ಶಾಂಕರ ಸುಭಾಷಿತಗಳು

೨೬) ಶಾಂಕರ ಸುಭಾಷಿತಗಳು — ೧
(ಆದಿಶಂಕರ-ಭಗವತ್ಪಾದ-ಪ್ರೋಕ್ತ)

೧. ಮಾನವಜನ್ಮದ ಗುರಿ

ಬ್ರಹ್ಮಜ್ಞಾನವೇ ಮಾನವಜನ್ಮದ ಗುರಿ

೧) ತಸ್ಮಾತ್ ಆತ್ಮದರ್ಶನಾಯ ಇಹೈವ ಯತ್ನಃ ಕರಣೀಯಃ ಇತ್ಯರ್ಥಃ | (ಕಾಠಕೋಪನಿಷದ್ಭಾಷ್ಯ ೨-೩-೬)

ಆದ್ದರಿಂದ (ಮಾನವನಿಂದ) ಆತ್ಮಜ್ಞಾನಕ್ಕಾಗಿ ಇಲ್ಲಿಯೇ / ಬದುಕಿರುವಾಗಲೇ / ಈ ಜನ್ಮದಲ್ಲಿಯೇ ಪ್ರಯತ್ನವು ಮಾಡಲ್ಪಡಬೇಕೆಂದು ತಾತ್ಪರ್ಯ.

ಯಾಕೆಂದರೆ "ಜಂತೂನಾಂ ನರಜನ್ಮದುರ್ಲಭಮ್" — ಜೀವಿಗಳಿಗೆ ಮನುಷ್ಯಜನ್ಮವು ಬಹು ಅಪರೂಪದಿಂದ ದೊರಕಬಹುದಾದ ಅತ್ಯಂತಪವಿತ್ರವೂ ಶ್ರೇಷ್ಠವೂ ಆದ ಜನ್ಮವು. ಇದು ಪಶುಪಕ್ಷಿಗಳಂತೆ ಕೇವಲ ಉಂಡು, ಕುಡಿದು ತೇಗುವುದಕ್ಕೆ ಬಂದ ಭೋಗಯೋನಿಯಲ್ಲ; ಪರಂತು ದೇವತೆಗಳಿಗೂ ದುರ್ಲಭವಾದ ಮೋಕ್ಷವನ್ನು / ಸರ್ವಾತ್ಮಭಾವರೂಪವಾದ ಬ್ರಹ್ಮಾನಂದವನ್ನು ಪಡೆದು ಕೃತಾರ್ಥನಾಗುವುದಕ್ಕಾಗಿ ಬಂದಿರುತ್ತದೆ. ಬ್ರಹ್ಮಾತ್ಮಜ್ಞಾನದಿಂದಲೇ ಶಾಶ್ವತ ಅಂತಿಮ ಅದ್ವೈತ ಸಾಯುಜ್ಯ ಮೋಕ್ಷದ ಪ್ರಾಪ್ತಿಯೇ ಹೊರತು ಬೇರೆ ದಾರಿಯೇ ಇಲ್ಲ. ("ನ ಅನ್ಯಃ ಪಂಥಾ ವಿದ್ಯತೇ ಅಯನಾಯ")

ಸ್ವರ್ಗಕ್ಕೆ ಹೋದರೂ ಆತ್ಮಜ್ಞಾನಕ್ಕೆ ಅವಕಾಶವಿಲ್ಲ; ಇನ್ನು ಕ್ರಿಮಿಕೀಟಾದಿ ನೀಚಯೋನಿಗಳಲ್ಲಂತೂ ಅದರ ಪ್ರಶ್ನೆಯೇ ಇಲ್ಲ. ಆದ್ದರಿಂದ ಹೇಗಾದರೂ ಪ್ರಯತ್ನಮಾಡಿ ಈ ಜನ್ಮದಲ್ಲಿಯೇ ಆತ್ಮಜ್ಞಾನವನ್ನು ಪಡೆಯುವ ಸಾಹಸವನ್ನು ಮಾಡಬೇಕೆಂಬುದೇ ಶ್ರೀಶಂಕರರ ಪ್ರೀತಿಯ ಸಂದೇಶ.

ಮಾನವನು ಮಾಧವನಾಗಬೇಕು
೨) ವಿಶುದ್ಧಾಂತಃಕರಣಃ ಯೋಗ್ಯೋ ಬ್ರಹ್ಮ ದ್ರಷ್ಟುಂ ಭವತಿ | (ಮುಂಡಕೋಪನಿಷದ್ಭಾಷ್ಯ ೩-೧-೮)

ಅಂತಃಕರಣವನ್ನು ವಿಶೇಷವಾಗಿ ಶುದ್ಧಗೊಳಿಸಿಕೊಂಡರೆ ಅಂಥವನು ಪರಬ್ರಹ್ಮವಸ್ತುವನ್ನು ಅರಿಯಲು ಯೋಗ್ಯನಾಗುತ್ತಾನೆ.

ಮಾನವರು ಅವಿವೇಕದಿಂದ ದಾನವರೂ ಆಗಬಹುದು; ವಿವೇಕದಿಂದ ಮಾಧವರೂ ಆಗಬಹುದು. ಅಂತಃಕರಣವೆಂಬ ಅದ್ಭುತಸಂಪತ್ತು ಮಾನವನಿಗೆ ಭಗವಂತನ ದಯೆಯಿಂದ ಪ್ರಾಪ್ತವಾದುದು. ಇಂತಹ ಮನಸ್ಸನ್ನು ಸರಿಯಾಗಿ ಬಳಸಿದರೆ ಮಾನವನ ಉದ್ಧಾರ! "ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ "— ಮನಸ್ಸೇ ಮಾನವನ ಬಂಧನಕ್ಕೂ, ಮುಕ್ತಿಗೂ ಕಾರಣವಾಗಿರುವುದು.

ಹಾಗಾದರೆ ಮನಸ್ಸಿನಿಂದ ಮುಕ್ತಿ ಹೇಗೆ? ಸಾಧನೆಗಳಿಂದ. ಸಾಧನೆಗಳೆಂದರೆ ಇಂದ್ರಿಯನಿಗ್ರಹ. ತುಂಟ ಕುದುರೆಗಳಂತಿರುವ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ (೫ ಜ್ಞಾನೇಂದ್ರಿಯಗಳು) ಹಾಗೂ ವಾಕ್, ಪಾಣಿ, ಪಾದ, ಪಾಯು (ಗುದ), ಉಪಸ್ಥ (ಗುಹ್ಯ / ಲಿಂಗ / ಜನನೇಂದ್ರಿಯ)— ಇವುಗಳನ್ನು ಪಳಗಿಸಿ ಸರಿದಾರಿಗೆ ತರುವುದೇ ಸಾಧನೆ. ಇಂತಹ ಇಂದ್ರಿಯಗಳಿಗೆ ಸಾತ್ತ್ವಿಕ ವಿಚಾರಗಳನ್ನೇ ವಿಷಯವಾಗಿ ಕೊಡುತ್ತಿರುವುದೇ ಅಧ್ಯಾತ್ಮಸಾಧನೆ; ಅದೇ ಇಂದ್ರಿಯ ನಿಗ್ರಹ. ಇದರಿಂದ ಚಿತ್ತಶುದ್ಧಿ (ಮನಶ್ಶುದ್ಧಿ). ಚಿತ್ತಶುದ್ಧಿಯಾದರೆ ವೇದಾಂತವಾಕ್ಯಾರ್ಥವಿಚಾರ ಗ್ರಹಣಶಕ್ತಿ ಬರುತ್ತದೆ. ಅದರಿಂದ ಆತ್ಮಜ್ಞಾನವಾಗುತ್ತದೆ. ಅದೇ ಬ್ರಹ್ಮಜ್ಞಾನ. ಅದೇ ಮುಕ್ತಿ, ಜೀವನ್ಮುಕ್ತಿ (ಬದುಕಿರುವಾಗಲೇ ಮುಕ್ತಿ). ಹೀಗೆ ಚಿತ್ತಶುದ್ಧಿಯನ್ನು ಪಡೆದರೆ ಮಾನವನು ಮಾಧವನಾಗಬಲ್ಲ!!

ಮನುಷ್ಯನಿಗೆ ಎಂತಹ ಸುವರ್ಣಾವಕಾಶ!!

೩) ಪುರುಷ ಏವ ಹಿ ಶಕ್ತತ್ವಾತ್ ಅರ್ಥಿತ್ವಾತ್ ಅಪರ್ಯುದಸ್ತತ್ವಾತ್ ಚ ಕರ್ಮಜ್ಞಾನಯೋಃ ಅಧಿಕ್ರಿಯತೇ | (ತೈತ್ತಿರೀಯೋಪನಿಷದ್ಭಾಷ್ಯ ೨-೧)

ತನ್ನ ಶಕ್ತತೆ (ಸಾಮರ್ಥ್ಯ), ಅರ್ಥಿತ್ವ (ಬಯಸುವಿಕೆ) ಹಾಗೂ ಅಪ್ರತಿಷಿದ್ಧತ್ವದಿಂದಾಗಿ (ನಿಷೇಧ, ಪ್ರತಿಷೇಧವಿಲ್ಲದಿರುವಿಕೆ) ಕರ್ಮ, ಉಪಾಸನೆ ಮತ್ತು ಜ್ಞಾನಮಾರ್ಗಗಳಿಗೆ ಮನುಷ್ಯನೇ ಅಧಿಕಾರವುಳ್ಳವನಾಗಿದ್ದಾನೆ.

"ಆಹಾರನಿದ್ರಾಭಯಮೈಥುನಂ ಚ 
ಸಾಮಾನ್ಯಮೇತತ್ ಪಶುಭಿರ್ನರಾಣಾಮ್ |
ಜ್ಞಾನಂ ಹಿ ತೇಷಾಮಧಿಕೋ ವಿಶೇಷೋऽऽ
-ತ್ಮಜ್ಞಾನಹೀನಾಃ ಪಶುಭಿಸ್ಸಮಾನಾಃ ||"
(ಆಧಾರ— "ಹಿತೋಪದೇಶ" )

ಉಣ್ಣುವುದು, ನಿದ್ರಿಸುವುದು ಮತ್ತು ಸ್ತ್ರೀಪುರುಷಮೈಥುನಾದಿ ವಿಹಾರಗಳು ಪ್ರಾಣಿಗಳಿಗೂ ಮನುಜರಿಗೂ ಸಮಾನವಾದ ಸಹಜಸ್ವಭಾವಗಳು. ಪಶುಪಕ್ಷಿಗಳು ಗುಹೆಪೊಟರೆಗಳಲ್ಲಿ ವಾಸವಾದರೆ, ಮನುಷ್ಯನು ಅರಮನೆಯಲ್ಲೂ ವಾಸವಾಗಿರುವನು. ಮನುಜ ಪಂಚಭಕ್ಷ್ಯ ಪರಮಾನ್ನಗಳನ್ನು ಮಾಡಿ ಸವಿದರೆ ಪಶುಪಕ್ಷಿಗಳು ದೈವದತ್ತ ನೈಸರ್ಗಿಕ ಆಹಾರವನ್ನೇ ತಿನ್ನುತ್ತವೆ. ಇದರ ಫಲ ಇಬ್ಬರಿಗೂ ತಾತ್ಕಾಲಿಕ ಸುಖ, ತೃಪ್ತಿ, ಶಕ್ತಿ, ಪುಷ್ಟಿ— ಮುಂತಾಗಿ ಸಮಾನ ಹಾಗೂ ಅನಿತ್ಯ, ನಶ್ವರ.

ಮಾನವಜನ್ಮ ಇಷ್ಟುಮಾತ್ರಕ್ಕಾಗಿ ಬಂದಿಲ್ಲ; ಇಂತಹ ಕೇವಲ ಅನಿತ್ಯ ಫಲಗಳಿಗಾಗಿ ಅಲ್ಲ. ವೇದ-ಶಾಸ್ತ್ರೋಕ್ತ ಕರ್ಮ-ಉಪಾಸನೆಗಳ ಅನುಷ್ಠಾದಿಂದ ಹೆಚ್ಚಿನ ಫಲದ ಪ್ರಾಪ್ತಿಗಾಗಿ ದುರ್ಲಭವಾದ ನರಜನ್ಮ.

"ದುರ್ಲಭಂ ತ್ರಯಮೇವೈತತ್ ದೈವಾನುಗ್ರಹಹೇತುಕಮ್ |
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ||"
(ವಿವೇಕಚೂಡಾಮಣಿ)

ನರಜನ್ಮ, ಮೋಕ್ಷಾಕಾಂಕ್ಷೆ, ಮಹಾಪುರುಷರ ಆಶ್ರಯ-ಕೃಪೆ-ಉಪದೇಶ— ಇವು ಮೂರೂ ಅತ್ಯಂತ ಕಷ್ಟಸಾಧ್ಯ. ಅಂತೆಯೇ ಇವು ಭಗವದನುಗ್ರಹಕಾರಿಗಳೂ ಹೌದು.

ಹೀಗಾಗಿ ಅನಿತ್ಯಫಲಗಳ ಕುರಿತು ವಿರಕ್ತಿ ಹೊಂದಿ ಆತ್ಮಜ್ಞಾನ, ಮೋಕ್ಷಗಳನ್ನು ಹೊಂದುವ ಸಾಮರ್ಥ್ಯವಿರುವ ಏಕೈಕ ಜೀವಿ ಮಾನವನೇ ಸರಿ! ಇನ್ಯಾವ ಜೀವಿಗೂ ಈ ಸಾಮರ್ಥ್ಯವಾಗಲೀ, ವಿರಕ್ತಿ-ಮುಮುಕ್ಷುತ್ವವಾಗಲೀ, ಅವಕಾಶವಾಗಲೀ ಇಲ್ಲವೇ ಇಲ್ಲ. ಇಂತಹ ಸದವಕಾಶವನ್ನು ಬಳಸಿಕೊಂಡು ಮಾನವನು ಕೃತಕೃತ್ಯನೆನಿಸಬೇಕು. 

ಮಾನವರಿಗೆ ಶ್ರೀಶಂಕರರ ಕಿವಿಮಾತು

೪) ತಸ್ಮಾತ್ ಆತ್ಮದರ್ಶನಾಯ ಅಸ್ಮಿನ್ನೇವ ಮಾನುಷೇ ಲೋಕೇ ಇಹೈವ ಪ್ರಯತ್ನಃ ಕರ್ತವ್ಯಃ | (ಕಾಠಕೋಪನಿಷದ್ಭಾಷ್ಯ ೨-೩-೫)

ಆದ್ದರಿಂದ ಆತ್ಮಜ್ಞಾನಪ್ರಾಪ್ತಿಗಾಗಿ ಇದೇ ಮನುಷ್ಯಜನ್ಮದಲ್ಲಿಯೇ ಈಗಲೇ ಪ್ರಯತ್ನವನ್ನು ಮಾಡಬೇಕು.

ಸುಗ್ಗಿ (ಬೆಳೆ ಕಟಾವಿಗೆ) ಬಂದಾಗ ದವಸಧಾನ್ಯಗಳನ್ನು ಸಂಗ್ರಹಿಸಿಕೊಳ್ಳಬೇಕು, ಗಾಳಿ ಬಂದಾಗ ತೂರಿಕೊಳ್ಳಬೇಕು— ಎಂಬಂತೆ ಈ ನರಜನ್ಮ ಬಂದಾಗ ಆತ್ಮಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಛಳಿಗಾಲದಲ್ಲಿ ಬಿಸಿಲುಬಂದಾಗಲೇ ಮೈಕಾಯಿಸಿಕೊಂಡಂತೆ, ಹಸಿವಾದಾಗ ಊಟದೊರೆತಾಗ ಊಟಮಾಡಿಬಿಡುವಂತೆ, ನಾಳೆ ಎಂದವನ ಬಾಳು ಹಾಳು ಎಂಬಂತೆ, ಭಗವದನುಗ್ರಹದಿಂದ ವಿಚಾರಶಕ್ತಿಯಿರುವ ಈ ಮನುಷ್ಯಜನ್ಮ ದೊರೆತಾಗಲೇ ವೇದಾಂತಗ್ರಂಥಗಳನ್ನೂ, ಸದ್ಗುರುಗಳನ್ನೂ ಭಗವಂತನು ಕರುಣಿಸಿರುವಾಗ, ಹೇಗಾದರೂ ಮಾಡಿ ಸದ್ಗುರುಗಳನ್ನು ಆಶ್ರಯಿಸಿ ವೇದಾಂತವಾಕ್ಯಗಳನ್ನು ಶ್ರವಣ-ಮನನ-ನಿದಿಧ್ಯಾಸನ ಮಾಡಿ ಆತ್ಮಜ್ಞಾನವನ್ನು ಸಂಪಾದಿಸಿಕೊಂಡು ಉದ್ಧಾರವಾಗಬೇಕು. 

ಅದಕ್ಕಾಗಿಯೇ ಭಗವಂತನು ಈ ನರಜನ್ಮವನ್ನು ದಯಪಾಲಿಸಿ ಮುಕ್ತನಾಗಲು, ಸಕಲ ಸಂಕಟಬಂಧನದಿಂದ ಬಿಡುಗಡೆಹೊಂದಲು ಒಂದು ಅವಕಾಶವನ್ನಿತ್ತಿದ್ದಾನೆ. ಇಂಥ ಸಂದರ್ಭದಲ್ಲಿ ನಾಳೆ ಎನ್ನುವುದು ದಡ್ಡತನ. ಬೇಗನೆ ಈ ಸದವಕಾಶವನ್ನು ಇವತ್ತೇ ಈಗಲೇ ಸದುಪಯೋಗಪಡಿಸಿಕೊಳ್ಳೋಣ, ಶಾಶ್ವತವಾದ ಬ್ರಹ್ಮಾನಂದವನ್ನು ಹೊಂದೋಣ.

ಸಾಧಕರಿಗೆ ಹಿತೋಪದೇಶ

೫) ಬಾಹ್ಯವಿಷಯಪ್ರೀತೇಃ ಕ್ಷಣಿಕಾಯಾಃ ಇಂದ್ರಿಯಾಣಿ ನಿವರ್ತಯೇತ್ ಆತ್ಮನಿ ಅಕ್ಷಯಸುಖಾರ್ಥೀ | (ಗೀತಾಭಾಷ್ಯ ೫-೨೧)

ತನ್ನೊಳಗೇ ಅಕ್ಷಯವಾದ ಸುಖವನ್ನು ಬಯಸುವ ಸಾಧಕನು ಹೊರಗಿನ ಭೋಗವಸ್ತುಗಳಲ್ಲಿರುವ ಕ್ಷಣಿಕವಾದ ಪ್ರೀತಿಯಿಂದ ಇಂದ್ರಿಯಗಳನ್ನು ಒಳಗೆ ಸರಿಸಿಕೊಳ್ಳಬೇಕು. 

ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನ ಇಂದ್ರಿಯಗಳೂ ಹೊರಗಿನ ವಿಷಯಗಳಲ್ಲೇ ಮುಳುಗಿರುತ್ತವೆ. ಅದನ್ನು ನೋಡಬೇಕು, ಇದನ್ನು ಕೇಳಬೇಕು, ಅಲ್ಲಿಗೆ ಹೋಗಬೇಕು, ಆ ಚಿನ್ನದ ಆಭರಣವನ್ನೋ ಬಟ್ಟೆಯನ್ನೋ ಧರಿಸಿಕೊಳ್ಳಬೇಕು — ಇತ್ಯಾದಿ. ಇಷ್ಟೇ ಪ್ರತಿಯೊಬ್ಬನ ಜೀವನ.

ಇಷ್ಟರಲ್ಲೇ ಖಂಡಿತವಾಗಿಯೂ ಅಕ್ಷಯಾನಂದವು ದೊರಕದು. ಶಾಶ್ವತಾನಂದ ಬೇಕಾದರೆ ಅಂತರ್ಮುಖಿಗಳಾಗಬೇಕು. ಏಕೆಂದರೆ, ಆತ್ಮನೇ ಆನಂದಸಾಗರ, ಸುಖದ ಗಣಿ. ಆತ್ಮನಿಂದಲೇ ಆನಂದವು ಹೊರಹೊಮ್ಮುತ್ತಿರುತ್ತದೆ. ಆತ್ಮಜ್ಞಾನವುಳ್ಳವರಿಗೆ ಬ್ರಹ್ಮಾನಂದವು ಸದಾ ಸ್ವಭಾವವೇ ಆಗಿರುತ್ತದೆ. ಆ ಆನಂದಕ್ಕೆ ಎಂದೂ ನಾಶವೆಂಬುದೇ ಇರುವುದಿಲ್ಲ.

ಇನ್ನು, ನಮಗೆ ವಿಷಯಸುಖವೂ ಬೇಕು, ಬ್ರಹ್ಮಾನಂದವೂ ಬೇಕು— ಎಂದರೆ ಅದು ಸಿದ್ಧಿಸದು. ಯಾಕೆಂದರೆ ಒಂದು ಬಹಿರ್ಮುಖ, ಇನ್ನೊಂದು ಅಂತರ್ಮುಖ; ಒಂದು ದುಃಖಸಾಗರ, ಇನ್ನೊಂದು ಆನಂದಸಾಗರ. 

ಆದ್ದರಿಂದ ಬ್ರಹ್ಮಾನಂದವನ್ನು ಬಯಸುವ ಪ್ರತಿಯೊಬ್ಬ ಸಾಧಕನೂ ವಿಷಯಭೋಗಗಳಲ್ಲಿ ಅನುರಕ್ತಿಯನ್ನು ಕಡಿಮೆಮಾಡಿಕೊಳ್ಳುತ್ತಾ ಸರಳಜೀವಿಯಾಗಿ ಆತ್ಮಾನುಸಂಧಾನವನ್ನು ಮಾಡುತ್ತಿರಬೇಕು ಎಂಬುದು ಆದಿಶಂಕರ ಭಗವತ್ಪಾದ ಪೂಜ್ಯರ ಆದರಪೂರ್ವಕವಾದ ಹಿತನುಡಿ.


ಜಿಜ್ಞಾಸುಗಳಿಗೆ ವೇದಾಂತವೇ ಗತಿ

೬) ಶಾಸ್ತ್ರಾದೇವ ಪ್ರಮಾಣಾತ್ ಜಗತೋ ಜನ್ಮಾದಿಕಾರಣಂ ಬ್ರಹ್ಮ ಅಧಿಗಮ್ಯತೇ ಇತ್ಯಭಿಪ್ರಾಯಃ | (ಬ್ರಹ್ಮಸೂತ್ರಭಾಷ್ಯ ೧-೧-೩)

ವೇದಾಂತ-ಶಾಸ್ತ್ರವೆಂಬ ಪ್ರಮಾಣದ ಆಧಾರದಿಂದಲೇ ಈ ಜಗತ್ತಿನ ಸೃಷ್ಟಿ ಮೊದಲಾದವುಗಳಿಗೆ ಕಾರಣವಾಗಿರುವ ಬ್ರಹ್ಮವು ಸರಿಯಾಗಿ ತಿಳಿಯಲ್ಪಡುವುದು.

ಬ್ರಹ್ಮವು ಹೇಗಿದೆ? ಅದನ್ನು ತಿಳಿಯುವ ಬಗೆ ಹೇಗೆ? ಈ ಜಗತ್ತಿಗೆಲ್ಲ ಬ್ರಹ್ಮವೇ ಕಾರಣವು ಹೇಗೆ? ಎಲ್ಲ ಜೀವರೂ ಬ್ರಹ್ಮಸ್ವರೂಪರೆಂಬುದು ಹೇಗೆ? ನಾನೇ ಬ್ರಹ್ಮವೆಂದರಿಯುವ ಬಗೆ ಹೇಗೆ? ಬ್ರಹ್ಮಾತ್ಮಜ್ಞಾನದಿಂದ ಮುಕ್ತಿಪ್ರಾಪ್ತಿಯು ಹೇಗೆ? ಇತ್ಯಾದಿ ಎಲ್ಲವಕ್ಕೂ ವೇದಾಂತಶಾಸ್ತ್ರಗಳೇ ಉತ್ತರವೀಯಬಲ್ಲವು. 

ಆತ್ಮಾನಾತ್ಮ ವಿವೇಕ, ಇಹಾಮುತ್ರ ಫಲಭೋಗ ವಿರಾಗ, ಶಮದಮಾದಿ ಷಟ್ ಸಂಪತ್ತಿ ಹಾಗೂ ಮುಮುಕ್ಷುತ್ವವೆಂಬ ಸಾಧನಸಂಪನ್ನರಾದ ಅಧಿಕಾರೀ ಜಿಜ್ಞಾಸುಗಳಿಗೆ ಪರಬ್ರಹ್ಮದ ಬಗ್ಗೆ ಸಕಲ ವಿಚಾರಗಳನ್ನೂ ನಿಶ್ಚಯಾತ್ಮಕವಾಗಿ ತಿಳಿಹೇಳುವ ಏಕೈಕ ಪ್ರಮಾಣ ಶಾಸ್ತ್ರವೆಂದರೆ ವೇದಾಂತವೊಂದೇ. ಹೀಗೆ ವೇದಾಂತಗಳು (ಉಪನಿಷತ್ತುಗಳು ಹಾಗೂ ತದ್ವಿಚಾರ ಸಂಬಂಧಿ ಗ್ರಂಥಗಳು) ಜಿಜ್ಞಾಸುಗಳಿಗೆ ಮಾರ್ಗದರ್ಶಿ, ಮುಮುಕ್ಷುಗಳ ಕೈಪಿಡಿ, ಸಾಧಕರ ಸಾಧನಸೋಪಾನ ಮಾರ್ಗಮರ್ಮ ದರ್ಶಕ.

ಸಕಲ ವೇದ-ಶಾಸ್ತ್ರಗಳ ಸಾರವಾದ ವೇದಾಂತವನ್ನುಳಿದು ಬೇರಾವುದರಿಂದಲೂ ಬ್ರಹ್ಮಸ್ವರೂಪದ ಯಥಾರ್ಥಜ್ಞಾನವಾಗದು. ಸದ್ಗುರುಗಳ ಸಹಾಯದಿಂದ, ಆಚಾರ್ಯರ ಮಾರ್ಗದರ್ಶನದಂತೆ ಮಾಡಿದ ವೇದಾಂತಗಳ ಅಧ್ಯಯನದಿಂದ ನಮಗೆ ಸರಿಯಾಗಿ ಬ್ರಹ್ಮತತ್ತ್ವವು ತಿಳಿಯುವುದು.


೨. ಬ್ರಹ್ಮವಿದ್ಯೆಗೆ ಅಧಿಕಾರ— ವೈರಾಗ್ಯ, ಸಾಧನಗಳು

ಸಾಧನ-ಚತುಷ್ಟಯ


೭) ನಿತ್ಯಾನಿತ್ಯವಸ್ತುವಿವೇಕಃ, ಇಹಾಮುತ್ರಾರ್ಥಫಲಭೋಗವಿರಾಗಃ, ಶಮದಮಾದಿಸಾಧನಸಂಪತ್, ಮುಮುಕ್ಷುತ್ವಂ ಚ | ಏತೇಷು ಸಾಧನೇಷು ಸತ್ಸು ಬ್ರಹ್ಮ ಜಿಜ್ಞಾಸಿತುಂ ಜ್ಞಾತುಂ ಚ ಶಕ್ಯತೇ |
(ಬ್ರಹ್ಮಸೂತ್ರಭಾಷ್ಯ ೧-೧-೧)


ನಿತ್ಯ-ಅನಿತ್ಯ-ವಸ್ತು-ವಿವೇಕ, ಭೋಗದಲ್ಲಿ ವೈರಾಗ್ಯ, ಶಮ-ದಮಾದಿ ಷಟ್ ಸಂಪತ್ತುಗಳು, ಮತ್ತು ಮುಮುಕ್ಷುತ್ವಗಳೆಂಬ 'ಸಾಧನ-ಚತುಷ್ಟಯ' ಗಳನ್ನು ಸಂಪಾದಿಸಿಕೊಂಡರೆ ಅಂಥವನು ಬ್ರಹ್ಮವನ್ನು ವಿಚಾರಮಾಡಿ, ಅದರಂತೆ ಅನುಭವದಿಂದ ಅರಿತುಕೊಳ್ಳಲು ಸಮರ್ಥನಾಗುತ್ತಾನೆ.


ತಾನು ಉದ್ಧಾರವಾಗಬೇಕು, ಶಾಶ್ವತಾನಂದವನ್ನು ಪಡೆಯಬೇಕು ಎಂಬ ಸಾಧಕನು ಮೊಟ್ಟಮೊದಲು "ಸಾಧನ ಚತುಷ್ಟಯ" ಸಂಪನ್ನನಾಗಬೇಕು.


  1. ವಿವೇಕ — ಪ್ರಪಂಚದ ಸಕಲ ಸಂಪತ್ತುಗಳೂ ಅನಿತ್ಯವಾದವುಗಳು, ಮೋಕ್ಷವೊಂದೇ ಶಾಶ್ವತವಾದದ್ದು ಎಂಬ ವಿವೇಕವು ಜಿಜ್ಞಾಸುವಿಗೆ ಮುಖ್ಯವಾಗಿ ಇರಬೇಕು.
  2. ವೈರಾಗ್ಯ — ಅನಿತ್ಯವಾದ ಭೋಗವಸ್ತುಗಳಲ್ಲಿ ಅನುರಾಗವಿಲ್ಲದೆ, ಆತ್ಮನನ್ನೇ ತಿಳಿಯಬೇಕೆಂಬ ವಿಶೇಷವಾದ ರಾಗವೇ 'ವೈರಾಗ್ಯ' ವು.
  3. ಶಮಾದಿಸಂಪತ್ತು  — (1)'ಶಮ' ಎಂದರೆ ಶಾಂತವಾದ ಮನಸ್ಸು. (2)'ದಮ' ಎಂದರೆ ಇಂದ್ರಿಯ ನಿಗ್ರಹ. (3)'ಉಪರತಿ' ಎಂದರೆ ಆದಷ್ಟೂ ಲೌಕಿಕ ವ್ಯವಹಾರಗಳನ್ನು ಕಡಿಮೆ ಮಾಡಿಕೊಳ್ಳುವುದು. (4)'ತಿತಿಕ್ಷಾ' ಎಂದರೆ ಸುಖ-ದುಃಖ, ಲಾಭ-ನಷ್ಟ, ಮಾನ-ಅಪಮಾನಾದಿ ದ್ವಂದ್ವಗಳನ್ನು ಸಹಿಸಿಕೊಳ್ಳುವುದು. (5)'ಶ್ರದ್ಧಾ' ಅಂದರೆ ಗುರು-ಶಾಸ್ತ್ರ-ವಾಕ್ಯಗಳಲ್ಲಿ ಆದರ ಮತ್ತು ಆಸಕ್ತಿ. (6)'ಸಮಾಧಾನ' ಎಂದರೆ ಏಕಾಗ್ರತೆ (ಸಮ್ಯಕ್ ಆಧಾನಮ್— ಮನಸ್ಸನ್ನು ಆತ್ಮನಲ್ಲೇ ಚೆನ್ನಾಗಿ ಇಡುವಿಕೆ).
  4. ಮುಮುಕ್ಷುತ್ವ  — ಜನ್ಮ-ಮರಣ ಸಂಸಾರಬಂಧನದಿಂದ ತಪ್ಪಿಸಿಕೊಳ್ಳಲೇಬೇಕೆಂಬ ತೀವ್ರೇಚ್ಛೆ.


ಆತ್ಮೋದ್ಧಾರವನ್ನು ಬಯಸುವವನು, ಸದಾನಂದವನ್ನು ಇಚ್ಛಿಸುವವನು, ಸಂಸಾರ ತಾಪತ್ರಯವನ್ನು ಪರಿಹರಿಸಿಕೊಳ್ಳಬೇಕೆಂದಿರುವವನು, ಭಗವಂತನೇ ತಾನಾಗಬೇಕೆಂದಿರುವವನು, ವಿಶ್ವವನ್ನೇ ಜಯಿಸಬೇಕೆಂದಿರುವವನು ಮೊದಲು ಈ ನಾಲ್ಕು ಗುಣಗಳನ್ನು ಪ್ರಯತ್ನಪೂರ್ವಕವಾಗಿ ಬೆಳೆಸಿಕೊಂಡು ಅವುಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಆತ್ಮವಿಜಯವೇ ವಿಶ್ವವಿಜಯ.


ಜ್ಞಾನಪ್ರಾಪ್ತಿಗೆ ಕರ್ಮಯೋಗವು ಬೇಕು


೮) ಏವಂ ಕರ್ಮಫಲತ್ಯಾಗಾತ್ ಕರ್ಮಯೋಗಸ್ಯ ಶ್ರೇಯಸ್ಸಾಧನತ್ವಮ್ ಅಭಿಹಿತಂ ಭವತಿ | (ಭಗವದ್ಗೀತಾಭಾಷ್ಯ ೧೨-೧೨)


ಫಲವನ್ನು ಬಯಸದೇ ಕರ್ಮ ಮಾಡುವುದರಿಂದ ಸಾಧಿತವಾಗುವ ಕರ್ಮಯೋಗವು ಮೋಕ್ಷಪ್ರಾಪ್ತಿಗೆ ಸಾಧನವಾಗುತ್ತದೆ (ಗೀತಾಚಾರ್ಯ ಶ್ರೀಕೃಷ್ಣ ಭಗವಂತನ ಅಭಿಪ್ರಾಯ).


ಜನಸಾಮಾನ್ಯರಿಗೆ ಕರ್ಮಗಳನ್ನು ಪೂರ್ತಿಯಾಗಿ ನಿಲ್ಲಿಸಿ ಸಂನ್ಯಾಸ ಸ್ವೀಕಾರ ಮಾಡಿ ನಿವೃತ್ತಿಮಾರ್ಗದಲ್ಲೇ ಮುನ್ನಡೆಯುವುದು ಬಹು ತ್ರಾಸದಾಯಕವೆನಿಸುತ್ತದೆಯಲ್ಲವೆ? ಅದಕ್ಕಾಗಿಯೇ, ಪ್ರವೃತ್ತಿಮಾರ್ಗದಲ್ಲಿರುವ ಮುಮುಕ್ಷುಗಳಾದ (ಮೋಕ್ಷಾಕಾಂಕ್ಷಿಗಳಾದ) ಮಾನವರಿಗೂ ಸುಲಭವಾಗುವಂತೆ ಮೋಕ್ಷದ ದಾರಿಯನ್ನು ಇಲ್ಲಿ ಶ್ರೀಶಂಕರರು ತೋರಿಸಿಕೊಟ್ಟಿದ್ದಾರೆ.


ಸಾಧಕರು ಮೊದಲು ಕರ್ಮಯೋಗವನ್ನು ಅನುಷ್ಠಾನ ಮಾಡಬೇಕು. ಯಾವ ಅಪಾಯವೂ ಇಲ್ಲದ ಸುಲಭವೂ ಸರಲವೂ ಆದ ರಾಜಮಾರ್ಗವೇ ' ಕರ್ಮಯೋಗ ' ಮಾರ್ಗ. ಇದರ ೪ ಮುಖ್ಯಲಕ್ಷಣಗಳಿವು—

  1. ಫಲದ ಆಶೆಯನ್ನು ತೊರೆದು ದೊರೆತದ್ದರಲ್ಲಿ ತೃಪ್ತಿಹೊಂದಿ ಶ್ರದ್ಧೆಯಿಂದ ಕರ್ಮಾನುಷ್ಠಾನ.
  2. ಸುಖದುಃಖಾದಿ ದ್ವಂದ್ವಗಳಲ್ಲಿ ಸಮತ್ವಬುದ್ಧಿಯಿಂದ ಕರ್ಮಾಚರಣೆ.
  3. ಭಗವದರ್ಪಣಬುದ್ಧಿಯಿಂದ ಭಕ್ತಿಪೂರ್ವಕ ಶರಣಾಗತಿಯಿಂದ ಕರ್ಮಾಚರಣೆ.
  4. ಕೇವಲ ಜೀವಿಸಲು ಅನಿವಾರ್ಯವಾದ ಕರ್ಮಗಳನ್ನು, ಚಿತ್ತಶುದ್ಧಿಗಾಗಿ ಮಾತ್ರ ಮಾಡಬೇಕು; ಅತಿಯಾದ ಕರ್ಮಪ್ರವಣತೆಯನ್ನು ಬಿಡಬೇಕು.
ವಿರಕ್ತನಿಗೇ ಆತ್ಮಜ್ಞಾನ

೯) ತಸ್ಮಾತ್ ದೃಷ್ಟಾದೃಷ್ಟೇಭ್ಯೋ ಬಾಹ್ಯಸಾಧನಸಾಧ್ಯೇಭ್ಯೋ ವಿರಕ್ತಸ್ಯ ಪ್ರತ್ಯಗಾತ್ಮವಿಷಯಾ ಬ್ರಹ್ಮಜಿಜ್ಞಾಸಾ ಭವತಿ | 
(ಕೇನೋಪನಿಷದ್ಭಾಷ್ಯ— ಅವತರಣಿಕಾ)

ಹಾಗಾಗಿ ಕಾಣುವ ಹಾಗೂ ಕಾಣದಿರುವ ಹೊರಗಿನ ಸಾಧನ-ಸಾಧ್ಯಗಳಿಂದ ವೈರಾಗ್ಯವನ್ನು ಹೊಂದಿ ವಿರಕ್ತನಾದವನಿಗೆ ಮಾತ್ರ ಪ್ರತ್ಯಗಾತ್ಮ ಹಾಗೂ ಪರಬ್ರಹ್ಮತತ್ತ್ವದ ವಿಷಯವನ್ನು ತಿಳಿಯುವ ಇಚ್ಛೆ (ಜಿಜ್ಞಾಸೆ) ಹಾಗೂ ಯೋಗ್ಯತೆಯು ಉಂಟಾಗುತ್ತದೆ.

ವೇದೋಕ್ತಶ್ರೌತಕರ್ಮಗಳನ್ನು ಮಾಡಿ ಸ್ವರ್ಗವನ್ನು ಪಡೆಯುವುದು, ಉಪಾಸನೆಯನ್ನು ಮಾಡಿ ಬ್ರಹ್ಮಲೋಕವನ್ನು ಹೊಂದುವುದು, ಲೌಕಿಕ-ವೈದಿಕ-ಸ್ಮಾರ್ತ-ಕಾಮ್ಯಕರ್ಮಗಳನ್ನು ಮಾಡಿ ಪತ್ನೀ, ಪುತ್ರ, ಪೌತ್ರ, ಧನ, ಧಾನ್ಯ, ಗೃಹಾದಿಗಳ ಪ್ರಾಪ್ತಿ— ಹೀಗೆ 'ಮಾಡಿ ಪಡೆಯುವುದೆಲ್ಲವೂ' ಸಂಸಾರಗತಿಯೇ; ಇದೆಲ್ಲವೂ ಅನಿತ್ಯವಾದದ್ದೇ; ಇದು ನನಗೆ ಸಾಕು; ನನಗೆ ಅನಿತ್ಯವಾದ ಫಲಗಳು ಬೇಕಾಗಿಲ್ಲ— ಎಂಬ ವಿವೇಕವನ್ನು ಸಂಪಾದಿಸಿಕೊಳ್ಳಬೇಕು. 

ಹೀಗೆ ವಿವೇಕ-ವಿಚಾರದಿಂದ ಉಂಟಾದ ಶುದ್ಧ ಪರಿಪಕ್ವ ವೈರಾಗ್ಯವುಳ್ಳ ವಿರಕ್ತನಿಗೆ ಲೌಕಿಕ ಸಂಪಾದನೆಯಲ್ಲಿ ವಿರಾಗವೂ, ಪಾರಮಾರ್ಥಿಕ ಬ್ರಹ್ಮಾತ್ಮಜ್ಞಾನ ಸಂಪಾದನೆಯಲ್ಲಿ ವಿಶೇಷವಾದ ರಾಗವೂ / ಆಸಕ್ತಿಯೂ ಉಂಟಾಗುತ್ತದೆ. 

ಇಂಥ ವಿವೇಕಿಯೂ ವಿರಕ್ತನೂ ಧೀರನೂ ಮುಮುಕ್ಷುವೂ ಬ್ರಹ್ಮಜಿಜ್ಞಾಸುವೂ ಸಾಧಕನೂ ಆದವನಿಗೆ ಬ್ರಹ್ಮಜ್ಞಾನವೂ ಉಂಟಾಗಿಬಿಡುತ್ತದೆ. ಆದ್ದರಿಂದ, 'ಮಾಡಿ ಪಡೆಯುವ' ಕರ್ಮಮಾರ್ಗದಿಂದ ಹಿಂಜರಿದು, 'ತಿಳಿದು ಪಡೆಯುವ' ಜ್ಞಾನಮಾರ್ಗದೆಡೆಗೆ ಮುನ್ನುಗ್ಗಿ, ಗುರುವಾಕ್ಯ ಹಾಗೂ ವೇದಾಂತಶಾಸ್ತ್ರವಾಕ್ಯಗಳ ಸಹಾಯದಿಂದ ತನ್ನ ಉದ್ಧಾರವನ್ನು ತಾನೇ ಮಾಡಿಕೊಳ್ಳಬೇಕು ಎಂಬುದೇ ಶ್ರೀಶಂಕರರ ಸಂದೇಶವು.


ವೈರಾಗ್ಯವೇ ಭಾಗ್ಯ!


೧೦) ತಸ್ಮಾತ್, ನ ಪುತ್ರ-ವಿತ್ತಾದಿ-ಲೋಭೈಃ ಪ್ರಲೋಭ್ಯಃ ಧೀರಃ ವಿವೇಕೀ |
(ಕಾಠಕೋಪನಿಷದ್ಭಾಷ್ಯ ೧-೧-೨೮)


ಹಾಗಾದ್ದರಿಂದ, ಧೀರನೂ ವಿವೇಕಿಯೂ ಆದವನು ಮಕ್ಕಳು, ಹಣ ಮುಂತಾದ ಭೋಗವಸ್ತುಗಳ ಪ್ರಲೋಭನೆಗೆ / ಆಕರ್ಷಣೆಗೆ / ಸೆಳೆತಕ್ಕೆ ಒಳಗಾಗುವುದಿಲ್ಲ. (ಅಂಥವುಗಳು ಧೀರವಿವೇಕಿಯನ್ನು ಮರುಳುಗೊಳಿಸಲಾರವು.)


ಈ ನರಜನ್ಮದ ಭಾಗ್ಯವೇ ವೈರಾಗ್ಯ!! ಅತ್ಯಂತ ದುರ್ಲಭವಾದ ಈ ನರಜನ್ಮವನ್ನು ಕೇವಲ ಪ್ರಾಣಿಮಾತ್ರರಂತೆ ಲೌಕಿಕ ವಿಷಯಭೋಗಗಳಲ್ಲೇ ಕಳೆಯಬಾರದು. ಮಾನವನು ಸತ್ಯ, ಧರ್ಮ, ಇಂದ್ರಿಯನಿಗ್ರಹಾದಿ ಸಾಧನಗಳನ್ನಾಚರಿಸುತ್ತಾ ತನ್ನ ಆತ್ಮಸ್ವರೂಪವನ್ನು ಸದಾ ಚಿಂತಿಸುತ್ತಿರಬೇಕು.


ಇಂದ್ರಿಯಗಳಿಗೆ ದಾಸನಾಗದೆ ಧೀರನೂ, ವಿವೇಚನಾಶಕ್ತಿಯುಳ್ಳವನೂ ಆಗಿ, ಆದಷ್ಟು ತನ್ನ ಬಯಕೆಗಳನ್ನು ಕಡಿಮೆಮಾಡಿಕೊಳ್ಳುತ್ತಾ ವೈರಾಗ್ಯಸಂಪನ್ನನಾಗಿ, ವೇದಾಂತಚಿಂತನೆಯನ್ನು ಮಾಡುತ್ತಾ ಆತ್ಮಜ್ಞಾನವನ್ನು ಪಡೆದು ಧನ್ಯನಾಗಬೇಕು. ಲೌಕಿಕವಿಷಯಭೋಗದಿಂದ ದುಃಖವೇ ಹೊರತು, ಶಾಂತಿಯಾಗಲೀ ಆನಂದವಾಗಲೀ ಎಂದಿಗೂ ಯಾರಿಗೂ ಎಲ್ಲಿಯೂ ದೊರಕಿರುವುದಿಲ್ಲ. ಹಾಗಾಗಿ, ವೈರಾಗ್ಯ (ತ್ಯಜಿಸುವಿಕೆ, ಬಿಡುವಿಕೆ) ದಿಂದಲೇ ಆನಂದವು. ಇದು ಆದಿಶಂಕರ ಭಗವತ್ಪಾದಾಚಾರ್ಯ ಪೂಜ್ಯರ ಹಿತೋಪದೇಶ. ವೇದವೇದಾಂತವಾರಿಧಿ ವಿದ್ವಾನ್ ಮಹಾಮಹೋಪಾಧ್ಯಾಯ ಡಾ || ಕೆ.ಜಿ.ಸುಬ್ರಾಯಶರ್ಮಾರವರ ಅಮೃತವಾಣಿ.


ಸಾಧಕರಿಗೆ ಶಂಕರರ 'ಎಚ್ಚರಿಕೆಯ ಗಂಟೆ'


೧೧) ವಿಸ್ಮೃತ್ಯಾಪಿ ಅನೃತಂ ನ ವಕ್ತವ್ಯಮ್ | (ತೈತ್ತಿರೀಯೋಪನಿಷದ್ಭಾಷ್ಯ ೧-೧೧)


ಶಾಶ್ವತಾನಂದವನ್ನು ಬಯಸುವವರು, ಮುಕ್ತಿಯನ್ನು ಇಚ್ಛಿಸುವವರು, ಆತ್ಮೋದ್ಧಾರದ ಬಯಕೆಯುಳ್ಳವರು, ಅಧ್ಯಾತ್ಮಸಾಧಕರು ಮರೆತೂ ಕೂಡ ಸುಳ್ಳನ್ನು ಹೇಳಬಾರದು.


ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ದುರಾಸೆಯಿಂದ ಸುಳ್ಳು ಹೇಳುವುದನ್ನೇ ಅದೇ ಸಹಜವೋ ಎಂಬಷ್ಟರಮಟ್ಟಿಗೆ ಅಭ್ಯಾಸಮಾಡಿಕೊಂಡಿದ್ದಾನೆ. ಸತ್ಯವಂತನಿಗಾದರೋ ವ್ಯಂಗ್ಯವಾಗಿ "ಗಾಂಧಿ" , "ಹರಿಶ್ಚಂದ್ರ" ಇತ್ಯಾದಿ ಬಿರುದುಗಳನ್ನಿಡುತ್ತಾರೆ ಇಂದಿನ ಜನಸಾಮಾನ್ಯರು. ಈಗ ಸುಳ್ಳೇ ದೇವರಂತಾಗಿಬಿಟ್ಟಿರುವುದಂತೂ ವಿಪರ್ಯಾಸವೇ ಸರಿ! ನಾವೇನು ಹೇಳೋದು? ನಮಗಿಂತ ದೊಡ್ಡ ದೊಡ್ಡ ಸುಳ್ಳುಗಾರರಿಲ್ಲವೆ ಎಂಬ ಸಮರ್ಥನೆಯನ್ನೂ ಮಾಡಿಕೊಳ್ಳುತ್ತಾರೆ. ಸುಳ್ಳು ಹೇಳದೇ ಬದುಕುವುದೇ ಕಷ್ಟ ಈ ಕಾಲದಲ್ಲಿ; "ಸತ್ಯವಂತರಿಗಿದು ಕಾಲವಲ್ಲ", "ಸತ್ಯ ಹೇಳಿದವನು ಸತ್ತೇ ಹೋದಾನು" ಮುಂತಾದ ಮಾತುಗಳಿವೆ. 


ಆದರೆ, ಇದು ಖಂಡಿತಾ ಸರಿಯಲ್ಲ. ಏಕೆಂದರೆ, ಒಂದು ಸುಳ್ಳನ್ನು ಹೇಳಿದರೆ ಅದನ್ನು ಮುಚ್ಚಲು ಸುಳ್ಳಿನ ಸರಪಣಿಯನ್ನೇ ಪೋಣಿಸಬೇಕಾಗುವುದು. ಆದರೂ, ಕೊನೆಗೊಂದು ದಿನ ಸತ್ಯವು ಹೊರಬಂದೇ ಬರುವುದು; ನಿಜ ಬಂಡವಾಳ ತಿಳಿದಾಗ ನಮ್ಮ ಮಾನವೇ ಹರಾಜಾಗುವುದು. ಏಕೆಂದರೆ, "ಸತ್ಯಮೇವ ಜಯತೇ ನ ಅನೃತಮ್ " ಇದು ಉಪನಿಷದ್ವಾಕ್ಯ, ಅನುಭವಾಮೃತ. ಹಾಗಾಗಿ, ಸುಳ್ಳು ಹೇಳಲೇ ಬಾರದು. ಹೇಳಿದರೆ ಮನಸ್ಸು ಕಲುಷಿತವೂ, ಭಯಯುಕ್ತವೂ ಆಗುತ್ತದೆ. ನಮ್ಮ ವರ್ಚಸ್ಸು ಕುಂದಿ, ನಾವು ನಿಸ್ತೇಜರಾಗಿ, ನಮ್ಮ ಸಂಕಲ್ಪ, ಮಾತು, ಕಾರ್ಯಗಳಾವುವೂ ಯಶಸ್ವಿಯಾಗಲಾರವು. ಸತ್ಯವನ್ನೇ ಎಂತಹ ಕಠಿನ ಪರಿಸ್ಥಿತಿಯಲ್ಲೂ ನುಡಿದರೆ, ನಮ್ಮ ಮೇಲೆ ಭಗವಂತನ ಹಾಗೂ ಎಲ್ಲರ ಕರುಣೆ ಉಂಟಾಗುವುದು. ಕ್ಷಣಿಕವಾಗಿ ದುಃಖವಾದರೂ ಕೊನೆಗೆ ನಮಗೆ ಹಿತವೇ ಆಗುವುದು. ಹಾಗಾಗಿ ಕ್ಷಣಿಕ ಜಯಕ್ಕಾಗಿ, ಸುಖಕ್ಕಾಗಿ ಸುಳ್ಳು ಹೇಳಿ ನಮಗೆ ನಾವೇ ಹಾನಿಮಾಡುವುದು ಬೇಡ. ಆದರೆ ಸದಾ ಸತ್ಯವಚನರಾಗಿ ನಮ್ಮ ಸಂಕಲ್ಪ / ಇಚ್ಛಾ, ಆಜ್ಞಾ / ಜ್ಞಾನ ಹಾಗೂ ಕ್ರಿಯಾ— ಶಕ್ತಿಗಳನ್ನು ವರ್ಧಿಸಿಕೊಂಡು, ಅಂತಿಮವಿಜಯಿಗಳಾಗೋಣ. ಸತ್ಯವೇ ದೇವರು, ಸತ್ಯವೇ ತಪಸ್ಸು. 


"ಸತ್ಯಂ ಜ್ಞಾನಮ್ ಅನಂತಂ ಬ್ರಹ್ಮ" 

"ಸತ್ಯಂ ವದ | ಧರ್ಮಂ ಚರ | ಸ್ವಾಧ್ಯಾಯಾತ್ ಮಾ ಪ್ರಮದಃ ||"


ಸದ್ಗುರುಗಳ ಅನುಗ್ರಹದಿಂದ ಆತ್ಮಜ್ಞಾನಪ್ರಾಪ್ತಿ


೧೨) ಯೇ ಸಮ್ಯಗ್ದರ್ಶಿನಃ ತೈರುಪದಿಷ್ಟಂ ಜ್ಞಾನಂ ಕಾರ್ಯಕ್ಷಮಂ ಭವತಿ | (ಗೀತಾಭಾಷ್ಯ ೪-೩೪)


ಯಾರು ಬ್ರಹ್ಮಾತ್ಮನ ಸರಿಯಾದ ದೃಷ್ಟಿ, ದರ್ಶನ, ಅನುಭವಾದಿಗಳಾಗಿರುವ ಸದ್ಗುರುಗಳೋ ಅಂಥವರಿಂದ ಉಪದೇಶಿಸಲ್ಪಟ್ಟ ಜ್ಞಾನವೇ ಸರಿಯಾದ, ಆತ್ಮಜ್ಞಾನವನ್ನುಂಟುಮಾಡಲು ಸಮರ್ಥವಾದ ತಿಳುವಳಿಕೆ / ಉಪದೇಶವಾಗಿರುತ್ತದೆ. ಅಂಥದ್ದೇ ಬ್ರಹ್ಮಾತ್ಮಜ್ಞಾನವನ್ನುಂಟುಮಾಡಲು ಕ್ಷಮತೆಯುಳ್ಳದ್ದಾಗುತ್ತದೆ. ಅಂತಹ ಸದ್ಗುರುಗಳನ್ನು ಭಕ್ತಿಯಿಂದ ಆರಾಧಿಸಿ, ಅವರ ಉಪದೇಶವನ್ನು ಮನನ ಮಾಡಿದರೆ ನಾವು ಮುಕ್ತರಾಗಿಬಿಡುತ್ತೇವೆ.


ಆತ್ಮಜ್ಞಾನಕ್ಕೆ 'ಶ್ರವಣ'ವು ಬೇಕೇ ಬೇಕು


೧೩) ದರ್ಶನಪರ್ಯವಸಾನಾನಿ ಹಿ ಶ್ರವಣಾದೀನಿ ಆವರ್ತ್ಯಮಾನಾನಿ ದೃಷ್ಟಾರ್ಥಾನಿ ಭವನ್ತಿ |
(ಬ್ರಹ್ಮಸೂತ್ರಭಾಷ್ಯ ೪-೧-೧)


ವೇದಾಂತವಾಕ್ಯಗಳ ಶ್ರವಣ, ಮನನ, ನಿದಿಧ್ಯಾಸನಾದಿಗಳು ಆತ್ಮದರ್ಶನವುಂಟಾಗುವ ಪರ್ಯಂತ ಪುನರಾವರ್ತನೆಯಾಗಬೇಕು. ಹೀಗೆ ಮತ್ತೆ ಮತ್ತೆ ಶ್ರವಣಮಾಡುತ್ತಿದ್ದರೆ ಈ ಜನ್ಮದಲ್ಲಿಯೇ ಆತ್ಮದರ್ಶನ / ಸಾಕ್ಷಾತ್ಕಾರ ಉಂಟಾಗುತ್ತದೆ.


ಸದ್ಗುರುಗಳ ಉಪದೇಶಶ್ರವಣದಿಂದ ಮುಮುಕ್ಷುಗಳಿಗೆ ಆತ್ಮಜ್ಞಾನ, ಅಜ್ಞಾನನಿವೃತ್ತಿ. ಶ್ರವಣವೇ ಸಕಲ ಸಾಧನಗಳ ಸಾರ, ಅದಿಲ್ಲದೆ ಸಾಧನೆ ಪರಿಪೂರ್ಣವಾಗದು. 


ಕರ್ಮಗಳಿಂದ ಹಾಗೂ ಉಪಾಸನೆಗಳಿಂದ ಅ-ದೃಷ್ಟ (ಕಣ್ಣಿಗೆ ಕಾಣದ) ಫಲಗಳು ದೊರಕುತ್ತವೆ. ಈ ಜನ್ಮದಲ್ಲಿ ಅಗ್ನಿಹೋತ್ರವನ್ನು ಮಾಡಿದರೆ ಮರಣಾನಂತರ / ಇನ್ನೊಂದು ಜನ್ಮದಲ್ಲಿ ಸ್ವರ್ಗಲೋಕಪ್ರಾಪ್ತಿ. ಸಾಮಾನ್ಯವಾಗಿ ಶಾಸ್ತ್ರೋಕ್ತಕರ್ಮಫಲಪ್ರಾಪ್ತಿಯು ಮರಣಾನಂತರವೇ. ಆದರೆ ವೇದಾಂತಶ್ರವಣದ ಫಲವು ಇಲ್ಲಿಯೇ ಈಗಲೇ ಉಂಟಾಗುತ್ತದೆ. ವೇದಾಂತಶ್ರವಣದ ಫಲವೇನು? ಎಂದರೆ ಆತ್ಮಜ್ಞಾನವೇ ಆಗಿದೆ.


ಶ್ರದ್ಧೆಯಿಂದ ಮಾಡಿದ ಸದ್ಗುರುಗಳ ವೇದಾಂತೋಪದೇಶ-ಶ್ರವಣದಿಂದ ಮುಮುಕ್ಷು-ಸಾಧಕರಿಗೆ ಈ ಜನ್ಮದಲ್ಲೇ ಬ್ರಹ್ಮಜ್ಞಾನವುಂಟಾಗುತ್ತದೆ. ಹೀಗಾಗಿ, ಶ್ರವಣವು ಆತ್ಮಜ್ಞಾನಪ್ರಾಪ್ತಿಗೆ ನೇರವಾದ ಸಾಧನ. ಆದುದರಿಂದ, ಜಿಜ್ಞಾಸು-ಸಾಧಕರು ಶ್ರವಣವನ್ನು ಬಿಡದೇ ಮಾಡುತ್ತಲೇ ಇರಬೇಕು.


ಮಾಯೆಯನ್ನು ದಾಟುವುದು ಹೇಗೆ?


೧೪) ಯೇ ಸಾಧಕಾಃ ಮಾಯಾವಿನಂ ಸ್ವಾತ್ಮಭೂತಂ ಸರ್ವಾತ್ಮನಾ ಪ್ರತಿಪದ್ಯಂತೇ, ತೇ ವೈಷ್ಣವೀಂ ಮಾಯಾಮ್ ಅತಿಕ್ರಾಮನ್ತಿ |
(ಗೀತಾಭಾಷ್ಯ ೭-೧೪)


ಯಾವ ಸಾಧಕರು ಮಾಯಾವಿಯೂ ತಮ್ಮ (ಆತ್ಮರೂಪನೂ) ಸ್ವ-ರೂಪನೂ ಆಗಿರುವ ಪರಮಾತ್ಮನನ್ನು ಸಂಪೂರ್ಣವಾಗಿ ಶರಣುಹೊಂದುತ್ತಾರೋ, ಅಂಥವರು ಆ ವ್ಯಾಪಕವಾದ ಮಾಯೆಯನ್ನು ದಾಟಿಹೋಗುತ್ತಾರೆ. 


ಅಧ್ಯಾತ್ಮಸಾಧಕರು ಮಹಾಮಾಯೆಯಾದ ಜಗಜ್ಜನನಿಯನ್ನು ಪೂಜಿಸಿ, ಶರಣುಹೊಂದಿ, ಅದರ ಸ್ವರೂಪವನ್ನು ಚೆನ್ನಾಗಿ ತಿಳಿದುಕೊಂಡು, ಮಾಯಾಶಕ್ತಿಯ ಆವರಣವನ್ನು ಕಳಚಿಕೊಳ್ಳಬಹುದಾಗಿದೆ. 


ಅಜ್ಞಾನಿಗಳು ನಾನು ನನ್ನದೆಂಬ ಅಹಂ ಕಾರ ಮಮ ಕಾರಗಳಿಂದ, ಕಾಮ ಕ್ರೋಧ ರಾಗ ದ್ವೇಷಾದಿಗಳಿಂದ, ಪುತ್ರ ಮಿತ್ರ ಕಲತ್ರಾದಿ ಬಂಧನಗಳಿಂದ ಕೂಡಿಕೊಂಡು ದುಃಖಿಗಳಾಗಿರುತ್ತಾರೆ. ಇದಕ್ಕೇ ವೇದಾಂತವು "ಮಾಯಾ" ಎನ್ನುತ್ತದೆ. ಭಗವಂತನ ವಿಸ್ಮೃತಿಯೇ (ಮರೆವೇ) ಮಾಯೆ. ಇದು ಭಗವದಧೀನ. ಹಾಗಾಗಿ ಭಗವಂತನೇ ಮಾಯಾವಿಯು. ಸಕಲ ಜೀವರನ್ನೂ ಈ ಮಾಯಾಶಕ್ತಿಯು ಸಂಸಾರಕೂಪದಲ್ಲಿ ಕೆಡಹುತ್ತದೆ. 


ಸಾಧಕರು ಭಗವಂತನಿಗೆ ಸಂಪೂರ್ಣವಾಗಿ ಶರಣಾದರೆ ಆಗ ಅಂಥವರನ್ನು ಈ ಮಾಯೆಯು ಬಿಟ್ಟು ತೊಲಗುತ್ತದೆ. ಅಹಂಕಾರ ಮಮಕಾರಗಳನ್ನು ಕೈಬಿಟ್ಟು ಅವುಗಳ ಸ್ಥಾನದಲ್ಲಿ ಭಗವಂತನನ್ನು ಕೂರಿಸಬೇಕು. ಹೀಗೆ ಮಾಡಿದವರು ಮಾಯೆಯನ್ನು ಮೀರಿ ಭಗವಂತನನ್ನೇ ಹೊಂದುತ್ತಾರೆ.


ತಪಸ್ಸಿಲ್ಲದೆ ಆತ್ಮಜ್ಞಾನವಿಲ್ಲ!


೧೫) ತಪಸಾ ಹಿ ಇಂದ್ರಿಯ-ಮನ-ಏಕಾಗ್ರತಯಾ, ಬ್ರಹ್ಮಚರ್ಯೇಣ ಆತ್ಮಾ ಪ್ರಾಪ್ತವ್ಯಃ | 
(ಮುಂಡಕೋಪನಿಷದ್ಭಾಷ್ಯ ೩-೧-೫)


ಇಂದ್ರಿಯಗಳ ಹತೋಟಿ (ದಮ), ಮನಸ್ಸಿನ ಏಕಾಗ್ರತೆ (ಶಮ) ಹಾಗೂ ಲೈಂಗಿಕಸುಖವಿರಾಗ / ಬ್ರಹ್ಮವಿದ್ಯಾತತ್ಪರತೆ (ಬ್ರಹ್ಮಚರ್ಯ) — ಎಂಬ ತಪಸ್ಸಿನಿಂದ (ಸತತವಾದ, ನಿರಂತರವಾದ, ಭಂಗವಾಗದ ಕಠಿನವಾದ ಅನುಷ್ಠಾನದಿಂದ) ಆತ್ಮಜ್ಞಾನವು ಪಡೆಯಲ್ಪಡತಕ್ಕುದು.


ಆತ್ಮಜ್ಞಾನವನ್ನು ಬಯಸುವ ಸಾಧಕರು ತಪವನ್ನಾಚರಿಸಬೇಕು. ತಪಸ್ಸಿನಿಂದಲೇ ಚಿತ್ತಶುದ್ಧಿ, ಅದಿಲ್ಲದೆ ಆತ್ಮಜ್ಞಾನವಿಲ್ಲ. ತಪಸ್ಸೆಂದರೆ (ತಪನ, ತಪತಿ, ಸುಡುವಿಕೆ) ಅಹಂಕಾರ, ಮಮಕಾರ, ದೇಹಾಭಿಮಾನ, ಅಸತ್ಯ, ಹಿಂಸೆ, ಕುಟಿಲತೆ, ಕಾಮ, ಕ್ರೋಧಾದಿ ಪಾಪಗಳನ್ನು ಸುಡುವಿಕೆಯೇ ಆಗಿದೆ. 


ಇನ್ನು, ಸಾಧಕರು ಇಂದ್ರಿಯನಿಗ್ರಹ, ಮನೋನಿಗ್ರಹಗಳನ್ನು ಅವಶ್ಯವಾಗಿ ಅನುಷ್ಠಾನಮಾಡಬೇಕು. ೧೨ ವರ್ಷಗಳ ಅಖಂಡ ಬ್ರಹ್ಮಚರ್ಯನಿಷ್ಠೆಯಿಂದ ಸಾಧಕನಿಗೆ ಮೇಧಾನಾಡಿಯೆಂಬ ಹೊಸ ನಾಡಿಯ ಉತ್ಪತ್ತಿಯಾಗುವುದೆಂಬುದು ಸ್ವಾಮಿ ವಿವೇಕಾನಂದರ ನುಡಿ. ಅದೇ ಅವರ ಅಪಾರ ಮೇಧಾಶಕ್ತಿಗೆ ಕಾರಣವಾಗಿತ್ತು. ಭಗವದ್ದತ್ತವಾದ ಈ ನರದೇಹವನ್ನು ಮೋಕ್ಷಸಾಧನವಾಗುವಂತೆ ಬಳಸಿಕೊಳ್ಳಬೇಕೇ ಹೊರತು ಮೋಜು-ಮಸ್ತಿಗಾಗಿ ಬಳಸಿ ಪತನಗೊಳಿಸಿಕೊಳ್ಳುವುದು ಸಲ್ಲದು. ಈ ಮೂಲಕವೇ ಬ್ರಹ್ಮಾತ್ಮನಿಷ್ಠೆಯುಂಟಾಗಿ, ನಾವು ಸುಖದುಃಖ ಪಾಪಪುಣ್ಯಗಳೇ ಮುಂತಾದ ದ್ವಂದ್ವಗಳನ್ನು ಮೀರಿದವರಾಗುತ್ತೇವೆ.


ಜ್ಞಾನಪ್ರಾಪ್ತಿಗೆ 'ಇವೆರಡೂ' ಬೇಕೇ ಬೇಕು


೧೬) ಮನಸಾ ಏವ ಪರಮಾರ್ಥಜ್ಞಾನಸಂಸ್ಕೃತೇನ ಆಚಾರ್ಯೋಪದೇಶಪೂರ್ವಕಂ ಚ ಅನುದ್ರಷ್ಟವ್ಯಮ್ |
(ಬೃಹದಾರಣ್ಯಕಭಾಷ್ಯ ೪-೪-೧೯)


ಸದ್ಗುರುಗಳ ಉಪದೇಶವನ್ನನುಸರಿಸಿ ಪರಮಾರ್ಥಜ್ಞಾನದಿಂದ ಚೆನ್ನಾಗಿ ಸಂಸ್ಕರಿಸಲ್ಪಟ್ಟ ಮನಸ್ಸಿನಿಂದಲೇ ಪರಬ್ರಹ್ಮತತ್ತ್ವವನ್ನು ಅನುಭವದಲ್ಲಿ ಕಂಡುಕೊಳ್ಳಬೇಕು.


ಈ ಸಮಸ್ತ ಬ್ರಹ್ಮಾಂಡದಲ್ಲಿ ಅನಂತ ವಿದ್ಯೆಗಳು, ಕಲೆಗಳು ಇವೆ. ಕೇವಲ ಬುದ್ಧಿವಂತಿಕೆ, ಮೇಧಾವಿತನಗಳಿಂದ ಮನುಷ್ಯ ಇವನ್ನು ಸಿದ್ಧಿಸಿಕೊಳ್ಳಬಲ್ಲ. ಏಕೆಂದರೆ ಇವೆಲ್ಲವೂ ಅನಾತ್ಮವಿದ್ಯೆಗಳು. ಚುರುಕುಬುದ್ಧಿಯಿಂದಲೇ ಇವನ್ನೆಲ್ಲ ಸಾಧಿಸಬಲ್ಲ.


ಆದರೆ, ಬ್ರಹ್ಮವಿದ್ಯೆಯನ್ನು / ಆತ್ಮವಿದ್ಯೆಯನ್ನು ಮಾತ್ರ ತಾನೇ ಸ್ವತಂತ್ರವಾಗಿ ಕೇವಲ ಚುರುಕುಬುದ್ಧಿಯಿಂದಲೇ ಗ್ರಹಿಸಲಾರ. ಇದಕ್ಕೆ ಶುದ್ಧಬುದ್ಧಿ, ಸದ್ಗುರುಕೃಪೆ ಹಾಗೂ ಭಗವದನುಗ್ರಹಗಳೇ ಬೇಕು. ಅಂತಃಕರಣವು ಶಮದಮಾದಿಗಳಿಂದಲೇ ಶುದ್ಧವಾಗಬೇಕೇ ಹೊರತು ಕೇವಲ ಗ್ರಂಥಪಠನಾದಿಗಳಿಂದ ಸಾಧ್ಯವಿಲ್ಲ. "ನಾಯಮಾತ್ಮಾ ಪ್ರವಚನೇನ ಲಭ್ಯಃ", "ನೈಷಾ ತರ್ಕೇಣ ಮತಿರಾಪನೇಯಾ"— ಎಂದು ಕಠೋಪನಿಷತ್ತು ಮುಮುಕ್ಷುಗಳಾದ (ಮೋಕ್ಷಾಕಾಂಕ್ಷಿಗಳಾದ) ಜಿಜ್ಞಾಸುಗಳನ್ನು ಎಚ್ಚರಿಸುತ್ತಿದೆ.


ಇದಕ್ಕೆ ಉತ್ತಮ ದೃಷ್ಟಾಂತ, ದೇವರ್ಷಿ ನಾರದರು ಮಹಾಮೇಧಾವಿಗಳಾದರೂ ಬ್ರಹ್ಮವಿದ್ಯೆಗಾಗಿ ಸದ್ಗುರುವರ್ಯರಾದ ಸನತ್ಕುಮಾರರ ಸಾನ್ನಿಧ್ಯಕ್ಕೆ ತೆರಳಿದ್ದು. ಅಂಥವರೇ ಹೀಗಿರುವಾಗ, ನಮ್ಮಂಥವರಿಗೆಲ್ಲ ಸದ್ಗುರುಸೇವೆಯಿಂದ, ಸದ್ಗುರೂಪದೇಶಶ್ರವಣದಿಂದಲೇ ಆತ್ಮಜ್ಞಾನಪ್ರಾಪ್ತಿಯಾಗುತ್ತದೆ. ಇದೇ ಸರಿಯಾದ ದರ್ಶನ.


ವೇದಾಂತದಿಂದಲೇ ಬ್ರಹ್ಮಜ್ಞಾನವು


೧೭) ತತ್ತ್ವಜ್ಞಾನಂ ತು ವೇದಾಂತವಾಕ್ಯೇಭ್ಯಃ, ಏವ ಭವತಿ ||
(ಬ್ರಹ್ಮಸೂತ್ರಭಾಷ್ಯ ೨.೧.೩)


ತತ್ತ್ವಜ್ಞಾನವಾದರೋ ಉಪನಿಷತ್ತು ಹಾಗೂ ತದನುಸಾರವಾದ ವೇದಾಂತವಾಕ್ಯಗಳಿಂದಲೇ ಆಗುತ್ತದೆ.


ಬ್ರಹ್ಮಾತ್ಮಜ್ಞಾನಪ್ರಾಪ್ತಿಗೆ ವಿವಿಧ ಸಂಪ್ರದಾಯದವರು ಜಪ, ತಪ, ಪಾರಾಯಣ, ಉಪವಾಸ, ಮೌನ, ಯೋಗಾಸನ, ಪ್ರಾಣಾಯಾಮ, ಧ್ಯಾನ, ಪೂಜೆ, ಸೂರ್ಯನಮಸ್ಕಾರ, ಅಭಿಷೇಕ ಇತ್ಯಾದಿ ನಾನಾ ವಿಧದ ಸಾಧನೆಗಳನ್ನು ಉಪದೇಶಿಸುತ್ತಾರೆ. ಇದರಿಂದ ಜಿಜ್ಞಾಸುಗಳು ಗೊಂದಲಕ್ಕೊಳಗಾಗುತ್ತಾರೆ. ಈ ಸಾಧನೆಗಳು ಜ್ಞಾನಪ್ರಾಪ್ತಿಗೆ ಬೇಕೇ ಬೇಕೆಂಬುದು ಪೂರ್ತಿ ಸತ್ಯವೂ ಅಲ್ಲ, ಪೂರ್ತಿ ಸುಳ್ಳೂ ಅಲ್ಲ ಎನ್ನುತ್ತಾರೆ ಸದ್ಗುರುಗಳಾದ ವಿದ್ವಾನ್ ವೇದವೇದಾಂತಬ್ರಹ್ಮ ಡಾ || ಕೆ.ಜಿ.ಸುಬ್ರಾಯಶರ್ಮಾರವರು. 


ಮೇಲಿನ ಭಾಷ್ಯವಾಕ್ಯದಿಂದ ನಾವು ತಿಳಿಯಬಹುದಾದ ಶಂಕರರ ಉಪದೇಶಸಾರ (ಶಂಕರಹೃದಯ / ಮನೋಗತ)ವೆಂದರೆ, ವೇದಾಂತ ವಾಕ್ಯಾರ್ಥ ವಿಚಾರವೊಂದರಿಂದಲೇ ಬ್ರಹ್ಮಜ್ಞಾನವುಂಟಾಗುತ್ತದೆ ಎಂಬುದು. ವೇದಾಂತಗಳ ಗುರಿಯೇ ಬ್ರಹ್ಮಜ್ಞಾನೋಪದೇಶ. ವೇದಾಂತವು ಹೊರಟಿರುವುದೇ ಬ್ರಹ್ಮಜಿಜ್ಞಾಸುಗಳಿಗಾಗಿ. ಅವೇ ಆತ್ಮಜಿಜ್ಞಾಸುಗಳ ನಿಜವಾದ ಆಶ್ರಯಣೀಯ ಆಸ್ತಿ. "ವೇದಾಂತವಿಜ್ಞಾನ-ಸುನಿಶ್ಚಿತಾರ್ಥಾಃ" ಎಂಬುದು ವೇದಾಂತದ್ದೇ ಘೋಷಣೆ— ವೇದಾಂತದ ತಿಳಿವಿನಿಂದಲೇ ಬ್ರಹ್ಮಾತ್ಮಜ್ಞಾನದ ಸ್ಪಷ್ಟತೆಯುಂಟಾಗುವುದೆಂಬುದಾಗಿ.


ವೇದಾಂತಗಳಲ್ಲಿ ತತ್ತ್ವಸ್ವರೂಪಾನುಭವವಾಗುವಂತೆ ಉಪದೇಶಿಸಿದೆ. ದೇಹೇಂದ್ರಿಯಾದಿಗಳಿಗಿಂತ ಆತ್ಮನು ಬೇರೆಯೆಂದೂ, ಆತನೇ ಸಕಲಜೀವರ ಪರಮಾರ್ಥಸ್ವರೂಪನೆಂದೂ ಸರಳವಾಗಿ ಉಪನಿಷತ್ತುಗಳು ವಿವರಿಸಿವೆ. ಹಾಗಾಗಿ, ಜಿಜ್ಞಾಸುಗಳು (ತಿಳಿಯುವ ಇಚ್ಛೆಯುಳ್ಳವರು) ವೇದಾಂತವನ್ನು ಸದ್ಗುರುಗಳಿಂದ ಅಧ್ಯಯನ ಮಾಡಬೇಕು. ಅದರಿಂದಲೇ ಬ್ರಹ್ಮಾನಂದವುಂಟಾಗುವುದು.

ಜ್ಞಾನಪ್ರಾಪ್ತಿಗೆ ಸದ್ಗುರುಪ್ರಸಾದ ಬೇಕು

೧೮) ಪರಪ್ರಾಪ್ತಿಸಾಧನಂ ಸರ್ವ-ಸಾಧನಸಾಧ್ಯ-ವಿಷಯವೈರಾಗ್ಯ-ಪೂರ್ವಕಂ ಗುರುಪ್ರಸಾದ-ಲಭ್ಯಾಂ ಬ್ರಹ್ಮವಿದ್ಯಾಮ್ ಆಹ ||
(ಮುಂಡಕೋಪನಿಷದ್-ಅವತರಣಿಕಾಭಾಷ್ಯ)

ಸದ್ಗುರುಗಳ ಅನುಗ್ರಹದಿಂದ ಲಭ್ಯವಾಗುವ ' *ಬ್ರಹ್ಮವಿದ್ಯೆ* 'ಯು ಸಾಧನ-ಸಾಧ್ಯಗಳಿಂದ ವಿರಕ್ತನಾಗಿರುವವನಿಗೆ ' *ಪರಬ್ರಹ್ಮಪ್ರಾಪ್ತಿಗೆ* ' ' *ಸಾಧನ* ' ವಾಗುತ್ತದೆ.

ಬ್ರಹ್ಮವಿದ್ಯೆಯು ನಮಗೆ ಪ್ರಾಪ್ತವಾಗುವುದೆಂತು? ದೇವಸ್ಥಾನಗಮನ, ತೀರ್ಥಾಟನೆ, ಉಪವಾಸ, ವನವಾಸ, ಜಪತಪಾದಿ ಅನುಷ್ಠಾನ, ಸಂಧ್ಯಾವಂದನೆ, ಪೂಜೆ, ಮೌನವ್ರತ, ಸಂನ್ಯಾಸಸ್ವೀಕಾರ ಮಾಡಬೇಕೆ? ಏನನ್ನು ಮಾಡಬೇಕು ಬ್ರಹ್ಮಸಿದ್ಧಿಗೆ? ಎಂದು ಮುಂತಾಗಿ ಮುಮುಕ್ಷುಗಳು ಚಿಂತಾಕ್ರಾಂತರಾಗಿರುತ್ತಾರೆ. ಇದಕ್ಕೆ ಸೂಕ್ತ ಉತ್ತರ ಸಿಗದೇ ಭ್ರಾಂತರೂ ಆಗಿರುತ್ತಾರೆ. ಇಂಥ ಪ್ರಶ್ನೆಗಳಿಗೆ ಶ್ರೀಶಂಕರರ ಖಚಿತವಾದ ಉತ್ತರ ಇದೋ ಇಲ್ಲಿದೆ—

"ಗುರುಪ್ರಸಾದಲಭ್ಯಾಂ ಬ್ರಹ್ಮವಿದ್ಯಾಂ "— "ಬ್ರಹ್ಮವಿದ್ಯಾಪ್ರಾಪ್ತಿಗೆ ಬೇಕಾದದ್ದು ಗುರುಪ್ರಸಾದ, ಸದ್ಗುರುಗಳ ಕೃಪಾನುಗ್ರಹ, ಆಶೀರ್ವಾದ. ನಮ್ಮ ಸೇವೆಯಿಂದ ಸುಪ್ರಸನ್ನರಾದ ಸದ್ಗುರುಗಳು ನಮಗೆ ಪ್ರೇಮದಿಂದ, ವಾತ್ಸಲ್ಯದಿಂದ, ಪ್ರೀತಿಯಿಂದ ಉಪನಿಷತ್ತುಗಳ ರಹಸ್ಯಗಳನ್ನು ತಿಳಿಸಿಕೊಡುತ್ತಾರೆ. ಸದ್ಗುರುಗಳ ಒಲುಮೆ, ಉಪದೇಶಗಳಿಂದ ಮಾತ್ರವೇ ನಮಗೆ ಬ್ರಹ್ಮವಿದ್ಯಾಪ್ರಾಪ್ತಿ ಹಾಗೂ ಜೀವನ್ಮುಕ್ತಿ. ತಾನೇ ಸ್ವತಂತ್ರನಾಗಿ ತನ್ನ ಬುದ್ಧಿಬಲದಿಂದ ಎಷ್ಟೇ ಶ್ರಮಿಸಿದರೂ ಬ್ರಹ್ಮವಿದ್ಯೆಯು ಸಿಕ್ಕಿದರೂ ದಕ್ಕಲಾರದು— ಅರ್ಥವಾದರೂ ಅನುಭವಕ್ಕೆ ನಿಲುಕಲಾರದು. ಹಾಗಾದ್ದರಿಂದ, ಸದ್ಗುರುಗಳ ಕೃಪಾನುಗ್ರಹಕ್ಕೆ ಪಾತ್ರರಾಗಿ ಬ್ರಹ್ಮವಿದ್ಯೆಯನ್ನು ಹೊಂದಿ ಅಂತ್ಯವಿಲ್ಲದ ಪರಮಾನಂದಸ್ಥಿತಿಯನ್ನು ಹೊಂದೋಣ. ಸಕಲ ದುಃಖಸ್ಥಿತಿಗಳನ್ನು ನಿವಾರಿಸಿಕೊಳ್ಳೋಣ. ಅದೇ ಜೀವನ್ಮುಕ್ತಿ; ಅದೇ ನಿಜವಾದ ಮುಕ್ತಿ. ಸದ್ಗುರುಪ್ರಾಪ್ತಿಗಾಗಿ ಭಗವದನುಗ್ರಹ ಅಗತ್ಯ. ಪರಮಾತ್ಮನ ಕೃಪೆಗಾಗಿ ಸದಾ ಭಗವದ್ಭಕ್ತರಾಗಿರೋಣ. ತನ್ಮೂಲಕ ಸದ್ಗುರುಪ್ರಾಪ್ತಿಯಾಗಿ, ವೇದಾಂತವಾಕ್ಯಾರ್ಥ ಹಾಗೂ ಗುರೂಪದೇಶವೆಂಬ ಮಾರ್ಗದರ್ಶನದಿಂದ ಸಂಕಟಮಯವಾದ ಬದುಕನ್ನು ಸಾರ್ಥಕಪಡಿಸಿಕೊಳ್ಳೋಣ.

Comments

Popular posts from this blog

ವೃದ್ಧಚಾಣಕ್ಯನೀತಿದರ್ಪಣಸಾರಃ ೨

ವೈದ್ಯಕೀಯಸುಭಾಷಿತಸಾಹಿತ್ಯಮ್ ೧

ಸೂಕ್ತಿವೈಭವ