Posts

Showing posts from May, 2020

ಶಾಂಕರ ಸುಭಾಷಿತಗಳು

೨೬) ಶಾಂಕರ ಸುಭಾಷಿತಗಳು — ೧ (ಆದಿಶಂಕರ-ಭಗವತ್ಪಾದ-ಪ್ರೋಕ್ತ) ೧. ಮಾನವಜನ್ಮದ ಗುರಿ ಬ್ರಹ್ಮಜ್ಞಾನವೇ ಮಾನವಜನ್ಮದ ಗುರಿ ೧) ತಸ್ಮಾತ್ ಆತ್ಮದರ್ಶನಾಯ ಇಹೈವ ಯತ್ನಃ ಕರಣೀಯಃ ಇತ್ಯರ್ಥಃ | (ಕಾಠಕೋಪನಿಷದ್ಭಾಷ್ಯ ೨-೩-೬) ಆದ್ದರಿಂದ (ಮಾನವನಿಂದ) ಆತ್ಮಜ್ಞಾನಕ್ಕಾಗಿ ಇಲ್ಲಿಯೇ / ಬದುಕಿರುವಾಗಲೇ / ಈ ಜನ್ಮದಲ್ಲಿಯೇ ಪ್ರಯತ್ನವು ಮಾಡಲ್ಪಡಬೇಕೆಂದು ತಾತ್ಪರ್ಯ. ಯಾಕೆಂದರೆ "ಜಂತೂನಾಂ ನರಜನ್ಮದುರ್ಲಭಮ್" — ಜೀವಿಗಳಿಗೆ ಮನುಷ್ಯಜನ್ಮವು ಬಹು ಅಪರೂಪದಿಂದ ದೊರಕಬಹುದಾದ ಅತ್ಯಂತಪವಿತ್ರವೂ ಶ್ರೇಷ್ಠವೂ ಆದ ಜನ್ಮವು. ಇದು ಪಶುಪಕ್ಷಿಗಳಂತೆ ಕೇವಲ ಉಂಡು, ಕುಡಿದು ತೇಗುವುದಕ್ಕೆ ಬಂದ ಭೋಗಯೋನಿಯಲ್ಲ; ಪರಂತು ದೇವತೆಗಳಿಗೂ ದುರ್ಲಭವಾದ ಮೋಕ್ಷವನ್ನು / ಸರ್ವಾತ್ಮಭಾವರೂಪವಾದ ಬ್ರಹ್ಮಾನಂದವನ್ನು ಪಡೆದು ಕೃತಾರ್ಥನಾಗುವುದಕ್ಕಾಗಿ ಬಂದಿರುತ್ತದೆ. ಬ್ರಹ್ಮಾತ್ಮಜ್ಞಾನದಿಂದಲೇ ಶಾಶ್ವತ ಅಂತಿಮ ಅದ್ವೈತ ಸಾಯುಜ್ಯ ಮೋಕ್ಷದ ಪ್ರಾಪ್ತಿಯೇ ಹೊರತು ಬೇರೆ ದಾರಿಯೇ ಇಲ್ಲ. ("ನ ಅನ್ಯಃ ಪಂಥಾ ವಿದ್ಯತೇ ಅಯನಾಯ") ಸ್ವರ್ಗಕ್ಕೆ ಹೋದರೂ ಆತ್ಮಜ್ಞಾನಕ್ಕೆ ಅವಕಾಶವಿಲ್ಲ; ಇನ್ನು ಕ್ರಿಮಿಕೀಟಾದಿ ನೀಚಯೋನಿಗಳಲ್ಲಂತೂ ಅದರ ಪ್ರಶ್ನೆಯೇ ಇಲ್ಲ. ಆದ್ದರಿಂದ ಹೇಗಾದರೂ ಪ್ರಯತ್ನಮಾಡಿ ಈ ಜನ್ಮದಲ್ಲಿಯೇ ಆತ್ಮಜ್ಞಾನವನ್ನು ಪಡೆಯುವ ಸಾಹಸವನ್ನು ಮಾಡಬೇಕೆಂಬುದೇ ಶ್ರೀಶಂಕರರ ಪ್ರೀತಿಯ ಸಂದೇಶ. ಮಾನವನು ಮಾಧವನಾಗಬೇಕು ೨) ವಿಶುದ್ಧಾಂತಃಕ...