಯೋನಿಯಾಗಿಸಿ, ಇಲ್ಲಿ ಪುಣ್ಯಾಪುಣ್ಯಗಳ ಬಲೆಗಳನ್ನು ಹೆಣೆದಿರುವನು. ಅವುಗಳಲ್ಲಿ ಪುಣ್ಯಕರ್ಮಗಳಿಗೆ ಹೆಚ್ಚು ಒತ್ತುಕೊಟ್ಟರೆ ದೈವತ್ವದ ಸಿದ್ಧಿ, ಪಾಪಕರ್ಮಗಳಿಗೆ ಪ್ರಾಧಾನ್ಯ ಕೊಟ್ಟರೆ ಪಶುತ್ವಕ್ಕೆ ಪತನ. ಆದರೆ ಇವೆರಡೂ ಬಲೆಗಳೇ. ಪುಣ್ಯವು ಸಾತ್ವಿಕಬಂಧನವಾದರೆ, ಪಾಪವು ರಜೋತಮ ಬಂಧನ. ಹೀಗಾಗಿ ಇವೆರಡನ್ನೂ ಮೀರಿ, ನಿಷ್ಕಾಮಕರ್ಮ ಮಾಡುವುದರಿಂದ ನಮಗೆ ಯಾವುದೇ ಕರ್ಮಲೇಪವಾಗದು. ಇದೇ ಮುಕ್ತಿಯು. ಇದೇ ಪರಮಸುಖವು, ಕೊನೆಯಿಲ್ಲದ, ದುಃಖ-ಕಷ್ಟಗಳ ಭಾವವಿರದ ನಿತ್ಯಸತ್ಯ ಸುಖವು. ಏನೇ ಬಂದರೂ ಸಮನಾಗಿ ಸ್ವೀಕರಿಸುವ ಸ್ಥಿತಪ್ರಜ್ಞತೆಯು ಇದೇ ಆಗಿರುವುದು.
*_ಸ್ಥಿತಪ್ರಜ್ಞಸ್ಯ ಕಾ ಭಾಷಾ?_* ಎಂದು ಸ್ಥಿತಪ್ರಜ್ಞನ ಲಕ್ಷಣದ ಬಗ್ಗೆ ಪ್ರಶ್ನಿಸಿದ ಅರ್ಜುನನಿಗೆ ಶ್ರೀಕೃಷ್ಣನಿಂತು ಉತ್ತರಿಸುತ್ತಾನೆ—
*_ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ |_*
*_ಆತ್ಮನಿ ಏವ ಆತ್ಮನಾ ತುಷ್ಟಃ ಸ್ಥಿತಪ್ರಜ್ಞಃ ತದಾ ಉಚ್ಯತೇ ||_*
_ಪುಣ್ಯಪಾಪಜನಕಗಳಾದ ಮನದ ಸಕಲ ಬಯಕೆಗಳನ್ನೂ ಯಾವಾಗ ಸಂಪೂರ್ಣವಾಗಿ ತೊರೆಯುವನೋ, ಹಾಗೆಯೇ ತನ್ನೊಳಗೇ ತಾನು ತನ್ನಿಂದಲೇ ಸಂತೋಷ, ನೆಮ್ಮದಿ, ತೃಪ್ತಿಗಳನ್ನು ಹೊಂದುವನೋ, ತನ್ನ ನೆಮ್ಮದಿಯು ಪರರಿಂದ ಅಲ್ಲವೆಂದರಿಯುವನೋ, ಆವಾಗ ಆತನು *ಸ್ಥಿತಪ್ರಜ್ಞ* ನೆನಿಸುವನು. ಯಾವಾತನ ಪ್ರಜ್ಞೆಯು ಸದಾ, ಯಾವುದೇ ಪರಿಸ್ಥಿತಿಯಲ್ಲೂ ಆತ್ಮಭಾವದಲ್ಲೇ ಸ್ಥಿತವಾಗಿರುವುದೋ ಆತನೇ ಸ್ಥಿತಪ್ರಜ್ಞನು. ಆತನೇ ಫುಲ್ಲಸುಮನು. ಅಂತಹ ಮಹಾತ್ಮನ ಜೀವನಕ್ಕೆ ಶತಶತ ನಮನಗಳು. _
*ಹರೇ ರಾಮ*
*ಆವುದಾನುಂ ನಿನ್ನ ಬಾಳಬಲಿಗೊಳಲಿಹುದೆ |*
*ದೈವವೋ ಧರ್ಮವೋ ಸಖ್ಯವೋ ಸುಖವೋ ||*
*ಜೀವವೆಲ್ಲವ ತನ್ನೊಳಕೆ ಕೊಳುವ ಲಕ್ಷ್ಯವೊಂ - |*
*ದಾವರಿಸೆ ನೀಂ ಧನ್ಯ - ಮರುಳ ಮುನಿಯ || (೬೮೧)*
_(ಬಾಳಬಲಿಗೊಳಲ್+ಇಹುದೆ)(ಜೀವವು+ಎಲ್ಲವ)(ಲಕ್ಷ್ಯ+ಒಂದು+ಆವರಿಸೆ)_
*ದೈವವೋ ಧರ್ಮವೋ ಸಖ್ಯವೋ ಸುಖವೋ ||*
*ಜೀವವೆಲ್ಲವ ತನ್ನೊಳಕೆ ಕೊಳುವ ಲಕ್ಷ್ಯವೊಂ - |*
*ದಾವರಿಸೆ ನೀಂ ಧನ್ಯ - ಮರುಳ ಮುನಿಯ || (೬೮೧)*
_(ಬಾಳಬಲಿಗೊಳಲ್+ಇಹುದೆ)(ಜೀವವು+ಎಲ್ಲವ)(ಲಕ್ಷ್ಯ+ಒಂದು+ಆವರಿಸೆ)_
*_ತಾತ್ಪರ್ಯ—_*
_ಮನುಷ್ಯನ ಬದುಕನ್ನು ಬಲಿಷ್ಠವಾಗಿಸುವಂಥದ್ದು ಯಾವುದಿರುವುದು? ದೇವರೆ? ಧರ್ಮಾಚರಣೆಯೆ? ಸನ್ಮಿತ್ರತ್ವವೆ? ಸತ್ಸಂಗವೆ? ಸುಖ / ಆನಂದವೆ? ಸೃಷ್ಟಿಯ ಸಮಸ್ತವನ್ನೂ ತನ್ನದೆಂಬ ಭಾವದಿಂದ, ‘ತನ್ನಂತೆ ಪರರ ಬಗೆದಡೆ’, ಜಗತ್ತೆಲ್ಲ ತನ್ನದೇ ಪರಿವಾರವೆಂಬ ಏಕಭಾವದಿಂದ ಕಂಡರೆ, ಸಮಸ್ತವನ್ನೂ ತನ್ನವರೆಂದು ಕಂಡಾಗ, ಅಂತಹ ದೃಷ್ಟಿಯೇ ನಮ್ಮ ಗುರಿ / ಲಕ್ಷ್ಯವಾದಾಗ, ವಿಶ್ವಪ್ರೇಮದಿಂದ ವಿಶ್ವಮಾನವರಾಗಬಲ್ಲೆವು. ಬದುಕಿನಲ್ಲಿ ಅದೇ ನಿಜವಾದ ಧನ್ಯತೆ, ಸಾರ್ಥಕತೆ._
*_ವಿವರಣೆ—_*
ಮಾನವನ ಜೀವನವು ಸುಖಮಯವಾಗಬೇಕಾದರೆ, ಆರೋಗ್ಯ-ನೆಮ್ಮದಿಗಳಿಂದ ಕೂಡಿರಬೇಕಾದರೆ, ಉದ್ಧಾರದ ಹಾದಿಯಲ್ಲಿ ಸಾಗಬೇಕಾದರೆ, ಮನುಷ್ಯನಾದವನಿಗೆ ಎಲ್ಲಕ್ಕೂ ಕಾರಣವಾದ ಒಂದು ಮೂಲಶಕ್ತಿಯ ಮೇಲೆ ಶ್ರದ್ಧೆ-ವಿಶ್ವಾಸಗಳಿರಬೇಕು. ಕನಿಷ್ಠ ಎರಡು ಹೊತ್ತಿನ ಪ್ರಾರ್ಥನೆ ದಿನನಿತ್ಯದ ಪರಿಪಾಠವಾಗಬೇಕು. ಇದು ನಮ್ಮ ಮನಸ್ಸಿಗೆ ದೃಢತೆಯನ್ನುಂಟುಮಾಡುವುದು, ಆತ್ಮವಿಶ್ವಾಸ ಹೆಚ್ಚಿಸುವುದು, ಧನಾತ್ಮಕತೆಯನ್ನುಂಟುಮಾಡುವುದು, ಇಷ್ಟಸಿದ್ಧಿಯನ್ನು ತರುವುದು, ಅನಿಷ್ಟಗಳ ನಿವೃತ್ತಿಯುಂಟುಮಾಡುವುದು.
ಇದೇ ರೀತಿ ವೇದೋಕ್ತ ಧರ್ಮಕರ್ಮಾಚರಣೆಗಳನ್ನು ವಿಧಿವತ್ತಾಗಿ ಮಾಡಿದರೆ, ಸಕಾಲದ ಸುಮುಹೂರ್ತಗಳಲ್ಲಿ ಸಂಸ್ಕಾರಾದಿಗಳನ್ನೂ, ಯಜ್ಞ-ಯಾಗಗಳನ್ನೂ, ವ್ರತ-ಪೂಜಾ-ಉಪಾಸನಾ-ಉಪವಾಸಾದಿಗಳನ್ನೂ ಅನುಷ್ಠಾನಿಸಿದರೆ, ಪರೋಪಕಾರ-ದಾನಾದಿ ಸತ್ಕಾರ್ಯಗಳನ್ನಾಚರಿಸಿದರೆ ತತ್ಫಲಸ್ವರೂಪವಾಗಿ ನೆಮ್ಮದಿ, ಶಾಂತಿ, ಅಭಿವೃದ್ಧಿಗಳು ಇಹ-ಪರಗಳಲ್ಲೂ ಲಭಿಸುವುವು.
ಇನ್ನು ಸನ್ಮಿತ್ರರ, ಸುಹೃದಯಿಗಳ, ಸಜ್ಜನರ, ಸಾಧು-ಸಂತ-ಮಹಾತ್ಮರ ಸಖ್ಯದಿಂದ *ತೀರ್ಥಕ್ಷೇತ್ರಗಳೇ ಪಾವನವಾಗುತ್ತವೆ.* ನಮ್ಮ ದುರ್ಗುಣಗಳು ನಾಶವಾಗಿ, ನಮ್ಮ ಉದ್ಧಾರವಾಗುತ್ತದೆ. ಸದಭಿರುಚಿಯಿಂದಾಗಿ, ನಮ್ಮ ಧಾರ್ಮಿಕ, ಆಧ್ಯಾತ್ಮಿಕ ಜ್ಞಾನವು ವರ್ಧಿಸಿ, ದೈವಿಕ ಅನುಭವವೂ ಉಂಟಾಗುವುದು. ಅಂಥವರು ಬೇಗನೆ ನಮ್ಮ ಆತ್ಮೋದ್ಧಾರವಾಗಲು ಬಹುಸಹಕಾರಿಗಳಾಗಿ, ದಾರಿದೀಪಕರಾಗಿ, ಗುರುಸ್ಥಾನದಲ್ಲಿದ್ದು, ನಮ್ಮ ಅಂಧಕಾರವನ್ನು ತೊಲಗಿಸುವರು.
ಇನ್ನು, ಲೌಕಿಕ / ಭೌತಿಕ ಸುಖಸಾಧನಗಳಿಂದ ನಮ್ಮ ನೆಮ್ಮದಿಯು ಶಾಶ್ವತವಾಗಿ ವರ್ಧಿಸದು. ಆದರೆ, ಪರಮಾತ್ಮಾನುಭವದ ಸುಖವು ಚಿರಂತನವೂ, ನಿತ್ಯವೂ ಆದುದು. ಅದಕ್ಕಿಂತ ಮಿಗಿಲಾದ ಸುಖ ಬೇರಿಲ್ಲ. ಅದರ ರುಚಿ ಒಮ್ಮೆ ಸಿಕ್ಕವನಿಗೆ ಉಳಿದವೆಲ್ಲ ಸಪ್ಪೆಯೆನಿಸುವುದು.
ಆದರೂ, ಈ ದೇವರು, ಧರ್ಮ, ಮಿತ್ರ, ಸುಖ— ಇವುಗಳೆಲ್ಲಕ್ಕಿಂತ ಒಂದು ಹೆಜ್ಜೆ ಮುಂದಿರುವಂಥದ್ದು ವಿಶ್ವಮಾನವತ್ವ, ವಿಶ್ವಪ್ರೇಮ. ಇದು ಇವೆಲ್ಲವನ್ನೂ ಒಳಗೊಳ್ಳುವಂಥದ್ದು. ಯಾಕೆಂದರೆ, ಅವ್ಯಕ್ತನಾದ ಭಗವಂತನೇ ವಿಶ್ವದ ರೂಪದಲ್ಲಿ ವ್ಯಕ್ತನಾಗಿರುವನು. ಹಾಗಿರುವಾಗ, ಈ ಜಗತ್ತನ್ನೇ ನಾವು ಬಹು ಆತ್ಮೀಯತೆಯಿಂದ ಕಂಡರೆ, ಈಗಿನ ವೈಜ್ಞಾನಿಕ ತಂತ್ರಜ್ಞಾನಾದಿಗಳಿಂದ ವಿಶ್ವವು ನಮ್ಮ ಬಳಿ ಬಂದಂತಲ್ಲದೇ, ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ನಮ್ಮ ವಿಶ್ವಪ್ರೇಮಭಾವದ ಲಹರಿಗಳಿಗೆ ಸಮಸ್ತ ವಿಶ್ವವೇ ಪ್ರತಿಸ್ಪಂದಿಸುವುದು. ಇದರಿಂದ ನಾವು ಅಲ್ಪತ್ವದಿಂದ ಭೌಮತ್ವಕ್ಕೆ, ಅಣುತ್ವದಿಂದ ಬೃಹತ್ತ್ವಕ್ಕೆ, ಲಘುತ್ವದಿಂದ ಬ್ರಹ್ಮತ್ವಕ್ಕೆ ಏರುವೆವು. ನಾವೇ ಪರಬ್ರಹ್ಮಾನುಭವವನ್ನು ಪಡೆಯುವೆವು. ಹಾಗಾಗಿ,
*ಏನಾದರೂ ಆಗು, ಮೊದಲು ಮಾನವನಾಗು*
*ಮಾನವತ್ವದಿ ಬೆಳೆದು ವಿಶ್ವಮಾನವನಾಗು |*
*ನೆಲ ಭಾಷೆ ಗಡಿ ರಾಜ್ಯ ರಾಷ್ಟ್ರಗಡಿ ಮೀರಿ*
*ಜಾತಿ-ಧರ್ಮವ ಮೀರಿ ವಿಶ್ವಹಿತ ಸಾರಿ ||*
*_ವಸುಧೈವ ಕುಟುಂಬಕಮ್_* ಎಂಬ ಮಹಾತ್ಮರ ಭಾವವನ್ನು ಸಾಧಿಸುವುದೇ ಈ ಕಗ್ಗದ ಸಾರ.
*_ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ |_*
*_ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ||_*
ಎಂಬ ಸೂಕ್ತಿಯಂತೆ,
*_ಇವ ನಮ್ಮವನಿವ ಪರನಿಹನೆನುತಿಹ ಪರಿಗಣನೆ |_*
*_ಬರಿ ಸಂಕುಚಿತವು ಎಲ್ಲೆಡೆ ಅಲ್ಪರ ಕಿರುಬುದ್ಧಿ ||_*
*_ಜಗವೆಲ್ಲವು ತನ್ನಯ ನಿಜಪರಿವಾರವು ಎನುತ |_*
*_ಪರಿಗಣಿಪರು ನಿಜವೇತ್ತರು ಮಹದಾತ್ಮರು ಕೆಲರು ||_*
ಹಾಗಾಗಿ, ವಿಶ್ವಮಾನವತ್ವವೇ ಜೀವಿಯ ಪರಮೋಚ್ಚ ಹಾಗೂ ಅಂತಿಮ ಗುರಿಯಾಗಬೇಕು. ಇದರಿಂದಲೇ, ಮಾನವನು ದೈವತ್ವಕ್ಕೇರುವನು. ದೇವತಾಮನುಷ್ಯ, ದೇವಾಂಶಸಂಭೂತ, ಅವತಾರಪುರುಷ, ಮಹಾತ್ಮ ಎನಿಸುವನು. ಆತನು ಸಕಲ ಭೇದಗಳ ಎಲ್ಲೆ ಮೀರಿ, ಎಲ್ಲರಿಗೂ ಬೇಕಾದವನಾಗುವನು. ಆತನ ಸಾಮೀಪ್ಯವು ಪರಮಾನಂದಕರವಾಗಿರುವುದು. ಆತನ ಸದ್ಭಾವ, ಸರ್ವಹಿತಭಾವದ ಮನೋಲಹರಿಗಳು ವಾತಾವರಣದಲ್ಲೆಲ್ಲ ತುಂಬಿ, ಆತನ ಸಂಪರ್ಕಕ್ಕೆ ಬರುವವರನ್ನೂ ಪ್ರವೇಶಿಸಿ, ಅವರಲ್ಲೂ ಧನಾತ್ಮಕತೆಯನ್ನು ತುಂಬಬಲ್ಲುದು. ಇಂತಹ ಮಹಾತ್ಮರ ಸಂಪರ್ಕ ದೀರ್ಘಕಾಲ ಅಥವಾ ಮತ್ತೆ ಮತ್ತೆ ದೊರೆತಾಗ ಆಗುವ ಸತ್ಸಂಗದಿಂದ, ದೀಪವು ದೀಪವನ್ನು ಹಚ್ಚುವಂತೆ, ನಮ್ಮಲ್ಲೂ ಜ್ಞಾನದೀಪವು ಪ್ರಜ್ವಲಿತವಾಗುವುದು. ಅಜ್ಞಾನತಮವು ದೂರಾಗುವುದು. ಇದೇ ಗುರುತತ್ತ್ವ.
*ಹರೇ ರಾಮ*
*ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು |*
*ಜೀವಿತದ ಮಿಕ್ಕೆಲ್ಲಮಂ ತಿಳಿಯಲಹುದೋ ||*
*ಆ ವಿದ್ಯೆಯಂ ಗಳಿಸು ಮೊದಲೆಲ್ಲಕಿಂತಲದು |*
*ದೀವಿಗೆಯೊ ಬಾಳಿರುಳ್ಗೆ - ಮರುಳ ಮುನಿಯ || (೬೫೩)*
_(ತಿಳಿಯಲ್+ಅಹುದೋ)(ಮೊದಲ್+ಎಲ್ಲಕಿಂತಲ್+ಅದು)(ಬಾಳ್+ಇರುಳ್ಗೆ)_
*ಜೀವಿತದ ಮಿಕ್ಕೆಲ್ಲಮಂ ತಿಳಿಯಲಹುದೋ ||*
*ಆ ವಿದ್ಯೆಯಂ ಗಳಿಸು ಮೊದಲೆಲ್ಲಕಿಂತಲದು |*
*ದೀವಿಗೆಯೊ ಬಾಳಿರುಳ್ಗೆ - ಮರುಳ ಮುನಿಯ || (೬೫೩)*
_(ತಿಳಿಯಲ್+ಅಹುದೋ)(ಮೊದಲ್+ಎಲ್ಲಕಿಂತಲ್+ಅದು)(ಬಾಳ್+ಇರುಳ್ಗೆ)_
*_ತಾತ್ಪರ್ಯ—_*
_ಯಾವ ಒಂದು ಬ್ರಹ್ಮವಸ್ತುವನ್ನು / ಆತ್ಮವನ್ನು ಪೂರ್ಣವಾಗಿ ಅರಿತರೆ, ಜೀವನದ ಉಳಿದೆಲ್ಲವನ್ನೂ ತಿಳಿದಂತೆಯೋ, ಅಂತಹ ಬ್ರಹ್ಮವಿದ್ಯೆಯನ್ನು ಬೇರೆಲ್ಲದ್ದಕ್ಕಿಂತ ಮೊದಲು ನೀನು ಗಳಿಸು; ಯಾಕೆಂದರೆ, ಅದು ಬಾಳಿನ ಅಂಧಕಾರಕ್ಕೆ ಬೆಳಕನ್ನಿತ್ತು ದಾರಿತೋರುವ ಹಣತೆ / ದಾರಿದೀಪವಾಗಿರುವುದು ಎಂದಿರುವರು ಡಿವಿಜಿಯವರು._
*_ವಿವರಣೆ—_*
*ಅಧ್ಯಾತ್ಮವಿದ್ಯಾ ವಿದ್ಯಾನಾಂ* ಎಂದಿರುವನು ಶ್ರೀಕೃಷ್ಣ. ತಾನು ಯಾವ ಯಾವುದರಲ್ಲಿ ಏನಾಗಿರುವೆನೆಂದು ವಿವರಿಸುತ್ತಾ ಕೃಷ್ಣನು, _*ನಾನು ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆ / ಬ್ರಹ್ಮವಿದ್ಯೆ ಆಗಿರುವೆನು* ಎಂದಿರುವನು. ಯಾಕೆಂದರೆ, ಅಧ್ಯಾತ್ಮವಿದ್ಯೆಯು ಎಲ್ಲಕ್ಕೂ ಮೂಲವಾದ ಬ್ರಹ್ಮದ / ಆತ್ಮದ ಕುರಿತಾದ ವಿದ್ಯೆಯು. ಅದನ್ನರಿತರೆ, ವಿಶ್ವದ ಎಲ್ಲವನ್ನೂ ಅರಿತಂತೆಯೇ.
ಅರ್ಜುನನು ಕೃಷ್ಣನನ್ನು ಹೀಗೆ ಪ್ರಶ್ನಿಸುತ್ತಾನೆ --
_*“ಕಿಂ ತದ್ ಬ್ರಹ್ಮ”*_.
_“ಬ್ರಹ್ಮವೆಂದರೇನು?”_
ಇದಕ್ಕೆ ಭಗವಂತನ ಉತ್ತರ --
_*“ಅಕ್ಷರಂ ಬ್ರಹ್ಮ ಪರಮಮ್”*_
_ಕ್ಷರವಲ್ಲದ, ನಶ್ವರವಲ್ಲದ, ಎಂದಿಗೂ ನಾಶವಿಲ್ಲದ ಶಾಶ್ವತವಾದ, ಎಂದಿಗೂ ಸ್ವಸ್ಥಾನದಿಂದ ಕ್ಷರ / ಚ್ಯುತ / ಭ್ರಷ್ಟವಾಗದ ಹಾಗೂ ಪರಮ / ಸರ್ವೋತ್ಕೃಷ್ಟವಾಗಿಯೂ, ಎಲ್ಲಕ್ಕಿಂತ ಮೇಲಿನದಾಗಿಯೂ, ಸರ್ವಮೂಲವಾಗಿಯೂ, ಎಲ್ಲದರ ಕಾರಣವಾಗಿಯೂ, ಅಣುವಿಗಿಂತ ಸೂಕ್ಷ್ಮವೂ, ಮಹತ್ತಿಗಿಂತ ಮಹತ್ತೂ, ಅವ್ಯಕ್ತವೂ, ಅಚಿಂತ್ಯವೂ, ಅಚಲವೂ ಸನಾತನವೂ ಆಗಿ ಇರುವುದೋ ಅಂತಹ ಪರಮ ಅ-ಕ್ಷರ ತತ್ತ್ವವೇ ಬ್ರಹ್ಮವಾಗಿರುವುದು. *“ಅಣೋರಣೀಯಾನ್ ಮಹತೋ ಮಹೀಯಾನ್”, “ಅವ್ಯಕ್ತೋऽಯಮಚಿಂತ್ಯೋऽಯಮ್”, “ಅಚಲೋऽಯಂ ಸನಾತನಃ”* ಇತ್ಯಾದಿಯಾಗಿದೆ ಬ್ರಹ್ಮದ ವಿವರಣೆ._
ಇನ್ನೊಂದು ಪ್ರಶ್ನೆ ಅರ್ಜುನನಿಂದ --
_*“ಕಿಮ್ ಅಧ್ಯಾತ್ಮಮ್”*_
_“ಅಧ್ಯಾತ್ಮವೆಂದರೆ ಏನು?”_
ಕೃಷ್ಣನ ಉತ್ತರ --
_*“ಸ್ವಭಾವಃ-ಅಧ್ಯಾತ್ಮಮ್ ಉಚ್ಯತೇ”*_
_ಮನುಷ್ಯನ ಸ್ವ-ಭಾವವನ್ನು, ಸಮಗ್ರ ರಚನೆಯನ್ನು ಅಧ್ಯಾತ್ಮ ಎನ್ನಲಾಗಿದೆ. ಮನುಷ್ಯನೆಂದರೆ ದೇಹ, ಇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂ, ಜೀವ, ಆತ್ಮ -- ಇವುಗಳ ಸಮೂಹ. ಇದೇ ಅಧ್ಯಾತ್ಮ. ಜೀವದ ಲೋಕವ್ಯವಹಾರಕ್ಕೆ ಬೇಕಾದ ಎಲ್ಲ ಸಂಪರ್ಕ ಸಾಧನ ಸಲಕರಣೆಗಳ / ಉಪ-ಕರಣಗಳ ಒಟ್ಟು ಗುಂಪೇ ಅಧ್ಯಾತ್ಮ._
ಆದಿಶಂಕರಾಚಾರ್ಯ ಭಗವತ್ಪಾದರು ಹೀಗೆ ಹೇಳಿದ್ದಾರೆ --
*“ಪರಸ್ಯ ಬ್ರಹ್ಮಣಃ ಪ್ರತಿ-ದೇಹಂ ಪ್ರತ್ಯಕ್-ಆತ್ಮಭಾವಃ ಸ್ವಭಾವಃ”*
_ಪರಬ್ರಹ್ಮದ ಸೃಷ್ಟಿಯಲ್ಲಿನ ಪ್ರತಿಯೊಂದು ಪ್ರತ್ಯೇಕ ದೇಹವೂ, ಪ್ರತ್ಯೇಕ ಆತ್ಮಭಾವ / ಜೀವಭಾವವೇ ಸ್ವಭಾವವೆನಿಸಿರುವುದು. ಹೀಗಾಗಿ, ಜೀವದೆಸೆಯಲ್ಲಿರುವ ಆತ್ಮವೇ / ಬ್ರಹ್ಮದ ಜೀವಭಾವ ಅಥವಾ ಸ್ವಭಾವವೇ ಅಧ್ಯಾತ್ಮ. ಜೀವವೆಂದರೆ ದೇಹೇಂದ್ರಿಯಾದಿಗಳ ಸಮವಾಯ._
ಶಂಕರರು ಮತ್ತೂ ಹೇಳಿದ್ದಾರೆ --
*“ಆತ್ಮಾನಂ ದೇಹಮ್ ಅಧಿಕೃತ್ಯ ಪ್ರತ್ಯಗಾತ್ಮತಯಾ ಪ್ರವೃತ್ತಂ ಪರಮಾರ್ಥ-ಬ್ರಹ್ಮ-ಅವಸಾನಂ ವಸ್ತು”*
_ತನ್ನದೇ ಸೃಷ್ಟಿಯಾದ ಪರಿಮಿತವೂ ಸಾಂತವೂ ವ್ಯಾವಹಾರಿಕವೂ ಆದ ದೇಹಮಾತ್ರದೊಳಗೆ ಪ್ರತ್ಯಗಾತ್ಮನಾಗಲು ಹೊರಟ / ಪ್ರವೃತ್ತವಾದ (ಪರಮಾತ್ಮನು ಪ್ರತ್ಯೇಕ ಜೀವಾತ್ಮನಾದ), ಪಾರಮಾರ್ಥಿಕವಾದ ಅಪರಿಮಿತವಾದ ಅನಂತವಾದ ಬ್ರಹ್ಮವಸ್ತುವಿನ ಪರಿಮಿತರೂಪವೇ ಸ್ವಭಾವ / ಅಧ್ಯಾತ್ಮ. ಆತ್ಮದ ಜೀವದಶೆ / ದೇಹಧರಿಸಿರುವ ಸ್ಥಿತಿಯೇ ಅಧ್ಯಾತ್ಮ._
*ಆತ್ಮಾನಂ ಕ್ಷೇತ್ರಜ್ಞಂ ಬ್ರಹ್ಮ ದೇಹಮ್ ಇಂದ್ರಿಯಾದಿಕಮ್ ಅಧಿಕೃತ್ಯ ಪ್ರವೃತ್ತಂ ಶಾಸ್ತ್ರಂ ಅಧ್ಯಾತ್ಮಮ್*
_ದೇಹವು ಕ್ಷೇತ್ರವಾಗಿರುವುದರಿಂದ, ಅದನ್ನು ಬಲ್ಲವನಾಗಿ ಕ್ಷೇತ್ರಜ್ಞನೆನಿಸಿದ ಆತ್ಮ / ಬ್ರಹ್ಮನನ್ನು, ಈ ದೇಹವನ್ನು ಹಾಗೂ ಇಂದ್ರಿಯಾದಿಗಳನ್ನು ಕುರಿತು ವಿವರಿಸಹೊರಟಿರುವ ಶಾಸ್ತ್ರವೇ ಅಧ್ಯಾತ್ಮವು._
*_ಹೀಗಾಗಿ, ಸಕಲವಿದ್ಯೆಗಳಿಗೆ ಮೂಲವಾದ, ಸಕಲ ವಿದ್ಯೆಗಳನ್ನು ಕಲಿಯಲು ಆಧಾರವಾದ ಈ ದೇಹೇಂದ್ರಿಯಾತ್ಮಸಮವಾಯದ ಕುರಿತಾದ ಮೂಲವಿದ್ಯೆಯೇ ಬ್ರಹ್ಮವಿದ್ಯೆ / ಆತ್ಮವಿದ್ಯೆ / ಅಧ್ಯಾತ್ಮವಿದ್ಯೆ. ಬ್ರಹ್ಮವಸ್ತುವಿನ ಜೀವವೆನಿಸುವ ಸ್ವಭಾವದ / ಸೃಷ್ಟಿಪ್ರಕ್ರಿಯೆಯ ಕುರಿತಾದ ವಿದ್ಯೆ. ಬ್ರಹ್ಮ / ಪುರುಷ > ಅವ್ಯಕ್ತ> ಪ್ರಧಾನ ಪ್ರಕೃತಿ > ಮಹತ್ ತತ್ತ್ವ > ಅಹಂಕಾರ > ಆಕಾಶಾದಿ ಪಂಚಮಹಾಭೂತಗಳು ಹಾಗೂ ಶಬ್ದಾದಿ ಪಂಚತನ್ಮಾತ್ರೆಗಳು > ಪಂಚೀಕರಣ > ತ್ರಿವೃತ್ಕರಣ > ಓಷಧಿವನಸ್ಪತಿಗಳು > ಅನ್ನಾಹಾರ > ಜೀವಿಗಳು / ಜೀವರ ಸೃಷ್ಟಿ -- ಈ ರೀತಿಯಾಗಿ ಬ್ರಹ್ಮದ ಯಾವ ಜೀವವಾಗಿ ಪರಿವರ್ತಿತವಾಗುವ ಗುಣವಿದೆಯೋ ಅದನ್ನು ಮೊದಲು ಅಧ್ಯಯನ ಮಾಡಿ, ಮನನ ಮಾಡಿ, ಚೆನ್ನಾಗಿ ಅರಿತುಕೊಂಡು, ಸಕಲವನ್ನೂ ಸಾರರೂಪವಾಗಿ ಅರಿತವರಾಗೋಣ. ಇದೆಲ್ಲವೂ ಅದರ ರೂಪಾಂತರವೇ ಆಗಿರುವುದರಿಂದ, ವ್ಯಾವಹಾರಿಕವಾಗಿ ವೈವಿಧ್ಯವಿದ್ದರೂ ಪಾರಮಾರ್ಥಿಕವಾಗಿ ಆ ಒಂದೇ ತತ್ತ್ವವೇ ಇದೆಲ್ಲವೂ ಎಂದು ತಿಳಿದು ಬ್ರಹ್ಮವೇತ್ತರಾಗೋಣ. ಆತ್ಮಜ್ಞಾನಿಗಳಾಗೋಣ._*
*ಹರೇ ರಾಮ*
*ಅಂಗಾಂಗದೊಂದು ಪರಿಮಾಣ ನಿಯತಿ ರೂಪ |*
*ಸಂಗೀತ ನಾದಲಯಗಳದೊಂದು ನಿಯತಿ ||*
*ಸಂಘಜೀವಿತದಿ ಜನದೊಂದು ನಿಯತಿಯೆ ಧರ್ಮ |*
*ಮಂಗಲವೊ ನಿಯತಿಯಿಂ - ಮರುಳ ಮುನಿಯ ||*
_(ಅಂಗ ಅಂಗದ ಒಂದು) (ಲಯಗಳದು ಒಂದು) (ಜನದ ಒಂದು)_
*_ತಾತ್ಪರ್ಯ--_*
_ಶರೀರದ ವಿವಿಧ ಅಂಗಗಳ ಗಾತ್ರ, ಆಕಾರಗಳು ಒಂದು ನಿಯಮದಂತೆ ತಕ್ಕಷ್ಟೇ ಪ್ರಮಾಣದಲ್ಲಿದ್ದರೇ ಸುಂದರ ರೂಪವಾಗುವುದು.
Comments
Post a Comment