ದೇವೀಭಾಗವತಸ್ಥ ಸುಭಾಷಿತಗಳು देवीभागवतस्थ-सुभाषितानि

 ದೇವೀಭಾಗವತಸ್ಥ ಸುಭಾಷಿತಗಳು

देवीभागवतस्थ-सुभाषितानि

॥ ॐ श्रीगुरुगणपतिभ्यां नमः ॥

॥ उमामहेश्वरः प्रसीदतु ॥

|| ಶ್ರೀಗುರುಗಣಪತಿಭ್ಯಾಂ ನಮಃ ||

|| ಉಮಾಮಹೇಶ್ವರಃ ಪ್ರಸೀದತು ||


श्रोत्रेन्द्रिय-युतात् सूत, नराः स्वादु विचक्षणाः ।

न शृण्वन्ति पुराणानि, वञ्चिता विधिना हि ते ॥१।१।८॥

ಶ್ರೋತ್ರೇನ್ದ್ರಿಯ-ಯುತಾತ್ ಸೂತ, ನರಾಃ ಸ್ವಾದು ವಿಚಕ್ಷಣಾಃ ।

ನ ಶೃಣ್ವನ್ತಿ ಪುರಾಣಾನಿ, ವಞ್ಚಿತಾ ವಿಧಿನಾ ಹಿ ತೇ ॥೧।೧।೮॥


ಅಯ್ಯಾ ಸೂತಮುನಿಯೆ! ಶ್ರವಣೇಂದ್ರಿಯವು ಸಕ್ಷಮವಾಗಿದ್ದು (ಚೆನ್ನಾಗಿ ಕಿವಿಗಳು ಕೇಳಿಸುತ್ತಿದ್ದರೂ), ಸದಸದ್ವಿವೇಕಶಕ್ತಿ (ಒಳ್ಳೆಯದು, ಕೆಟ್ಟದ್ದು ಮುಂತಾದ ಭೇದಜ್ಞಾನ) ಇದ್ದೂ ಕೂಡ ಯಾವ ಮನುಜರು ಪುರಾಣಗಳ ಅಮೃತವಾಣಿಯನ್ನು ಶ್ರವಣಮಾಡದಿದ್ದರೆ, ಅಂಥವರು ನಿಜವಾಗಿಯೂ ಆ ವಿಧಿಯಿಂದಲೇ ವಂಚಿತರಾದಂತೆಯೇ ಸರಿ.



यथा जिह्वेन्द्रियाह्लादः, षड्रसैः संप्रपद्यते ।

तथा श्रोत्रोन्द्रियाह्लादो, वचोभिः सुधियां स्मृतः ॥१।१।९॥

ಯಥಾ ಜಿಹ್ವೇನ್ದ್ರಿಯಾಹ್ಲಾದಃ, ಷಡ್ರಸೈಃ ಸಂಪ್ರಪದ್ಯತೇ ।

ತಥಾ ಶ್ರೋತ್ರೋನ್ದ್ರಿಯಾಹ್ಲಾದೋ, ವಚೋಭಿಃ ಸುಧಿಯಾಂ ಸ್ಮೃತಃ ॥೧।೧।೯॥


ಹೇಗೆ ನಾಲಗೆಗೆ / ರಸನೇಂದ್ರಿಯಕ್ಕೆ ಸಿಹಿ, ಕಹಿ, ಉಪ್ಪು, ಹುಳಿ, ಖಾರ, ಒಗರು ಎಂಬ ಷಡ್ರಸಗಳಿಂದ ಆಹ್ಲಾದ / ಆನಂದ / ತೃಪ್ತಿ ಉಂಟಾಗುತ್ತದೋ, ಹಾಗೆಯೇ ಸುಜ್ಞಾನಿಗಳ ಮಾತುಗಳಿಂದ ಶ್ರೋತ್ರೇಂದ್ರಿಯ / ಕಿವಿಗಳಿಗೆ ಆಹ್ಲಾದ / ಸಂತೋಷ ಉಂಟಾಗುವುದು.


अश्रोत्राः फणिनः कामं, मुह्यन्ति हि नभोगुणैः ।

सकर्णा ये न शृण्वन्ति, तेऽप्यकर्णाः कथं न च ॥१।१।१०॥

ಅಶ್ರೋತ್ರಾಃ ಫಣಿನಃ ಕಾಮಂ, ಮುಹ್ಯನ್ತಿ ಹಿ ನಭೋಗುಣೈಃ ।

ಸಕರ್ಣಾ ಯೇ ನ ಶೃಣ್ವನ್ತಿ, ತೇಽಪ್ಯಕರ್ಣಾಃ ಕಥಂ ನ ಚ ॥೧।೧।೧೦॥


ಹೆಡೆಯುಳ್ಳ ನಾಗರವೇ ಮುಂತಾದ ಹಾವುಗಳು ಕಿವಿಗಳಿಲ್ಲದಿದ್ದರೂ, ನಭದ / ಆಕಾಶದ ಗುಣವಾದ ಶಬ್ದ (ಪುಂಗಿಯ ನಾದ)ಕ್ಕೆ ಮೋಹಗೊಳ್ಳುತ್ತವೆ. ಹೀಗಿರುವಾಗ, ಮನುಷ್ಯರು ಕೇಳಬಲ್ಲ ಕಿವಿಗಳಿರುವಾಗಲೂ ಇಂತಹ ಪುರಾಣಗಳನ್ನು, ಜ್ಞಾನಿಗಳ ಮಾತುಗಳನ್ನು ಕೇಳದಿದ್ದರೆ, ಅಂಥವರೂ ಕೂಡ ಕಿವುಡರೇಕಲ್ಲ? ಕಿವುಡರೇ ಸರಿ.


येन केनाप्युपायेन, कालातिवाहनं स्मृतम् ।

व्यसनैरिह मूर्खाणां, बुधानां शास्त्रचिन्तनैः ॥१।१।१२॥

ಯೇನ ಕೇನಾಪ್ಯುಪಾಯೇನ, ಕಾಲಾತಿವಾಹನಂ ಸ್ಮೃತಮ್ ।

ವ್ಯಸನೈರಿಹ ಮೂರ್ಖಾಣಾಂ, ಬುಧಾನಾಂ ಶಾಸ್ತ್ರಚಿನ್ತನೈಃ ॥೧।೧।೧೨॥


ಮೂರ್ಖರಿಗೆ ವ್ಯಸನ / ಚಟಗಳಿಂದಲೂ, ಜ್ಞಾನಿಗಳಿಗೆ ಶಾಸ್ತ್ರಚಿಂತನೆಗಳಿಂದಲೂ, ಹೀಗೆ ಈ ಲೋಕದಲ್ಲಿ ಯಾವುದಾದರೊಂದು ಉಪಾಯದಿಂದ / ನೆಪದಿಂದ, ಜನರಿಂದ ಕಾಲಯಾಪನೆಯಾಗುವುದೆಂಬುದು ಸರ್ವವಿದಿತವಷ್ಟೆ?


शास्त्राण्यपि विचित्राणि, जल्पवादयुतानि हि ।

नानार्थवादयुक्तानि, हेतुमन्ति बृहन्ति च ॥१।१।१३॥

(त्रिविधानि पुराणानि, शास्त्राणि विविधानि तु ।

वितण्डात् छलयुक्तानि, गर्वामर्षकराणि वै ॥)

ಶಾಸ್ತ್ರಾಣ್ಯಪಿ ವಿಚಿತ್ರಾಣಿ, ಜಲ್ಪವಾದಯುತಾನಿ ಹಿ ।

ನಾನಾರ್ಥವಾದಯುಕ್ತಾನಿ, ಹೇತುಮನ್ತಿ ಬೃಹನ್ತಿ ಚ ॥೧।೧।೧೩॥

(ತ್ರಿವಿಧಾನಿ ಪುರಾಣಾನಿ, ಶಾಸ್ತ್ರಾಣಿ ವಿವಿಧಾನಿ ತು ।

ವಿತಣ್ಡಾತ್ ಛಲಯುಕ್ತಾನಿ, ಗರ್ವಾಮರ್ಷಕರಾಣಿ ವೈ ॥)


ಶಾಸ್ತ್ರಗಳಾದರೋ ಚಿತ್ರವಿಚಿತ್ರ! ನಾನಾ ತೆರನಾದವುಗಳು. ಜಲ್ಪ (ಕಾಡುಹರಟೆ, ವ್ಯರ್ಥಮಾತು), ವಾದ (ಎರಡೂ ಪಕ್ಷಗಳ ಕುರಿತಾಗಿ ಪ್ರಮಾಣ, ತರ್ಕಾದಿಗಳ ಮುಖೇನ ಚರ್ಚೆ), ನಾನಾರ್ಥವಾಚಕ ಮಾತುಗಳು, ಕಾರಣವನ್ನು ಹೇಳುವವು ಹಾಗೂ ಬೃಹತ್ತಾದ ವಿಸ್ತಾರವಾದ ವರ್ಣನೆ, ವಿವರಣೆಗಳಿಂದ ಕೂಡಿರುವವುಗಳಾಗಿವೆ.

(ಪುರಾಣಗಳು ಸಾತ್ತ್ವಿಕ-ರಾಜಸ-ತಾಮಸವೆಂದು ಮೂರುವಿಧ. ಶಾಸ್ತ್ರಗಳು ಅನೇಕವಿಧವಾಗಿವೆ. ಕೆಲವು ವಿತಂಡ / ಪರಮತಖಂಡನೆಯ ಮೂಲಕ ಸ್ವಮತಸಮರ್ಥನೆಯ ಮಾತುಗಳಿಂದಾಗಿ ಹಟ-ಕಪಟ-ಗರ್ವ-ಕೋಪಗಳನ್ನುಂಟುಮಾಡುವವುಗಳಾಗಿವೆ.)

Comments

Popular posts from this blog

ವೃದ್ಧಚಾಣಕ್ಯನೀತಿದರ್ಪಣಸಾರಃ ೨

ವೈದ್ಯಕೀಯಸುಭಾಷಿತಸಾಹಿತ್ಯಮ್ ೧

ಸೂಕ್ತಿವೈಭವ